ನೋಡು ನಿಂಗಿ ನಿನಗ ಅಪ್ಪ ಇಲ್ಲ ನನಗ ಗಂಡ ಇಲ್ಲ ಒಂದ್ ಸಲಾ ಗೌಡ್ರ ಮಾತಿಗಿ ಹ್ಞು ಅಂದ್ ನೋಡು ಕೈ ತುಂಬಾ ರೊಕ್ಕ ಮೈ ತುಂಬಾ ಬಂಗಾರ ರಾಣಿ ರಾಣಿ ಇದ್ದಂಗ ಇರ್ತಿ ಅಂದಳು ಶಾರವ್ವ ಅದು ಏನರೇ ಇರವಲ್ತು ನಾ ಎನ್ ವಲ್ಲೆವಾ…. ಬೇಕಿದ್ರ ನಾಕ್ ಮನಿ ಕಸಾ ಮುಸ್ರೀ ಮಾಡಿ ಆದ್ರೂ ಹೊಟ್ಟಿ ತುಂಬಕೋತೆನಿ ಇಷ್ಟಕ್ಕೂ ಹುಟ್ಟಿಸಿದ್ ದೇವ್ರೇನ ಹುಲ್ ಮೇಸಾಂಗಿಲ್ಲ ಅಂದಳು ನಿಂಗವ್ವ…
ಇವತ್ ಸಂಜಿ ಮುಂದ್ ತ್ವಾಟದಾಗ ಹುಣಚಿ ಗಿಡದ್ ಕೆಳಗ
ಹೊಸಾ ಜಮಖಾನ ಹಾಸು ಬೆಳದಿಂಗಳ ಚೆಂದ್ ಇರತೈತಿ ಅಂದಾರ್ ಗೌಡ್ರು ಅಂತ ಸಿದ್ಯಾ ತನ್ನ ಹೆಂಡತಿ ಮಲ್ಲವ್ವಳಿಗೆ ಹೇಳುತ್ತಿದ್ದಂತೆಯೆ ಸುಮ್ ಅವ್ವ ಅಪ್ಪಾ ಇಲ್ಲದ ಪರದೇಶಿ ಅದಿನಿ ಅದಕ್ ನಾ ಅಂತ ಎಲ್ಲಾ ಸಯಿಸಕೊಂಡೆನಿ ಬ್ಯಾರೆ ಯಾರರೇ ಇದ್ರ ಇಷ್ಟೊತ್ತಿಗೆ ಅದ ಹುಣಚಿ ಗಿಡಕ್ ಉರಲ್ ಹಾಕೋತಿದ್ರು ಅಂದ ಮಲ್ಲವ್ವನ ಮಾತು ಕೇಳಿ ಖಿಲ್ಲನೆ ನಕ್ಕ ಅವಳ ಗಂಡ ಸಿದ್ಯಾ ಏ ಹುಚ್ ಮಲ್ಲಿ ನಿನ್ನ ಮೊದಲನೆ ಗಂಡ ಚಂದ್ಯಾನ ನುಂಗಿ ನೀರ್ ಕುಡದು ತಂಡಿ ತಡಿಯಾಕ್ ಆಗಲಾರ್ದ ತಿಂಡಿಲೇ ನನ್ನ ಎರಡನೆ ಮದ್ವಿ ಆಗಿದಿ ಈಗ ಗೌಡ್ರಿಗಿ ಬ್ಯಾಡ ಅಂದ್ರ ನಡು ಕಿನಾಲ್ ಹಾದಿರು ಎರಡೆಕರೆ ಹೊಲಾ ಎನ್ ಹಂಗ ಸಿಗ್ತೈತಿ ಎನ್ ಅಂದ..
ಇನ್ನೊಂದು ಕಡೆ ಧಾರವಾಡದಿಂದ ಬೆಂಗಳೂರಿಗೆ ಹೊರಟ ಇಂಟರ್ ಸಿಟಿ ಟ್ರೈನಿನಲ್ಲಿ ಪಕ್ಕದ ಸೀಟಿನಲ್ಲಿ ಕುಂತಿದ್ದ ಮಧ್ಯ ವಯಸ್ಕ ಹೆಣ್ಣುಮಗಳೊಬ್ಬಳು ಕಿಡಕಿಯಿಂದಾಚೆಗೆ ಮತ್ತೆ ಮತ್ತೆ ನೋಡಿದಂತೆ ಮಾಡುವಾಗಲೇ ಪಕ್ಕದಲ್ಲಿ ಕುಳಿತಿದ್ದ ಹುಡುಗನೊಬ್ಬ ಮೊಬೈಲ್ ಅನಲಾಕ್ ಮಾಡಿ ಡಯಲ್ ಪ್ಯಾಡ್ ತೆಗೆದು ಅವಳತ್ತ ನೋಡುತ್ತಿದ್ದಂತೆಯೇ ಗಬಕ್ಕನೆ ಅವನ ಮೊಬೈಲ್ ತಗೊಂಡ ಆಕೆ ಅದರಲ್ಲಿ ತನ್ನ ನಂಬರ್ ಫೀಡ್ ಮಾಡಿದಳು.
ಹೀಗೆ ಹಣ ಮತ್ತು ಐಶಾರಾಮಿ ಬದುಕಿಗಾಗಿಯೋ ಅಥವಾ ಕಿಬ್ಬೊಟ್ಟೆಯ ಕೆಳಗಿನ ಎಂದಿಗೂ ತೀರದ ಹಸಿವಿನಿಂದಾಗಿಯೋ ಅದೆಷ್ಟೋ ಅಕ್ರಮ ಸಂಬಂಧಗಳು ಈಗೀಗ ಅಲ್ಲಲ್ಲಿ ಕಾಣಸಿಗುತ್ತವೆ.
ಇದೆಲ್ಲವನ್ನೂ ಮೀರಿದ ಮತ್ತೊಂದು ಲೋಕವೆಂದರೆ ಅದು ರೆಡ್ ಲೈಟ್ ಏರಿಯಾಗಳು.
ದೆಹಲಿಯ ಜಿಬಿ ರೋಡ್, ಅಲಹಾಬಾದಿನ ಮೀರ್ ಗಂಜ್, ಗೋವಾದ ಬೈನಾ ಬೀಚ್, ಪುಣೆಯ ಕಾಮಾಟಿಪುರ, ಕೋಲ್ಕತ್ತಾದ ಸೋನಾಗಾಚಿ, ವಾರಾಣಾಸಿಯ ಶಿವದಾಸಪುರ, ಗುವಾಹಟಿಯ ಮಸ್ತೀಪುರ ಸೇರಿದಂತೆ ಈಗೀಗ ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ ಧಾರವಾಡ, ದಾವಣಗೆರೆಯಂತಹ ದೊಡ್ಡ ಊರುಗಳು ಸೇರಿದಂತೆ ನಮ್ಮದೇ ಊರಿನ ಯಾವುದೋ ಗಲ್ಲಿಗಳಲ್ಲಿ ನಡೆಯುತ್ತಿರುವ ಮೈ ಮಾರಾಟದ ದಂಧೆ ಪ್ರತಿವರ್ಷವೂ ವಿವಿಧ ಮಗ್ಗಲುಗಳಲ್ಲಿ ತನ್ನ ಝಲಕ್ ತೋರಿಸುತ್ತಿದೆ.
ಹದಿಹರೆಯದ ಯುವತಿಯರು,ಮೈ ಕೈ ತುಂಬಿಕೊಳ್ಳುವ ವೇಳೆಗಾಗಲೇ ದುಡ್ಡೇ ದೊಡ್ಡಪ್ಪ ಅಂದುಕೊಂಡ ಕಾರಣಕ್ಕೋ, ಮನೆಯಲ್ಲಿ ಕಿತ್ತು ತಿನ್ನುವ ಬಡತನ ಮತ್ತು ಒಂದು ಹೊತ್ತಿನ ಕೂಳಿಗೂ ತತ್ವಾರವಿದೆ ಅನ್ನುವ ಕಾರಣಕ್ಕೋ ಅಥವಾ ನೋಡು ದುರ್ಪಿ ನಿಮ್ಮ ಆಯಿ, ಅವ್ವ ಮತ್ತು ಅಕ್ಕ ಇದನ್ನ ಮಾಡಕೊಂಡ ಬಂದಾರು ಭಾಳ ಕಷ್ಟದಾಗ ನಿನ್ನ ಗಿಣಿ ಸಾಕಿದಂಗ ಸಾಕಿ ಬೆಳಸ್ಯಾರು… ಇದು ನಿಮ್ ಕುಲಕಸಬ ಐತಿ.. ಇಷ್ಟಕ್ಕೂ ಬರವರೆಲ್ಲ ದೇವಿ ಭಕ್ತರ ಅದಾರು ಅವರ ಮನಸ ನೋಯಿಸಿದ್ರ ದೇವ್ರ ನಿಮಗ ಒಳ್ಳೇದ್ ಮಾಡತಾನ್ ಏನು?? ಅಂತ ತಲೆ ತುಂಬಿದ್ದಕ್ಕೋ ಹುಟ್ಟಿಕೊಳ್ಳುತ್ತಿರುವ ಮೈ ಮಾರುವ ದಂಧೆ ಹೆಣ್ಣು ಮಕ್ಕಳನ್ನು ಅಕ್ಷರಶಃ ನರಕದ ಕೂಪಕ್ಕೆ ತಳ್ಳುತ್ತಿದೆ.
ಮಹಾರಾಷ್ಟ್ರದ ಮುಂಬಯಿ, ಪೂನಾ, ಸಾಂಗ್ಲಿ, ಮೀರಜ್ ಅನ್ನುವದರಿಂದ ಹಿಡಿದು ಕರ್ನಾಟಕದ ರಬಕವಿ, ಬನಹಟ್ಟಿ, ಚಿಮ್ಮಡ ಸೇರಿದಂತೆ ಹಲವು ಊರುಗಳಿಗೆ ಕ್ಷಣಿಕ ಸುಖದ ಬೆನ್ನು ಹತ್ತಿ ಅಲೆದು ಹೋಗುತ್ತಿದ್ದ ವಿಟಪುರುಷರ ಸಂಖ್ಯೆ ಈಗ ಕಡಿಮೆಯಾಗಿದೆ ಆದರೂ ಮೈ ಮಾರಾಟದ ದಂಧೆ ಸೇರಿದಂತೆ ಅಕ್ರಮ ಸಂಬಂಧಗಳು ಮಾತ್ರ ತಾರಕಕ್ಕೆ ಏರಿ ಕುಣಿಯುತ್ತಿವೆ.
ಮೂರು ಮಕ್ಕಳಿದ್ದ ಹೆಣ್ಣು ಮಗಳೊಬ್ಬಳು ಪಕ್ಕದ ಮನೆಯ ಅನ್ಯಕೋಮಿನ ಯುವಕನ ಜೊತೆಗೆ ಓಡಿ ಹೋದದ್ದು, ಮದುವೆಯಾಗಿ ನಡೆಯಲು ಬಂದ ಹೆಣ್ಣುಮಗಳೊಬ್ಬಳು ಮೂರು ತಿಂಗಳಲ್ಲೆ ಮಿಂಡನ ಜೊತೆಗೆ ಇದ್ದಾಗ ಸಿಕ್ಕಿ ಬಿದ್ದದ್ದು ಮತ್ತು ಗಂಡ ಸತ್ತ ವಿಧವೆಯೊಬ್ಬಳು ಪರಪುರುಷನ ತೆಕ್ಕೆಗೆ ಬಿದ್ದು ಎದ್ದದ್ದು ಸೇರಿದಂತೆ ಹೈಟೆಕ್ ಆಗಿ ನಡೆಯುತ್ತಿರುವ ಕಾಲ್ ಗರ್ಲ್ ಸೇವೆ,ಪಿಕ್ ಯಾಂಡ್ ಡ್ರಾಪ್, ಫನ್ ಯಾಂಡ್ ಜಾಯ್ ಅಷ್ಟೇ ಅಲ್ಲದೆ ಲಾಡ್ಜ್ ಗಳಲ್ಲಿ ತಪಾಸಣೆ ನಡೆಸುವದು ವ್ಯಕ್ತಿಗಳ ಖಾಸಗಿತನಕ್ಕೆ ಧಕ್ಕೆ ತರುತ್ತದೆ ಅನ್ನುವ ಕಾರಣವಿಟ್ಟುಕೊಂಡು ಬಂದ ತೀರ್ಪೊಂದರ ಪರಿಣಾಮವಾಗಿ ಈಗೀಗ ಹೇಳುವವರು ಕೇಳುವವರು ಯಾರೂ ಇಲ್ಲದಂತಾಗಿ ಎಲ್ಲವೂ ಬಹಿರಂಗವಾಗಿಯೇ ನಡೆಯುತ್ತಿದೆ.
ಧರ್ಮ, ಸಂಸ್ಕೃತಿ ಸಂಸ್ಕಾರ, ಪದ್ಧತಿ, ನೀತಿ, ನಿಯಮ ಮತ್ತು ಕೆಲವು ಫತ್ವಾಗಳ ತನಕ ಎಲ್ಲವನ್ನೂ ಗಾಳಿಗೆ ತೂರಿ ಸ್ವಚ್ಛಂದವಾಗಿ ಸ್ವೇಚ್ಚೆಯ ಬದುಕು ನಡೆಸಲು ಹವಣಿಸುತ್ತಿರುವ ಎಷ್ಟೋ ಯುವಕ ಯುವತಿಯರ ಬದುಕು ಅದಾಗಲೇ ಸೂತ್ರ ಹರಿದ ಗಾಳಿಪಟವಾಗಿದೆ.
ಆರಂಭದಲ್ಲಿ ಗಿರಾಕಿಗಳಿಂದ ಬಹಳ ಬೇಡಿಕೆ ಇದ್ದ ಹೆಂಗಸೊಬ್ಬಳು ಕೆಲವು ವರ್ಷಗಳಲ್ಲೇ ತನ್ನ ಮೈ ಆಕಾರ ಮತ್ತು ದೇಹದ ಕಸುವು ಕಳೆದುಕೊಂಡು ವಾಸಿಯಾಗದ ಕಾಯಿಲೆಗಳ ಗೂಡಾಗಿದ್ದು, ತಾನು ಮಾಡದ ತಪ್ಪಿಗೆ ಗಂಡನಿಗೆ ಅಂಟಿದ ಎಚ್ ಐ ವಿಯಿಂದ ತಾನೂ ಕೂಡ ಬಾಧಿತವಾಗಿ ಸಮಾಜದಲ್ಲಿ ಮರ್ಯಾದೆಗೆ ಹೆದರಿ ಹೆಂಗಸೊಬ್ಬಳು ಆತ್ಮಹತ್ಯೆ ಮಾಡಿಕೊಂಡದ್ದು ,ಇಬ್ಬರಲ್ಲಿ ಯಾರೋ ಮಾಡಿದ ತಪ್ಪಿಗೆ ಅಪ್ಪ ಅಮ್ಮನಿಗೆ ಹರಡಿದ ಎಚ್ ಐ ವಿ ಅವರನ್ನು ಬಲಿ ಪಡೆದಾಗ ಮಕ್ಕಳು ಅನಾಥವಾದಂತಹ ಎಷ್ಟೋ ಹೃದಯ ವಿದ್ರಾವಕ ಕಥೆಗಳು ಸ್ವಲ್ಪ ಕಾಳಜಿಯಿಂದ ಹುಡುಕಿ ನೋಡಿದರೆ ನಮ್ಮ ಸುತ್ತ ಮುತ್ತಲೇ ಹತ್ತಾರು ಸಿಗಬಹುದು.
ಅದರಲ್ಲೂ ಮೊಬೈಲ್ ಮತ್ತು ಇಂಟರನೆಟ್ ಡಾಟಾ ಫ್ರೀ, ಅನಲಿಮಿಟೆಡ್ ಅಂತಹ ಆಫರ್ ಗಳು ಬಂದ ಮೇಲಂತೂ ಸಾಮಾಜಿಕ ಜಾಲತಾಣಗಳ ಮೂಲಕವೂ ಚಾಟಿಂಗ್ ಮತ್ತು ಡೇಟಿಂಗ್ ಫೇಮಸ್ ಆಗುತ್ತಿದ್ದು ಸ್ಟಿಲ್ ಆಯ್ ಯಾಮ್ ಸಿಂಗಲ್ ಅಂತ ಸುಳ್ಳು ಹೇಳುವ ಅದೆಷ್ಟೋ ಅಂಕಲ್ ಮತ್ತು ಆಂಟಿಗಳು ಕೂಡ ಸಮಯ ಸಿಕ್ಕಾಗೆಲ್ಲ ಮತ್ತೊಬ್ಬರೊಂದಿಗೆ ಮಿಂಗಲ್ ಆಗಲು ಹವಣಿಸುತ್ತಿರುವದು ನೋಡಿದರೆ ನಾವೆಲ್ಲ ಎತ್ತ ಸಾಗುತ್ತಿದ್ದೇವೆ ಅಂತ ನಾವು ನೀವೆಲ್ಲ ಒಮ್ಮೆಯಾದರೂ ಯೋಚಿಸಲೇ ಬೇಕು.
ಇದು ಸಾಲದು ಅನ್ನುವಂತೆ ಹಸು ಕಂದಮ್ಮಗಳನ್ನು, ಒಂಟಿ ಮಹಿಳೆಯರನ್ನೂ ಅವರ ವಯಸ್ಸನ್ನೂ ಲೆಕ್ಕಿಸದೇ ಅತ್ಯಾಚಾರ ಎಸಗುವ, ಸಾಮೂಹಿಕ ಅತ್ಯಾಚಾರದಂತಹ ಹೇಯ ಕೃತ್ಯ ನಡೆಸುವ, ಕಾಮ ಪಿಪಾಸುಗಳ ಆರ್ಭಟವೂ ಅಲ್ಲಲ್ಲಿ ಕೇಳ ಆಗಾಗ ಸಿಗುತ್ತಿರುವದು ನಮ್ಮ ಭವ್ಯ ಭಾರತದಲ್ಲಿಯೇ ಅನ್ನುವದು ವಿಪರ್ಯಾಸವೇ ಸರಿ.
ಒಬ್ಬರ ಮೇಲೆ ಪ್ರೀತಿ ಅಥವಾ ಮಮಕಾರ ಹುಟ್ಟುವದು ತಪ್ಪಲ್ಲ ಆದರೆ ಅದರ ಕೊನೆ ಎನ್ನುವದು ಕಾಮವಾಗಿ ಹೊರಬಿದ್ದಾಗ ನಮ್ಮನ್ನು ನಂಬಿದವರಿಗೆ ಆಗುವ ಮಾನಸಿಕ ಆಘಾತ ಹಾಗೂ ಅದರಿಂದ ಬಿರುಕು ಬಿಡುವ ಸಂಬಂಧಗಳು ಅವರ ಬದುಕಿನಲ್ಲಿ ಎಂದಿಗೂ ಮಾಯದ ಗಾಯಗಳಷ್ಟೇ.
ಮಸಾಜ್ ಸೆಂಟರ್, ಬ್ಯೂಟಿ ಪಾರ್ಲರ್, ಪಬ್ ಮತ್ತು ನೈಟ್ ಕ್ಲಬ್ ಅಷ್ಟೇ ಯಾಕೆ ಲಾಡ್ಜ್ ಯಾಂಡ್ ರೆಸ್ಟೋರೆಂಟ್ ಸೇರಿದಂತೆ ಹೈವೆಗಳ ಪಕ್ಕದ ಗಿಡಮರಗಳ ಪೊದೆಗಳಲ್ಲಿ ಮತ್ತು ಯಾವುದೋ ಪಾರ್ಕಿನ ಬೆಂಚುಗಳಲ್ಲಿ ಕಾಣಸಿಗುವ ಅದೆಷ್ಟೋ ಮೈ ಮಾರುವ ದಂಧೆಗೆ ಇಳಿದ ಹೆಣ್ಣುಮಕ್ಕಳು ಕೂಡ ಯಾರದೋ ತಾಯಿ,ತಂಗಿ,ಅಕ್ಕ ಅಥವಾ ಮಡದಿ ಆಗಿರುತ್ತಾಳೆ ಅನ್ನುವದನ್ನ ಗಮನಿಸಲೇಬೇಕು. ಏಳನೆಯ ತರಗತಿಯಿಂದ ಹಿಡಿದು ಹತ್ತನೆ ತರಗತಿ ಕಲಿಯುವಷ್ಟರಲ್ಲಿ ಬಯಾಲಜಿ ಟೀಚರ್ ಗಳು ಸ್ಕಿಪ್ ಮಾಡುತ್ತಿದ್ದ ಪಾಠವನ್ನೋ, ಕಾಡತಾವ ನೆನಪು, ರತಿ-ಸುಖ, ರತಿ-ಮನ್ಮಥ, ಗಂಡ ಹೆಂಡತಿ ಅಂತಹ ಕೆಲವು ಆಶ್ಲೀಲ ಚಿತ್ರಗಳೊಂದಿಗೆ ವರ್ಣರಂಜಿತ ಹಾದರದ ಕಥೆಗಳನ್ನು ಹೊತ್ತು ಪ್ರಕಟವಾಗುತ್ತಿದ್ದ ಪುಸ್ತಕಗಳನ್ನು ಕದ್ದು ಓದುತ್ತಿದ್ದ ತೊಂಭತ್ತರ ದಶಕದ ದಿನಗಳಿಗಿಂತ ಈಗ ನಾವೆಲ್ಲ ಅದೆನೋ ಸಾಧಿಸಿಬಿಟ್ಟಿದ್ದೇವೆ ಅನ್ನುವಷ್ಟು ನಾವು ಹಾಳಾಗುವ ಪರಮಾವಧಿ ಹೆಚ್ಚುತ್ತಿದ್ದು ಮೊಬೈಲಿನ ಡಿಸ್ಪ್ಲೇಯನ್ನು ಪಕ್ಕದಲ್ಲಿ ಕುಳಿತವರಿಗೂ ಕಾಣಿಸದಂತೆ ಹೈಡ್ ಮಾಡುವ ಮತ್ತು ಅದರ ಮಾಲೀಕರಿಗಷ್ಟೇ ಡಿಸ್ಪ್ಲೇ ತೋರಿಸುವ ಸ್ಪೆಕ್ಟ್ ಹಾಗೂ ಅವರಿಗಷ್ಟೇ ಕೇಳಿಸುವಂತೆ ಧರಿಸಬಹುದಾದ ಇಯರ್ ಬಡ್ ಗಳ ತನಕ ಟೆಕ್ನಾಲಜಿ ಅನ್ನುವದು ಬೆಳೆದು ನಿಂತಷ್ಟೂ ನಾವು ಅಪಾಯದ ಅಂಚಿನಲ್ಲಿ ಬದುಕುತ್ತಿದ್ದೇವೆ ಅನ್ನುವ ಅರಿವು ಎಲ್ಲರಿಗೂ ಬರಲಿ.
ಇದೆಲ್ಲದರ ಪರಿಣಾಮವಾಗಿ ಎಂಟನೆಯ ತರಗತಿಯ ವಿದ್ಯಾರ್ಥಿನಿ ಒಬ್ಬಳು ಕ್ಲಾಸ್ ಮೇಟ್ ಒಬ್ಬನಿಂದ ಗರ್ಭವತಿ ಆಗಿದ್ದು, ಟೀಚರ್ ಒಬ್ಬರು ಸ್ಟೂಡೆಂಟ್ ಒಬ್ಬನಿಂದ ತಮ್ಮ ಕಾಮದ ತೃಷೆ ತೀರಿಸಿ ಕೊಂಡದ್ದು ಸೇರಿದಂತೆ ಏಕತಾನತೆ ಕಳೆಯಲು ವಿಧವೆ ಯೊಬ್ಬಳು ಆನ್ ಲೈನಿನಲ್ಲಿ ಆರ್ಡರ್ ಹಾಕಿದ ವೈಬ್ರೇಟರ್ ತನಕ ಎಲ್ಲವೂ ಮಾನ ಮಾರ್ಯಾದೆ ಅನ್ನುವದನ್ನೇ ಮೂರು ಕಾಸಿಗೆ ಹರಾಜಿಗಿಟ್ಟು ಬಹಿರಂಗವಾಗಿಯೇ ಗುಟ್ಟುಗಳು ರಟ್ಟಾಗುವ ಕಾಲವಿದು ಅನ್ನುವದು ನೆನಪಿರಲಿ
ಇದನ್ನೆಲ್ಲ ಹೇಳುತ್ತಿರುವದು ಅವುಗಳ ಪ್ರಚಾರಕ್ಕಾಗಿಯೋ ಅಥವಾ ಈ ಬರಹ ನಿಮ್ಮನ್ನು ಸತಾಯಿಸಲಿ ಒಂದಷ್ಟು ಮೆಚ್ಚುಗೆಯನ್ನೋ, ಆಕ್ರೋಶವನ್ನೋ ಹೊರಹಾಕಿಸಲಿ ಇಲ್ಲವೇ ಮಡಿವಂತರ ಮನಸ್ಸು ನೋಯಿಸಲಿ ಅಂತ ಖಂಡಿತ ಅಲ್ಲ.
ನಮ್ಮ ನಿಮ್ಮ ಮನೆಯ ಅಥವಾ ಅಕ್ಕ ಪಕ್ಕದ ಮನೆಯ ಹೆಣ್ಣುಮಕ್ಕಳು, ಗಂಡು ಮಕ್ಕಳು ಹೀಗೆ ಕಾಮದ ಪಿತ್ತವನ್ನ ನೆತ್ತಿಗೆ ಏರಿಸಿಕೊಂಡು ಹಾಳಾಗದಿರಲಿ ಅನ್ನುವ ಕಾರಣಕ್ಕಾಗಿ .
ವಾಟ್ಸಪ್ ಓನ್ಲಿ, ಪ್ರಿ ಪೇಡ್ ಸರ್ವಿಸ್, ಪೇಡ್ ವಿಡಿಯೋ ಕ್ಯಾಮ್ ಮತ್ತು ಬಾಡಿ ಶೋ ಸೇರಿದಂತೆ ಹತ್ತು ಹಲವು ಯಾಪ್ ಗಳು ಕೂಡ ಇತ್ತೀಚೆಗೆ ನಮ್ಮ ದೇಶದ ಭಾವಿ ಪ್ರಜೆಗಳ ಹಾದಿ ತಪ್ಪಿಸುತ್ತಿದ್ದು ಹಾಲಿವುಡ್ ಬಾಲಿವುಡ್ ಕಾಲಿವುಡ್ ಅಂತ ತರಹೇವಾರಿ ಹೆಸರಿಟ್ಟುಕೊಂಡು ಎಕ್ಸಪೋಸ್ ಮೋರ್ ಅನ್ನುವ ಡೈರೆಕ್ಟರ್ ಮತ್ತು ಪ್ರೊಡ್ಯೂಜರ್ ಗಳ ಸಿನೆಮಾಗಳಲ್ಲಿ ಅತಿರಂಜಿತವಾಗಿ ತೋರಿಸುವ ರೋಮ್ಯಾನ್ಸ ದೃಶ್ಯಗಳೂ ಸೇರಿದಂತೆ ಹಾಟ್ ವೆಬ್ ಸಿರೀಸ್ ಅನ್ನುವ ಹೆಸರಿನಲ್ಲಿ ಕಾಮವನ್ನು ಉತ್ತೇಜಿಸುವ ಮತ್ತು ಹದಿ ಹರೆಯದವರಿಂದ ಹಿಡಿದು ಅಪ್ರಾಪ್ತರಿಗೂ ಸುಲಭವಾಗಿ ಕೈಗೆ ಸಿಗುವ ಕಾಂಡೋಮ್ ಮತ್ತು ಐಪಿಲ್ ನಂತಹ ಟ್ಯಾಬ್ಲೆಟ್ಗಳು ಅದೇನು ಹರಿಯುತ್ತಾ ಇದೇನು ಮುರಿಯುತ್ತಾ ಅನ್ನುವ ಡಬಲ್ ಮೀನಿಂಗ್ ಡೈಲಾಗುಗಳ ತನಕ ಎಲ್ಲವೂ ಎಲ್ಲರಿಗೂ ವಾಚಾಮಗೋಚರವಾಗಿ ಕೇಳಲು ಮತ್ತು ನೋಡಲು ಸಿಗುತ್ತಿರುವ ದಿನಗಳಿವು.
ಸದ್ಯದ ಮಟ್ಟಿಗೆ ಹೇಳ ಹೊರಟಿರುವ ವಿಷಯವೆಂದರೆ ಸುಲಭವಾಗಿ ಸಿಗುವದೆಲ್ಲ ಅಮೃತವಲ್ಲ ಅನ್ನುವ ಅರಿವಿನೊಂದಿಗೆ,ಅಪ್ಪಿ ತಪ್ಪಿ ಹಾದಿ ತಪ್ಪಿದರೆ ಸುರಕ್ಷತೆ ಅನ್ನುವದು ನಿಮ್ಮ ಮೊದಲ ಆಧ್ಯತೆ ಆಗಿರಲಿ ಅನ್ನುವ ಅಭಿಲಾಶೆಯೊಂದಿಗೆ ಸಾಧ್ಯವಾದರೆ ಮುಂದಿನ ಪೀಳಿಗೆಗೆ ಕಾಮವನ್ನು ಗೆದ್ದು ಬದುಕು ಜಯಿಸುವ ಮಾರ್ಗಗಳನ್ನ ಈಗಿನಿಂದಲೇ ಆಧ್ಯಾತ್ಮ, ಯೋಗ,ವ್ಯಾಯಾಮ,ಮತ್ತು ಧ್ಯಾನದ ಮೂಲಕ ನಿಗ್ರಹಿಸಬಹುದು ಅನ್ನುವದನ್ನ ಕಲಿಸಿಕೊಟ್ಟು ಅವರ ಬದುಕನ್ನ ಸುಂದರವಾಗಿಸುವ ಪ್ರಯತ್ನ ಮಾಡೋಣ. ಏನಂತೀರಿ??
ದೀಪಕ ಶಿಂಧೇ
9482766018