spot_img
spot_img

ಹೊಸಪುಸ್ತಕ ಓದು: ಮಧ್ಯಕಾಲೀನ ಕನ್ನಡ ಕಾವ್ಯಗಳ ಶೋಧ

Must Read

- Advertisement -
  • ಪುಸ್ತಕದ ಹೆಸರು : ಕಂಠಪತ್ರ-೫
  • ಲೇಖಕರು : ಡಾ. ಎಫ್.ಟಿ. ಹಳ್ಳಿಕೇರಿ
  • ಪ್ರಕಾಶಕರು : ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು, ೨೦೨೩
  • ಪುಟ : ೨೩೬ ಬೆಲೆ : ರೂ. ೨೪೦
  • ಲೇಖಕರ ಸಂಪರ್ಕವಾಣಿ :೯೪೪೮೧೮೪೦೨೨

ಕನ್ನಡ ಸಾಹಿತ್ಯ-ಸಂಸ್ಕೃತಿಗಳ ನಿಜವಾದ ಅಂತಃಸತ್ವವನ್ನು ಅರಿತುಕೊಳ್ಳಲು ನಮಗೆ ಪ್ರಮುಖ ಆಕರಗಳೆಂದರೆ ಹಸ್ತಪ್ರತಿಗಳು. ಇಂದು ಪ್ರಾಚೀನ ಹಸ್ತಪ್ರತಿಗಳ ಅಧ್ಯಯನ-ಅಧ್ಯಾಪನ ಪರಂಪರೆ ನಿರ್ಲಕ್ಷ್ಯಕ್ಕೊಳಗಾಗಿದೆ. ಡಾ. ಫ. ಗು. ಹಳಕಟ್ಟಿ, ಚೆನ್ನಮಲ್ಲಿಕಾರ್ಜುನರು, ಎಸ್. ಬಸಪ್ಪ, ಎಚ್. ದೇವೀರಪ್ಪ, ಬಿ. ಎಸ್. ಸಣ್ಣಯ್ಯ, ಎನ್. ಬಸವಾರಾಧ್ಯ, ಎಸ್. ಶಿವಣ್ಣ, ಎಂ. ಎಂ. ಕಲಬುರ್ಗಿ ಮೊದಲಾದ ಹಿರಿಯ ವಿದ್ವಾಂಸರು ಹಸ್ತಪ್ರತಿಗಳ ಸಂಗ್ರಹ-ಸಂರಕ್ಷಣೆ-ಸಂಶೋಧನೆ ವಿಷಯದಲ್ಲಿ ಮಾಡಿದ ಸೇವೆ ಅವಿಸ್ಮರಣೀಯವಾದುದು. ಈ ಎಲ್ಲ ಪೂರ್ವಸೂರಿಗಳ ಈ ಪರಂಪರೆಯನ್ನು ವರ್ತಮಾನ ಕಾಲದಲ್ಲಿ ಅತ್ಯಂತ ನಿಷ್ಠೆಯಿಂದ ಮುನ್ನಡೆಸಿಕೊಂಡು ಬರುತ್ತಿರುವ ವಿರಳಾತಿವಿರಳ ವಿದ್ವಾಂಸರಲ್ಲಿ ಡಾ. ಎಫ್.ಟಿ. ಹಳ್ಳಿಕೇರಿ ಪ್ರಮುಖರು. 

      ‘ಕೆರೆಯ ಪದ್ಮರಸನ ವಂಶಜರು’ ಕುರಿತು ಸಂಶೋಧನೆ ಮಾಡಿದಾಗಲೇ ಡಾ. ಎಂ. ಎಂ. ಕಲಬುರ್ಗಿ ಅವರಂತಹ ವಿದ್ವಜ್ಜನರ ಸಂಪರ್ಕಕ್ಕೆ ಬಂದ ಡಾ. ಎಫ್.ಟಿ. ಹಳ್ಳಿಕೇರಿ ಅವರು ಹಸ್ತಪ್ರತಿ ಅಧ್ಯಯನ- ಸರ್ವೇಕ್ಷಣ- ಸಂಗ್ರಹ, ಸಂರಕ್ಷಣೆ, ಸೂಚೀಕರಣ ಮೊದಲಾದ ಘಟ್ಟಗಳಲ್ಲಿ ದುಡಿದು ಅನನ್ಯವಾದ ಅನುಭವ-ಪಾಂಡಿತ್ಯವನ್ನು ಗಳಿಸಿದವರು. ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ವಿಭಾಗದಲ್ಲಿ ಪ್ರಾಧ್ಯಾಪಕ ಹುದ್ದೆಗೆ ನಿಯುಕ್ತಿಯಾದ ನಂತರ, ಅವರ ತನು-ಮನ-ಭಾವಗಳಲ್ಲಿ ಹಸ್ತಪ್ರತಿಗಳೇ ತುಂಬಿಕೊಂಡವು. ೨೫ ವರುಷಗಳ ಕಾಲ ಈ ಹಸ್ತಪ್ರತಿ ವಿಭಾಗವನ್ನು ತಮ್ಮ ಉಳಿದ ಸಹೋದ್ಯೋಗಿಗಳೊಂದಿಗೆ ಕಟ್ಟಿದ ರೀತಿ ಇಡೀ ರಾಜ್ಯದಲ್ಲಿಯೇ ಮಾದರಿಯಾದುದು. ಪ್ರಾಯಶಃ ಇಂದು ಕರ್ನಾಟಕದಲ್ಲಿ ಹಸ್ತಪ್ರತಿಗಳ ವಿಷಯದಲ್ಲಿ ಅತ್ಯಂತ ಕಾಳಜಿವಹಿಸಿ ದುಡಿಯುತ್ತಿರುವ ಏಕೈಕ ವಿಶ್ವವಿದ್ಯಾಲಯವೆಂದರೆ ಅದು ಕನ್ನಡ ವಿಶ್ವವಿದ್ಯಾಲಯ. ಅದರಲ್ಲೂ ಈ ಹಸ್ತಪ್ರತಿ ವಿಭಾಗದ ಡಾ. ಹಳ್ಳಿಕೇರಿ ಅವರಂತಹ ಶ್ರದ್ಧಾವಂತ ದುಡಿಮೆಗಾರರ ಪ್ರತಿಫಲವಾಗಿ ಕನ್ನಡ ಸಂಸ್ಕೃತಿಯನ್ನು ಉಳಿಸುವ ಅಪೂರ್ವ ಆಕರಗಳು ನಮಗಿಂದು ಸುರಕ್ಷಿತವಾಗಿರುವುದು ಕನ್ನಡಿಗರ ಸೌಭಾಗ್ಯವೆಂದೇ ಹೇಳಬೇಕು. 

        ಡಾ. ಎಂ. ಎಂ. ಕಲಬುರ್ಗಿ ಅವರು ತಮ್ಮ ಸಂಶೋಧನ ಪ್ರಬಂಧಗಳನ್ನು ‘ಮಾರ್ಗ’ ಹೆಸರಿನ ಎಂಟು ಸಂಪುಟಗಳಲ್ಲಿ ಪ್ರಕಟಿಸಿದ್ದರು. ಕೆ.ವಿ. ನಾರಾಯಣ ಅವರು ತಮ್ಮ ಲೇಖನ ಸಾಹಿತ್ಯವನ್ನು ‘ತೊಂಡುಮೇವು’ ಎಂಬ ಹೆಸರಿನಲ್ಲಿ ಹತ್ತು ಸಂಪುಟಗಳಲ್ಲಿ ಪ್ರಕಟಿಸಿದಂತೆ, ಟಿ. ವಿ. ವೆಂಕಟಾಚಲಶಾಸ್ತ್ರಿಗಳು ‘ಶಾಸ್ತ್ರೀಯ’ ಹೆಸರಿನಲ್ಲಿ ಪ್ರಕಟಿಸಿದಂತೆ ಡಾ. ಎಫ್. ಟಿ. ಹಳ್ಳಿಕೇರಿ ಅವರು ತಮ್ಮ ಸಂಶೋಧನ ಸಂಪ್ರಬಂಧಗಳನ್ನು ಕಂಠಪತ್ರ ಸಂಪುಟಗಳಲ್ಲಿ ಪ್ರಕಟಿಸುತ್ತ ಬಂದಿದ್ದಾರೆ. ಈಗಾಗಲೇ ನಾಲ್ಕು ಸಂಪುಟಗಳು ಪ್ರಕಟವಾಗಿದ್ದವು. ಈಗ ಐದನೆಯ ಸಂಪುಟವಾಗಿ ಪ್ರಕಟವಾಗಿರುವುದು ‘ಕಂಠಪತ್ರ-೫’.

- Advertisement -

     ಮಧ್ಯಕಾಲೀನ ೧೨ ಮಹತ್ವದ ಅಪ್ರಕಟಿತ ಕಾವ್ಯಗಳನ್ನು ಅಪಾರ ಶ್ರಮ ಶ್ರದ್ಧೆಯಿಂದ ಡಾ. ಎಫ್.ಟಿ. ಹಳ್ಳಿಕೇರಿ ಅವರು ಹಸ್ತಪ್ರತಿ ಒಡಲಿನಿಂದ ಸಂಪಾದಿಸಿ ಪ್ರಕಟಿಸಿ, ಕನ್ನಡ ಸಂಸ್ಕೃತಿಯ ಅಸ್ತಿತ್ವ ಮತ್ತು ಅಸ್ಮಿತೆಯ ಅರಿವು ಮೂಡಿಸುವ ಕಾರ್ಯ ಮಾಡಿದ್ದಾರೆ. ಈ ವರೆಗೆ ಉಪೇಕ್ಷೆಗೊಳಗಾಗಿದ್ದ, ಅಥವಾ ವಿದ್ವಾಂಸರ ನಿರ್ಲಕ್ಷ್ಯಕ್ಕೆ ಗುರಿಯಾಗಿದ್ದ ನಡುಗನ್ನಡ ಕಾವ್ಯಗಳನ್ನು ಶೋಧಿಸಿ, ಅವುಗಳಲ್ಲಿ ಮೂಡಿ ಬಂದ ಚಿಂತನೆಗಳನ್ನು ಅರ್ಥಪೂರ್ಣವಾಗಿ ವಿಶ್ಲೇಷಿಸಿರುವುದು ಡಾ. ಹಳ್ಳಿಕೇರಿ ಅವರ ಸಂಶೋಧನಾ ವಿಚಕ್ಷಣತೆಗೆ ನಿದರ್ಶನವಾಗಿದೆ. ಅವರು ಸಂಪಾದಿಸಿ ಪ್ರಕಟಿಸಿದ ೧೨ ಕೃತಿಗಳಿಗೆ ಬರೆದ ವಿದ್ವತ್ಪೂರ್ಣ ಪ್ರಸ್ತಾವನೆಗಳು ಸಂಶೋಧಕರಿಗೆ ಪ್ರಮುಖ ಆಕರಗಳಾಗಿವೆ.

    ೧. ಹಿರಿಯಣ್ಣ ಕವಿಯ ಹಯರತ್ನಶ್ರೇಣಿ ಏಳು ಸಂಧಿ ೧೪೨ ಪದ್ಯಗಳನ್ನೊಳಗೊಂಡ ಕೃತಿ. ಭಾಮಿನಿ ಮತ್ತು ವಾರ್ಧಕ ಷಟ್ಪದಿಗಳಲ್ಲಿ ಮೂಡಿ ಬಂದ ಈ ಕೃತಿ ಕನ್ನಡದ ಶ್ರೇಷ್ಠ ಅಶ್ವಶಾಸ್ತ್ರ ಕೃತಿಗಳಲ್ಲಿ ಒಂದು. ಈ ವರೆಗೆ ಕನ್ನಡದಲ್ಲಿ ಅಶ್ವಶಾಸ್ತ್ರವನ್ನು ಕುರಿತು ಪ್ರಕಟವಾದ ಪ್ರಾಚೀನ ಕೃತಿಗಳು ಅತ್ಯಂತ ವಿರಳ. ಡಾ. ಹಳ್ಳಿಕೇರಿ ಅವರ ಶ್ರಮ ಕಾರಣವಾಗಿ ಹಯರತ್ನಶ್ರೇಣಿ ಕೃತಿಯೊಂದು ಕನ್ನಡ ಅಶ್ವಶಾಸ್ತ್ರಕ್ಕೆ ಅಮೂಲ್ಯ ಕಾಣಿಕೆಯಾಗಿದೆ. ಕುದುರೆಗಳ ಲಕ್ಷಣ, ವಂಶ, ಬಣ್ಣ, ಜಾತಿ, ಅಂಗಾಂಗಳ ಮೊದಲುಗೊಂಡು ಕುದುರೆಗಳಿಗೆ ಬರುವ ರೋಗ, ಅವುಗಳಿಗೆ ಬರುವ ಶೂಲಿಗಳ ಬಗ್ಗೆ ವಿವರವಾದ ಮಾಹಿತಿ ದೊರೆಯುತ್ತದೆ. ಒಟ್ಟು ೩೫ ರೋಗಗಳಿಗೆ ಚಿಕಿತ್ಸಾ ವಿಧಾನವನ್ನೂ ಹೇಳಿರುವುದು ಗಮನಾರ್ಹ ಅಂಶ. ಹರಪನಹಳ್ಳಿ ಪಾಳೇಗಾರರು ಅಶ್ವಗಳ ರಕ್ಷಣೆ ವಿಷಯದಲ್ಲಿ ತೆಗೆದುಕೊಳ್ಳುತ್ತಿದ್ದ ಕಾಳಜಿಗಳ ಕುರಿತು ಈ ಕೃತಿಯಲ್ಲಿ ವಿವರಣೆಯಿರುವುದರಿಂದ ಇದೊಂದು ಐತಿಹಾಸಿಕ ಕಾವ್ಯವಾಗಿಯೂ ನಮಗೆ ಅನೇಕ ಮಹತ್ವದ ಸಂಗತಿಗಳನ್ನು ತಿಳಿಸುತ್ತದೆ. ಈ ಕೃತಿಯ ಒಳನೋಟಗಳನ್ನು ತುಂಬ ಅರ್ಥಪೂರ್ಣವಾಗಿ ಡಾ. ಹಳ್ಳಿಕೇರಿ ಅವರು ಇಲ್ಲಿ ವಿಶ್ಲೇಷಿಸಿದ್ದಾರೆ.

     ೨. ಕೋಳೂರು ಶಂಕರ ಕವಿಯ ತಿಂಥಿಣಿ ಮೋನಪ್ಪಯ್ಯನ ಚರಿತೆ ಕೃತಿ ೧೭ನೇ ಶತಮಾನದಲ್ಲಿ ರಚನೆಯಾದುದು. ಮೋನಪ್ಪಯ್ಯನನ್ನು ಕುರಿತು ಮೂಡಿಬಂದ ಮೊಟ್ಟಮೊದಲ ಕಾವ್ಯಕೃತಿ ಇದಾಗಿದೆ. ೧೧ ಸಂಧಿ, ೧೧೩೦ ಸಾಂಗತ್ಯ ಪದ್ಯಗಳನ್ನು ಒಳಗೊಂಡ ಈ ಕೃತಿಯಲ್ಲಿ ವಿಶೇಷವಾಗಿ ಅಲ್ಲಮಪ್ರಭುದೇವರು ಮೋನಪ್ಪಯ್ಯನಿಗೆ ಅವ್ಯಕ್ತ ಗುರುಗಳಾಗಿ ಮಾಡಿದ ಮಾರ್ಗದರ್ಶನ, ಆಶೀರ್ವಾದ ಮೊದಲಾದ ಸಂಗತಿಗಳು ಅಧ್ಯಯನಯೋಗ್ಯವಾಗಿವೆ. ಶರಣ ಸಂಸ್ಕೃತಿ, ವಿಶ್ವಕರ್ಮ ಸಂಸ್ಕೃತಿಗಳ ಸಮ್ಮೀಲನ ಕೃತಿಯುದ್ದಕ್ಕೂ ಕಂಡು ಬರುತ್ತದೆ. ಕಾವ್ಯ ಬರೆದ ಕವಿ ಲಿಂಗಾಯತ. ಹೀಗಾಗಿ ಶರಣರ ವಿಚಾರಧಾರೆಗೆ ಹೆಚ್ಚು ಒತ್ತುಕೊಟ್ಟಂತೆ ಕಾಣುತ್ತದೆ. ಮೋನಪ್ಪಯ್ಯನ ಅನೇಕ ಪವಾಡಗಳ ಸುತ್ತ ಬೆಳೆದ ಕಾವ್ಯವಾದರೂ ಇತಿಹಾಸ-ಸಂಸ್ಕೃತಿಗಳ ಅಧ್ಯಯನಕ್ಕೂ ವಸ್ತುವಾಗುವ ಅನೇಕ ಸಂಗತಿಗಳು ಈ ಕೃತಿಯಲ್ಲಿವೆ. ಅಂತೆಯೆ ಡಾ. ಹಳ್ಳಿಕೇರಿ ಅವರು  “ಈ ಕೃತಿಯ ವಿವರಗಳು ಸ್ಥಳೀಯ ಚರಿತ್ರೆಯ ರಚನೆಯ ಸಂದರ್ಭದಲ್ಲಿ ಪೂರಕ ಆಕರಗಳಾಗಿ ನೆರವಾಗುತ್ತದೆ ಎಂಬುದರಲ್ಲಿ ಅನುಮಾನಗಳಿಲ್ಲ” (ಪು.

- Advertisement -

೨೫) ಎಂದು ಹೇಳಿರುವುದು ಕೃತಿಯ ಮೌಲಿಕತೆಗೆ ಸಾಕ್ಷಿಯಾಗಿದೆ. ಇದು ಕವಿತ್ವ ದೃಷ್ಟಿಯಿಂದ ಸಾಮಾನ್ಯ; ಸಂಸ್ಕೃತಿ ದೃಷ್ಟಿಯಿಂದ ವಿಶಿಷ್ಟ ಕೃತಿಯಾಗಿದೆ ಎಂಬುದು ಡಾ. ಹಳ್ಳಿಕೇರಿ ಅವರ ಅಭಿಪ್ರಾಯ. 

 ೩. ಕೋಳೂರು ಶಂಕರ ಕವಿಯ ನವಮೋಹನ ತರಂಗಿಣಿ ಕೃತಿಯು ೩೩ ಸಂಧಿ ೨೦೦೯ ವಾರ್ಧಕ ಷಟ್ಪದಿಗಳನ್ನು ಒಳಗೊಂಡ ಬೃಹತ್ ಕಾವ್ಯ. ಕನಕದಾಸರು ‘ಮೋಹನ ತರಂಗಿಣಿ’ ಎಂಬ ಕಾವ್ಯವನ್ನು ರಚಿಸಿದ್ದರು. ಈ ಕೃತಿಯನ್ನು ಮೂಲಮಾತೃಕೆಯನ್ನಾಗಿ ಇಟ್ಟುಕೊಂಡು ಶಂಕರ ಕವಿ ಈ ನವಮೋಹನ ತರಂಗಿಣಿಯನ್ನು ರಚಿಸಿದ್ದಾಗಿ ಹೇಳುತ್ತಾನೆ. ಈ ಕೃತಿಯ ಶಿಲ್ಪಸೌಧವನ್ನು ವಿವರಿಸುತ್ತಲೇ ಇದರಲ್ಲಿ ಅಡಕವಾಗಿರುವ ಸಂಸ್ಕೃತಿ ಇತಿಹಾಸ ಚಿಂತನೆಗಳ ಮೇಲೂ ಡಾ. ಹಳ್ಳಿಕೇರಿ ಅವರು ಬೆಳಕು ಚೆಲ್ಲುತ್ತಾರೆ. 

          ೪. ಕೋಳೂರು ಶಂಕರ ಕವಿಯ ಮಾಧವಾಂಕ ಚರಿತೆ ಕೃತಿಯು ೨೪ ಸಂಧಿ, ೧೫೧೧ ವಾರ್ಧಕ ಷಟ್ಪದಿಗಳನ್ನು ಒಳಗೊಂಡ ಒಂದು ವರ್ಣನಾತ್ಮಕ ಕಾವ್ಯವಾಗಿದೆ. ತಮಿಳು ಸಾಹಿತ್ಯದಲ್ಲಿ ಸತ್ಯೇಂದ್ರ ಚೋಳನ ಮಂತ್ರಮಹಿಮಾ ಕಥೆ ತುಂಬ ಪ್ರಸಿದ್ಧವಾಗಿದೆ. ಈ ಕಥೆಯನ್ನು ಆಧರಿಸಿ ಕನ್ನಡದಲ್ಲಿ ರಾಜಶೇಖರ ವಿಳಾಸ, ಭಾವಚಿಂತಾರತ್ನ, ಸತ್ಯೇಂದ್ರಚೋಳ ಚಾರಿತ್ರ ಮೊದಲಾದ ಕೃತಿಗಳು ಪ್ರಕಟವಾಗಿವೆ. ಇವುಗಳ ಸಾಲಿಗೆ ಸೇರುವ ಮತ್ತೊಂದು ಮಹತ್ವದ ಬೃಹತ್ ಕಾವ್ಯ ಮಾಧವಾಂಕ ಚರಿತೆ. ಪಂಚಾಕ್ಷರಿ ಮಂತ್ರದ ಮಹಿಮೆಯನ್ನು ಲೋಕಕ್ಕೆ ಸಾರುವ ಕಥಾಹಂದರವನ್ನೇ ಹೊಂದಿರುವ ಈ ಕಾವ್ಯವೂ ರಾಜಶೇಖರ ವಿಳಾಸದಂತೆಯೇ ನಡುಗನ್ನಡ ಕಾವ್ಯಪ್ರಪಂಚದಲ್ಲಿ ಅತ್ಯಂತ ಮಹತ್ವದ ಕಾವ್ಯವೆಂಬುದನ್ನು ಡಾ. ಹಳ್ಳಿಕೇರಿ ಅವರು ತಲಸ್ಪರ್ಶಿಯಾಗಿ ವಿವೇಚಿಸಿದ್ದಾರೆ. ಈ ಕಾವ್ಯದ ಸಾಮಾಜಿಕ, ಧಾರ್ಮಿಕ, ಸಾಹಿತ್ಯಿಕ ವೈಶಿಷ್ಟ್ಯತೆಗಳನ್ನು ಎಳೆಎಳೆಯಾಗಿ ವಿವರಿಸಿರುವುದು ಅಧ್ಯಯನಾಸಕ್ತರಿಗೆ ತುಂಬ ಉಪಯುಕ್ತವೆನಿಸಿದೆ. 

       ಕೋಳೂರು ಶಂಕರ ಕವಿ ಕನ್ನಡ ಸಾಹಿತ್ಯದಲ್ಲಿ ನೇಪಥ್ಯಕ್ಕೆ ಸರಿದ ಕವಿಯಾಗಿದ್ದ. ಈತನ ಮೂರು ಕೃತಿಗಳನ್ನು ಹಸ್ತಪ್ರತಿಗಳ ಒಡಲಿನಿಂದ ಬಿಡಿಸಿ, ಕನ್ನಡ ಸಾರಸ್ವತ ಪ್ರಪಂಚಕ್ಕೆ ತೋರಿಸಿದ ಶ್ರೇಯಸ್ಸು ಡಾ. ಹಳ್ಳಿಕೇರಿ ಅವರಿಗೆ ಸಲ್ಲುತ್ತದೆ. 

     ೫. ಶಿವಲಿಂಗ ಮಾಹೇಶ್ವರ ಚರಿತ್ರೆ ಕಾವ್ಯ ಕೂಡ ಸ್ಥಳೀಯ ಚರಿತ್ರೆ, ಸ್ಥಳೀಯ ಸಂಸ್ಕೃತಿ ಅಧ್ಯಯನದ ಒಂದು ಮಹತ್ವದ ಕೃತಿಯಾಗಿದೆ. ಇದು  ೯ ಗತಿ ೧೩೯೯ ಶರಷಟ್ಪದಿಗಳನ್ನು ಒಳಗೊಂಡ ಒಂದು ದೇಶೀಕಾವ್ಯವಾಗಿದೆ. ಈ ಕಾವ್ಯದ ಕರ್ತೃತ್ವದ ಬಗ್ಗೆ ಇನ್ನೂ ನಿರ್ಣಯವಾಗಿಲ್ಲ. ಹೀಗಾಗಿ ಡಾ. ಹಳ್ಳಿಕೇರಿ ಅವರು ಸದ್ಯಕ್ಕೆ ದೇಶಿಕ ಕವಿ ಎಂದು ಊಹಿಸಬಹುದೇ ಹೊರತು, ನಿಖರವಾಗಿ ಹೇಳಲು ಆಗುವುದಿಲ್ಲವೆಂದು ಹೇಳಿದ್ದಾರೆ. ಇದು ವಿರಕ್ತಮಠದ ಸ್ವಾಮಿಗಳೊಬ್ಬರ ಲೀಲಾಚರಿತ್ರೆ. ಇವರ ಜನ್ಮಗ್ರಾಮ ವಿಜಯಪುರ ಜಿಲ್ಲೆಯ ಹಿಟ್ಟನಹಳ್ಳಿ ಎಂದು ಡಾ. ಹಳ್ಳಿಕೇರಿ ಅವರು ಗುರುತಿಸಿದ್ದಾರೆ. ಅಲ್ಲದೆ ಈ ಮಠ ಈಗ ನಿಡಸೋಸಿ ದುರದುಂಡೀಶ್ವರಮಠದ ಶಾಖಾಮಠವಾಗಿದೆ ಎಂಬುದರತ್ತ ನಮ್ಮ ಗಮನ ಸೆಳೆಯುತ್ತಾರೆ. “ನಿಡಸೋಸಿ ಗುರುಪರಂಪರೆಯಲ್ಲಿ ಶಿವಲಿಂಗೇಶ್ವರ ಹೆಸರಿನ ಸ್ವಾಮಿಗಳು ಅನೇಕರಿದ್ದಾರೆ. ಅವರಲ್ಲಿ ಆದ್ಯ ಶಿವಲಿಂಗೇಶ್ವರರು ಮೊದಲನೆಯವರು. ಇವರ ಕಾಲ ೧೮೫೭ ಬಹುಶಃ ಪ್ರಸ್ತುತ ಕೃತಿ ಇವರ ಚರಿತ್ರೆಗೆ ಸಂಬಂಧಿಸಿರಬಹುದೇನೋ? ಪರಮಾರ್ಶಿಸಬೇಕಾಗಿದೆ” (ಪು. ೯೨) ಎಂದು ಹೇಳಿರುವುದು ಕುತೂಹಲಕಾರಿಯಾಗಿದೆ. ಈ ನಿಟ್ಟಿನಲ್ಲಿ ಇನ್ನಷ್ಟು ಸಂಶೋಧನೆಗಳು ನಡೆದರೆ ಈ ವಿಷಯದ ಮೇಲೆ ಬೆಳಕು ಮೂಡಬಹುದು. 

 ೬. ಮಲ್ಲಣ್ಣ ಕವಿಯ ಕೋಕಶಾಸ್ತ್ರ ಕನ್ನಡದಲ್ಲಿ ಒಂದು ಅಪರೂಪದ ಕಾಮಶಾಸ್ತ್ರ ವಿವರಣೆ ನೀಡುವ ಕಾವ್ಯ. ಕೋಕಮುನಿ ಎಂಬುವನು ಕೋಕಶಾಸ್ತ್ರ ಎಂಬ ಕೃತಿಯನ್ನು ಸಂಸ್ಕೃತ ಭಾಷೆಯಲ್ಲಿ ರಚಿಸಿದ್ದಾನೆ. ಈ ಕೃತಿಯನ್ನು ಆಧಾರವಾಗಿಟ್ಟುಕೊಂಡು ಮಲ್ಲಣ್ಣ ಕವಿ ಕನ್ನಡ ಕೋಕಶಾಸ್ತ್ರವನ್ನು ರಚಿಸಿದ್ದಾನೆ. ಡಾ. ಹಳ್ಳಿಕೇರಿ ಅವರು ಈ ಪೂರ್ವದಲ್ಲಿ ಪ್ರಕಟವಾದ ಚಂದ್ರರಾಜನ ಮದನತಿಲಕ, ಜನ್ನನ ಮೋಹಾನುಭವ ಮುಕುರ, ಲಕ್ಷ್ಮಣ ಕವಿಯ ಮನ್ಮಥ ವಿಜಯ, ಕಲ್ಲರಸನ ಜನವಶ್ಯ, ಕಕ್ಕೋಕನ ರತಿರಹಸ್ಯದ ಟೀಕು ಮೊದಲಾದ ಕೃತಿಗಳ ಸಮಗ್ರ ಪರಿಚಯ ಮಾಡಿಕೊಟ್ಟಿದ್ದಾರೆ. ಹಾಗೆಯೇ ಮಲ್ಲಣ್ಣ ಕವಿಯ ಕೋಕಶಾಸ್ತ್ರ ಕಾವ್ಯದ ಕೃತಿಸಾರವನ್ನು ಅತ್ಯಂತ ರಸಾರ್ದ್ರವಾಗಿ ಚಿತ್ರಿಸಿದ್ದಾರೆ. ಹೆಣ್ಣಿನ ಅಂಗಾಂಗಗಳ ಲಕ್ಷಣಗಳ ಮೂಲಕ ಅವಳನ್ನು ಮದುವೆಯಾಗಬೇಕೋ, ಬೇಡವೋ ಎಂಬುದನ್ನು ನಿರ್ಧರಿಸಬಹುದು ಎಂದು ಮಲ್ಲಣ್ಣ ಕವಿ ಹೇಳುತ್ತಾನೆ. ಲೈಂಗಿಕ ಜಗತ್ತಿನ ನಿಗೂಢ ರಹಸ್ಯ ವಿಷಯಗಳನ್ನೆಲ್ಲ ಅತ್ಯಂತ ವಾಸ್ತವ ತಳಹದಿಯ ಮೇಲೆ ಇಲ್ಲಿ ಕವಿ ನಿರೂಪಿಸುವುದರಿಂದ ಇದೊಂದು ವೈಜ್ಞಾನಿಕ ಮನೋಭಾವದ ಕೃತಿಯೆಂದೂ ಹೇಳಬಹುದು. ಕನ್ನಡ ಅಧ್ಯಯನ ಮಾಡುವ ಯುವಕರಲ್ಲಿ ಲೈಂಗಿಕಜ್ಞಾನದ ಅರಿವು ಮೂಡಿಸುವಲ್ಲಿ ಈ ಕೃತಿ ಸಹಾಯಕವಾಗಬಹುದು. ಈ ಕೃತಿಯ ಒಟ್ಟು ವೈಶಿಷ್ಟ್ಯಗಳನ್ನು ಡಾ. ಹಳ್ಳಿಕೇರಿ ಅವರು ವಿಶ್ಲೇಷಿಸಿದ ರೀತಿ ಅನನ್ಯವಾಗಿದೆ. 

 ೭. ಮಲ್ಲಿಕಾರ್ಜುನ ಕವಿಯ ಹಾಲಸಿದ್ಧೇಶ್ವರ ಸಾಂಗತ್ಯ ಈ ಕಾವ್ಯವು ಕೂಡ ಒಬ್ಬ ಮಠಾಧೀಶರ ಚರಿತ್ರೆಯಾಗಿದೆ. ಡಾ. ಹಳ್ಳಿಕೇರಿ ಅವರು ಒಂದು ಹಸ್ತಪ್ರತಿಯನ್ನು ಸಂಪಾದಿಸುವಾಗ ಆ ಕೃತಿಯ ಒಳನೋಟವನ್ನು ಮಾತ್ರ ಗ್ರಹಿಸದೇ, ಅದಕ್ಕೆ ಸಂಬಂಧಪಟ್ಟ ಇನ್ನಿತರ ಆಕರಗಳನ್ನು ಶೋಧಿಸುತ್ತಾರೆ. ಇಲ್ಲಿ ಕವಿ ಹೇಳುವ ರಾಂಪುರ, ಕುರುವ, ಕುರುವದಗಡ್ಡೆ, ಹೊಟ್ಯಾಪುರ ಮೊದಲಾದ ಊರುಗಳನ್ನು ಶೋಧಿಸಿ, ಅವುಗಳ ಕ್ಷೇತ್ರಕಾರ್ಯ ಮಾಡಿ ಅಧಿಕೃತವಾಗಿ ವಿಷಯ ಪ್ರತಿಪಾದನೆ ಮಾಡುವ ಅವರ ಶೋಧ ಗುಣ ಮೆಚ್ಚುವಂತಹದಾಗಿದೆ. 

 ೮. ಎಮ್ಮೆ ಬಸವನ ಬಿಲ್ಲಮರಾಯನ ಸಾಂಗತ್ಯ ಈ ವರೆಗೆ ಅಪ್ರಕಟವಾಗಿತ್ತು. ಒಟ್ಟು ೮ ಸಂಧಿ, ೧೨೮ ಪದ್ಯಗಳನ್ನು ಒಳಗೊಂಡ ಈ ಕಾವ್ಯವನ್ನು ಡಾ. ಹಳ್ಳಿಕೇರಿ ಅವರು ತುಂಬ ಶಾಸ್ತ್ರಶುದ್ಧವಾಗಿ ಸಂಪಾದಿಸಿ ಪ್ರಕಟಿಸಿದ್ದಾರೆ. ಈ ಕಾವ್ಯದ ಕಥಾನಾಯಕ ಬಿಲ್ಲಮರಾಯ ಯಾರು ಎಂಬುದರ ಕುರಿತು ಡಾ. ಹಳ್ಳಿಕೇರಿ ಅವರು ಸುದೀರ್ಘವಾಗಿ ಚರ್ಚಿಸಿ ಕರಡಿಕಲ್ಲು ಬಿಲ್ಲಮರಾಯ ಎಂಬ ನಿರ್ಣಯಕ್ಕೆ ಬಂದಿದ್ದಾರೆ. ಇತನ ವಿಷಯವಾಗಿ ಇರುವ ಅನ್ಯತ್ರ ಆಕರಗಳನ್ನು ಬಳಸಿಕೊಂಡು ಕೃತಿ ವಿಶ್ಲೇಷಣೆ ಮಾಡಿರುವುದು ಡಾ. ಹಳ್ಳಿಕೇರಿ ಅವರ ಬಹುಶ್ರುತ ಪಾಂಡಿತ್ಯಕ್ಕೆ ನಿದರ್ಶನವಾಗಿದೆ.

 ೯. ರಸ್ತಾಪುರ ಭೀಮಕವಿಯ ಹಾಲುಮತೋತ್ತೇಜಕ ಪುರಾಣ ಕೃತಿಯು ರೇವಣಸಿದ್ಧೇಶ್ವರ ಚರಿತ್ರೆ ಮೇಲೆ ಹೊಸ ಬೆಳಕು ಚೆಲ್ಲುವ ಅಮೂಲ್ಯ ಆಕರವಾಗಿದೆ. ಹಾಲುಮತ ಸಮಾಜದ ಗುರು ರೇವಣಸಿದ್ಧನ ಕುರಿತು ಕನ್ನಡದಲ್ಲಿ ಸಾಕಷ್ಟು ಅಧ್ಯಯನಗಳು ಜರುಗಿವೆ. ಹಾಲುಮತ-ಲಿಂಗಾಯತ ಸಮಾಜಕ್ಕೆ ಗುರುವಾಗಿರುವ ರೇವಣಸಿದ್ಧನನ್ನು ಆಚಾರ್ಯವರ್ಗದವರು ರೇಣುಕನನ್ನಾಗಿ ಮಾಡಿರುವುದು ದುರಂತದ ಸಂಗತಿ. ಡಾ. ಹಳ್ಳಿಕೇರಿ ಅವರು ರೇವಣಸಿದ್ಧನ ವಿಷಯವಾಗಿ ಅನೇಕ ಹೊಸ ವಿಚಾರಗಳನ್ನು ಡಾ. ಕಲಬುರ್ಗಿ ಅವರೊಂದಿಗೆ ಕೂಡಿ ಶೋಧಿಸಿ ಕೊಟ್ಟಿರುವುದು ಅಭಿಮಾನ ಪಡುವ ಸಂಗತಿಯಾಗಿದೆ. ೯ ಸಂಧಿಗಳಲ್ಲಿ ವಿಸ್ತಾರವಾಗಿರುವ ಈ ಕೃತಿ ರೇವಣಸಿದ್ಧರ ಕುರಿತು ಚಾರಿತ್ರಿಕ ಅಧ್ಯಯನಕ್ಕೆ ದಾರಿತೋರುತ್ತದೆ. ರಸ್ತಾಪುರ ಭೀಮಕವಿ ಅನೇಕ ಕಾವ್ಯಗಳನ್ನು, ಬಯಲಾಟಗಳನ್ನು ಬರೆದಿದ್ದಾನೆ. ಆತನ ಹಲವು ಕೃತಿಗಳನ್ನು ಮೊದಲ ಬಾರಿಗೆ ಬೆಳಕಿಗೆ ತಂದವರು ಡಾ. ಹಳ್ಳಿಕೇರಿಯವರು ಎಂಬುದು ಹೆಮ್ಮೆಯ ಸಂಗತಿ. 

 ೧೦. ಅಯ್ಯಪ್ಪ ಕವಿಯ ಚಿದಾನಂದಾವಧೂತ ಚಾರಿತ್ರ ಒಂದು ಮಹತ್ವದ ಕಾವ್ಯ. ಕನ್ನಡದಲ್ಲಿ ಅವಧೂತ ಪರಂಪರೆಗೆ ಒಂದು ಘನತೆ ಗೌರವ ತಂದುಕೊಟ್ಟವರು ಚಿದಾನಂದಾವಧೂತರು. ಜ್ಞಾನಸಿಂಧು, ದೇವಿಪುರಾಣ, ಚಿದಾನಂದ ಲಹರಿ, ಚಿದಾನಂದ ರಗಳೆ, ತತ್ವಚಿಂತಾಮಣಿ ಕೃತಿಗಳ ಮೂಲಕ ಕನ್ನಡ ಅವಧೂತ ಸಾಹಿತ್ಯ ನಿರ್ಮಾಣ ಮಾಡಿದ ಮೊದಲಿಗರು. ಇವರ ಜೀವನ ಸಾಧನೆಗಳನ್ನು ವಿವರಿಸುವ ಒಂದು ಮಹತ್ವದ ಕೃತಿಯನ್ನು ಅಯ್ಯಪ್ಪ ಕವಿ ರಚಿಸಿದ್ದಾನೆ. ೭ ಸಂಧಿ, ೯೭೨ ಸಾಂಗತ್ಯ ಪದ್ಯಗಳನ್ನು ಒಳಗೊಂದ ಒಂದು ಸುದೀರ್ಘಕಾವ್ಯವಿದು. ಚಿದಾನಂದವಧೂತರ ಕುರಿತು ಮೊಟ್ಟಮೊದಲು ಪ್ರಕಟವಾದ ಚರಿತ್ರಕಾವ್ಯವಿದು. ಅವರು ತಮ್ಮ ಜೀವಿತದ ಬಹುಭಾಗವನ್ನು ಕಳೆದದ್ದು ಅಯೋಧ್ಯೆ ಗ್ರಾಮದಲ್ಲಿ ಎಂಬ ಉಲ್ಲೇಖ ಬರುತ್ತದೆ. ಈ ಕುರಿತು ಇಲ್ಲಿಯವರೆಗೆ ಗೊಂದಲವಿತ್ತು. ಆದರೆ ಡಾ. ಹಳ್ಳಿಕೇರಿ ಅವರು ಈ ಗ್ರಾಮ ಕಂಪ್ಲಿ-ಗಂಗಾವತಿ ರಸ್ತೆಯಲ್ಲಿ, ತುಂಗಭದ್ರಾ ನದಿ ದಂಡೆಯ ಮೇಲಿದೆ ಎಂಬುದನ್ನು ಶೋಧಿಸಿದ್ದಾರೆ. 

    ೧೧. ಪ್ರಭಾನಂದ ಪಂಡಿತ ಕವಿಯ ಕನಕವಿಜಯ ಪುರಾಣ ಒಂದು ಚಾರಿತ್ರಿಕ ಕಾವ್ಯವಾಗಿದೆ. ಸಿದ್ಧನಂಜೇಶ ರಾಘವಾಂಕ ಚಾರಿತ್ರ ಬರೆದಂತೆ, ಪ್ರಭಾನಂದ ಪಂಡಿತ ಇಲ್ಲಿ ಕನಕದಾಸರ ಕುರಿತು ಪುರಾಣ ಬರೆಯುವ ಮೂಲಕ ಅವರ ಜೀವನ ಸಾಧನೆಗಳನ್ನು ಕಾವ್ಯದ ಮೂಲಕ ಚಿತ್ರಿಸಿದ್ದಾನೆ. ೧೮ ಸಂಧಿ ೧೧೫೮ ಭಾಮಿನಿ ಷಟ್ಪದಿಗಳನ್ನು ಒಳಗೊಂಡ ಬೃಹತ್ ವರ್ಣನಾತ್ಮಕ ಕಾವ್ಯವಿದು. ಕುರುಬ ಸಮುದಾಯ ಮೂಲತಃ ಶೈವ ಪರಂಪರೆಗೆ ಸೇರಿದ್ದು, ರೇವಣಸಿದ್ಧ, ಬೀರಲಿಂಗ ಮೊದಲಾದ ದೈವಗಳ ಮೂಲಕ ಶೈವಪರಂಪರೆಯ ಸುಪರ್ದಿಯಲ್ಲಿ ಹಾಲುಮತ ಸಮಾಜ ಬರುತ್ತದೆ ಎಂಬುದಕ್ಕೆ ಈ ಕೃತಿ ಐತಿಹಾಸಿಕ ದಾಖಲೆಗಳನ್ನು ಒದಗಿಸುತ್ತದೆ ಎಂಬುದನ್ನು ಡಾ. ಹಳ್ಳಿಕೇರಿ ಅವರು ಇಲ್ಲಿ ಸ್ಪಷ್ಟವಾಗಿ ದಾಖಲಿಸಿದ್ದಾರೆ. ಕನಕವಿಜಯ ಕೃತಿಯಲ್ಲಿ ಪ್ರವಾಸ ಕಥನದ ಮಾದರಿ ಇರುವುದರಿಂದ ಕನ್ನಡದಲ್ಲಿ ಇದೊಂದು ಹೊಸ ಮಾದರಿ ಕಾವ್ಯ ಎಂದು ವಿವರಿಸಿದ್ದಾರೆ. ವಿಶೇಷವೆಂದರೆ ಏಕೈಕ ಹಸ್ತಪ್ರತಿಯಿಂದ ಈ ಕಾವ್ಯವನ್ನು ಪರಿಷ್ಕರಿಸಿ ಸಂಪಾದಿಸಿ ಪ್ರಕಟಿಸಿರುವುದು ಡಾ. ಹಳ್ಳಿಕೇರಿ ಅವರ ಶ್ರಮಕ್ಕೆ ಸಾಕ್ಷಿಯಾಗಿದೆ. 

     ೧೨. ರಾಮಲಿಂಗಕವಿಯ ಕನಕದಾಸರ ಚರಿತ್ರೆ ಕಾವ್ಯ ಕೂಡ ಪ್ರಭಾನಂದ ಪಂಡಿತನ ಕನಕವಿಜಯದ ಮಾದರಿಯಲ್ಲಿ ಕನಕದಾಸರ ಜೀವನ ಸಾಧನೆಗಳನ್ನು ವಿವರಿಸುವ ಕೃತಿಯಾಗಿದೆ. ಕೇವಲ ಮೂರು ಸಂಧಿಗಳಿದ್ದರೂ ಕನಕದಾಸರ ಚಾರಿತ್ರಿಕ ಜೀವನದ ಮೇಲೆ ಹೊಸ ಬೆಳಕು ಚೆಲ್ಲುವ ಮಹತ್ವದ ಕಾವ್ಯವಾಗಿದೆ. ಕನಕದಾಸರ ಕೀರ್ತನೆಗಳನ್ನು ಆಧರಿಸಿ ಇದನ್ನು ರಚಿಸಲಾಗಿದೆ. ಇದೊಂದು ಯಕ್ಷಗಾನ ಕೃತಿ. ಕನಕದಾಸರ ಕಾಲನಿರ್ಣಯಕ್ಕೆ ಈ ಕೃತಿ ಮಹತ್ವದ ದಾಖಲೆಯನ್ನು ಒದಗಿಸುತ್ತದೆ. 

 ಹೀಗೆ ಒಟ್ಟು ೧೨ ಮಹತ್ವದ ಕಾವ್ಯಕೃತಿಗಳನ್ನು ಡಾ. ಹಳ್ಳಿಕೇರಿ ಅವರು ತುಂಬ ಶ್ರಮವಹಿಸಿ, ಸಂಪಾದಿಸಿ ಪ್ರಕಟಿಸಿದ್ದಾರೆ. ಈ ಕೃತಿಗಳಿಗೆ ಬರೆದ ಪ್ರಸ್ತಾವನೆಗಳ ಈ ಸಂಕಲನ ನಿಜಕ್ಕೂ ಮಧ್ಯಕಾಲೀನ ಕನ್ನಡ ಸಾಹಿತ್ಯ ಸಂಸ್ಕೃತಿಗಳ ಅಧ್ಯಯನ ಮಾಡುವ ಸಂಶೋಧಕರಿಗೆ ಒಂದು ಪ್ರಮುಖ ಆಕರವಾಗಿದೆ. ಪುರಂದರ ದಾಸರ ಮೇಲೆ ಪುರಾಣಗಳಾಗಲಿ, ಕಾವ್ಯಗಳಾಗಲಿ ರಚನೆಯಾದಂತೆ ಕಾಣುವುದಿಲ್ಲ. ಆದರೆ ಕನಕದಾಸರ ಮೇಲೆ ಎರಡು ಮಹತ್ವದ ಕಾವ್ಯಗಳು ಪ್ರಕಟವಾಗಿವೆ. ಹಾಗೆಯೇ ಚಿದಾನಂದವಧೂತರ ಚರಿತ್ರೆಯು ಮೊದಲ ಬಾರಿಗೆ ಬೆಳಕಿಗೆ ಬಂದಿದೆ. ಕೋಳೂರು ಶಂಕರ ಕವಿಯ ಮೂರು ಕೃತಿಗಳನ್ನು ಶೋಧಿಸಿದ ಕೀರ್ತಿ ಡಾ. ಹಳ್ಳಿಕೇರಿ ಅವರಿಗೆ ಸಲ್ಲುತ್ತದೆ. ಪ್ರತಿಯೊಂದು ಕಾವ್ಯದ ಕರ್ತೃ, ಕಾವ್ಯ ಸ್ವರೂಪ, ಕಥಾಸಾರ, ಕೃತಿಯ ವೈಶಿಷ್ಟ್ಯಗಳನ್ನು ಸಾರವತ್ತಾಗಿ ಆಮೂಲಾಗ್ರವಾಗಿ ಕೊಟ್ಟಿರುವುದು ಡಾ. ಹಳ್ಳಿಕೇರಿ ಅವರ ಬಹುಶ್ರುತ ವ್ಯಾಸಂಗಕ್ಕೆ ಸಾಕ್ಷಿಯಾಗಿದೆ. 

      ಕನ್ನಡದಲ್ಲಿ ಈ ಬಗೆಯ ಕೃತಿ ರಚನೆ ಮಾಡುವವರ ಸಂಖ್ಯೆ ಇಂದು ಬಹಳಷ್ಟು ಕಡಿಮೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಡಾ. ಹಳ್ಳಿಕೇರಿ ಅವರಂತಹ ಹಸ್ತಪ್ರತಿ ತಜ್ಞರು ಇಂತಹ ಕೃತಿಗಳ ರಚನೆ ಮೂಲಕ ಕನ್ನಡ ಸಾಹಿತ್ಯ ಸಂಸ್ಕೃತಿಗಳಿಗೆ ಒಂದು ಹೊಸ ಆಯಾಮವನ್ನು ನೀಡುತ್ತಿದ್ದಾರೆ. ಅವರಿಂದ ಇನ್ನೂ ಇಂತಹ ಕಂಠಪತ್ರ ಸಂಪುಟಗಳು ಪ್ರಕಟವಾಗುತ್ತಲೇ ಇರಲಿ, ಆ ಮೂಲಕ ಕನ್ನಡ ಹಸ್ತಪ್ರತಿಶಾಸ್ತçದ ಅದ್ಭುತಲೋಕವೊಂದು ಬೆಳಕು ಕಾಣುವಂತಾಗಲಿ ಎಂದು ಆಶಿಸುವೆ.


ಪ್ರಕಾಶ ಗಿರಿಮಲ್ಲನವರ

ಬೆಳಗಾವಿ

ಮೊ: ೯೯೦೨೧೩೦೦೪೧

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಯಾರವನು ನೀನೆಂದು ಜನ‌ ನಿನ್ನ ಕೇಳಿದರೆ ಆ ಪ್ರಶ್ನೆಗುತ್ತರವ ಹೀಗೆ ಹೇಳು ಕ್ರಿಸ್ತನವ ಕೃಷ್ಣನವ ಬುದ್ಧನವ ಬಸವನವ ಎಲ್ಲರವ ನಾನೆನ್ನು‌- ಎಮ್ಮೆತಮ್ಮ ಶಬ್ಧಾರ್ಥ ಯಾರವನು = ಯಾವ ಕುಲಜಾತಿಮತಪಂಥಕ್ಕೆ ಸೇರಿದವನು ತಾತ್ಪರ್ಯ ಜನಗಳು ನಿನ್ನ ಕುಲ‌...
- Advertisement -

More Articles Like This

- Advertisement -
close
error: Content is protected !!
Join WhatsApp Group