spot_img
spot_img

ರಂಗ ಪ್ರಯೋಗ: ವಿಭಿನ್ನ ಪ್ರಯೋಗ ವಿಗಡ ವಿಕ್ರಮರಾಯ ರಂಜಿಸಿದ ಸುಣ್ಣದ ಸುತ್ತ

Must Read

- Advertisement -

ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ರಂಗಸಿರಿ ಹಾಸನ ಆಯೋಜಿಸಿರುವ ಕಾಲೇಜು ರಂಗೋತ್ಸವದಲ್ಲಿ ಸೋಮವಾರ ಎರಡು ನಾಟಕಗಳು ವಿಭಿನ್ನ ಪ್ರಯೋಗಗಳಿಂದ ರಂಜಿಸಿದವು. ನವ್ಕೀಸ್ ಕಾಲೇಜ್ ಆಫ್ ಇಂಜಿನಿಯರಿಂಗ್ ಹಾಸನ ವಿದ್ಯಾರ್ಥಿಗಳು ಪ್ರದರ್ಶಿಸಿದ ವಿಗಡ ವಿಕ್ರಮರಾಯ ಐತಿಹಾಸಿಕ ನಾಟಕ. ಆದರೆ ಪ್ರದರ್ಶಿತವಾಗಿದ್ದು ಆಧುನಿಕ ವೇಷ ಭೂಷಣದ ಶೈಲಿ ಚಿಂತನೆಯಲ್ಲಿ. ನಾಟಕ ನಿರ್ದೇಶಕರು ವಿನೀತ್‍ಕುಮಾರ ಎಂ. ಕೈಲಾಸಂ ರಂಗಭೂಮಿಗೆ ಸಲ್ಲುತ್ತಾರೆ. ಆದರೆ ಕನ್ನಡದ ಮೊದಲ ನಾಟಕಕಾರ ಸಂಸರೇ ಸೈ ಎಂದು ಪ್ರಸನ್ನರು ಹೇಳುತ್ತಾರೆ. ಸಂಸರು ದುರಂತ ನಾಟಕಗಳ ರಚನೆಯಲ್ಲಿ ಮೊದಲಿಗರಿದ್ದಂತೆ ಕೈಲಾಸಂ ಕಾಮಿಡಿಯ ಪ್ರಯೋಗದಲ್ಲಿ ಮೊದಲಿಗರು.

ಸಂಸರ ವಿಗಡ ವಿಕ್ರಮರಾಯ ನಾಟಕ ರಚನೆಗೊಂಡಿದ್ದು 1925ರಲ್ಲಿ. ಸಂಸರು ಮೈಸೂರಿನ ಅರಸರ ಚರಿತ್ರೆಯನ್ನು ಆಧರಿಸಿ 23 ನಾಟಕಗಳನ್ನು ಬರೆದಿದ್ದಾರೆಂದು ಅವರ ಬಾಯಿಂದಲೇ ಕೇಳಿದ್ದೇನೆ ಎಂಬುದಾಗಿ ಜಿ.ಪಿ.ರಾಜರತ್ನಂ ಬರೆಯುತ್ತಾರೆ.

ಪ್ರಸ್ತುತ ವಿಗಡ ವಿಕ್ರಮರಾಯ ನಾಟಕ ವಸ್ತು ಮೈಸೂರಿನ ಯದುವಂಶದ ರಾಜ ಮನೆತನದಲ್ಲಿ 17ನೇ ಶತಮಾನದಲ್ಲಿ ನಡೆದ ಘಟನೆಗಳನ್ನಾಧರಿಸಿದುದು. ದಳವಾಯಿ ವಿಕ್ರಮರಾಯ ಈ ನಾಟಕದ ಖಳನಾಯಕನಾದರೆ ರಣಧೀರ ಕಂಠೀರವ ಅದರ ಉದಾತ್ತ ನಾಯಕ. ವಿಕ್ರಮರಾಯ ತನ್ನ ಅಧಿಕಾರ ಪ್ರಾಬಲ್ಯದ ಶಿಖರದಲ್ಲಿದ್ದಾಗ ನಾಟಕದ ಕತೆ ಪ್ರಾರಂಭವಾಗಿ ಅವನ ಕೊಲೆಯಲ್ಲಿ ಅದು ಪರ್ಯಾವಸನವಾಗುತ್ತದೆ.

- Advertisement -

ದಳವಾಯಿಯ ಹಣದ ಮೋಹ, ಅಧಿಕಾರದಾಹ, ಭ್ರಷ್ಟಾಚಾರ ವಾಸನೆ ಗ್ರಹಿಸಿ ಮಹಾರಾಜರು ತನಿಖೆ ನಡೆಸಲು ಆಜ್ಞಾಪಿಸುತ್ತಿದ್ದಂತೆ ದಾಖಲೆಗಳ ತಿದ್ದುಪಡಿಗೆ ಹೊರಡುವ ವಿಕ್ರಮರಾಯ ಮಹಾರಾಜರನ್ನು ಕೊಲ್ಲಿಸಲು ಸಂಚು ರೂಪಿಸುತ್ತಾನೆ.

ಆಸ್ಥಾನ ವೈದ್ಯ ಬೊಮ್ಮರಸ ಪಂಡಿತನನ್ನು ಈ ಸಂಚಿಗೆ ಬಳಸಿಕೊಂಡು ಆತ ಔಷಧಿಗೆ ವಿಷ ಬೆರೆಸಿ ಮಹಾರಾಜರನ್ನು ಸಾಯಿಸಿ ಸಿಕ್ಕಿ ಬಿದ್ದು ಸಂಚಿಗೆ ಬಲಿಪಶುವಾಗುತ್ತಾನೆ. ಮಹಾರಾಜನ ಸಾವಿನ ನಂತರ ರಣಧೀರ ಕಂಠೀರವರನ್ನು ಪಟ್ಟಕ್ಕೇರಿಸಲು ವಿಕ್ರಮರಾಯ ಆಹ್ವಾನಿಸಿ ತನ್ನ ಅಂತ್ಯಕ್ಕೆ ತಾನೇ ನಾಂದಿಯಾಡುತ್ತಾನೆ.  ವಿಕ್ರಮರಾಯನ ಯೋಚನೆಗಳಲ್ಲಾ ತಲೆಕೆಳಗಾಗಿ ಕೊಲೆಗೆ  ಕೊರಳೊಡ್ಡುವುದು ಮಾಡಿದುಣ್ಣೊ ಮಹಾರಾಯ ಕಥೆ ನೆನಪಿಸುತ್ತದೆ. ಇತಿಹಾಸದ  ಕಥಾ ವಸ್ತುವಾದರೂ ಪ್ರಚಲಿತ  ರಾಜಕಾರಣದ ಘಟನೆಗಳಿಗೆ ಹತ್ತಿರವಾಗಿದೆ.

- Advertisement -

ಇಲ್ಲಿ ಪಾತ್ರದಾರಿಗಳಿಗೆ ರಾಜ, ರಾಣಿ, ದಳವಾಯಿ  ಸೈನಿಕರಾದಿಯಾಗಿ ಪಾತ್ರಗಳು ಬರುತ್ತವೆಯಾದರೂ ಆ ಕಾಲಘಟ್ಟದ ವೇಷ ಭೂಷಣಗಳಿಲ್ಲ. ಯೂನಿಫಾರಂ ಧಿರಿಸಿನಲ್ಲಿ ಕಲಾವಿದರೆಲ್ಲಾ ರಂಗದಲ್ಲಿದ್ದೇ ಪಾತ್ರಗಳಾಗಿ ಮುಂದೆ ಬಂದು ರಂಗದಲ್ಲಿ ಸಂಭಾಷಣೆ ಒಪ್ಪಿಸುವುದು ಆಧುನಿಕ ದೃಷ್ಟಿಕೋನ ಮತ್ತು ಎಂಬುದು ಸಮರ್ಥನೀಯವಾದರೂ ಒಂದೇ ಪಾತ್ರವನ್ನು ಹಲವು  ಮಂದಿ ನಟಿಸುವಲ್ಲಿ ಪ್ರೇಕ್ಷಕರು ಗೊಂದಲಕ್ಕೀಡಾಗುತ್ತಾರೆ. ಯಾರು ಯಾವ ಪಾತ್ರದಲ್ಲಿ ಸಂಭಾಷಿಸುತ್ತಿದ್ದಾರೆ ಎಂಬುದು ತಕ್ಷಣಕ್ಕೆ ತಿಳಿಯುವುದಿಲ್ಲ. ನಾಟಕದಲ್ಲಿ ವಿಕ್ರಮರಾಯನ ಪಾತ್ರವನ್ನು 7 ವಿದ್ಯಾರ್ಥಿಗಳು, ತುಂಗರಾಯನ ಪಾತ್ರವನ್ನು 5 ಮಂದಿ, ಬೊಮ್ಮರಸಪಂಡಿತ, ಅಳಗರಾಜ ಪಾತ್ರಗಳಲ್ಲಿ ತಲಾ ಮೂರುಮೂರು ಪಾತ್ರದಾರಿಗಳು, ರಣಧೀರನಾಗಿ ಇಬ್ಬರು ಪಾತ್ರದಾರಿಗಳು ಒಂದೇ ಯೂನಿಫಾರಂನಲ್ಲಿ ಬಂದು ಹೋಗುವುದು ರಂಗದ ಮೇಲೆ ಬೀದಿ ನಾಟಕ ನೋಡಿದಂತೆ ಭಾಸವಾಗುತ್ತದೆ.

ಇದೊಂದು ಗಂಭೀರ ನಾಟಕ ಮತ್ತು ಏಕಾಂಕ. ಈ ದಿಶೆಯಲ್ಲಿ ಇದು ನವ್ಯ ಪ್ರಯೋಗವಾಗಿ  ಪ್ರಧಾನವಾಗಿ ಸಂಭಾಷಣೆ, ನಟನೆಗೆ ನಿರ್ದೇಶಕರು ಒತ್ತುಕೊಟ್ಟು  ಕ್ಲಿಷ್ಟಕರ ಸಂಭಾಷಣೆಯ ನಾಟಕವನ್ನು ವಿದ್ಯಾರ್ಥಿಗಳು ಸಮರ್ಪಕವಾಗಿಯೇ ನಿರೂಪಿಸಿದರು.

ಹಾಸನ ಸರ್ಕಾರಿ ಕಲಾ ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು ಸ್ವಾಯತ್ತ ವಿದ್ಯಾರ್ಥಿಗಳು ಪ್ರಸ್ತುತಿ ಪಡಿಸಿದ ನಾಟಕ ಸುಣ್ಣದ ಸುತ್ತು. ನಿರ್ದೇಶಿಸಿದವರು ಮಹೇಶ ಆಚಾರಿ. ಜಗತ್ತಿನ ರಂಗಭೂಮಿಯ ಇತಿಹಾಸದಲ್ಲಿ ಷೇಕ್ಸ್‍ಪಿಯರ್, ಮೋಲಿಯೇರ್ ಮುಂತಾದವರ ಜೊತೆ ನಿಲ್ಲುವ ಮತ್ತೊಂದು ಹೆಸರು ಬರ್ತೋಲ್ಟ್ ಬ್ರೆಕ್ಟ್.

ಈತನ ಕಕೇಷಿಯನ್ ಜಾಕ್ ಸರ್ಕಲ್ ನಾಟಕ ಯುದ್ಧ ಮತ್ತು ಅದರ ಪರಿಣಾಮವನ್ನು ಕುರಿತು ವಿಷದಪಡಿಸುತ್ತದೆ. ಇದನ್ನು ಕನ್ನಡಕ್ಕೆ ಎಸ್.ಎಸ್.ವೆಂಕಟೇಶಮೂರ್ತಿ ತಂದಿದ್ದು ದಂಗೆಗೆ ಒಳಪಟ್ಟ ಸಾಮಾನ್ಯ ಜನರ ಬದುಕು ಏನಾದರೂ ಸರಿ ಲಾಭ ಮಾಡಿಕೊಳ್ಳಬೇಕು ಎನ್ನುವ ಬಂಡವಾಳಶಾಹಿ ಪ್ರವೃತ್ತಿ ಶ್ರೀಮಂತರ ಮತ್ತು ಬಡವರ ನಡುವಿನ ತಾರತಮ್ಯ ಇವೆಲ್ಲವನ್ನು ನಾಟಕ ಬಯಲಿಗೆಳೆಯುತ್ತದೆ.

ನಾಟಕದಲ್ಲಿ ಅಲ್ಲಲ್ಲಿ ರಂಗದ ಮೇಲೆ ಮೇಳ ಬಂದು ಹಾಡುವ ಪರಿಕಲ್ಪನೆ  ಎಪಿಕ್ ಥಿಯೇಟರ್ ಕಲ್ಪನೆಯನ್ನು ಮೊಟ್ಟಮೊದಲ ಬಾರಿಗೆ ರೂಪಿಸಿದ ಹೆಗ್ಗಳಿಕೆ ಬ್ರೆಕ್ಟ್‍ನದು. ನಾಟಕದ ನಟಿಲ್ಲಾ, ಅನಿಕೆ, ಸೈನಿಕರು ಇವರೆಲ್ಲರೂ ಈ ವ್ಯವಸ್ಥೆಯ ಪ್ರತಿಬಿಂಬಗಳಾಗಿ ನಾಟಕ ಹಾಡು ಅಭಿನಯದಲ್ಲಿ ಪರಿಣಾಮಕಾರಿಯಾಗಿ ಮೂಡಿಬಂತು. ರಾಣಿಯ ಮಗು ದಂಗೆಯಲ್ಲಿ ಒಬ್ಬ ಸಾಮಾನ್ಯಳ ಕೈ ಸೇರಿ ಹೆತ್ತವಳಿಗಿಂತ ಪ್ರೀತಿಯಿಂದ ಸಾಕಿದವಳೇ ಮೇಲೆಂದು  ಸೀಮೆ ಸುಣ್ಣದ ಸರ್ಕಲ್‍ನಲ್ಲಿ ಮಗು ನಿಲ್ಲಿಸಿ ಹೆತ್ತವಳು ಸಾಕಿದವಳು ಎಳೆದಾಡುವ ದೃಶ್ಯದಲ್ಲಿ ಪ್ರೀತಿ ಭಾವನಾತ್ಮಕ ಅಂಶಗಳೇ ಮೇಲುಗೈ ಸಾಧಿಸಿ ಜಡ್ಜ್ ನೀಡುವ ತೀರ್ಪು ವಿಶೇಷವೆನಿಸಿತು.

ದಂಗೆ ಯುದ್ಧದ ನಡುವೆ ಪ್ರೇಮಿಗಳಿಬ್ಬರ ಕಥೆಯೂ ಸ್ವಾರಸ್ಯಕರವಾಗಿ ಹೆಣೆದುಕೊಂಡಿದೆ. ನಾಟಕದಲ್ಲಿ ಸಂಗೀತ ಹಾಡು (ಉಮೇಶ ಪತ್ತಾರ, ಪ್ರಕಾಶ ಬಡಿಗೇರ) ಮನರಂಜನೆಯಾಗಿ ರಂಜಿಸಿತು.


ಗೊರೂರು ಅನಂತರಾಜು, ಹಾಸನ. 

ಮೊ: 9449462879. 

ವಿಳಾಸ: ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್,3ನೇ ಕ್ರಾಸ್, ಶ್ರೀ ಶನೇಶ್ವರ ದೇವಸ್ಥಾನ ರಸ್ತೆ, ಹಾಸನ.

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಯಾರವನು ನೀನೆಂದು ಜನ‌ ನಿನ್ನ ಕೇಳಿದರೆ ಆ ಪ್ರಶ್ನೆಗುತ್ತರವ ಹೀಗೆ ಹೇಳು ಕ್ರಿಸ್ತನವ ಕೃಷ್ಣನವ ಬುದ್ಧನವ ಬಸವನವ ಎಲ್ಲರವ ನಾನೆನ್ನು‌- ಎಮ್ಮೆತಮ್ಮ ಶಬ್ಧಾರ್ಥ ಯಾರವನು = ಯಾವ ಕುಲಜಾತಿಮತಪಂಥಕ್ಕೆ ಸೇರಿದವನು ತಾತ್ಪರ್ಯ ಜನಗಳು ನಿನ್ನ ಕುಲ‌...
- Advertisement -

More Articles Like This

- Advertisement -
close
error: Content is protected !!
Join WhatsApp Group