ಬೆಳಗಾವಿ: ಬೆಳಗಾವಿ ತಾಲೂಕಿನ ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಪ್ರಧಾನ ಮಂತ್ರಿ ಪೋಷಣ ಅಭಿಯಾನ ಯೋಜನೆಯಡಿಯಲ್ಲಿ ಮಧ್ಯಾಹ್ನ ಬಿಸಿಯೂಟವು ಶುಕ್ರವಾರ ದಿ 12ರಿಂದ ಆರಂಭ ವಾಗಿದೆ.
ಎಲ್ಲಾ ಶಾಲೆಗಳಲ್ಲಿ ವ್ಯವಸ್ಥಿತವಾಗಿ ಸರ್ವ ಸಿದ್ಧತೆ ಮಾಡಿಕೊಂಡು ಬಿಸಿಯೂಟ ಕಾರ್ಯ ಶುಕ್ರವಾರ ಏಪ್ರಿಲ್ 12 ರಿಂದ ಆರಂಭವಾಗಿದ್ದು, ಬೇಸಿಗೆ ರಜೆ ಅವಧಿ ಮುಗಿಯುವ ವರೆಗೆ ಅಂದರೆ ಮೇ 28ರ ವರೆಗೆ 41 ದಿನಗಳ ಕಾಲ ಬಿಸಿಯೂಟವು ವಿದ್ಯಾರ್ಥಿಗಳಿಗೆ ದೊರೆಯಲಿದೆ.
ಜಿಲ್ಲಾ ಅಕ್ಷರ ದಾಸೋಹ ಯೋಜನೆಯ ಅಧಿಕಾರಿಗಳಾದ ಲಕ್ಷ್ಮಣರಾವ ಯಕ್ಕುಂಡಿ, ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಪಿ ದಾಸಪ್ಪನವರ, ತಾಲೂಕಾ ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕರಾದ ಆರ್ ಸಿ ಮುದಕನಗೌಡರ ರವರ ಸಲಹೆ ಸೂಚನೆ ಮಾರ್ಗದರ್ಶನದಂತೆ ಈ ಬಿಸಿಯೂಟ ಯೋಜನೆಯು ವ್ಯವಸ್ಥಿತವಾಗಿ ಪ್ರಾರಂಭವಾಗಿದೆ.
ಬಿಸಿಯೂಟದ ಸಮಯವು ಪ್ರತಿದಿನ ಮಧ್ಯಾಹ್ನ12.30 ರಿಂದ 2 ಘಂಟೆವರೆಗೆ ಇರುತ್ತದೆ ಶನಿವಾರ ದಿನವೂ ಸಹ ಇದೇ ಸಮಯಕ್ಕೆ ಬಿಸಿಯೂಟ ನೀಡಲಾಗುವುದು.
ಸರಕಾರಿ ರಜೆಗಳು ಹಾಗೂ ರವಿವಾರ ಬಿಸಿಯೂಟ ಇರುವದಿಲ್ಲ.
ಈ ಬೇಸಿಗೆ ರಜೆಯಲ್ಲಿ ಹಾಲು ಹಾಗೂ ಪೌಷ್ಟಿಕ ಆಹಾರ ಕೊಡುವದಿಲ್ಲ, ಬಿಸಿಯೂಟ ಮಾತ್ರ ವಿತರಿಸಲಾಗುತ್ತಿದೆ
ಈ ವರ್ಷ ಬಹಳಷ್ಟು ಬಿಸಿಲಿನ ತಾಪ ಇರುವುದರಿಂದ ವಿದ್ಯಾರ್ಥಿಗಳು ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಕಾಳಜಿ ವಹಿಸಬೇಕು ಶುದ್ಧವಾದ ಕುಡಿಯುವ ನೀರು ಬಳಸಬೇಕೆಂದು ಇಲಾಖೆಯೂ ಸೂಚನೆ ನೀಡಿದೆ.
ಬಿಸಿಯೂಟ ಪಡೆಯುವಲ್ಲಿ ಮಕ್ಕಳ ಹಾಜರಾತಿ ಹೆಚ್ಚಿಸಲು ಆಯಾ ಗ್ರಾಮಗಳ ಪಾಲಕರು ಊರಿನ ಹಿರಿಯರು ಮಕ್ಕಳಿಗೆ ಪ್ರೇರಣೆ ನೀಡಬೇಕು. ಬಿಸಿಯೂಟ ಪಡೆಯಲು ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಬೇಕು.
ಈ ಬೇಸಿಗೆ ಅವಧಿಯಲ್ಲಿ ಒಂದು ವೇಳೆ ಶಾಲೆಗೆ ಬೇರೆ ಊರಿನ ಸರ್ಕಾರಿ ಹಾಗೂ ಅನುದಾನಿತ ಶಾಲೆಯ ಮಕ್ಕಳು ಬಂದರೆ ಅವರಿಗೂ ಬಿಸಿ ಊಟ ವಿತರಿಸಲಾಗುವುದು.
ಒಟ್ಟಾರೆ ಮಕ್ಕಳ ಹಿತ ದೃಷ್ಟಿಯಿಂದ ಇಲಾಖೆ ಹಮ್ಮಿಕೊಂಡ ಈ ಕಾರ್ಯಕ್ರಮವನ್ನು ಅತ್ಯಂತ ವ್ಯವಸ್ಥಿತವಾಗಿ ನಿರ್ವಹಿಸಿ ಯಶಸ್ವಿಗೊಳಿಸಲು ಸರ್ವರ ಸಹಕಾರ ಅವಶ್ಯಕವಾಗಿದೆ ಎಂದು ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿಗಳಾದ ಲಕ್ಷ್ಮಣರಾವ ಯಕ್ಕುಂಡಿ ಹಾಗೂ ತಾಲೂಕಾ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಆರ್ ಸಿ ಮುದಕನಗೌಡರ ಅಭಿಪ್ರಾಯ ಪಟ್ಟು ಬಿಸಿಯೂಟ ಯೋಜನೆ ಯಶಸ್ವಿಗೊಳಿಸಲು ವಿನಂತಿಸಿದ್ದಾರೆ.