spot_img
spot_img

ಮಾ.೩೦ ರಂದು ಸೆಂಟರ್ ಫಾರ್ ಡಿವೈನ್ ಆರ್ಟ್ಸ್ ವತಿಯಿಂದ ಮೂರು ಕೃತಿಗಳ ಲೋಕಾರ್ಪಣೆ ಹಾಗೂ ಗೌರವ ಸಮರ್ಪಣೆ

Must Read

- Advertisement -

ಬೆಂಗಳೂರಿನ ಸೆಂಟರ್ ಫಾರ್ ಡಿವೈನ್ ಆರ್ಟ್ಸ್ ರವರು ಇದೆ ಮಾರ್ಚ್ 30, ಶನಿವಾರ ಬೆಳಗ್ಗೆ 10.30 ಗಂಟೆಗೆ ನಗರದ ಗವಿಪುರಂ ಗುಟ್ಟಹಳ್ಳಿಯ ಉದಯಭಾನು ಕಲಾಸಂಘದಲ್ಲಿ ಮೂರು ಕೃತಿಗಳ ಲೋಕಾರ್ಪಣೆ ಮತ್ತು ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಖ್ಯಾತ ಸಾಹಿತಿ ಡಾ.ಹೆಚ್.ಎಸ್,ವೆಂಕಟೇಶಮೂರ್ತಿ ಮಾಡುವರು, ಎ.ಎಸ್.ವಿ.ಎನ್.ವಿ.ಸಂಘದ ಎಸ್. ಪ್ರಕಾಶ್ ಅಧ್ಯಕ್ಷತೆ ವಹಿಸುವರು.

ರಾಣಿ ಚೆನ್ನಬೈರಾದೇವಿ ಕಾದಂಬರಿ ಆಧಾರಿತ ರಂಗರೂಪ ಕೃಷ್ಣಮೂರ್ತಿ ಕವತ್ತಾರ್ ರವರ ‘ಅವ್ವರಸಿ’ ಕೃತಿಯನ್ನು ಕಾದಂಬರಿಕಾರ ಡಾ. ಗಜಾನನ ಶರ್ಮ ಲೋಕಾರ್ಪಣೆಗೊಳಿಸುವರು. ಹಿರಿಯ ರಂಗಕರ್ಮಿ ಅಬ್ಬೂರು ಜಯತೀರ್ಥರವರ ಕುರಿತು ಜಿ.ಪಿ ನಾಗರಾಜ್ ಬರೆದಿರುವ ‘ರಂಗಭೀಷ್ಮ ಅಬ್ಬೂರು ಜಯತೀರ್ಥ’ ಕೃತಿಯನ್ನು ರಂಗ ನಿರ್ದೇಶಕ ಡಾ.ಬಿ.ವಿ. ರಾಜಾರಾಮ್ ಬಿಡುಗಡೆ ಮಾಡುವರು ಮತ್ತು ನಗರ್ತ ಜನಾಂಗದ  ಸಾಧಕರ ಕುರಿತು ಎಮ್. ಬಸವರಾಜು ಮತ್ತು ಶೈಲಜಾ ಉದಯಶಂಕರ್ ಹೊರ ತಂದಿರುವ ಕೃತಿ ‘ನೆನೆ ನೆನೆ ಪ್ರಾತಃಸ್ಮರಣೀಯರ’ ಪುಸ್ತಕವನ್ನು ಹಾರಗದ್ದೆ ಶ್ರೀವಿದ್ಯಾ ಮಹಾಸಂಸ್ಥಾನದ ಶ್ರೀ ಆತ್ಮಾನಂದನಾಥಜಿರವರು ಅನಾವರಣ ಗೊಳಿಸುವರು. ಇದೇ ಸಂದರ್ಭದಲ್ಲಿ ವಿಶ್ವ ರಂಗಭೂಮಿ ದಿನಾಚರಣೆಯ ಅಂಗವಾಗಿ ಖ್ಯಾತ ರಂಗಕರ್ಮಿ ಅಬ್ಬೂರು ಜಯತೀರ್ಥ ಮತ್ತು ಹಿರಿಯ ಪತ್ರಕರ್ತ ರು. ಬಸಪ್ಪರವರಿಗೆ ಗೌರವ ಸಮರ್ಪಣೆ ಮತ್ತು ಕೆ. ವಿ. ಗೋಪಿನಾಥ್ ,ಜಿ. ಪಿ. ನಾಗರಾಜನ್ ,ಸಚಿನ್ ಶಿವರುದ್ರಪ್ಪ ,ಶೈಲಜಾ ಉದಯಶಂಕರ್,ಡಾ. ಕಾವ್ಯ ನಾಗರಾಜನ್ ಹಾಗೂ ಡಾ. ಗುರುರಾಜ ಪೋಶೆಟ್ಟಿಹಳ್ಳಿ ರವರುಗಳನ್ನು ಅಭಿನಂದಿಸಲಾಗುವುದು ಎಂದು ಕಾರ್ಯಕ್ರಮದ ಆಯೋಜಕರಾದ ಎಂ. ಬಸವರಾಜುರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

ಲೋಕಾರ್ಪಣೆಗೊಳ್ಳಲಿರುವ ಕೃತಿಗಳ ಕುರಿತು

ರಂಗಭೀಷ್ಮ ಅಬ್ಬೂರು ಜಯತೀರ್ಥ:  ಕನ್ನಡ ಹವ್ಯಾಸಿ ರಂಗಭೂಮಿಯ ಹಿರಿಮೆಗೆ ಕುರುಹಾಗಿರುವ ರಂಗಪ್ರಾಜ್ಞರು. ಕಳೆದ 60 ವರ್ಷದಿಂದ ರಂಗ ಧ್ವನಿಯ ಜೀವಾಳವಾಗಿರುವ ಶ್ರೀಯುತರು ನೀಡಿರುವ ಕೊಡುಗೆ ಅಪಾರ .ಇಳಿ ವಯಸ್ಸಿನಲ್ಲೂ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿರುವ ಅಬ್ಬೂರರು, ಬಹಿರಂಗದಲ್ಲಿ ಸಂಪ್ರದಾಯಶೀಲರಂತೆ ಕಂಡರು ಆಂತರ್ಯದಲ್ಲಿ ಅತ್ಯಾಧುನಿಕರು – ಮಹಾ ವಿಚಾರಶೀಲರು. ಅವರ ನಿರ್ದೇಶನದ ನಾಟಕಗಳನ್ನು ನೋಡಿದಾಗ ಇದು ನಮ್ಮ ಗಮನಕ್ಕೆ ಬರುತ್ತದೆ. ಕಾನೂನು ವಿಷಯದಲ್ಲಿ ಉನ್ನತ ಶಿಕ್ಷಣ ಪಡೆದು, ಮಹಾಲೇಖಪಾಲರ ಕಚೇರಿಯಲ್ಲಿ ವೃತ್ತಿ ನಿರ್ವಹಿಸಿ, ಪ್ರವೃತ್ತಿಯಿಂದ ರಂಗಕಲೆಯಲ್ಲಿ ಆಸಕ್ತರಾಗಿ ,ರಂಗಭೂಮಿಯ ದಿಗ್ಗಜರೊಂದಿಗೆ ಕೆಲಸ ಮಾಡಿದ ಅನುಭವ ಅಬ್ಬೂರರಿಗಿದೆ . ಬಿ.ವಿ. ಕಾರಂತ,  ನಾಣಿ, ಬಿ. ಚಂದ್ರಶೇಖರ್ ,ಶಂಕರ್ ನಾಗ್,  ಬಿ. ಜಯಶ್ರೀ. ಪಿ. ಲಂಕೇಶ ಮೊದಲಾದವರೊಂದಿಗೆ ನಿಕಟ ಸಂಪರ್ಕ ಅಂತಯೇ ಅನೇಕ ಕಲಾವಿದರನ್ನು ತಯಾರು ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ . ಆದ್ಯರಂಗಾಚಾರ್ಯ, ಕೈಲಾಸಂ ಮೊದಲಾದವರ ನಾಟಕಗಳನ್ನು ಅಷ್ಟೇ ಅಲ್ಲದೆ ಇತ್ತೀಚಿನ ವಿಶ್ವೇಶ್ವರ ಭಟ್ಟ ,ಸುಧಾ ಮೂರ್ತಿ ಅವರ ಕಥೆಗಳನ್ನು ಆಧರಿಸಿ ನಾಟಕ ಪ್ರದರ್ಶನ ಮಾಡಿರುವುದು ಇವರ ಹಿರಿಮೆ.

ಇತ್ತೀಚೆಗೆ ಭಾರತದ ಗೌರವಾನ್ವಿತ ಉಪರಾಷ್ಟ್ರಪತಿ ಜಗದೀಪ್ ಧನಕರ್ ರವರಿಂದ ಸಂಗೀತ ನಾಟಕ ಅಕಾಡೆಮಿಯ ‘ಅಮೃತ ಪ್ರಶಸ್ತಿ’ಗೆ ಭಾಜನರು. ಜೀವಂತ ಕಲೆಯಾದ ರಂಗಭೂಮಿಯ ಸಮಕಾಲೀನ ಸ್ಥಿತಿಗತಿಗಳಿಗೆ ಭಾವನಾತ್ಮಕವಾಗಿ ಅಲ್ಲದೆ ವೈಚಾರಿಕ ನೆಲೆಗಟ್ಟಿನಲ್ಲಿ ಸ್ಪಂದಿಸುವ ಹೊಸ ಪ್ರಯೋಗಗಳಿಗೆ ನಿರಂತರವಾಗಿ ಒಡ್ಡಿಕೊಳ್ಳುವ ಮಾಧ್ಯಮವನ್ನು ಸಮರ್ಥವಾಗಿ ಬಳಸಿಕೊಂಡ ಅಪರೂಪದ ಪ್ರತಿಭೆ ಅಬ್ಬೂರು ಜಯತೀರ್ಥ, ಇವರ ಸಾಧನೆಯ ಬಗ್ಗೆ ಹವ್ಯಾಸಿ ರಂಗಭೂಮಿಗೆ ಸಂಬಂಧಿಸಿದ ಯಾವುದೇ ಗ್ರಂಥಗಳಲ್ಲಿ ಒಂದಿಷ್ಟಾದರೂ ಪ್ರಸ್ತಾಪ ಇಲ್ಲದಿರುವುದನ್ನು ಕಂಡು ಯಾವುದೇ ರಂಗ ಸಂಸ್ಥೆ ,ಅಕಾಡೆಮಿ, ಸಂಸ್ಕೃತಿ ಇಲಾಖೆ, ಸರಕಾರವಾಗಲಿ ಮಾಡಲೇ ಬೇಕಿದ್ದರೂ ಮಾಡದಿರುವ ಕೆಲಸವನ್ನು ಈ ಹೊತ್ತಿನಲ್ಲಿ ಅವರ ಕುರಿತು ಅಕ್ಷರ ಅಭಿನಂದನೆ ಗುರುದಕ್ಷಿಣಾ ರೂಪವಾಗಿ ಸೆಂಟರ್ ಫಾರ್ ಡಿವೈನ್ ಆರ್ಟ್ಸ್ ಪರವಾಗಿ ಜಿ.ಪಿ ನಾಗರಾಜನ್ ಸಂಪಾದಕತ್ವದಲ್ಲಿ ಪ್ರಕಟಿಸಲಾಗಿದೆ.

ಈ ಕೃತಿಯಲ್ಲಿ ಆರು ಅಧ್ಯಾಯಗಳಿದ್ದು ಮೊದಲ ಅಂಕದಲ್ಲಿ ಕನ್ನಡ ರಂಗಭೂಮಿಯ ಇತಿಹಾಸದ ಮಹತ್ವದ ಮಜಲುಗಳನ್ನು ಗುರುತಿಸಿ ಅಬ್ಬೂರು ಜಯತೀರ್ಥರವರ ರಂಗ ಯಾತ್ರೆಯ ಪೀಠಿಕೆಯಾಗಿ ಮೂಡಿ ಬಂದದ್ದು ಅಂತೆಯೇ ಕನ್ನಡ ರಂಗಭೂಮಿಯ ನಾಲ್ಕು ಮುಖಗಳಾದ ಜನಪದ ,ಆಸ್ಥಾನ ,ವೃತ್ತಿ ಮತ್ತು ಹವ್ಯಾಸಿ ರಂಗಭೂಮಿಯ ಸಮಗ್ರ ಚರಿತ್ರೆಯನ್ನು ಸಂಗ್ರಹಿಸಿ ಸಂಕ್ಷಿಪ್ತವಾಗಿ ನೀಡಿರುವುದು ರಂಗ ಸಾಹಿತ್ಯ ಭಂಡಾರಕ್ಕೆ ಒಂದು ಮೌಲ್ಯಯುತ ಕೊಡುಗೆ ಇದಾಗಿದೆ.

ನೆನೆ ನೆನೆ ಪ್ರಾತಃಸ್ಮರಣೀಯರ’


ನಗರ್ತ ಜನಾಂಗ ಕರ್ನಾಟಕದ ಒಂದು ವಿಶಿಷ್ಟ ಸಮುದಾಯವಾಗಿದೆ. ಮೂಲತಃ ವ್ಯಾಪಾರಿಗಳಾಗಿ ತಮ್ಮ ಆರ್ಥಿಕ ಚಟುವಟಿಕೆಗಳಿಂದ ಸಮಾಜದ ಅವಿಭಾಜ್ಯ ಅಂಗವೆನಿಸಿ ಆಚಾರ ವಿಚಾರಗಳಲ್ಲಿ ನಿಷ್ಠೆ ಉಳ್ಳವರಾಗಿ ದಾನ – ಧರ್ಮಗಳನ್ನು ಪ್ರೋತ್ಸಾಹಿಸುತ್ತಾ ಮುನ್ನೆಡುತ್ತಿರುವ ಈ ಸಮುದಾಯದ ಅನೇಕ ಹಿರಿಯ ಚೇತನಗಳನ್ನು ನೆನೆಯುವ ಒಂದು ಪ್ರಯತ್ನವೇ  ‘ನೆನೆ ನೆನೆ ಪ್ರಾತಃಸ್ಮರಣೀಯರ’ ಎಂಬ ಈ ಕೃತಿ ನೆನೆ ಮನವೇ ಎಂಬ ಕೃತಿಯ ಮುಂದುವರೆದ ಭಾಗವಾಗಿ ಸಮಾಜಶಾಸ್ತ್ರೀಯ ಅಧ್ಯಯನದ ದೃಷ್ಟಿಯಿಂದ ದಾಖಲಿಸಿರುವ ಸಮಾಜದ ಹಲವಾರು ಹಿರಿಯರಾದ ಜೆ. ಎಸ್. ದಂಡಪಾಣಿ, ಡಾ. ಸಿ. ಸೋಮಶೇಖರ್, ಜರಗನಹಳ್ಳಿ ಶಿವಶಂಕರ್ ಮೊದಲಾದ ಸಾಂಸ್ಕೃತಿಕ –ಸಾಹಿತ್ಯಕ – ಶೈಕ್ಷಣಿಕ ವಲಯದ ಜೀವನ, ವ್ಯಕ್ತಿತ್ವ ಸಾಧನೆಗಳನ್ನು ಎಂ. ಬಸವರಾಜು ಮತ್ತು ಶೈಲಜಾ ಉದಯಶಂಕರ ರವರು ಸಂಪಾದಕರಾಗಿ ಹೊರತಂದಿದ್ದಾರೆ. 

- Advertisement -

 ‘ಅವ್ವರಸಿ’ : ಹಿರಿಯ ಕಾದಂಬರಿಕಾರ ಡಾ.ಗಜಾನನ ಶರ್ಮರ ಚೆನ್ನಬೈರಾದೇವಿ ಐತಿಹಾಸಿಕ ಕಾದಂಬರಿಯ ಆಯುಧ ಭಾಗವನ್ನು ಆಧರಿಸಿ ಅವ್ವರಸಿ ಏಕವ್ಯಕ್ತಿ ನಾಟಕ ರೂಪಕವನ್ನು ಕೃಷ್ಣಮೂರ್ತಿ ಕವತ್ತಾರರು ಸಿದ್ಧಪಡಿಸಿರುತ್ತಾರೆ.

ಗೇರುಸೊಪ್ಪೆಯ ಕರಿಮೆಣಸಿನ ರಾಣಿಯಾಗಿದ್ದ ಈಕೆ ಪೋರ್ಚುಗೀಸರು, ಕೆಳದಿ ಅರಸರು ಮತ್ತು ಬಿಜಾಪುರದ ಸುಲ್ತಾನರ ನಡುವಿನ ಯುದ್ಧಗಳನ್ನು ತನ್ನ ಜಾಣ್ಮೆಯಿಂದ ನಿರ್ವಹಿಸಿ 54 ವರ್ಷಗಳ ಕಾಲ ರಾಜ್ಯಭಾರ ನಡೆಸಿದ ಕೀರ್ತಿ ಈಕೆಗೆ ಸಲ್ಲುತ್ತದೆ. 


ಪೋರ್ಚುಗೀಸರ ಮತಾಂತರ ಪ್ರಯತ್ನಕ್ಕೆ ಅಡ್ಡಿಯಾಗಿ ದಕ್ಷಿಣ ಕೊಂಕಣಕ್ಕೆ ಕಾಲಿಡದಂತೆ ಕಾಳಿ ನದಿ ಆಚೆಯಲ್ಲೇ ತಡೆದು ನಿಲ್ಲಿಸಿದ್ದು ಅಲ್ಲದೆ ಗೇರುಸೊಪ್ಪೆಯಲ್ಲಿ ಚತುರ್ಮುಖ ಬಸದಿ ಅಂತಹ ಅಪರೂಪದ ಬಸದಿಯನ್ನು ನಿರ್ಮಿಸಿ ಸರ್ವಧರ್ಮ ಸಮಭಾವದಿಂದ ನಾಡನ್ನು ಆಳಿದ ವೀರ ವನಿತೆ . ಈ ನಾಡಿನ ಜನರಿಗೆ ಈ ವೀರವನಿತೆಯ ಜೀವನ ಗಾಥೆಯನ್ನು ರಂಗದ ಮೇಲೆ ಏಕವ್ಯಕ್ತಿ ಪ್ರದರ್ಶನ ಮಾಡಿದ ಹಿರಿಮೆ 75 ಹರೆಯದ ಡಾ. ಲೀಲಾ ಬಸವರಾಜು ರವರಿಗೆ ಸಲ್ಲುತ್ತದೆ .ಅದನ್ನು ರಂಗ ರೂಪಾಂತರ – ನಿರ್ದೇಶನ ಮಾಡಿದ ಖ್ಯಾತ ನಾಟಕಕಾರ , ನಿರ್ದೇಶಕ ಕೃಷ್ಣಮೂರ್ತಿ ಕವತ್ತಾರರು ಈ ಕೃತಿಯ ಲೇಖಕರು.

 ಸೆಂಟರ್ ಫಾರ್ ಡಿವೈನ್ ಆರ್ಟ್ಸ್ರವರ ಕಿರು ಪರಿಚಯ: 

  2003ರಲ್ಲಿ ಆರಂಭವಾದ ಈ ಸಂಸ್ಥೆ ಭಾರತೀಯ ಕಲೆ -ಸಾಹಿತ್ಯ ಪರಂಪರೆಯ ಕುರಿತು ವ್ಯಾಪಕ ಪ್ರಚಾರ ಮತ್ತು ಅದರ ಪ್ರಸರಣೆಯಲ್ಲಿ ತೊಡಗಿದೆ. ಅಂದಿನ ರಾಜ್ಯಪಾಲರಾಗಿದ್ದ ಶ್ರೀ ಟಿ.ಎನ್ ಚತುರ್ವೇದಿರವರಿಂದ ಉದ್ಘಾಟನೆಗೊಂಡ ಈ ಸಂಸ್ಥೆ ಕಲಾ ರಂಗದ ದಿಗ್ಗಜರಾದ ಶ್ರೀ ಜಿ. ವಿ. ಅಯ್ಯರ್ , ಬಿ. ವಿ. ರಾಜಾರಾಮ್ ಮೊದಲಾದವರಿಂದ ಪ್ರಾತ್ಯಕ್ಷಿಕೆಗಳನ್ನು ನಡೆಸಿದೆ . ಭಾರತೀಯ ಸಾಂಪ್ರದಾಯಿಕ ನೃತ್ಯದ ಕುರಿತು ಅನೇಕ ವಿದ್ವಜ್ಜನರು ಬರೆದಿರುವ ಲೇಖನಗಳ ಸಂಗ್ರಹ ‘ನೃತ್ಯ ಮಂಜರಿ’ ಅನ್ನು ಪ್ರಕಟಿಸಿದೆ ಮತ್ತು ಆ ಕ್ಷೇತ್ರದಲ್ಲಿ ಖ್ಯಾತನಾಮರಾದ ಕರ್ನಾಟಕ ಕಲಾಶ್ರೀ ಗುರು ಶ್ರೀಮತಿ ಬಿ. ಕೆ ವಸಂತಲಕ್ಷ್ಮಿ , ಮುಖ್ಯಮಂತ್ರಿ ಚಂದ್ರು , ಬಿ.ಜಯಶ್ರೀ ಮೊದಲಾದ ಕಲಾಚೇತನಗಳನ್ನು ಗೌರವಿಸಿದೆ .ಮತ್ತೊಂದು ವಿಶೇಷವೆಂದರೆ ಹಿರಿಯ ನಾಟಕಕಾರ ಎಸ್.ಕೆ. ಮಾಧವ ರಾವ್ ರವರ ಅನೇಕ ನಾಟಕಗಳನ್ನು ಭಾಗ್ಯಲಕ್ಷ್ಮಿ ಪ್ರಕಾಶದ ಮುಖಾಂತರ ಪ್ರಕಟಿಸಲಾಗಿರುತ್ತದೆ. ಮಕ್ಕಳಿಗೆ ಬೇಸಿಗೆ ಶಿಬಿರವನ್ನು ಆಯೋಜಿಸಿ ರಂಗಾಸಕ್ತಿಯನ್ನು ಅವರಲ್ಲಿ ಬೆಳೆಸುವುದು ಸಂಸ್ಥೆಯ ಉದ್ದೇಶಗಳಲ್ಲಿ ಒಂದಾಗಿದೆ. ವಿವರಗಳಿಗೆ : 9686583163


 

- Advertisement -
- Advertisement -

Latest News

ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಮಾನತೆ ದೊರಕಬೇಕು- ಸಿಡಿಪಿಓ ಶ್ವೇತಾ

ಮೈಸೂರು ನಗರ ವರ್ತಲ ರಸ್ತೆಯಲ್ಲಿರುವ ಮಾರ್ವೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ...
- Advertisement -

More Articles Like This

- Advertisement -
close
error: Content is protected !!
Join WhatsApp Group