- Advertisement -
ಭಯದ ನೆರಳಿನಲ್ಲಿ
ಅವರೇನು ಅನ್ನುವರು
ಇವರೇನು ಹೇಳುವರು
ಎನ್ನುವ ಗೊಂದಲ -ಗಡಿಬಿಡಿಯ
ಮೀರಿ ಬೆಳೆದಾಗಲೇ
ಅಲ್ಲವೇ ನಿಜವಾದ ವ್ಯಕ್ತಿತ್ವದ
ಅನಾವರಣ
ಗಡಿ -ಗಡಿಗೆ ಭಯದ ನೆರಳು
ಅಡಿ -ಅಡಿಗೆ ಸಂಕೋಚದ ಮುದ್ದೆ
ಹೇಳಲೊಲ್ಲದು ತಿಳಿಯಲೊಲ್ಲದು
ಅರಗಿಸಿಕೊಳ್ಳಲಂತೂ ದೂರದ
ಮಾತು
- Advertisement -
ಭಯವೇ ಹಾಗೆ
ಹೇಳದೆ ಕೇಳದೆ ಧುತ್ತೆಂದು
ಆವರಿಸಿಕೊಂಡು
ಇಲ್ಲದ ಸಲ್ಲದ ವಿಚಾರದಿಂದ
ಬಳಲಿಸುತ್ತದೆ
ವಿವರಿಸಲಾರದ ಸನ್ನಿವೇಶ
ತಂದಿಡುತ್ತದೆ
ನಿನ್ನ ನೀನು ಅರಿತಾಗ
ನಿನ್ನದೇ ಶಕ್ತಿ ನಿನಗೆ
ಗೊತ್ತಾದಾಗ
ಎಲ್ಲರ ಹಂಗು ತೊರೆದು
ಬದುಕಲು ಕಲಿತಾಗ
ಭಯ ಅಂದ್ರೆ ಏನು
ಎಂದು ಕೇಳುವಂತಾಗುತ್ತದೆ
ಆಗಲೇ ಸತ್ಯದ ಅನಾವರಣ
ವ್ಯಕ್ತಿತ್ವದ ನಿಜಾವರಣ
ಸುಧಾ ಪಾಟೀಲ
ಬೆಳಗಾವಿ