spot_img
spot_img

ಆದ್ಯ ವಚನಕಾರ ದೇವರ ದಾಸಿಮಯ್ಯ

Must Read

- Advertisement -

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಚನ ಸಾಹಿತ್ಯಕ್ಕೆ ಅಗ್ರಸ್ಥಾನವಿದೆ. ಸಾಮಾನ್ಯವಾಗಿ ವಚನ ಸಾಹಿತ್ಯವೆಂದಾಕ್ಷಣ ಸ್ಮರಣೆಗೆ ಬರುವುದು ಬಸವಣ್ಣನವರು ಮತ್ತು ಅವರ ಸಮಕಾಲೀನರು. ಆದರೆ ವಚನ ಸಾಹಿತ್ಯಕ್ಕೆ ಶ್ರೀಕಾರ ಹಾಕಿ ಪೀಠಿಕೆ ಬರೆದು ಮುನ್ನುಡಿ ಹಾಡಿದವರು ದೇವರ ದಾಸಿಮಯ್ಯನವರು. ಇವರು ಕ್ರಿ.ಶ.೧೦೦೮ ರಿಂದ ೧೦೪೦ರ ಕಾಲಾವಧಿಯಲ್ಲಿ ಜೀವಿಸಿದ್ದರು. ದೇವರ ದಾಸಿಮಯ್ಯನವರು ತಮ್ಮ ಕುಲವೃತ್ತಿಯಾದ ನೇಯ್ಗೆಯ ಕಾಯಕದಿಂದ ಕಾಯಕ ತತ್ವಕ್ಕೆ ಭದ್ರ ಬುನಾದಿ ಹಾಕಿದವರು. ಶಿವನಿಗೆ ಬಟ್ಟೆಯನ್ನು ಕೊಟ್ಟು ಅಪೂರ್ವ ಭಕ್ತಿ ಮೆರೆದಂತೆ ಐತಿಹ್ಯ ಪುರಾಣಗಳಲ್ಲಿ ಉಲ್ಲೇಖಗಳು ಸಿಗುತ್ತವೆ.

ಉಂಕೆಯ ನುಗುಚಿ ಸಲಿಗೆಯ ಸಮಗೊಳಿಸಿ

ಸಮಗಾಲನಿಕ್ಕಿ ಅಣಿಯೇಳ ಏಳ ಮುಟ್ಟಿದೆ

- Advertisement -

ಹಿಡಿದ ಲಾಳಿಯ ಮುಳ್ಳು ಕಂಡಿಕೆಯ ನುಂಗಿತ್ತು

ಈ ಸೀರೆಯ ನೇಯ್ದವ ನಾನೋ ನೀನೋ ರಾಮನಾಥ

ಉಂಕೆ, ಸಲಿಗೆ, ಸಮಗಾಲು, ಅಣಿ, ಲಾಳಿಯ ಮುಳ್ಳು, ಕಂಡಿಕೆ ಇವು ನೇಯ್ಗೆ ವೃತ್ತಿಯ ಪಾರಿಭಾಷಿಕ ಶಬ್ಧಗಳು. ದಾಸಿಮಯ್ಯನವರು ತನು ಮನ ಸಮ್ಮಿಲನದ ಕ್ರಿಯಾಜ್ಞಾನದ ಮಗ್ಗದ ಮುಂದೆ ಕುಳಿತು, ಅಧ್ಯಾತ್ಮದ ಸೀರೆಯನ್ನು ನೇಯ್ಯ ಬಯಸಿದ್ದಾರೆ. ಸಾಮಾನ್ಯ ಅರ್ಥದಲ್ಲಿ ನೇಯ್ಗೆ ಮಾಡುವ ಮುನ್ನ ನೂಲನ್ನು  ಹಸನು ಮಾಡಿ, ಮಗ್ಗದಲ್ಲಿ ಎಳೆಗಳನ್ನು ಹೊಸೆದು ಸಮಗೊಳಿಸಿ ಮಗ್ಗದ ಕುಣಿಯಲ್ಲಿ ಕಾಲುಗಳನ್ನಿಟ್ಟು ಅಣಿಮೇಳ ಮುಟ್ಟಿ, ಲಾಳಿ ಮುಳ್ಳು ಕಂಡಿಕೆಯೊಂದಿಗೆ ನೇಯ್ಗೆ ಕಾರ್ಯ ಸಾಗಿದಂತೆ ಸೀರೆ ಸಿದ್ಧವಾಗಿದೆ. ಇದನ್ನು ನೇಯ್ದವನು ನಾನೋ ಇಲ್ಲವೇ ದೇವರಾದ ನೀನೋ ಎಂದು ದೇವರ ದಾಸಿಮಯ್ಯ ಪ್ರಶ್ನಿಸುತ್ತಾನೆ. ವಿಶೇಷ ಅರ್ಥದಲ್ಲಿ ಮನವೆಂಬ ಉಂಕೆಯ ಪರಿಶುದ್ಧ ಮಾಡಿ ಮನದ ಎಳೆಗಳ ಸಲಿಗೆಯ ಸಮಗೊಳಿಸಿ ಸಪ್ತ ವ್ಯಸನಗಳ ಮೆಟ್ಟಿ, ಕಾಯಕ ಮತ್ತು ಭಕ್ತಿಗಳೆಂಬ ಸಮಗಾಲನಿಕ್ಕಿದ್ದಾರೆ. ತನುವೆಂಬ ಕಂಡಿಕೆಯ ಮನವೆಂಬ ಲಾಳಿಯ ಮುಳ್ಳು ನುಂಗಿದೆ. ಭಕ್ತ ಭಗವಂತನ ಸಮಾಗಮವಾಗಿದೆ. ಭಕ್ತನು ಭಗವಂತನಲ್ಲಿ ಲೀನವಾಗಿದ್ದಾನೆ. 

- Advertisement -

ದುಗ್ಗಲೆಯೊಂದಿಗೆ ಸಂಸಾರಿಯೂ ಆಗಿದ್ದ ದಾಸೀಮಯ್ಯ ಕಾಯಕವನ್ನೇ ಕೈಲಾಸವಾಗಿಸಿಕೊಂಡ ಸಾಧಕರು. ದಾಸಿಮಯ್ಯ ದುಗ್ಗಳೆಯರ ಸಂಸಾರ ಆದರ್ಶಪ್ರಾಯವಾದುದು. ದುಗ್ಗಳೆ ದಾಸಿಮಯ್ಯ ದಂಪತಿಗಳು ಎಂದು ಇಂದಿನ ನಾಳಿನ ದಿನಗಳ ಬಗ್ಗೆ ಚಿಂತಿಸಿದವರಲ್ಲ. ದಾಸಭಕ್ತಿ ಎಂಬುದೊಂದು ದೀವಿಗೆಯಾದರೆ ಆ ದೀವಿಗೆಯ ಬತ್ತಿಯೇ ದಾಸಿಮಯ್ಯ, ಎಣ್ಣೆಯೇ ದುಗ್ಗಳೆ ಆಗಿದ್ದಳು. 

ಇಂದಿಗೆಂತೆಂದು ನಾಳೆಗೆಂತೆಂದು

ಚಿಂತಿಸಲೇಕೆ

ತಂದಿಕ್ಕುವ ಶಿವಂಗೆ ಬಡತನವೇ ರಾಮನಾಥ

ಈ ದಂಪತಿಗಳು ನಾಳಿನ ಉಜ್ವಲ ಭವಿಷ್ಯ ಬಯಸಿ ಧನ ಕನಕ ವಸ್ತುಗಳನ್ನು ಸಂಗ್ರಹಿಸಿಟ್ಟವರಲ್ಲ. ಇಂದು ನಾಳೆಯ ಹೊಟ್ಟೆ ಬಟ್ಟೆ ಚಿಂತೆಯಾಗಿರಲಿ ಆತ್ಮದ ಹಸಿವಿರಲಿ ಅದನ್ನು ಪೂರೈಸುವ ದೇವರು ಇರುವಾಗ ಚಿಂತಿಸಲೇಕೆ? ಎಂಬ ಚಿಂತನೆ ವಚನದಲ್ಲಿ ವ್ಯಕ್ತವಾಗಿದೆ. 

ಬಂದುದನರಿದು ಬಳಸುವಳು

ಬಂದುದ ಪರಿಣಾಮಿಸುವಳು

ಬಂಧು ಬಳಗವ ಮರೆಸುವಳು

ದುಗ್ಗಳೆಯ ತಂದು ಬದುಕಿದೆನು ಕಾಣಾ ರಾಮನಾಥ

ಎಂದು ಮಡದಿಯನ್ನು ಹಾಡಿ ಹೊಗಳಿದ್ದಾರೆ ದಾಸಿಮಯ್ಯನವರು. ಬದುಕು ಎಂಬುದು ಸಂವಹನ ಸ್ವರೂಪಿ. ಹಾಗೆಯೇ ಸಾಹಿತ್ಯ ಕೂಡ.  ಸರಳ ಸುಂದರವಾದ ವಚನ ಪ್ರಾಕಾರಕ್ಕೆ ಅಡಿಪಾಯ ಹಾಕಿದ ದಾಸಿಮಯ್ಯ ಅರಿವಿನ ಸಿರಿಮನೆಯಾಗಿದ್ದರು.  ಜೀವ ಜಗತ್ತುಗಳ ಪರಿಕಲ್ಪನೆ, ಅಷ್ಟಾವರಣ, ಷಟ್‌ಸ್ಥಲಗಳ ವಿವೇಚನೆ, ಸತಿ ಪತಿಗಳ ಮಧುರ ಭಾವನೆ, ಸಮಾಜದ ವಿಡಂಬನೆ, ರೀತಿ ನೀತಿ, ಆಚಾರ ವಿಚಾರಗಳ ಪ್ರಖರತೆ, ಡಾಂಭಿಕತೆಯ ವಿರೋಧ, ಮೇಲು ಕೀಳುಗಳನ್ನು ಹೋಗಲಾಡಿಸುವಿಕೆ ಇವೇ ಮೊದಲಾದ ವಿಚಾರಧಾರೆಗಳ ಸುಮಾರು ೧೭೬ಕ್ಕೂ ಹೆಚ್ಚು ವಚನಗಳನ್ನು ರಚಿಸಿದ ಆದ್ಯ ವಚನಕಾರರು ದೇವರ ದಾಸಿಮಯ್ಯನವರು.

ಶರಧಿಯ ಮೇಲೆ ಧರೆಯ ಕರಗದಂತಿರಿಸಿದೆ

ಅಂಬರಕೆ ಗದ್ದುಗೆ ಬೋದುಗೆ ಇಲ್ಲದಂತಿರಿಸಿದೆ 

ಮರದೊಳಗೆ ಮಂದಾಗ್ನಿಯ ಉರಿಯದಂತಿರಿಸಿದೆ

ನೊರೆವಾಲೊಳಗೆ ತುಪ್ಪದ ಕಂಪಿಲ್ಲದಂತಿರಿಸಿದೆ

ಶರೀರದೊಳಗೆ ಆತ್ಮನ ಆರೂ ಕಾಣದಂತಿರಿಸಿದೆ 

ನೀ ಬೆರಸಿಹ ಬೆರಗಾದನಯ್ಯ ರಾಮನಾಥ

ಸೃಷ್ಟಿಕರ್ತ ಭಗವಂತನ ಲೀಲೆ ಇದಮಿತ್ಥಂ ಎಂದು ಹೇಳಲುಬಾರದು. ಸಾರ ಅಂಬರ ಗಿಡಮರ ಹಾಲು ಶರೀರಗಳಲ್ಲಿ ಊಹಿಸಲಾಗದಷ್ಟು ಅಚ್ಚರಿ ಕಂಡು ಬೆರಗಾಗಿದ್ದಾನೆ ದಾಸಿಮಯ್ಯ.  ದಾಸಿಮಯ್ಯನವರು ಸಗರ ನಾಡೆನಿಸಿಕೊಂಡಿರುವ ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಮುದನೂರಿನಲ್ಲಿ ಜನಿಸಿದರು.  ದೇವಾಂಗ ಜನಾಂಗದ ಮೂಲ ಪುರುಷನಾದ ದೇವಲನ ೭ನೇ ಅವತಾರವೆಂದೂ ಅವರು ವಿದ್ಯಾಧರ, ಪುಷ್ಪದಂತ, ಬೇತಾಲ, ವರರುಚಿ, ಚಿತ್ರಯೋಗಿ, ದೇವಶಾಲಿ, ದೇವದಾಸರೆಂದೂ ಈ ಸಪ್ತ ಅವತಾರ ಕುರಿತು ಬ್ರಹ್ಮಾಂಡ ಪುರಾಣದ ಶ್ಲೋಕ ಹೀಗಿದೆ.

 ವಿದ್ಯಾಧರೋ ದ್ರಾಪರಾದೌ ಮಧ್ಯೆಭೂತ್ ಪುಷ್ಪದಂತಕ:

ಅಂತೇವತಾರೋ ಬೇತಾಲ ಕಲೌವರರುಚಿ ಸ್ತಥಾ

ಚಿತ್ರಯೋಗಿ ದೇವಶಾಲೀ ದೇವದಾಸೋಭಿವಂ ಸಪ್ತ: 

ಮುದನೂರಿನಲ್ಲಿರುವ ರಾಮತೀರ್ಥ, ಲಕ್ಷ್ಮಣತೀರ್ಥ, ಸಕ್ಕರೆ ತೀರ್ಥ, ಮರಳು ತೀರ್ಥ, ಪಾಂಡವ ತೀರ್ಥ, ಹಾಲು ತೀರ್ಥ ಮತ್ತು ಸಂಗಮ ತೀರ್ಥಗಳು (ಪುಷ್ಕರಣಿ)  ದೇವಾಂಗನ ಸಪ್ತಾವತಾರಗಳು ಎನ್ನಲಾಗಿದೆ.  ಶಿಲಾಶಾಸನಗಳು ರಾಷ್ಟ್ರ ಕೂಟರ ಚಾಲುಕ್ಯರ ಕಲಚೂರಿಗಳ ಆಳ್ವಿಕೆಯ ಇತಿಹಾಸ ಹೇಳುತ್ತವೆ.  ಈ ದೊರೆಗಳ ಕಾಲದಲ್ಲಿ ಈ ಗ್ರಾಮವು ಅಗ್ರಹಾರವಾಗಿತ್ತು.  ದಾಸಿಮಯ್ಯನವರು ಬಾಲ್ಯ ಆಟ ಪಾಠ  ಶಿವಪೂಜೆ ಧ್ಯಾನದಲ್ಲಿ ಮುದನೂರಿನಲ್ಲಿ ಕಳೆದರು. ಮುದನೂರು ಸಮೀಪ ಶ್ರೀಶೈಲದಲ್ಲಿ ಶ್ರೀ ಚಂದ್ರಗುಂಡ ಶಿವಾಚಾರ್ಯರ ಗುರುಕುಲದಲ್ಲಿ ವಿದ್ಯೆ, ಸಂಸ್ಕಾರ ಪಡೆದು ಜ್ಞಾನವಂತರಾದರು.

ಘಟದೊಳಗೆ ತೋರುವ ಸೂರ್ಯನಂತೆ 

ಸರ್ವರಕ್ಕು ಶಿವನ ಚೈತನ್ಯವಿಪ್ಪುದು

ಇದ್ದರೇನು ಅದ ಕೊಡುವರೆ

ಗುರುವಿನಿಂದಲ್ಲದಾಗದು ಕಾಣಾ ರಾಮನಾಥ

ಎಂದು ದಾಸಿಮಯ್ಯನವರು ಗುರು ಕರುಣೆಯಿಂದ ತಮ್ಮಲ್ಲಾದ ಪರಿವರ್ತನೆಯನ್ನು ತಿಳಿಸಿದ್ದಾರೆ. ಬಸವಣ್ಣನವರು ದಾಸಿಮಯ್ಯನವರನ್ನು ತಮ್ಮ ವಚನಗಳಲ್ಲಿ ಸ್ಮರಿಸಿದ್ದಾರೆ.

ಭಕ್ತಿ ಎಂತಹದಯ್ಯ ದಾಸಯ್ಯ ಮಾಡಿದಂತಹದು

ಭಕ್ತಿ ಎಂತಹದಯ್ಯ ಸಿರಿಯಾಳ ಮಾಡಿದಂತಹದು

ಭಕ್ತಿ ಎಂತಹದಯ್ಯ ಸಿಂಧುಬಲ್ಲಾಳ ಮಾಡಿದಂತಹದು

ಭಕ್ತಿ ಎಂತಹದಯ್ಯ ಕೂಡಲ ಸಂಗಮದೇವ 

ನೀ ಬಾಣಾ ಬಾಗಿಲು ಕಾಯ್ದಂತಹದು.

ಭಕ್ತಿಯ ಮಹತ್ವವನ್ನು ದಾಸಿಮಯ್ಯ ಮೊದಲಾದ ವ್ಯಕ್ತಿಗಳ ಉಲ್ಲೇಖದೊಂದಿಗೆ ಭಕ್ತಿಯ ವೈಶಿಷ್ಟ್ಯವನ್ನು ಅರಿತ ಮಹಾನುಭಾವಿ ಎಂದು ಸ್ತುತಿಗೆ ಒಳಪಡಿಸಿದ್ದಾರೆ. ದಾಸಿಮಯ್ಯ ತವನಿಧಿಯನ್ನು ಪಡೆದ ವಿಚಾರವನ್ನು ಬಸವಣ್ಣನವರು ತಮ್ಮ ವಚನವೊಂದರಲ್ಲಿ ಪ್ರಸ್ತಾಪಿಸಿದ್ದಾರೆ. 

ಮುನ್ನಿನವರು ಹೋದ ದಾರಿ ಭಯ ಕಾಣಿರಣ್ಣ

ಬಲ್ಲಾಳನ ವಧುವಿನೊಡನೆ ಸರಸವಾಡಿದಂದಿಂದ ಭಯ ಕಾಣಿರಣ್ಣ 

ಸಿರಿಯಾಳನ ಮಗನ ಬೇಡಿದಂದಿಂದ  ಭಯ ಕಾಣಿರಣ್ಣ

ದಾಸನ ವಸ್ತ್ರ ವ ಸೀಳಿದಂದಿದ ಭಯ ಕಾಣಿರಣ್ಣ

ಅಘಟಿತ ಘಟಿತರು ವಿಪರೀತ ಚರಿತರು

ಕೂಡಲಸಂಗಮ ಶರಣರು ನಡೆದ ದಾರಿ ಭಯ ಕಾಣಿರಣ್ಣ 

ತವನಿಧಿ ಎಂದರೆ ಅಕ್ಷಯ ಪಾತ್ರೆ. ಅದರಿಂದ ಬೇಕಾದಷ್ಟು ದವಸ ಧಾನ್ಯ ದೊರಕುತ್ತಿತ್ತು. ತವನಿಧಿಯಿಂದ ದಾಸೋಹ ಕಾರ್ಯ ಸಾಂಗವಾಗಿ ಸಾಗುತ್ತದೆ. ದಾಸಿಮಯ್ಯ ತವನಿಧಿಯನ್ನು ಶಿವನಿಂದ ಪಡೆದ ಬಗ್ಗೆಯೂ  ಕಥೆಯಿದೆ. ಒಮ್ಮೆ ದಾಸಿಮಯ್ಯ ಸುಂದರವಾದ ವಸ್ತ್ರ ವನ್ನು ನೇಯ್ದು ಮಾರಾಟ ಮಾಡಲು ಸಂತೆಗೆ ಹೋಗುತ್ತಾನೆ. ಸಂಜೆಯಾದರೂ ವ್ಯಾಪಾರವಾಗಲಿಲ್ಲ. ಆಗ ಶಿವನೇ ಜಂಗಮ ರೂಪಿಯಾಗಿ ಬಂದು ವಸ್ತ್ರ ವನ್ನು ಕೊಂಡು ದಾಸಿಮಯ್ಯನ ಎದುರಿನಲ್ಲೇ ಹರಿದು ಹಾಕಿದರೂ ದಾಸಿಮಯ್ಯ ಯಾವುದೇ  ಪ್ರತಿಕ್ರಿಯೆ ನೀಡದೆ ನಿಶ್ಚಲನಾಗಿ ನಿಂತಿದ್ದನಂತೆ. ಆಗ  ಶಿವನು   ದಾಸಿಮಯ್ಯ ಧರೆಯಲ್ಲಿ ನಿನ್ನಿಂದಾಗಬೇಕಾದ ಲೋಕ ಕಲ್ಯಾಣ ಕಾರ್ಯಗಳು ಬಹಳಷ್ಟಿದೆ. ಕರ್ತವ್ಯ ಪೂರ್ಣಗೊಳ್ಳುತ್ತಿರುವಂತೆಯೇ ನಿನ್ನ ಅವತಾರ ಸಮಾಪ್ತಿಯಾಗುತ್ತದೆ. ಇದು ತವನಿಧಿ. ಇದರಲ್ಲಿ ದವಸದಾನ್ಯಗಳು ಬತ್ತುವುದಿಲ್ಲ. ನೀನು ಬಯಸುವ ಪದಾರ್ಥವನ್ನು ತುಂಬಿ ಕೊಡುತ್ತದೆ. ಇದನ್ನು  ಸಾಧು ಸಂತರ ದಾಸೋಹಕ್ಕೂ ಸತ್ಕಾರ್ಯಕ್ಕೂ ಉಪಯೋಗಿಸು.

ದಾಸಿದೇವ ತನ್ನ ವಸ್ತ್ರ ವನ್ನಿತ್ತು ತವನಿಧಿ ಪ್ರಸಾದವ ಪಡೆದ

ಸಿರಿಯಾಳ ತನ್ನ ಮಗನನ್ನಿತ್ತು ಪ್ರಾಣಪ್ರಸಾದವ ಪಡೆದ

ಬಲ್ಲಾಳದೇವ ತನ್ನ ವಧುವನ್ನಿತ್ತು ಸಮತೆ ಪ್ರಸಾದವ ಪಡೆದ

ಇವರೆಲ್ಲರೂ ತಮತಮಗೆ ಮಾಡಿ ಪಡೆದರು ಸಮ್ಯಕ್ ಪದವಿಯನ್ನು

ನಾನೇನನೂ ಅರಿಯದ ಭಕ್ತಿಯ ಬಡವನಂತೆ

ಕರುಣಿಸು ಕೂಡಲ ಸಂಗಮ ದೇವ

ಶಿವನು ಶರಣನಾಗಿ ಬಂದು ಬೇಡುವೆನು ಎಂಬ ನಂಬುಗೆ ಅಂದಿನ ಸಮಾಜದಲ್ಲಿ ದಟ್ಟವಾಗಿತ್ತು. ಶರಣರಿಗೆ ಇತ್ತರೆ ಅದು ಶಿವನಿಗೆ ಇತ್ತ ಪರಿಕಲ್ಪನೆ ಧರ್ಮದ ಹಿರಿಮೆ. ದಾಸಿಮಯ್ಯನು ಶರಣರ ರೂಪಿನಿಂದ ಬಂದ ಶಿವನಿಗೆ ವಸ್ತ್ರ ದಾನ ಮಾಡಿದ ಕಥೆಯು ಬಸವಣ್ಣನವರ ಕಾಲದಲ್ಲಿ ಮಹತ್ವ ಪಡೆದು ಮನೆ ಮಾತಾಗಿತ್ತು.

ಇಳೆ ನಿಮ್ಮ ದಾನ ಬೆಳೆ ನಿಮ್ಮದಾನ 

ಸುಳಿಯ ಬೀಸುವ ವಾಯು ನಿಮ್ಮದಾನ 

ನಿಮ್ಮ ದಾನವನುಂಡು ಅನ್ಯರ ಹೊಗಳುವ 

ಕುನ್ನಿಗಳನೇನೆಂಬೆ ರಾಮನಾಥ

ದಾಸಿಮಯ್ಯ ಆದ್ಯ ವಚನಕಾರ. ಬಸವಾದಿ ಶರಣರಿಗೆ ಸ್ಪೂರ್ತಿದಾಯಕ. ದಾಸಿಮಯ್ಯನ ಬಗ್ಗೆ ಪ್ರಸ್ತಾಪ ಮಾಡಿದವರಲ್ಲಿ ಬಸವಣ್ಣನವರು ಮೊದಲಿಗರು.

 ಭಕ್ತಿಯಿಲ್ಲದ ಬಡವ ನಾನಯ್ಯ ಎಂದು ಹೇಳಿ ದಾಸಿಮಯ್ಯನ ಮನೆಯಲ್ಲೂ ಬೇಡಿದೆ ಎಲ್ಲಾ ಪುರಾತನರು ನೆರೆದು ಭಕ್ತಿಯ ಭಿಕ್ಷವನಿಕ್ಕಿದರೆ ಎನ್ನ ಪಾತ್ರೆ ತುಂಬಿತು ಎನ್ನುತ್ತಾರೆ ಭಕ್ತಿ ಭಂಡಾರಿ ಬಸವಣ್ಣನವರು. 

ಮನೆಯಲ್ಲಿ ಅಟ್ಟನೆಂದಡೆ ಹೊಟ್ಟೆ ತುಂಬಿದುದುಂಟೆ

ಕೈಮುಟ್ಟಿ ಉಣ್ಣದನ್ನಕ್ಕ

ತಾನು ವಚನಾಗಮನ ಪ್ರಸಂಗವ ಬಲ್ಲನೆಂಬಡೆ ಬಲ್ಲವರಾರೂ

ಇಲ್ಲವೆಂದೆಡೆ ಆತ ತನ್ನ ನುಡಿಗೆ ಸಿಲುಕವನೇ

ಇಲ್ಲ ಕಾಣಾ ರಾಮನಾಥ

ವಚನ ಎಂದರೆ ಮಾತು. ಬಸವಣ್ಣರ ಕಾಲದಲ್ಲಿ ವಚನ ಸಾಹಿತ್ಯ ವಿಪುಲವಾಗಿ ಬೆಳೆಯಿತು. ದಾಸಿಮಯ್ಯ ವಚನಕ್ಕೆ ತಳಹದಿ ಹಾಕಿದರು. ವಚನದ ಹಿರಿಮೆಯನ್ನು ದಾಸಿಮಯ್ಯ ಸೋದಾಹರಣವಾಗಿ ಮನ ಮುಟ್ಟುವಂತೆ ಹೇಳಿದ್ದಾರೆ. ಮನೆಯಲ್ಲಿ ಅಡುಗೆ ನಾನೇ ಮಾಡಿದ್ದರೂ ಆ ಅಡುಗೆಯನ್ನು ನನ್ನ ಕೈಗಳನ್ನು ಬಳಸಿ ಉಣ್ಣದೆಹೋದರೆ ಹೊಟ್ಟೆ ತುಂಬುವುದೇ? ಹಾಗೆಯೇ ವಚನದ ಮಹಾ ರಾಶಿಯೇ ಇರಬಹುದು. ಅದನ್ನು ಬಲ್ಲ ಅನುಭಾವಿಗಳಾರೂ ಜೊತೆ ಇಲ್ಲವೆಂದರೆ ವಚನಕಾರ ಆತ್ಮವಿಮರ್ಶೆಗೆ ಒಳಗಾಗನು. 

ಅನುಭವವಿಲ್ಲದೇ ಈ ತನು ಎಳೆತಟವಾದುದಯ್ಯ

ಅನುಭಾವೀ ತನುವಿಗಾಧಾರ

ಅನುಭಾವದ ಅನುಭಾವವನು ಮನಸಾರೆ ವೇದಿಸುವವರಿಗೆ

ಜನನವಿಲ್ಲ ಕಾಣ ರಾಮನಾಥ

ಅನುಭಾವ ಹೇಗೆ ಭಕ್ತಿಗೆ ಆಧಾರವೋ ಹಾಗೆಯೇ ಈ ತನುವಿಗೂ ಆಧಾರ. ಅನುಭಾವಿಗಳೊಡನೆ ತತ್ವಾನುಭವ ಚಿಂತನೆಯಾಗಬೇಕು. ಆತ್ನಾನುಭವ ಚಿಂತನೆಯಿಂದ ಪರಮಾತ್ಮನ ಸನ್ನಿಧಿ ಲಭ್ಯ. ಅನುಭಾವವಿಲ್ಲದೆ ಈ ತನು ಎಳೆತಟವಾದುದಯ್ಯ ಎಂದು ಎಚ್ಚರಿಸಿದ್ದಾರೆ ದಾಸಿಮಯ್ಯನವರು.


ಗೊರೂರು ಅನಂತರಾಜು, ಹಾಸನ,

ಮೊ:೯೪೪೯೪೬೨೮೭೯

ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.

- Advertisement -
- Advertisement -

Latest News

ರೈತ ಆತ್ಮಹತ್ಯೆ ; ಶಾಸಕರ ಸಾಂತ್ವನ

ಸಿಂದಗಿ; ಸಾಲದ ಬಾಧೆಗೆ ಆತ್ಮಹತ್ಯೆ ಪರಿವಾರವಲ್ಲ. ಕಾಲದ ವೈಪರೀತ್ಯದಿಂದ ಮಳೆಯಾಗದೇ ಇಂತಹ ದುಸ್ತರ ಪರಿಸ್ಥಿತಿ ಬಂದೊದಗಿದ್ದು ರೈತರ ಕಷ್ಟಗಳಿಗೆ ಸರಕಾರ ಸ್ಪಂದಿಸುತ್ತದೆ ಅಲ್ಲದೆ ನಿಮ್ಮ ಕಷ್ಟಕ್ಕೆ...
- Advertisement -

More Articles Like This

- Advertisement -
close
error: Content is protected !!
Join WhatsApp Group