Homeಕವನಕವನ: ಸುಗ್ಗಿ ಸಂಕ್ರಾಂತಿ

ಕವನ: ಸುಗ್ಗಿ ಸಂಕ್ರಾಂತಿ

spot_img

ಸುಗ್ಗಿ ಸಂಕ್ರಾಂತಿ

ವರುಷದ ದುಡಿಮೆಯ ಫಲವಾಗಿ

ಬಂದೈತೆ ಸುಗ್ಗಿಯ ಸಂಕ್ರಾಂತಿ

ಬೆರೆಸುತ ಎಳ್ಳಿಗೆ ಬೆಲ್ಲವನು

ತಂದೈತೆ ನಾಡಿಗೆ ಸುಖಶಾಂತಿ//ಪ

ಬೆಳ್ಳಿಯ ರಥವೇರಿ ರವಿಬಂದು

ಮಿಂಚೈತೆ ನಾಡೆಲ್ಲ ಬೆಳಕಲ್ಲಿ

ಹಳ್ಳಿಯ ನೆಲದಿಂದ ದಿಲ್ಲಿಗೂ

ಹಂಚೈತೆ ರಟ್ಟೆಯ ಬಲವಿಲ್ಲಿ//೧

ಗಿಲಿಗಿಲಿ ಗೆಜ್ಜೆಯ ನಾದದಲಿ

ಬದುಕಿನ ಬಂಡಿಯು ಹೊರಟಾವ

ಕುಲುಕುಲು ನಗುವಿನ ಮೊಗದಲ್ಲಿ

 ಹಂತಿಯ ಪದವನು  ಹಾಡ್ಯಾವ//೨

ಕಬ್ಬನು ಸವಿಯುತ ಕೃಷಿಕಾರ

ಬೆಲ್ಲದ ರುಚಿಯನು ನೀಡ್ಯಾನ

ಹಬ್ಬವ ಮಾಡಿದ ಸರದಾರ 

ವಲ್ಲಿಯ ನೆರಿಗೆಯ ತೀಡ್ಯಾನ/೩

ಪರಿಪರಿ ಕಾಳಿನ ರಾಶಿಯನು

ಮುದದಲಿ ಮಡದಿಯು ಪೂಜಿಸಲು

ಹರಿಹರ ನಾಮವ ಜಪಿಸುತ

ಬದುಕಿನ ಬಂಡಿಯು ತುಂಬಿರಲು//೪

ಹಳ್ಳಿಯ ಸಂಕ್ರಾಂತಿ ಹೊಲದಲ್ಲಿ

ಒಳ್ಳೆಯ ಕಾಯಕ ನಿಷ್ಠೆಯಲಿ

ಬೆಳ್ಳಿಯ ರಥವದು ಪಯಣದಲಿ

ಹಳ್ಳದ ದಂಡಿಯ ತಿರುವಿನಲಿ/೫


ಶ್ರೀಮತಿ ಬಸಮ್ಮ ಏಗನಗೌಡ್ರ

RELATED ARTICLES

Most Popular

error: Content is protected !!
Join WhatsApp Group