spot_img
spot_img

ಅಂಕೋಲೆಯ ಉಪ್ಪಿನ ಸತ್ಯಾಗ್ರಹಕ್ಕೆ ತೊಂಬತ್ನಾಲ್ಕು ವರ್ಷ

Must Read

- Advertisement -

ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸ ಬಹು ವರ್ಣರಂಜಿತ. ಈ ಬೃಹತ್ ಚರಿತ್ರೆಯಲ್ಲಿ ಅಂಕೋಲೆಗೆ ಒಂದು ಪ್ರತ್ಯೇಕ ಅಧ್ಯಾಯವೇ ಇದೆ. ಈ ಅಧ್ಯಾಯ ಒದಗಿ ಬಂದದ್ದು ಇಡೀ ಕರ್ನಾಟಕದ ಪರವಾಗಿ ಅಂಕೋಲೆಯಲ್ಲಿ ನಡೆದ ಉಪ್ಪಿನ ಸತ್ಯಾಗ್ರಹದಿಂದ. ಉಪ್ಪಿಗೆ ಕರ ನೀಡುವುದಿಲ್ಲ ಎಂದು ಒಕ್ಕೊರಲಿನಿಂದ ಘೋಷಿಸಿ, ಕಾನೂನು ಮುರಿದು, ಉಪ್ಪು ತಯಾರಿಸಿ ಇಲ್ಲಿನ ಚಳವಳಿಗಾರರು ನಡೆಸಿದ ಅಪೂರ್ವ ಸಾಹಸದ ಕತೆಗೆ ಇಂದು ಒಂಭತ್ತು ದಶಕಗಳು ಕಳೆದಿವೆ.

ಅಂಕೋಲೆಯಲ್ಲಿ ಸ್ವಾತಂತ್ರ್ಯ ಹೋರಾಟದ ಆರಂಭ :

1799 ರಲ್ಲಿ ಟಿಪ್ಪೂವಿನ ಮರಣಾನಂತರ ಅಂಕೋಲೆಯ ಭಾಗದಲ್ಲಿ ರಾಜಸತ್ತೆಗಳ ಅಂತ್ಯವಾಯಿತು. ಬ್ರಿಟಿಷರ `ಈಸ್ಟ್ ಇಂಡಿಯಾ ಕಂಪನಿ’ಯ ಆಡಳಿತ ಈ ಪ್ರದೇಶಕ್ಕೆ ಬಂತು. ಕ್ರಿ.ಶ. 1800 ರ ಕಾಲಕ್ಕೆ ಟಿಪ್ಪೂ ಹಾಗೂ ಮರಾಠರ ಸುಲಿಗೆಯಿಂದ ಜರ್ಜರಿತವಾದ ಇಲ್ಲಿನ ಜನಕ್ಕೆ ಬ್ರಿಟಿಷ ನೀತಿಗಳು ಗಾಯದ ಮೇಲೆ ಬರೆ ಎಳೆದಂತಾದವು. ಧೋಂಡಿಯಾ ವಾಘನ ನೇತ್ರತ್ವದಲ್ಲಿ ಹೆಂಜೆ ನಾಯ್ಕ, ಗಿಡ್ಡಗಣೇಶ (ಗಿಡ್ಡ ಗಣೂಜಿ) ಹಾಗೂ ತಿಮ್ಮಾನಾಯ್ಕರ ನಾಯಕತ್ವದಲ್ಲಿ ಬ್ರಿಟೀಷ ಆಡಳಿತದ ವಿರುದ್ದ ದಂಗೆಯೆದ್ದು ಸಾಕಷ್ಟು ಹಾವಳಿ ನಡೆಸಿದರು. ಇದು ಅಂಕೋಲೆಯಲ್ಲಿ, ಉತ್ತರಕನ್ನಡ ಜಿಲ್ಲೆಯಲ್ಲಿ ನಡೆದ ಮೊದಲ ಸ್ವಾತಂತ್ರ್ಯ ಹೋರಾಟವಾಗಿದೆ. 1800 ರ ಸೆಪ್ಟೆಂಬರ 10 ರಂದು ಕೋಣಗಲ್ಲಿನಲ್ಲಿ ನಡೆದ ಹೋರಾಟದಲ್ಲಿ ಧೋಂಡಿಯಾ ವಾಘನನ್ನು ಅರ್ಥರ್ ವೆಲ್ಲೆಸ್ಲಿಯ ಸೈನ್ಯ ಸೋಲಿಸಿ ಕೊಂದು ಹಾಕುತ್ತದೆ. 1801 ರ ಆರಂಭಿಕ ದಿನಗಳಲ್ಲಿ ಕ್ಯಾನರಾದ ಕಲೆಕ್ಟರ್ ಆಗಿದ್ದ ಸರ್ ಥಾಮಸ್ ಮನ್ರೋ ಸಿಪಾಯಿಗಳು ಅಂಕೋಲೆಯಲ್ಲಿ ಗಿಡ್ಡಗಣೂಜಿಯನ್ನೂ, ಕೋಡಿಭಾಗದಲ್ಲಿ ಹೆಂಜೆನಾಯ್ಕನನ್ನೂ ಗುಂಡಿಕ್ಕಿ ಕೊಲ್ಲುವುದರೊಂದಿಗೆ ಈ ಹೋರಾಟ ವಿಫಲವಾಯಿತು. ಮುಂದೆ 1829-30 ರಲ್ಲಿ ಇಲ್ಲಿನ ಸಾಮಾನ್ಯ ಜನತೆ ಸಾಮೂಹಿಕವಾಗಿ ಬ್ರಿಟಿಷರು ವಿಧಿಸಿದ ತೆರಿಗೆ ನಿಡಲು ನಿರಾಕರಿಸಿ ಚಳವಳಿಯನ್ನು ಆರಂಭಿಸುತ್ತಾರೆ. ಈ ಚಳವಳಿ ಉತ್ತರ ಕನ್ನಡಕ್ಕಿಂತ ದಕ್ಷಿಣ ಕನ್ನಡದಲ್ಲಿ ತೀವ್ರ ಸ್ಪರೂಪ ಪಡೆದುಕೊಂಡಿತು. ಈ ಚಳವಳಿಯನ್ನು ಇಂಗ್ಲೀಷ ದಾಖಲೆಗಳು `ಕೆನರಾ ಬಂಡಾಯ’ವೆಂದು ಕರೆದಿವೆ. ಆ ಸಮಯದಲ್ಲಿ ಕಮಿಶನರ್ ಆಗಿದ್ದ ಮಾರ್ಕ ಕಬ್ಬನ್ ತನ್ನ ಟಿಪ್ಪಣಿಯಲ್ಲಿ “ಅವರ ಗುರಿ ಬ್ರಿಟಿಷ್ ಅಧಿಕಾರವನ್ನು ಕಿತ್ತೊಗೆದು ತಮ್ಮದನ್ನು ಸ್ಥಾಪಿಸುವುದೇ ಆಗಿತ್ತು ಹೊರತು ಜನರನ್ನು ಕೊಳ್ಳೆ ಹೊಡೆಯುವುದಲ್ಲ. ಅವರು ಸರಕಾರಿ ಖಜಾನೆಗಳನ್ನು ದೋಚಿದರೇ ಹೊರತು ಊರು, ಹಳ್ಳಿಗಳನ್ನಲ್ಲ…” ಎಂದು ಬರೆದಿದ್ದಾನೆ. ಈ ಚಳವಳಿ ಬ್ರಿಟಿಷ ಆಡಳಿತಕ್ಕೆ ಒತ್ತಡ ಹೇರುವಲ್ಲಿ ಬಹುಪಾಲು ಯಶಸ್ವಿಯಾಗಿತ್ತು.

ಮುಂದಿನ ದಿನಗಳಲ್ಲಿ ಆಗಾಗ ಅಲ್ಲಲ್ಲಿ ಪ್ರತಿಭಟನೆ ದಂಗೆಗಳು ನಡೆಯುತ್ತಿದ್ದರೂ ಅವು ತೀವ್ರವಾಗಿ ಸ್ಪೋಟಿಸಿದ್ದು 1904 ರ ಸಂದರ್ಭದಲ್ಲಿ. ಬ್ರಿಟಿಷ್ ಸರಕಾರ ಅಡವಿಯಿಂದ ಉರುವಲಿಗೆ ಕಟ್ಟಿಗೆ ತರುವುದನ್ನು ನಿರ್ಬಂಧಿಸಿತು. ಅದನ್ನು ಪ್ರತಿಭಟಿಸಿದ ಅಂಕೋಲೆಯ ರೈತರು ಅಡವಿಗೆ ಹೋಗಿ ಹೊರೆ ಹೊರೆಯಾಗಿ ಸೌದೆಯನ್ನು ತಂದು ಅಂಕೋಲೆಯ ಪೇಟೆಯಲ್ಲಿ ಮಾರಿದರು. ಆ ವೇಳೆಗೆ ಅಂಕೋಲೆಯಲ್ಲಿ ಫಾರೆಸ್ಟ ರೇಂಜ್ ಆಫಿಸರ್ ಆಗಿದ್ದ ಡಿ.ಡಿ. ಅನಂತಭಟ್ಟ ಎನ್ನುವವನು ಕೋಟೆಭಾವಿಯ ಫಾರೆಸ್ಟ್ ಬಂಗಲೆಯಲ್ಲಿ ತಲೆಮರೆಸಿಕೊಂಡಿದ್ದನಂತೆ

- Advertisement -

ಅಂದರೆ ಚಳವಳಿಯ ಪ್ರಖರತೆ ಅರಿವಾಗುತ್ತದೆ. 1905 ರಲ್ಲಿ ಸ್ವದೇಶಿ ಚಳವಳಿಯ ವೇಳೆಗೆ ಅಂಕೋಲೆಯಲ್ಲಿ ಸಕ್ಕರೆಯ ಉಪಯೋಗವನ್ನು ಸಾಮೂಹಿಕವಾಗಿ ಬಹಿಷ್ಕರಿಸಿ, ಸ್ವದೇಶಿ ವಸ್ತುವಾದ ‘ಬುರಾಸಕ್ಕರೆ’, ‘ಬೆಲ್ಲ’ವನ್ನು ಮಾತ್ರ ಬಳಸುತ್ತಿದ್ದರು. ಹನುಮಟ್ಟೆಯ ಲಕ್ಷ್ಮೀನಾರಾಯಣ ಮಹಾಮಾಯಾ ದೇವಸ್ಥಾನದ ಆವರಣದಲ್ಲಿ 12 ಅಡಿಗಳಷ್ಟು ಎತ್ತರದ ವಿದೇಶಿ ಬಟ್ಟೆಗಳ ರಾಶಿಮಾಡಿ ಬೆಂಕಿಯಿಟ್ಟು ಹೋಳಿ ಮಾಡಲಾಯಿತು. ಮುಂದೆ ಖಿಲಾಫತ್ ಚಳವಳಿ, ಅಸಹಕಾರ ಆಂದೋಲನದ ಸಮಯದಲ್ಲಿ ಅಂಕೋಲೆಯಲ್ಲಿ ಅಸಾಮಾನ್ಯ ಜನಜಾಗ್ರತಿಯಾಗಿ ಭಾರಿ ಕಾರ್ಯಕ್ರಮಗಳು ನಡೆದವು.

ಉಪ್ಪಿನ ಸತ್ಯಾಗ್ರಹದ ಹಿನ್ನೆಲೆ:

ಗಾಂಧೀಜಿಯವರು ದೇಶದ ವಿಮೋಚನೆಯ ದೀಕ್ಷೆ ತೊಟ್ಟು ಬರುವ ವೇಳೆಗೆ ಹಿಂದಿನ ಪ್ರಮುಖ ರಾಷ್ಟ್ರೀಯ ನಾಯಕರು ನಿರ್ಗಮಿಸಿದ್ದರು. ಸ್ವಾತಂತ್ರ್ಯ ಚಳವಳಿಯು ಕೇವಲ ಮಹಾನಗರಗಳನ್ನು ಕೇಂದ್ರೀಕರಿಸಿ ನಡೆಯದೇ ಹಳ್ಳಿ ಹಳ್ಳಿಗಳಿಂದ ಸ್ವಾತಂತ್ರ್ಯದ ಬೇಡಿಕೆ ಅನುರಣಿಸಬೇಕು ಎಂದು ಘೋಷಿಸಿದ ಗಾಂಧೀಜಿಯವರ ಕರೆಗೆ ಓಗೊಟ್ಟವರಲ್ಲಿ ಅಂಕೋಲೆಯ ಜನರು ಪ್ರಮುಖರಾಗಿದ್ದಾರೆ. ಆ ವೇಳೆಗೆ ಅಂಕೋಲೆಯಲ್ಲಿ ಪೇಶಾವರದ ಹಬಿಬುಲ್ಲಾ, ಗಂಗಾಧರರಾವ್ ದೇಶಪಾಂಡೆ, ಮಜಲಿ ಮೊದಲಾದವರ ಭಾಷಣಗಳು ಸಾವಿರಾರು ಜನರನ್ನು ಪ್ರಭಾವಿಸಿದ್ದವು. ಕೀರ್ತನಕೇಸರಿ ಖ್ಯಾತಿಯ ಕೊಪ್ಪಳದ ಜಯರಾಮಾಚಾರ್ಯ ಅವರ ಕೀರ್ತನೆಗಳು ಅಂಕೋಲೆಯಲ್ಲಿ ಇನ್ನಷ್ಟು ರಾಷ್ಟೀಯ ಭಾವನೆಗಳನ್ನು ಜಾಗೃತಗೊಳಿಸಿತು. ಅಂಕೋಲೆಯಲ್ಲಿದ್ದ ಈ ವಾತಾವರಣ ಇಡೀ ರಾಜ್ಯದ ಗಮನವನ್ನೇ ಸೆಳೆದಿತ್ತು. ಈ ವೇಳೆಗೆ ಬ್ರಿಟಿಷ್ ಸರಕಾರ ಉಪ್ಪಿನ ಮೇಲೆ ತೆರಿಗೆ ವಿಧಿಸಿತು.

ಉಪ್ಪಿನ `ಕರ’ ನಿರಾಕರಣ ಮಾಡಿ ಗಾಂಧೀಜೀ ದಂಢಿಯಾತ್ರೆ ಕೈಗೊಂಡಾಗ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು ಉಪ್ಪಿನ ಕರ ಭಂಗ ಚಳುವಳಿಗಾಗಿ ಸೂಕ್ತ ಸ್ಥಳದ ಹುಡುಕಾಟದಲ್ಲಿ ತೊಡಗಿತು. ಇದಕ್ಕೆ ಪೂರಕವಾಗಿ 1929 ರ ಡಿಸೆಂಬರನಲ್ಲಿ ಹನುಮಂತರಾವ ಕೌಜಲಗಿಯವರು ಜಿಲ್ಲೆಯಲ್ಲಿ ಪ್ರವಾಸಮಾಡಿ ಅಂಕೋಲೆಯೇ ‘ಉಪ್ಪಿನ ಕಾಯಿದೆ ಭಂಗ’ಕ್ಕೆ ಸೂಕ್ತ ಸ್ಥಳವೆಂದು ಶಿಫಾರಸು ಮಾಡಿದರು. 1930, ಫೆಬ್ರುವರಿ 20 ರಂದು ಬಳ್ಳಾರಿಯಲ್ಲಿ ಸಭೆ ಸೇರಿದ್ದ ಪ್ರದೇಶ ಕಾಂಗ್ರೆಸ್ ಸಮಿತಿಯು ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹ ಅಂಕೋಲೆಯಲ್ಲಿ ಜಲಿಯನ್ವಾಲಾ ಭಾಗ್ ಹತ್ಯಾಕಾಂಡದ ದಿನವಾದ ಏಪ್ರಿಲ್ 13 ನೇ ತಾರೀಖಿನಂದೇ ನಡೆಸಲು ನಿರ್ಣಯಿಸಲಾಯಿತು. ಹನುಮಂತರಾವ್ ಕೌಜಲಗಿ, ಕಾಕಾ ಕಾರ್ಖಾನೀಸ, ರಂಗನಾಥ ದಿವಾಕರ, ಡಿ.ಪಿ. ಕರ್ಮಕರ, ಜಯರಾಮಾಚಾರ್ಯ ಮುಂತಾದವರು ಈ ಭಾಗದಲ್ಲಿ ಸಂಚರಿಸಿ ಹೋರಾಟದ ಬಗ್ಗೆ ಪ್ರಚಾರ ಮಾಡಿದರು. ಮಾನ್ಯ ಗುಲವಾಡಿಯವರು ಇದರ ಸ್ಥಾನಿಕ ಮುಂದಾಳುಗಳಾದರು. ತಿಮ್ಮಪ್ಪ ನಾಯಕ ಮಾಸ್ತರ, ಎಂ.ಪಿ. ನಾಡಕರ್ಣಿ, ಶಾಮರಾವ್ ಶೇಣ್ವಿ, ಸ್ವಾಮಿ ವಿದ್ಯಾನಂದ, ವಂದಿಗೆ ಹಮ್ಮಣ್ಣ ನಾಯಕ, ಶೆಟಗೇರಿ ಜೋಗಿ ನಾಯಕ, ಬಾಸ್ಗೋಡ ರಾಮ ನಾಯಕ, ಬೊಮ್ಮಯ್ಯ ನಾಯಕ ಮುಂತಾದವರು ಹಳ್ಳಿ ಹಳ್ಳಿಗಳಲ್ಲಿ ಪ್ರಚಾರ ಮಾಡಿ ಜನರನ್ನು ಹುರಿದುಂಬಿಸಿದರು.

- Advertisement -

ಉಪ್ಪಿನ ಕಾಯಿದೆ ಭಂಗಕ್ಕೆ ಆರು ದಿನ ಮೊದಲು ಅಂದರೆ 06 ಎಪ್ರಿಲ್ 1930 ರಂದು ಅಂಕೋಲೆಯಲ್ಲಿ ಸೇವಾದಳದ ಶಿಬಿರ ತೆರೆದರು. ಡಾ| ಹರ್ಡಿಕರ್, ಕೆ.ಎ. ವೆಂಕಟರಾಮಯ್ಯ, ಎಂ.ಸಿ. ಮಾತಂದ, ಚಂದು, ಗುಡ್ಲೆಪ್ಪ ಹಳ್ಳಿಕೇರಿ, ಟಿಕೂರು ಸುಬ್ರಹ್ಮಣ್ಯಂ, ತಾಳೆಕೇರೆ ಸುಬ್ರಹ್ಮಣ್ಯಂ, ಕೆ.ಟಿ. ಭಾಷ್ಯಂ, ಪ್ರೊ. ಸಂಪದ್ಗಿರಿರಾವ್, ಗೋಪಾಲರಾವ್ ದೇಶಪಾಂಡೆ ಇವರೆಲ್ಲ ಹೊರ ಊರಿನಿಂದ ಬಂದು ಶಿಬಿರವನ್ನು ಸೇರಿಕೊಂಡರು. ಮೈಸೂರು ಸಂಸ್ಥಾನದಿಂದ ಸುಮಾರು 300 ಸ್ವಯಂಸೇವಕರು ಬಂದರು. ಆರಂಭದಲ್ಲಿ ಶಿಬಿರವು ದಲಾಲ್ ರಾಮಕೃಷ್ಣ ಭಟ್ ಅವರ ವಶದಲ್ಲಿದ್ದ ದತ್ತು ನಾರ್ವೇಕರ ಇವರ ಭವ್ಯ ಕಟ್ಟಡದಲ್ಲಿ (ಇಂದಿನ ಬಂಡಿ ಬಜಾರದಲ್ಲಿ ಪಿ.ಎಲ್.ಡಿ. ಬ್ಯಾಂಕ ಇರುವ `ಹಳೆಕೋರ್ಟು’ ಎಂದು ಕರೆಯುವ ಕಟ್ಟಡ) ನಡೆಯಿತು. ಸತ್ಯಾಗ್ರಹಕ್ಕೆ ಎರಡು ದಿನ ಮೊದಲು ಪೊಲೀಸರು ನಾಯಕ ಮಾಸ್ತರ, ಹನುಮಂತರಾವ್ ಕೌಜಲಗಿ, ಕಾಕಾ ಕಾರ್ಕಾನೀಸ್ ಮೊದಲಾದವರನ್ನು ಬಂಧಿಸಿ, ಕಟ್ಟಡವನ್ನು ವಶಪಡಿಸಿಕೊಂಡು ಬೀಗಮುದ್ರೆ ಹಾಕಿದರು. ಆಗ ಶ್ಯಾಮರಾವ್ ಶೇಣ್ವಿ ಅವರು ತಮ್ಮ ಅಣ್ಣನ ಮಗಳ ಮದುವೆಗೆಂದು ತಮ್ಮ ಮನೆಯ ಮುಂದೆ ಹಾಕಿದ ಬ್ರಹತ್ ಚಪ್ಪರವನ್ನು ಶಿಬಿರಾರ್ಥಿಗಳಿಗೆ ಬಿಟ್ಟುಕೊಟ್ಟರು.

ಉಪ್ಪಿನ ಸತ್ಯಾಗ್ರಹ :

1930 ರ ಏಪ್ರಿಲ್ 13 ಮುಂದಿನ ಅನೇಕ ಸತ್ಯಾಗ್ರಹಗಳಿಗೆ ನಾಂದಿ ಹಾಡಿದ ದಿನ. ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಉತ್ತರ ಕನ್ನಡ ಜಿಲ್ಲೆಗೊಂದು ಸ್ಥಾನ ದಕ್ಕಿದ್ದಾದರೆ, ಅದಕ್ಕೆ ಅಡಿಪಾಯ ಹಾಕಿದ ದಿನ. ಅಂದು ಮಧ್ಯಾಹ್ನ 12 ಗಂಟೆಗೆ ಅಂಕೋಲೆಯಲ್ಲಿ ಸುಮಾರು 35 ಸಾವಿರ ಜನ ಸೇರಿದ್ದರು. ಜಿಲ್ಲೆಯ ಎಲ್ಲೆಡೆಯಿಂದಲೂ ಧಾರವಾಡ, ಬೆಳಗಾವಿ ಜಿಲ್ಲೆಗಳಿಂದಲೂ ಜನರು ಬಂದಿದ್ದರು. ಈ ಹೋರಾಟದ ನಾಯಕತ್ವ ವಹಿಸಬೇಕಾಗಿದ್ದ ನಾ.ಸು. ಹರ್ಡೀಕರರವರು ಹುಬ್ಬಳಿಯಿಂದ ಬರುವಾಗ ದಾರಿಯಲ್ಲಿ ಅವರ ಕಾರು ಕೆಟ್ಟು, ಸತ್ಯಾಗ್ರಹದ ನಿಗದಿತ ವೇಳೆ ಮಧ್ಯಾಹ್ನ 3 ಗಂಟೆಗೆ ಅವರಿಗೆ ಅಂಕೋಲೆ ತಲುಪಲು ಸಾಧ್ಯವಾಗದ್ದರಿಂದ ಹೊನ್ನಾವರದ ಎಂ.ಪಿ. ನಾಡಕರ್ಣಿ ಮತ್ತು ಇತರ 9 ಜನರ ನಾಯಕತ್ವದಲ್ಲಿ ಮೆರವಣಿಗೆ ಹೊರಟಿತು. ಆನಂದಿಬಾಯಿ ದತ್ತು ನಾರ್ವೇಕರ ಅವರ ಮನೆಯಿಂದ ಆರಂಭವಾದ ಮೆರವಣಿಗೆ ಪೊಲೀಸರನ್ನು ಲೆಕ್ಕಿಸದೇ ಪೂಜಗೇರಿ ಹೊಳೆಯತ್ತ ಜಯಘೋಷಗಳೊಂದಿಗೆ ಹೊರಟಿತು. ಅಂದು ಉಪ್ಪಿನ ಕಾಯದೆಗಳನ್ನು ಮುರಿಯುವ ಉದ್ದೇಶದಿಂದ ಹೊರಟ ಮೆರವಣಿಗೆಯಲ್ಲಿ ಅನೇಕ ಹಳ್ಳಿಗಳಿಂದ ಬಂದು ಸೇರಿದ ಸಹಸ್ರಾರು ಸ್ತ್ರೀ ಪುರುಷರನ್ನು ಕಾಣಬಹುದಾಗಿತ್ತು. ಅದರಲ್ಲಿ ಅನೇಕ ಹೆಂಗಸರಂತೂ ಎಳೆಮಕ್ಕಳನ್ನು ಎತ್ತಿಕೊಂಡು ಬಿಸಿಲಿನಲ್ಲಿ ನಡೆದು ಬಂದಿದ್ದರು. ಅಂದು ಮೆರವಣಿಗೆಯಲ್ಲಿ ಅದೆಷ್ಟು ಜನರಿದ್ದರೆಂದರೆ ರಸ್ತೆ ತುಂಬಿ ಅಕ್ಕಪಕ್ಕದ ಗದ್ದೆಗಳಲ್ಲಿ ಜನ ನಡೆಯುತ್ತಲಿದ್ದರು. ಮೆರವಣಿಗೆಯ ತಲೆ ಪೂಜಗೇರಿ ಸೇತುವೆ ತಲುಪಿದಾಗ, ಅದರ ಬಾಲ ಇನ್ನೂ ಅಂಕೋಲೆ ಪೇಟೆಯಲ್ಲಿಯೇ ಇತ್ತು. ಈ ಮೆರವಣಿಗೆಯೊಂದಿಗೆ ಗದ್ದೆಯಲ್ಲಿ ಸಾಗುತ್ತಿದ್ದ ಮಿ.ಸ್ಟೀಲ್ ಎಂಬ ಕಸ್ಟಮ್ಸ್ ಅಧಿಕಾರಿ ಮಿ. ಕೋಲಿನ್ಸ್ ಎಂಬ ಪೊಲೀಸ್ ಅಧಿಕಾರಿಯೊಂದಿಗೆ ‘ಜನತೆಯು ಈ ರೀತಿ ಬಂಡಾಯ ಎದ್ದರೆ ಯಾವ ಸರಕಾರ ಉಳಿದೀತು’ ಎಂದು ಹೇಳಿದನಂತೆ.

ಶ್ಯಾಮರಾವ ಶೆಣ್ವಿರವರ ತಂಗಿ ಸೀತಾಬಾಯಿ ಸರಾಫರು “ಕರಕೊಟ್ಟ ಉಪ್ಪನ್ನು ಯಾರೂ ತಿನ್ನಕೂಡದು. ಉಪ್ಪಿನ ಕಾಯದೆ ಭಂಗವು ನಮ್ಮ ಮೇಲೆ ಹೇರಿದ ಅಪ್ರತ್ಯಕ್ಷ ಕರದ ನಿರಾಕರಣೆ, ಕರಕೊಡದ ಸ್ವತಂತ್ರ ಉಪ್ಪು ತಿಂದು ನಾವು ಸ್ವಾತಂತ್ರ್ಯ ಪಡೆಯುವಾ” ಎಂದು ಆವೇಶ ಪೂರ್ಣವಾಗಿ ಭಾಷಣ ಮಾಡಿದರು. ಶ್ರೀಮತಿ ಆನಂದಿಬಾಯಿ ಹನಮಟ್ಟಿಕರರೂ ಕೂಡ ಅಷ್ಟೇ ಆವೇಶದಿಂದ ಸಭೆಯಲ್ಲಿ ಭಾಷಣ ಮಾಡಿ ಕಾಯಿದೆ ಭಂಗ ಮಾಡುವುದಕ್ಕೆ ಕರೆ ಇತ್ತರು. ಹಿನ್ನೀರಿನ ಉಪ್ಪು ನೀರನ್ನು ಮಣ್ಣನ್ನೂ ಸಂಗ್ರಹಿಸಿಕೊಂಡು ಬಂದು ಅಂದಿನ ಮಾಮಲೇದಾರನ ಸಮ್ಮುಖದಲ್ಲೇ ಉಪ್ಪು ನೀರನ್ನು ಕುದಿಸಿ ಉಪ್ಪನ್ನು ತಯಾರಿಸಿ ಲಿಲಾವು ಮಾಡಿದರು. ಸುಮಾರು 40 ಸಾವಿರಕ್ಕೂ ಮಿಕ್ಕಿ ಸೇರಿದ ಜನರಲ್ಲಿ ಅಂಕೋಲೆಯ ನಾಮಧಾರಿ ಸಮಾಜದ ದೇವು ಹೊನ್ನಪ್ಪ ನಾಯ್ಕ ಎನ್ನುವ ಹುರಿಗಡಲೆ ವ್ಯಾಪಾರಿ 30 ರೂಪಾಯಿಗಳನ್ನು ಕೊಟ್ಟು ಉಪ್ಪಿನ ಆ ಮೊದಲ ಪೊಟ್ಟಣ ಖರೀದಿಸಿದರು. ನಂತರ ಗಾಂಧಿ ಮೈದಾನದಲ್ಲಿ ನಡೆದ ಸಭೆಯಲ್ಲಿ ಸ್ವಾಮಿ ವಿದ್ಯಾನಂದರು ಬ್ರಿಟಿಷರು ಭಾರತೀಯರ ಮೇಲೆ ಹೇರಿರುವ ಅನ್ಯಾಯದ ಕಾನೂನುಗಳನ್ನು ಶಾಂತಿಯಿಂದ ಉಲ್ಲಂಘಿಸಿ ಸ್ವರಾಜ್ಯವನ್ನು ಸ್ಥಾಪಿಸಬೇಕು ಎಂದು ಕರೆ ನೀಡಿದ್ದರು.

ಪೋಲಿಸರು ಚಳವಳಿಯ ಮುಖಂಡರನ್ನು ಬಂಧಿಸಿದರೂ ಪ್ರತಿನಿತ್ಯ ಗಾಂಧಿ ಮೈದಾನದಲ್ಲಿ ಐದು ಸಾವಿರ ಜನರಾದರೂ ಸೇರುತ್ತಿದ್ದರು. ನಾಡಿಗೇರ ಎಂಬ ಹುಡುಗ ‘ತಕ್ಕಡಿ ಹಿಡಕೊಂಡು…’ ಎಂಬ ಲಾವಣಿ ಹೇಳುತ್ತಿದ್ದ. ನಂತರ ಭಾಷಣ, ಉಪ್ಪಿನ ಲಿಲಾವು ಆಗುತ್ತಿತ್ತು. ಹೀಗೆ ಸತತ 45 ದಿನಗಳ ಕಾಲ ಉಪ್ಪಿನ ಸತ್ಯಾಗ್ರಹ ಮುಂದುವರಿಯಿತು. ಕುಂದಾಪುರ, ಉಡುಪಿ, ಮಂಗಳೂರು, ಪುತ್ತೂರು, ಪಡುಬಿದಿರೆ ಸೇರಿದಂತೆ ಸುಮಾರು 40 ಕೇಂದ್ರಗಳಿಗೆ ಈ ಚಳವಳಿ ವ್ಯಾಪಿಸಿತು. ಅಪಾರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಚಳುವಳಿಗೆ ಧುಮುಕಿ ಉಪ್ಪಿನ ತಯಾರಿಕೆಯಲ್ಲೂ, ಮಾರಾಟದಲ್ಲೂ ತೊಡಗಿಕೊಂಡರು. ಗಾಂಧೀಜಿ ಉಪ್ಪಿನ ದಾಸ್ತಾನುಗಳ ಮೇಲೆ ದಾಳಿ ಮಾಡಲು ಕರೆನೀಡಿದಾಗ ಇಲ್ಲಿನ ಸ್ವಯಂ ಸೇವಕರು ಶ್ರೀಧರ ಪಾಂಡುರಂಗ ಬಾಳ್ಗಿಯವರ ನೇತ್ರತ್ವದಲ್ಲಿ ಸಾಣಿಕಟ್ಟೆಯ ಉಪ್ಪಿನ ದಾಸ್ತಾನನ್ನು ಕುಮಟೆಗೆ ಸಾಗಿಸಿದರು. ಅಲ್ಲಿನ ಪೇಟೆಯಲ್ಲಿ ಸಾವಿರಾರು ಮಣ ಉಪ್ಪು ಕೇವಲ 15 ನಿಮಿಷದಲ್ಲೇ ಮಾರಾಟವಾಯಿತು. ಪೊಲೀಸರ ಲಾಠಿಗೆ ಎದೆಯೊಡ್ಡಿ ನಿಂತ ಜನರ ನಿರಂತರ ಹೋರಾಟದಿಂದ ಉಪ್ಪಿನ ಸತ್ಯಾಗ್ರಹ ಯಶಸ್ವಿಯಾಯಿತು.

ಸತ್ಯಾಗ್ರಹದ ಪರಿಣಾಮಗಳು :

ಎಪ್ರಿಲ್ 13, 1930 ಚೈತ್ರ ಶುದ್ಧ ಪೂರ್ಣಿಮೆ. ಅಂದು ಅಂಕೋಲೆಯ ದೊಡ್ಡ ದೇವರೆಂದೇ ಖ್ಯಾತಿಯಾದ ಶ್ರೀ ವೆಂಕಟರಮಣ ದೇವರ ರಥೋತ್ಸವವಿತ್ತು. ಉಪ್ಪಿನ ಸತ್ಯಾಗ್ರಹದಿಂದಾಗಿ ಆ ರಥೋತ್ಸವ ನಡೆಯಲೇ ಇಲ್ಲ. ಆ ಕಾಲದಲ್ಲೇ ಜನತೆ ದೇವರ ಉತ್ಸವಕ್ಕಿಂತ ಬದುಕಿನ ಹೋರಾಟಕ್ಕೇ ಹೆಚ್ಚು ಪ್ರಾಮುಖ್ಯತೆ ನೀಡಿದ್ದು ಗಮನಾರ್ಹ. ಮುಂದೆ 60 ವರ್ಷಗಳ ಕಾಲ 1990 ರ ವರೆಗೆ ಶ್ರೀ ದೇವರ ರಥೋತ್ಸವ ನಡೆದಿರಲಿಲ್ಲ ಎನ್ನುವುದು ಇತಿಹಾಸ. (ಕಾಕತಾಳೀಯ ಎನ್ನುವಂತೆ 3 ವರ್ಷಗಳ ಹಿಂದೆ ಸತ್ಯಾಗ್ರಹದ ತೊಂಭತ್ತನೇ ವರ್ಷದ ಈ ಸಂದರ್ಭದಲ್ಲಿ ಕೊರೋನಾ ವಿರುದ್ಧದ ಹೋರಾಟದಿಂದಾಗಿ ದೊಡ್ಡ ದೇವರ ರಥೋತ್ಸವ ನಡೆಯಲಿಲ್ಲ.) ಈ ಸತ್ಯಾಗ್ರಹದಿಂದ ಉಪ್ಪಿನ ಮೇಲಿನ ಪ್ರತಿಬಂಧ ಕಾನೂನು ಇದ್ದೂ ಇಲ್ಲದಂತಾಯಿತು. ಮಳೆಗಾಲಕ್ಕೂ ಮೊದಲು ಅಂಕೋಲೆಯಲ್ಲಿ 2 ಬೃಹತ್ ಉಪ್ಪಿನ ಸಂತೆಗಳು ನಡೆದವು. ಮೊದಲ ಸಂತೆಗೆ 350 ಜನ ಉಪ್ಪು ತಯಾರಿಸಿ ಮಾರಲು ತಂದರೆ, ಎರಡನೆಯ ಬಾರಿ 480 ಜನ ಉಪ್ಪು ಮಾರಲು ಬಂದರು. ಸಾವಿರಾರು ಜನ ನಿರ್ಭೀಡೆಯಿಂದ ಬಂದು ಸುಂಕ ರಹಿತ ಉಪ್ಪನ್ನು ಖರೀದಿಸಿದರು. ಈ ಉಪ್ಪಿನ ಕಾಯಿದೆ ಭಂಗ ಚಳುವಳಿಯ ಯಶಸ್ಸಿನ ಪರಿಣಾಮ ಮಳೆಗಾಲ ಆರಂಭವಾದೊಡನೆ ಜಂಗಲ್ ಸತ್ಯಾಗ್ರಹ, 1931 ರಿಂದ ಕರನಿರಾಕರಣೆ ಚಳುವಳಿಗಳು ಆರಂಭವಾಗಲು ಸ್ಪೂರ್ತಿಯಾಯಿತು. 1942 ರ ಕ್ವಿಟ್ ಇಂಡಿಯಾ ಚಳವಳಿಯವರೆಗೂ ಆನಂತರವೂ ಅಂಕೋಲೆಯಲ್ಲಿ ಬ್ರಿಟಿಷ್ ವಿರೋಧಿ ಚಳವಳಿಗಳಿಗೆ ಈ ಉಪ್ಪಿನ ಸತ್ಯಾಗ್ರಹ ಪ್ರೇರಕ ಶಕ್ತಿಯಾಗಿ ಉಳಿಯಿತು.

 

ಹೇಮಂತ ಚಿನ್ನು
ಕರ್ನಾಟಕ ಶಿಕ್ಷಕರ ಬಳಗ

- Advertisement -
- Advertisement -

Latest News

ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಮಾನತೆ ದೊರಕಬೇಕು- ಸಿಡಿಪಿಓ ಶ್ವೇತಾ

ಮೈಸೂರು ನಗರ ವರ್ತಲ ರಸ್ತೆಯಲ್ಲಿರುವ ಮಾರ್ವೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ...
- Advertisement -

More Articles Like This

- Advertisement -
close
error: Content is protected !!
Join WhatsApp Group