spot_img
spot_img

ಹೊಸಪುಸ್ತಕ ಓದು: ವಚನ ಸಂಸ್ಕೃತಿಗೆ ಮರುವ್ಯಾಖ್ಯಾನ ನೀಡುವ ಚಿಂತನೆಗಳು

Must Read

- Advertisement -
  • ಪುಸ್ತಕದ ಹೆಸರು : ಸ್ಥಾವರ ಜಂಗಮ
  • ಲೇಖಕರು : ಡಾ. ವೀರಣ್ಣ ದಂಡೆ
  • ಪ್ರಕಾಶಕರು : ಎಡೆಯೂರು ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಗದಗ, ೨೦೨೩
  • ಪುಟ : ೨೩೨ ಬೆಲೆ : ರೂ. ೨೫೦
  • ಲೇಖಕರ ಸಂಪರ್ಕವಾಣಿ :೯೪೪೮೭೭೮೯೯೧

ಡಾ. ವೀರಣ್ಣ ದಂಡೆ ಅವರು ಕಲ್ಯಾಣ ಕರ್ನಾಟಕ ಭಾಗದಲ್ಲಿ ಶರಣ ಸಾಹಿತ್ಯವನ್ನು ತಲಸ್ಪರ್ಶಿಯಾಗಿ ಅಧ್ಯಯನ ಮಾಡಿ, ವಚನಗಳ ನಿಜವಾದ ಆಂರ್ಯವನ್ನು ತಮ್ಮ ಬರಹಗಳ ಮೂಲಕ ತಿಳಿಸುತ್ತಿರುವ ಹಿರಿಯ ವಿದ್ವಾಂಸರು. ಕನ್ನಡ ಸಾಹಿತ್ಯ-ಜಾನಪದ-ಕಾವ್ಯ ಮೀಮಾಂಸೆ ಮೊದಲಾದ ಪ್ರಕಾರಗಳಲ್ಲಿ ಮಹತ್ವದ ಗ್ರಂಥಗಳನ್ನು ರಚಿಸಿರುವ ಡಾ. ದಂಡೆ ಅವರು ಶರಣ ಸಾಹಿತ್ಯ ಕುರಿತು ಮಾಡಿರುವ ಕಾರ್ಯ ಅವಿಸ್ಮರಣೀಯವಾದುದು. ಕರ್ನಾಟಕ-ಮಹಾರಾಷ್ಟ್ರ-ಆಂಧ್ರಪ್ರದೇಶಗಳನ್ನು ಸುತ್ತಿ, ೬೫೦ಕ್ಕೂ ಹೆಚ್ಚು ಕ್ಷೇತ್ರಕಾರ್ಯ ಮಾಡಿ, ಶರಣರ ಸಮಗ್ರ ಕ್ಷೇತ್ರಗಳನ್ನು ದಾಖಲೀಕರಣ ಮಾಡಿದ ಶ್ರೇಯಸ್ಸು ಅವರದು. ಶರಣರು ಮೆಟ್ಟಿದ ಧರೆ ಪಾವನ ಎನ್ನುತ್ತಾರೆ. ಅಂತಹ ಪವಿತ್ರ ಶರಣರು ನಡೆದಾಡಿದ ಎಲ್ಲ ಕ್ಷೇತ್ರಗಳನ್ನು ಶೋಧಿಸಿ, ಅವುಗಳ ಚಿತ್ರ ಸಹಿತವಾದ ಇತಿಹಾಸವನ್ನು ಕಟ್ಟಿಕೊಟ್ಟದ್ದು ಅವರ ಜೀವಮಾನದ ದೊಡ್ಡ ಸಾಧನೆಯೆಂದೇ ಹೇಳಬೇಕು. ಶರಣ ಸಂಸ್ಕೃತಿಯ ಮೇಲಿನ ಅನನ್ಯ ಭಕ್ತಿ ಪ್ರೀತಿ ಕಾರಣವಾಗಿ ಡಾ. ದಂಡೆ ಅವರು ಅನೇಕ ಹೊಸ ಹೊಳವುಗಳ ಕೃತಿಗಳನ್ನು ರಚಿಸುತ್ತ ಬಂದಿದ್ದಾರೆ. ಶರಣ ಕ್ಷೇತ್ರಗಳು, ಬಸವಣ್ಣ : ಶರಣ ಗಣ ಸಂಘಟನೆ, ವಚನ ಕಾವ್ಯ ಮೀಮಾಂಸೆ ಮೊದಲಾದ ಅವರ ಗ್ರಂಥಗಳು ಶರಣ ಸಾಹಿತ್ಯದ ಅಧ್ಯಯನಕ್ಕೆ ಹೊಸ ಬಾಗಿಲನ್ನೆ ತೆರೆದಿವೆ. ಈಗ ಇವುಗಳ ಮುಂದುವರಿಕೆ ಭಾಗವೆಂಬಂತೆ ಪ್ರಕಟವಾದ  ೨೦ ಸಂಶೋಧನಾತ್ಮಕ ಲೇಖನಗಳ ಮಹತ್ವದ ಕೃತಿ ‘ಸ್ಥಾವರ ಜಂಗಮ’.

 ಡಾ. ಫ. ಗು. ಹಳಕಟ್ಟಿಯವರು, ಶಿರಾಳಕೊಪ್ಪದ ಚನ್ನಮಲ್ಲಿಕಾರ್ಜುನರು, ಕಲ್ಯಾಣಪ್ಪ ಬ್ಯಾಳಿ, ಹರ್ಡೇಕರ ಮಂಜಪ್ಪ, ಉತ್ತಂಗಿ ಚೆನ್ನಪ್ಪನವರು, ಆರ್. ಸಿ. ಹಿರೇಮಠ ಮೊದಲಾದ ವಿದ್ವಾಂಸರು ಶರಣ ಸಾಹಿತ್ಯದ ಕುರಿತು ಎದ್ದಿರುವ ಸಮಸ್ಯೆಗಳಿಗೆ-ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ನೀಡುವ ಮೂಲಕ ಶರಣ ಸಾಹಿತ್ಯದ ಹಿರಿಮೆ ಗರಿಮೆಗಳನ್ನು ತಮ್ಮ ಬರಹಗಳ ಮೂಲಕ ಪ್ರಕಟಮಾಡಿದ್ದರು. ಇಂತಹ ವಿದ್ವಾಂಸರ ಪರಂಪರೆಯ ಕೊಂಡಿಯಾಗಿ ಕೆಲಸ ಮಾಡುತ್ತ, ವಚನ ಸಾಹಿತ್ಯದ ವೈಶಿಷ್ಟ್ಯವನ್ನು ಇನ್ನಷ್ಟು ಸ್ಫುಟಗೊಳಿಸುವತ್ತ ಕಾರ್ಯಪ್ರವೃತ್ತರಾದವರು ಡಾ. ವೀರಣ್ಣ ದಂಡೆ ಅವರು. ಶರಣ ಸಾಹಿತ್ಯ ಚರಿತ್ರೆಯನ್ನು ಅವಲೋಕಿಸುವಾಗ ಇಂದಿಗೂ ನಮಗೆ ಕೆಲವು ಸಮಸ್ಯೆಗಳು ಎದುರಾಗುತ್ತವೆ. ಆ ಸಮಸ್ಯೆಗಳ ಹಿಂದಿನ ಗೂಢತೆ ಏನು? ಈ ಸಮಸ್ಯೆಗಳಿಗೆ ಪರಿಹಾರ ಹೇಗೆ? ಎಂದು ಆಲೋಚಿಸುವ ಸಂದರ್ಭದಲ್ಲಿ ಡಾ. ದಂಡೆ ಅವರ ‘ಸ್ಥಾವರ ಜಂಗಮ’ ಕೃತಿ ನಮಗೆ ಹೊಸ ಹೊಳವುಗಳನ್ನು ನೀಡುತ್ತದೆ. ಈ ಹೊಳವುಗಳ ಬೆಳಕಿನಲ್ಲಿ ಈ ವರೆಗೆ ಇದ್ದ ಕೆಲವು ಸಮಸ್ಯೆಗಳಿಗೆ, ಪ್ರಶ್ನೆಗಳಿಗೆ ಸೂಕ್ತವೂ ಸಮರ್ಪಕವೂ ಆದ ಉತ್ತರಗಳು ದೊರೆತ ಆನಂದದ ಅನುಭೂತಿ ನಮಗಾಗುತ್ತದೆ. 

 ಇಲ್ಲಿಯ ಎಲ್ಲ ಲೇಖನಗಳು ವಚನ ಸಾಹಿತ್ಯದ ಸೈದ್ಧಾಂತಿಕ ನಿಲುವುಗಳನ್ನು ಇನ್ನಷ್ಟು ಸ್ಪಷ್ಟಗೊಳಿಸುತ್ತವೆ. ಈ ಸೈದ್ಧಾಂತಿಕ ಎಳೆಗಳನ್ನು ಡಾ. ದಂಡೆ ಅವರು ಹೊಸ ಪರಿಕಲ್ಪನೆಗಳು ಎಂದು ಕರೆದಿದ್ದಾರೆ. “ಇಲ್ಲಿನ ಹೆಚ್ಚಿನ ಲೇಖನಗಳು ಬಸವಾದಿ ಶರಣರ ಬಗೆಗಿನ ಬಿಡಿಬಿಡಿಯಾದ ಐತಿಹಾಸಿಕ ಸಂಗತಿಗಳನ್ನು ಒಳಗೊಂಡಿವೆ. ಇಂತಹ ಸಂಗತಿಗಳ ಶೋಧ ಹೆಚ್ಚು ಹೆಚ್ಚು ನಡೆದಷ್ಟು ನಮಗೆ ಕಲ್ಯಾಣ ಚಳುವಳಿಯ ಸ್ಪಷ್ಟತೆ ಎದ್ದು ಕಾಣುತ್ತ ಹೋಗುತ್ತದೆ”(ಸ್ಥಾವರ ಜಂಗಮಕ್ಕೂ ಮುನ್ನ ಪು. ೮) ಎಂದು ಈ ಕೃತಿ ರಚನೆಯ ಹಿನ್ನೆಲೆಯನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ. 

- Advertisement -

 ಈ ಕೃತಿಯ ಮೊದಲ ಲೇಖನ ‘ಬಸವಣ್ಣನವರ ಸ್ಥಾವರ ಜಂಗಮ ಸಿದ್ಧಾಂತ’ ಡಾ. ದಂಡೆ ಅವರ ವಚನ ವಿಶ್ಲೇಷಣಾ ವೈದುಷ್ಯಕ್ಕೆ ಸಾಕ್ಷಿಯಾಗಿದೆ. ಸ್ಥಾವರ ಜಂಗಮ ಪದಗಳ ತಾತ್ವಿಕ ನೆಲೆಯ ಚಿಂತನೆಯ ಜೊತೆಗೆ, ಸ್ಥಾವರ ಜಂಗಮ ಒಂದೇ ಆಗುವ ಪರಿಯನ್ನು ತಿಳಿಸುತ್ತಾರೆ. ‘ಸ್ಥಾವರದ ಅರ್ಥ-ಕೇವಲ ಜಡ ಸ್ಥೂಲ ಎಂಬ ಅರ್ಥದಲ್ಲಿರದೆ, ಜಂಗಮದ ಕಡೆಗೆ ತುಡಿಯುವ ತಾನೂ ಜಂಗಮವಾಗುವ ಗುಣಗಳನ್ನು ಹೊಂದಿರುವುದು-ಎಂದು ಅರ್ಥ ಬರುತ್ತದೆ’ (ಪು.೮) ಎಂದು ಅಭಿಪ್ರಾಯ ಪಡುತ್ತಾರೆ. ಸ್ಥಾವರ ಜಂಗಮವಾಗುವ ಪ್ರಕ್ರಿಯೆಯನ್ನು ವಚನಗಳ ಆಧಾರದ ಮೇಲೆ ವಿಶ್ಲೇಷಿಸುತ್ತಾರೆ. ಅಲ್ಲದೆ ತಾವು ಶರಣ ಕ್ಷೇತ್ರಗಳ ಕ್ಷೇತ್ರಕಾರ್ಯ ಮಾಡುವ ಸಂದರ್ಭದಲ್ಲಿ ೬೫೦ಕ್ಕೂ ಸ್ಥಳಗಳನ್ನು ಕಣ್ಮುಟ್ಟ ನೋಡಿದ ಪರಿಣಾಮ, ಅಲ್ಲೆಲ್ಲ ಇರುವ ಸ್ಥಾವರ ಕುರುಹುಗಳ ಹಿನ್ನೆಲೆಯಲ್ಲಿ ಪ್ರಸ್ತುತ ಲೇಖನ ಬರೆದಿರುವುದು ತುಂಬ ಔಚಿತ್ಯಪೂರ್ಣವಾಗಿದೆ. ಈ ವರೆಗಿನ ಸ್ಥಾವರ-ಜಂಗಮದ ವ್ಯಾಖ್ಯಾನ ಇಲ್ಲಿ ಹೊಸ ಅರ್ಥ ಪಡೆದುಕೊಂಡಿರುವುದು ಗಮನಕ್ಕೆ ಬರುತ್ತದೆ. 

 ‘ಒಕ್ಕುಮಿಕ್ಕ ಪ್ರಸಾದ’ ಎಂಬ ಲೇಖನದಲ್ಲಿ ವಚನಗಳಲ್ಲಿ ಪ್ರಸ್ತಾಪವಾಗುವ ‘ಒಕ್ಕು ಮಿಕ್ಕ’ ಪದದ ನಿಜವಾದ ಅರ್ಥ ಏನಿರಬಹುದು ಎಂಬುದನ್ನು ವಿವೇಚನೆಗೆ ಒಳಗು ಮಾಡುತ್ತಾರೆ. ‘ಒಕ್ಕು ಮಿಕ್ಕ ಪ್ರಸಾದ ಎಂದರೆ ತಮ್ಮಲ್ಲಿ ಸಂಗ್ರಹವಾಗಿರುವ (ಆಹಾರ, ದವಸಧಾನ್ಯ, ಸಂಪತ್ತು) ಯಾವುದೇ ಬಗೆಯ ಗಳಿಕೆಯನ್ನು ಅನುವರಿತು (ತಕ್ಕಷ್ಟು) ದಾಸೋಹ ಮಾಡಿದ ನಂತರ ಉಳಿದದ್ದು ‘ಒಕ್ಕುಮಿಕ್ಕ ಪ್ರಸಾದ ಎನಿಸುತ್ತದೆ’(ಪು. ೧೫) ಎನ್ನುತ್ತಾರೆ. ಈ ಪರಿಕಲ್ಪನೆಯ ಮೂಲಕ ಬಸವಣ್ಣನವರು ಜನಸಾಮಾನ್ಯರನ್ನು ಒಂದುಗೂಡಿಸಿ, ಅವರಲ್ಲಿರುವ ತರತಮ ಭಾವಗಳನ್ನು ಹೋಗಲಾಡಿಸಿ, ಗಳಿಸಿದ್ದೆಲ್ಲವೂ ಶಿವನ ಸೊಮ್ಮು ಎಂಬ ಅಹಂಕಾರ ನಿರಸನ ಮೌಲ್ಯವನ್ನು ಪ್ರತಿಪಾದಿಸುತ್ತಾರೆ ಎಂಬ ನಿರ್ಣಯಕ್ಕೆ ಬರುತ್ತಾರೆ. 

 ‘ಲಿಂಗೈಕ್ಯನು : ಹಾಗೆಂದರೇನು?’ ಎಂಬ ಲೇಖನ ವಚನಗಳಲ್ಲಿ ಈ ಪದವು ಮೂರು ಅರ್ಥಗಳನ್ನು ಹೊರಡಿಸುತ್ತದೆ ಎಂಬುದನ್ನು ಸವಿವರವಾಗಿ ವಿವರಿಸುತ್ತಾರೆ. ೧.ಲಿಂಗವಂತ, ೨. ಐಕ್ಯಸ್ಥಲದ ಹಂತ, ೩. ಬಯಲಿನಲ್ಲಿ ಬಯಲಾದ ಅಂದರೆ ಪ್ರಾಣಹೋದ ಸ್ಥಿತಿ. ಈ ಮೂರೂ ಅರ್ಥಗಳಲ್ಲಿ ಲಿಂಗೈಕ್ಯ ಶಬ್ದವನ್ನು ಶರಣರು ಸಂದರ್ಭಕ್ಕೆ ಅನುಗುಣವಾಗಿ ಬಳಸಿದ್ದಾರೆ ಎಂಬುದನ್ನು ಡಾ. ದಂಡೆ ಅವರು ತುಂಬ ಸೂಕ್ಷ್ಮವಾಗಿ ವಿವರಿಸುವ ಪ್ರಯತ್ನ ಮಾಡಿದ್ದಾರೆ.

- Advertisement -

‘ಬಸವಣ್ಣನವರ ಪರುಷಕಟ್ಟೆ, ಮಹಾಮನೆಗಳಿದ್ದ ಕಲ್ಯಾಣದ ‘ಪರುಷಪಟ್ಟಣ’ ಭಾಗ’ ಎಂಬ ಲೇಖನ ತುಂಬ ಕುತೂಹಲಕಾರಿಯಾಗಿದೆ. ಇಂದು ಬಸವ ಕಲ್ಯಾಣದಲ್ಲಿ ಶರಣರ ಅಸ್ತಿತ್ವವನ್ನು ತಿಳಿಸುವ ಏಕೈಕ ಸ್ಥಳವೆಂದರೆ ‘ಪರುಷಕಟ್ಟೆ’. ಈ ಪರುಷಕಟ್ಟೆಯನ್ನು ಸ್ವತಃ ಬಸವಣ್ಣನವರೇ ನಿರ್ಮಿಸಿದರು. ಇದು ಬಸವಣ್ಣನವರ ಮಾವನ ಮನೆ ಬಲದೇವ ದಂಡನಾಯಕರ ಮನೆ ಪಕ್ಕದಲ್ಲಿ ಇತ್ತೆಂಬುದನ್ನು ಕನ್ನಡ ಕಾವ್ಯಗಳ ಆಧಾರದ ಮೇಲೆ ಸಿದ್ಧಪಡಿಸಿ, ಆಧುನಿಕ ಕಾಲದಲ್ಲಿ ಈ ಪರುಷ ಕಟ್ಟೆಯ ಅಭಿವೃದ್ಧಿ ವಿಚಾರದಲ್ಲಿ ನಡೆದ ಬೆಳವಣಿಗೆಗಳನ್ನು ತಿಳಿಸುತ್ತಾರೆ. ಈ ಲೇಖನ ಬರೆದಾದ ಮೇಲೆಯೂ ಸರಕಾರ ೨೦ ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಪರುಷ ಕಟ್ಟೆ ಇರುವ ಸ್ಥಳದಲ್ಲಿ ಈಗ ಮುಸ್ಲಿಂರು ವಾಸವಾಗಿದ್ದು, ಅವರು ಮನೆಗಳನ್ನು ತೆರವು ಮಾಡಲು ಒಪ್ಪಿಕೊಂಡದ್ದು, ಈ ವಿಷಯವಾಗಿ ವರ್ತಮಾನ ಪತ್ರಿಕೆಗಳಲ್ಲಿ ಬಂದ ಸುದ್ದಿ ತುಣುಕುಗಳನ್ನು ಇಲ್ಲಿ ಜೋಡಿಸಿರುವುದು ಔಚಿತ್ಯಪೂರ್ಣವಾಗಿದೆ. 

 ‘ಮಹಾಮನೆ-ಅನುಭವ ಮಂಟಪ’ ಲೇಖನ ಈ ಎರಡು ಪದಗಳ ವ್ಯತ್ಯಾಸವನ್ನು ವಿವರವಾಗಿ ತಿಳಿಸುತ್ತದೆ. ಬಸವಣ್ಣ : ಶರಣ ಗಣ ಸಂಘಟನೆ ಕೃತಿಯಲ್ಲಿ ಈ ಕುರಿತು ಸುದೀರ್ಘವಾದ ವಿವರಣೆ ಬರುತ್ತದೆ. ಇಲ್ಲಿ ಬಸವಣ್ಣನವರು ತಮ್ಮ ರಾಜಕೀಯ ಅಧಿಕಾರ ಸಾರ್ವಜನಿಕರ ಸಂಪರ್ಕದ ಕಾರಣಕ್ಕಾಗಿ ಮೊದಲು ಮಹಾಮನೆಯನ್ನು ಅಸ್ತಿತ್ವಕ್ಕೆ ತಂದರು. ತದನಂತರ ಮಹಾಮನೆಯ ಒಂದು ಭಾಗವಾಗಿ ಅನುಭವ ಮಂಟಪವನ್ನು ಅಸ್ತಿತ್ವಕ್ಕೆ ತಂದರೆಂಬ ಸಂಗತಿಯನ್ನು ಇಲ್ಲಿ ಸವಿವರವಾಗಿ ಮನಮುಟ್ಟುವಂತೆ ತಿಳಿಸುತ್ತಾರೆ. 

 ‘ಕಲ್ಯಾಣದ ಶರಣರು’ ಎಂಬ ಲೇಖನ, ಈಗಾಗಲೇ ಡಾ. ದಂಡೆ ಅವರು ಇದೇ ಹೆಸರಿನ ಕೃತಿಗೆ ಬರೆದ ಸುದೀರ್ಘ ಪ್ರಸ್ತಾವನೆಯಾಗಿದೆ. ‘ಶರಣರನ್ನು ಉಲ್ಲೇಖಿಸುವ ಇಂಗಳಗಿ ಶಾಸನ’ ಶರಣರ ಮೇಲೆ ಹೊಸ ಬೆಳಕು ಚೆಲ್ಲುತ್ತದೆ. ಈ ವರೆಗಿನ ವಿದ್ವಾಂಸರು ನೋಡಿದ ದೃಷ್ಟಿಗಿಂತ ಭಿನ್ನವಾಗಿ ಸೂಕ್ಷ್ಮವಾಗಿ ಗಮನಿಸಿದ ಪರಿಣಾಮವಾಗಿ ದಶಗಣ ಸಿಂಗಿದೇವರು, ಕೇದಾರ ದೇವರು, ಕನ್ನೇಶ್ವರ, ನಾಗೇಶ್ವರ, ಬಿಜ್ಜೇಶ್ವರ, ಸಿದ್ಧರಾಮನಾಥ ದೇವರು’, ‘ರೇವಣೇಶ್ವರ’ ಮೊದಲಾದ ಶರಣರ ಹೆಸರುಗಳು ಇಲ್ಲಿ ದಾಖಲಾಗಿರುವುದನ್ನು ಕಂಡು ಹಿಡಿದಿದ್ದಾರೆ. ಗುಡ್ಡಾಪುರ ದಾನಮ್ಮ ಶರಣೆಯ ಇತಿಹಾಸದ ಮೇಲೂ ಇಲ್ಲಿ ಬೆಳಕು ಚೆಲ್ಲಲಾಗಿದೆ. 

 ‘ಬಿಜ್ಜಳನ ಪ್ರಸ್ತಾಪವಿರುವ ಬಸವಣ್ಣನವರ ವಚನಗಳು’ ಲೇಖನದಲ್ಲಿ ಬಸವಣ್ಣನವರ ಐದು ವಚನಗಳಲ್ಲಿ ಬಿಜ್ಜಳನ ಪ್ರಸ್ತಾಪ ಬರುತ್ತದೆ. ಬಸವಣ್ಣನವರು ಯಾವ ಕಾಲಘಟ್ಟದಲ್ಲಿ ನಿಂತು, ಈ ಬಿಜ್ಜಳ ಪದಪ್ರಯೋಗ ಮಾಡಿದ್ದಾರೆ ಎಂಬುದನ್ನು ವಿವರಿಸುತ್ತ ಬಿಜ್ಜಳನ ಕಾಲಮಾನದ ವಸ್ತುನಿಷ್ಠ ಇತಿಹಾಸವನ್ನೂ ತಿಳಿಸುತ್ತ, ಅವರಿಬ್ಬರ ನಡುವಿನ ಸಂಬಂಧಗಳು ಹೇಗೆ ಬಿಚ್ಚಿಬೇರಾಗುತ್ತ, ನುಚ್ಚುನೂರಾದವು ಎಂಬುದನ್ನು ವಿಶ್ಲೇಷಿಸಿದ್ದಾರೆ.

 ‘ಐತಿಹಾಸಿಕ ಮಹತ್ವದ ಎರಡು ವಚನಗಳು’ ಲೇಖನ ಹೆಚ್ಚಿನ ಗಮನ ಸೆಳೆಯುತ್ತದೆ. ‘ಅಯ್ಯಾ ಭಕ್ತಿಗೆ ಬೀಡದುದು ಕಲ್ಯಾಣ ಮೂವತ್ತಾರು ವರುಷ’  ಮತ್ತು ‘ಅರಸು ವಿಚಾರ ಸಿರಿಯ ಶೃಂಗಾರ ಸ್ಥಿರವಲ್ಲ ಮಾನವಾ’ ಈ ಎರಡು ವಚನಗಳಲ್ಲಿ ಅಡಗಿರುವ ಇತಿಹಾಸದ ಎಳೆಗಳನ್ನು ಶೋಧಿಸುವ ಪ್ರಯತ್ನ ಮಾಡಿದ್ದಾರೆ. ಬಸವಣ್ಣ ಬಾಗೇವಾಡಿಯಲ್ಲಿ ೮ ವರ್ಷ, ಕೂಡಲಸಂಗಮದಲ್ಲಿ ೧೨ ವರುಷ, ಮಂಗಳವೇಡೆಯಲ್ಲಿ ಕರಣಿಕನಾಗಿ ೨ ವರುಷ, ಕಲ್ಯಾಣದಲ್ಲಿ ಕರಣಿಕ, ಮಂತ್ರಿಯಾಗಿ ೩೬ ವರುಷ ಒಟ್ಟು ೫೮ ವರ್ಷಗಳ ಜೀವಿತಾವಧಿಯೆಂದು ಗುರುತಿಸಿದ್ದಾರೆ. ಪಿ.ಬಿ. ದೇಸಾಯಿ, ಡಾ. ಕಲಬುರ್ಗಿ ಅವರ ವಿಚಾರಗಳಿಗಿಂತ ಭಿನ್ನವಾದ ಆಲೋಚನೆ ಇಲ್ಲಿ ಕಾಣುತ್ತದೆ. ‘ಅರಸು ವಿಚಾರ…’ ವಚನದಲ್ಲಿ ಚಾಲುಕ್ಯರಾಯನ ಆಳಿಕೆ ತಗೆಯಿತ್ತು ಎಂಬ ವಿಚಾರ ಕುರಿತು ಸುದೀರ್ಘವಾಗಿ ಚರ್ಚಿಸಿದ್ದಾರೆ. ಕಲಚುರಿ ಬಿಜ್ಜಳನ ಆಡಳಿತ ಇರುವಾಗ, ಬಸವಣ್ಣನವರು ‘ಚಾಲುಕ್ಯ’ ಎಂಬ ಪದವನ್ನು ಬಳಸಿದ ಕಾರಣವನ್ನು ಸಂಶೋಧನಾತ್ಮಕವಾಗಿ ವಿಶ್ಲೇಷಣೆ ಮಾಡಿದ್ದಾರೆ. ಈ ವಚನವನ್ನೇ ಪಾಲ್ಕುರಿಕೆ ಸೋಮನಾಥ ತನ್ನ ಬಸವ ಪುರಾಣದಲ್ಲಿ ಬಳಸಿರುವ ಸಾಧ್ಯತೆಯನ್ನು ಕಂಡು ಹಿಡಿದಿದ್ದಾರೆ. ಬಸವಣ್ಣನವರು ಕಲ್ಯಾಣ ಬಿಟ್ಟು ಹೋಗುವಾಗ ‘ಕಲ್ಯಾಣ ಕಟಗೇರಿ ಆಗಲಿ’ ಎಂದು ಶಾಪಕೊಟ್ಟರೆಂಬ ಜನಜನಿತವಾದ ಮಾತನ್ನು ಪುನರ್ ವ್ಯಾಖ್ಯಾನಕ್ಕೊಳಪಡಿಸಿ ‘ಬಿಜ್ಜಳನ ಸಂಪೂರ್ಣ ಐಶ್ವರ್ಯ ಮತ್ತು ಕಲ್ಯಾಣ ಕೋಟೆ ಹಾಳಾಗಲಿ’ ಎಂದು ಹೇಳಿರುವ ಸಾಧ್ಯತೆಯ ಕಡೆಗೆ ನಮ್ಮ ಗಮನ ಸೆಳೆಯುತ್ತಾರೆ. 

 ‘ಬಸವಣ್ಣನವರ ಎರಡು ವಚನಗಳು’ ಲೇಖನದಲ್ಲಿ ‘ಒಡನಿರ್ದ ಸತಿಯೆಂದು ನಚ್ಚಿರ್ದೆನಯ್ಯ’ ಮತ್ತು ‘ಕೊಲ್ಲೆನಯ್ಯಾ ಪ್ರಾಣಿಗಳ, ಮೆಲ್ಲೆನಯ್ಯಾ ಬಾಯಿಚ್ಚೆಗೆ’ ಎರಡು ವಚನಗಳನ್ನು ವರ್ತಮಾನದ ಪರಿಪ್ರೇಕ್ಷ್ಯದಲ್ಲಿಟ್ಟು ಅವುಗಳಿಗೆ ಹೊಸ ವ್ಯಾಖ್ಯಾನ ಮಾಡಿದ್ದಾರೆ. ಮೊದಲಿನ ವಚನದಲ್ಲಿ ಬರುವ ‘ಚಾಂಡಾಲಗಿತ್ತಿ’ ಪದವು ‘ಅರಿವನ್ನು ಆವರಿಸಿಕೊಂಡಿರುವ ಚಾಂಚಲ್ಯದ ಪ್ರತೀಕ’ ಎಂದು ವಿವರಿಸಿದ್ದಾರೆ. 

 ‘ಬಸವಣ್ಣನವರ ಮುಂಜಿವೆ ಸಮಸ್ಯೆ’ ಲೇಖನ ಕುರಿತು ಲೇಖಕರೇ ತಮ್ಮ ಮಾತಿನಲ್ಲಿ ಹೇಳುವಂತೆ – ‘ವೈದಿಕ ಸಂಸ್ಕೃತಿಯ ಹಿನ್ನೆಲೆಯಲ್ಲಿ ನೋಡಿದರೆ ಬಸವಣ್ಣನವರು ಮುಂಜಿವೆಯನ್ನು ಒಂದು ಸಲವಲ್ಲ, ಎರಡು ಸಲ ನಿರಾಕರಿಸಿದರು ಎನಿಸುತ್ತದೆ. ಎಂಟು ವರುಷದ ಬಾಲ್ಯದಲ್ಲಿ ಉಪನಯನದ ಸಂದರ್ಭದಲ್ಲಿ ಒಮ್ಮೆ, ಮದುವೆಗಿಂತ ಮುಂಚೆ ನಡೆಯುವ ಸೋಡಮುಂಜಿವೆ ಪ್ರಸಂಗದಲ್ಲಿ ಇನ್ನೊಮ್ಮೆ. ಹೀಗಾಗಿ ವೈದಿಕ ಸಂಸ್ಕೃತಿ ಬಸವಣ್ಣನವರಿಗೆ ಬಾಲ್ಯದಿಂದಲೂ ಸರಿ ಎನಿಸಿರಲಿಲ್ಲ, ಯೌವ್ವನದಲ್ಲಿ ಅದನ್ನು ಸಂಪೂರ್ಣವಾಗಿ ತಿರಸ್ಕರಿಸಿ ಅದರಿಂದ ದೂರ ಸರಿದರು ಎಂಬುದು ಸ್ಪಷ್ಟವಾಗುತ್ತದೆ’ ಎಂದು ಹೇಳುತ್ತಾರೆ. 

 ‘ಶರಣ ರೇವಣಸಿದ್ಧೇಶ್ವರರು’ ಎಂಬ ಲೇಖನದಲ್ಲಿ ರೇಣುಕ-ರೇವಣಸಿದ್ಧ ಇಬ್ಬರೂ ಬೇರೆ ಬೇರೆ ಎಂಬುದಕ್ಕೆ ದಾಖಲೆ ನೀಡುತ್ತಾರೆ.  ರೇವಣಸಿದ್ಧರು ಒಬ್ಬ ಶರಣರು, ಮೇಲಾಗಿ ವಚನಕಾರರು ಹೀಗಾಗಿ ರೇವಣರು ಬೇರೆ, ರೇಣುಕರು ಬೇರೆ ಎಂಬ ವಿಚಾರಧಾರೆಯನ್ನು ಸ್ಪಷ್ಟವಾದ ದಾಖಲೆಗಳ ಮೂಲಕ ಮಂಡಿಸಿದ್ದಾರೆ.

 ‘ಶರಣ ರೇವಣಸಿದ್ಧೇಶ್ವರರ ಜೀವಿತಾವಧಿ’ ಎಂಬ ಲೇಖನದಲ್ಲಿ ಡಾ. ಕಲಬುರ್ಗಿ ಅವರ ಅಭಿಪ್ರಾಯಕ್ಕೆ ಭಿನ್ನವಾಗಿ ಡಾ. ದಂಡೆ ಅವರು ರೇವಣಸಿದ್ಧರು ಕ್ರಿ.ಶ. ೧೦೮೦ರಿಂದ ಕ್ರಿ.ಶ. ೧೧೮೦ರ ಕಾಲಘಟ್ಟದಲ್ಲಿ ನೂರು ವರ್ಷ ಬದುಕಿದ್ದರು ಎಂಬುದನ್ನು ಸಿದ್ಧಗೊಳಿಸಿದ್ದಾರೆ.

 ‘ವಚನ ಸಾಹಿತ್ಯದ ಬಹುಮುಖಿ ಆಯಾಮಗಳು’ ಲೇಖನದಲ್ಲಿ ಆಧುನಿಕ ಕಾಲಘಟ್ಟದಲ್ಲಿ ವಚನಗಳ ಅಧ್ಯಯನವು ಯಾವೆಲ್ಲ ಆಯಾಮಗಳಲ್ಲಿ ಕವಲೊಡೆದು ಸಾಗಿ ಬಂದಿದೆ ಎಂಬುದನ್ನು ವಿವರಿಸಿದ್ದಾರೆ. ಇದು ವಿಚಾರ ಸಂಕಿರಣದಲ್ಲಿ ಮಾಡಿದ ಆಶಯ ಭಾಷಣ. ಕ್ರಿ.ಶ. ೨೦೦೦ ನಂತರ ವಚನ ಅಧ್ಯಯನ ಪರಂಪರೆಯಲ್ಲಿ ಕಾಣಿಸಿಕೊಂಡ ಹೊಸ ದೃಷ್ಟಿಗಳನ್ನು ಪಟ್ಟಿ ಮಾಡಿಕೊಟ್ಟಿದ್ದಾರೆ. ಹೀಗಿದ್ದೂ ಇನ್ನೂ ಅನೇಕ ಆಯಾಮಗಳ ಹಿನ್ನೆಲೆಯಲ್ಲಿ ವಚನಗಳ ಅಧ್ಯಯನ ನಡೆಯಬೇಕಾದ ಅನಿವಾರ್ಯತೆಯನ್ನೂ ತಿಳಿಸಿದ್ದಾರೆ. 

 ‘ಪಾಲ್ಕುರಿಕೆ ಸೋಮನಾಥ : ಕರ್ನಾಟಕ ಸಂಬಂಧ’ ಲೇಖನ ವಿಶೇಷವಾಗಿ ಗಮನ ಸೆಳೆಯುತ್ತದೆ. ಆಂಧ್ರಕವಿಯಾದ ಸೋಮನಾಥ ಪಾಲ್ಕುರಿಕೆಯವನಾದರೂ ಕರ್ನಾಟಕದ ಅನೇಕ ಸ್ಥಳಗಳೊಂದಿಗೆ ಆತನ ನಿಕಟ ಸಂಬಂಧವಿರುವುದನ್ನು ಗುರುತಿಸಿದ್ದಾರೆ. ಬೆಂಗಳೂರು ಸಮೀಪ ಕಲ್ಲೆ ಗ್ರಾಮದಲ್ಲಿ ಆತನ ಸಮಾಧಿ ಇರುವುದು ಗಮನಿಸುವ ಅಂಶ. ಸೋಮನಾಥ ಬರೆದ ಬಸವ ಪುರಾಣದಲ್ಲಿ ‘ವೀರಶೈವ’ ಪದದ ಉಲ್ಲೇಖವೇ ಇಲ್ಲ ಎಂಬುದನ್ನು ಹೇಳುವ ಮೂಲಕ ಬಸವಣ್ಣನವರು ಸ್ಥಾಪಿಸಿದ ಧರ್ಮವು ಲಿಂಗಾಯತವೇ ಆಗಿತ್ತು ಎಂಬುದರತ್ತರ ನಮ್ಮ ಗಮನ ಸೆಳೆಯುತ್ತಾರೆ. 

 ‘ಪಾಲ್ಕುರಿಕಿ ಸೋಮನಾಥನ ಬಸವ ಪುರಾಣ’ ಲೇಖನ ಬಸವಣ್ಣನವರ ಬಗೆಗಿನ ಚಾರಿತ್ರಿಕ ಅಧ್ಯಯನದ ನೆಲೆಗಳನ್ನು ವಿಸ್ತರಿಸುತ್ತದೆ. ಸೋಮನಾಥ ಕವಿ ಬರೆದ ಮಲ್ಲಿಕಾರ್ಜುನ ಪಂಡಿತಾರಾಧ್ಯ ಚರಿತ್ರೆ ಮತ್ತು ಬಸವ ಪುರಾಣಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇನ್ನಷ್ಟು ಹೊಸ ವಿಷಯಗಳು ನಮ್ಮ ಗಮನಕ್ಕೆ ಬರುತ್ತವೆ ಎಂಬುದನ್ನು ಸೋದಾಹರಣವಾಗಿ ವಿವರಿಸಿದ್ದಾರೆ.

 ‘ಪಾಲ್ಕುರಿಕೆ ಸೋಮನಾಥನ ಮಲ್ಲಿಕಾರ್ಜುನ ಪಂಡಿತಾರಾಧ್ಯ ಚರಿತ್ರೆ’ ಲೇಖನ ಸೋಮನಾಥ ಕವಿಯ ಈ ಕೃತಿಯ ಮೂಲಕ ಲಿಂಗಾಯತ ಪರಿಭಾಷೆಗಳು, ಲಿಂಗಾಯತ ಧರ್ಮದ ವೈಶಿಷ್ಟ್ಯಗಳು ಹೇಗೆ ಅಡಕವಾಗಿವೆ ಎಂಬುದನ್ನು ಶೋಧಿಸುವ ಪ್ರಯತ್ನ ಮಾಡಿದ್ದಾರೆ. ಪಂಡಿತಾರಾಧ್ಯರು ಬಸವಣ್ಣನವರ ಪರಮ ಭಕ್ತರಾಗಿದ್ದರು. ಬಸವಣ್ಣನವರ ಕೀರ್ತಿವಾರ್ತೆಗಳನ್ನು ಕೇಳಿ ಭೇಟಿಯಾಗಲು ಬರುವ ಮಾರ್ಗ ಮಧ್ಯದಲ್ಲಿಯೇ ಬಸವಣ್ಣನವರು ಲಿಂಗೈಕ್ಯರಾದ ಸಂಗತಿ ತಿಳಿಯುತ್ತದೆ. ಬಸವಣ್ಣನವರ ಭಕ್ತನಾಗಿ ಪಂಡಿತಾಧ್ಯರು ಇಷ್ಟಲಿಂಗವನ್ನು ಕಟ್ಟಿಕೊಂಡರೆಂಬ ಸಂಗತಿಯನ್ನು ಡಾ. ದಂಡೆ ಅವರು ಅರ್ಥಪೂರ್ಣವಾಗಿ ದಾಖಲಿಸಿದ್ದಾರೆ. ‘ಮಲ್ಲಿಕಾರ್ಜುನ ಪಂಡಿತಾರಾಧ್ಯ ಚರಿತ್ರೆ’ ಮೂಲ ತೆಲಗು ಭಾಷೆಯಲ್ಲಿ ಐದು ಬೃಹತ್ ಸಂಪುಟಗಳಲ್ಲಿ ಪ್ರಕಟವಾಗಿವೆ. ಕನ್ನಡದಲ್ಲಿ ಪಿ. ಆರ್. ಕರಿಬಸವ ಶಾಸ್ತ್ರಿಗಳು ನೂರು ವರ್ಷಗಳ ಹಿಂದೆ ಶಾಸ್ತ್ರಶುದ್ಧವಾಗಿ ಒಂದು ಸಂಪುಟವನ್ನು ಕನ್ನಡಕ್ಕೆ ಅನುವಾದಿಸಿದ್ದರು. ಈ ಕೃತಿಯಲ್ಲಿಯೂ ಕೂಡ ಕೆಲವು ಐತಿಹಾಸಿಕ ಸಂಗತಿಗಳನ್ನು ದಾಖಲಿಸಿದ್ದಾರೆ. ಇನ್ನುಳಿದ ನಾಲ್ಕು ಸಂಪುಟಗಳು ಪ್ರಕಟವಾದರೆ ಲಿಂಗಾಯತ ಚರಿತ್ರೆಯ ಮೇಲೆ ಹೊಸ ಬೆಳಕು ಮೂಡಬಹುದು. 

 ‘ಲಿಂಗಾಯತಕ್ಕೆ ಹರಿಹರ ಕವಿಯ ಕೊಡುಗೆ’ ಲೇಖನ ಹರಿಹರ ಕವಿಯು ಲಿಂಗಾಯತ ಧರ್ಮದ ಪರಿಭಾಷೆಗಳನ್ನು ಬಳಸಿದ ರೀತಿ, ವೀರಶೈವ ಪದ ಬಳಕೆ ಮಾಡದೆ ಇರುವುದು, ಹರಿಹರ-ಸೋಮನಾಥರ ಗುರುಪರಂಪರೆ, ಮಹಾಮನೆ, ಅನುಭವ ಮಂಟಪಗಳ ಉಲ್ಲೇಖ, ಶರಣರ ಹೆಸರುಗಳ ಉಲ್ಲೇಖಗಳ ಮೂಲಕ ಲಿಂಗಾಯತ ಧರ್ಮಕ್ಕೆ ಹರಿಹರ ಕೊಟ್ಟ ಕಾಣಿಕೆಯನ್ನು ಎಳೆ ಎಳೆಯಾಗಿ ಪ್ರತಿಪಾದಿಸಿದ್ದಾರೆ. 

 ‘ಶರಣ ಸೌಹಾರ್ದ ನೆಲೆಗಳು’ ಲೇಖನದಲ್ಲಿ ಮಹಮದೀಯರ ಆಳ್ವಿಕೆ, ನಿಜಾಮರ ಆಳ್ವಿಕೆ ಕಾರಣವಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮುಸ್ಲಿಂ ಸಮುದಾಯದ ಸಂಖ್ಯೆ ಸಹಜವಾಗಿಯೇ ಹೆಚ್ಚಾಗಿದೆ. ಮುಸ್ಲಿಂ ಸೂಫಿಗಳು-ಶರಣರ ಚಿಂತನೆಗಳು ಏಕಮುಖವಾಗಿರುವುದನ್ನು ಗುರುತಿಸುತ್ತಲೇ ಶರಣರ ನೆಲೆಗಳು ಹೇಗೆ ಸೌಹಾರ್ದತೆಯ ಮೌಲ್ಯಗಳನ್ನು ಪ್ರತಿಪಾದಿಸುತ್ತಿವೆ ಎಂಬುದನ್ನು ಡಾ. ದಂಡೆ ಅವರು ತುಂಬ ವಾಸ್ತವ ನೆಲೆಯಲ್ಲಿ ವಿವರಿಸಿದ್ದಾರೆ. 

‘ಮೌಖಿಕ ಪರಂಪರೆ : ಅಲ್ಲಮಪ್ರಭುದೇವರು’ ಕೃತಿಯ ಕೊನೆಯ ಲೇಖನವಾಗಿದೆ. ಅಲ್ಲಮನ ಕುರಿತು ಪುರಾಣಗಳು, ಕಾವ್ಯಗಳು ರಚನೆ ಆದಂತೆ, ಜನಪದರು ನಾಟಕದ ಮೂಲಕ ಹೇಗೆ ಕಂಡಿದ್ದಾರೆ ಎಂಬುದನ್ನು ಇಲ್ಲಿ ಗುರುತಿಸುವ ಪ್ರಯತ್ನ ಮಾಡಿದ್ದಾರೆ. ಪ್ರಭುದೇವರ ಕುರಿತು ಪ್ರಕಟವಾದ ಬಯಲಾಟಗಳನ್ನು ಸಮೀಕ್ಷಿಸುತ್ತ ಅಲ್ಲಮನ ಹುಟ್ಟೂರನ್ನು ಮೌಖಿಕ ನೆಲೆಯಲ್ಲಿ ಕಂಡುಕೊಳ್ಳುವ ರೀತಿ ಅನನ್ಯವಾಗಿದೆ. ಕಲ್ಯಾಣದ ಸುತ್ತಲಿನ ಅಲ್ಲಮಪ್ರಭುವಿನ ನೆಲೆಗಳು, ಅಲ್ಲಮರು ರೇವಣಸಿದ್ಧರೊಡನೆ ಅಡ್ಡಾಡಿದ ಸ್ಥಳಗಳು ಎಲ್ಲವನ್ನು ಸ್ವತಃ ಕಣ್ಣಾರೆ ಕಂಡು, ಬರೆದಿರುವುದರಿಂದ ಈ ಲೇಖನಕ್ಕೆ ಒಂದು ಅಧಿಕೃತತೆ ಪ್ರಾಪ್ತವಾಗಿದೆ.

ಇಲ್ಲಿಯ ಎಲ್ಲ ೨೦ ಲೇಖನಗಳು ಡಾ. ದಂಡೆ ಅವರ ಆಳವಾದ ಅಧ್ಯಯನಕ್ಕೆ, ಅರ್ಥಪೂರ್ಣ ವಿಶ್ಲೇಷಣಾ ಸಾಮರ್ಥ್ಯಕ್ಕೆ ನಿದರ್ಶನವಾಗಿವೆ. ಸಂಶೋಧಕನ ಅಂದಂದಿನ ಅಭಿಪ್ರಾಯಗಳು ಕಾಲಾನುಕಾಲಕ್ಕೆ ಬದಲಾಗಲೂ ಬಹುದು, ಆದರೆ ಇತಿಹಾಸದ ಅವಲೋಕನ ಮಾಡಿದಾಗಲೇ ವರ್ತಮಾನದ ನೆಲೆಗಳ ವಾಸ್ತವ ನಮಗೆ ತಿಳಿಯುವುದು. ಈ ಹಿನ್ನೆಲೆಯಲ್ಲಿ ಡಾ. ದಂಡೆ ಅವರ ಈ ಶೋಧಪ್ರಬಂಧಗಳು ನಿಜಕ್ಕೂ ಬಸವಾದಿ ಶಿವಶರಣರ ಅಧ್ಯಯನಕ್ಕೆ ಹೊಸ ರೂಪ-ಸ್ವರೂಪ, ವಿನ್ಯಾಸಗಳನ್ನು ಒದಗಿಸಬಲ್ಲವು. ಅವರ ಈ ಬಸವ ಸೇವೆ ನಿತ್ಯ ನಿರಂತರವಾಗಿರಲಿ, ಇಂತಹ ಇನ್ನೂ ಹತ್ತಾರು ಕೃತಿಗಳು ಅವರಿಂದ ರಚನೆಗೊಳ್ಳಲಿ, ವಚನ ಸಾಹಿತ್ಯದ ವಾಗ್ದೇವಿಯ ಭಂಡಾರದ ಲೋಕಸೋಜಿಗ ಚಿಂತನೆಗಳು ಎಲ್ಲರ ಮನೆ-ಮನಗಳನ್ನು ತಲುಪುವಂತಾಗಲಿ ಎಂದು ಆಶಿಸುವೆ.


ಪ್ರಕಾಶ ಗಿರಿಮಲ್ಲನವರ

ಬೆಳಗಾವಿ 

ಮೊ: ೯೯೦೨೧೩೦೦೪೧

- Advertisement -
- Advertisement -

Latest News

ವಚನ ವಿಶ್ಲೇಷಣೆ : ಕಾಯದ ಜೀವದ ಹೊಲಿಗೆ

*ಕಾಯದ ಜೀವದ ಹೊಲಿಗೆ* ----------------------------------- ದೇಹಭಾವವಳಿದಲ್ಲದೆ ಜೀವಭಾವವಳಿಯದು. ಜೀವಭಾವವಳಿದಲ್ಲದೆ ಭಕ್ತಿಭಾವವಳವಡದು. ಭಕ್ತಿಭಾವವಳವಟ್ಟಲ್ಲದೆ ಅರಿವು ತಲೆದೋರದು. ಅರಿವು ತಲೆದೋರಿದಲ್ಲದೆ ಕುರುಹು ನಷ್ಟವಾಗದು. ಕುರುಹು ನಷ್ಟವಾದಲ್ಲದೆ ಮಾಯೆ ಹಿಂಗದು. ಇದು ಕಾರಣ; ಕಾಯದ ಜೀವದ ಹೊಲಿಗೆಯ ಅಳಿವ ಭೇದವ ತಿಳಿಯಬಲ್ಲಡೆ ಗುಹೇಶ್ವರಲಿಂಗದ...
- Advertisement -

More Articles Like This

- Advertisement -
close
error: Content is protected !!
Join WhatsApp Group