ಮರ್ತ್ಯಲೋಕದ ಭಕ್ತರ ಮನವ
ಬೆಳಗಲೆಂದು ಇಳಿತಂದನಯ್ಯಾ ಶಿವನು;
ಕತ್ತಲೆಯ ಪಾಳೆಯವ ರವಿ ಹೊಕ್ಕಂತಾಯಿತ್ತಯ್ಯಾ.
ಚಿತ್ತದ ಪ್ರಕೃತಿಯ ಹಿಂಗಿಸಿ,
ಮುಕ್ತಿಪಥವ ತೋರಿದನೆಲ್ಲ ಅಸಂಖ್ಯಾತ ಗಣಂಗಳಿಗೆ,
ತನುವೆಲ್ಲ ಸ್ವಯಲಿಂಗ, ಮನವೆಲ್ಲ ಚರಲಿಂಗ.
ಭಾವವೆಲ್ಲ ಮಹಾಘನದ ಬೆಳಗು.
ಚೆನ್ನಮಲ್ಲಿಕಾರ್ಜುನಯ್ಯಾ,
ನಿಮ್ಮ ಶರಣ ಸಮ್ಯಕ್ ಜ್ಞಾನಿ ಚೆನ್ನಬಸವಣ್ಣನ
ಶ್ರೀಪಾದಕ್ಕೆ ಶರಣೆಂದು
ಎನ್ನ ಭವಂ ನಾಸ್ತಿಯಾಯಿತ್ತಯ್ಯಾ ಪ್ರಭುವೆ.
ಹನ್ನೆರಡನೆಯ ಶತಮಾನದಲ್ಲಿ ಕನ್ನಡದ ನೆಲದಲ್ಲಿ ಅದ್ಭುತವಾದ ಕ್ರಾಂತಿಯೊಂದು ಜರುಗಿತು. ಈ ಕ್ರಾಂತಿಯ ನೇತೃತ್ವ ವಹಿಸಿದವರು ಬಸವಣ್ಣನವರು. ಬಸವಣ್ಣನವರು ಭಕ್ತಿಗೆ ಶಕ್ತಿಯಾದರೆ, ಅಲ್ಲಮಪ್ರಭುದೇವರು ವೈರಾಗ್ಯಕ್ಕೆ ವ್ಯಾಖ್ಯಾನವಾದರು. ಬಸವಣ್ಣನವರ ಸೋದರಳಿಯ ಚನ್ನಬಸವಣ್ಣನವರು ಜ್ಞಾನಕ್ಕೆ ಭಾಷ್ಯವಾಗಿ ಬದುಕಿದರು. ಬಸವ-ಚನ್ನಬಸವ-ಅಲ್ಲಮರು ಶರಣ ಸಂಸ್ಕೃತಿಯ ಮೂರು ಮುಖ್ಯ ಸಿದ್ಧಾಂತಗಳನ್ನು ಪ್ರತಿನಿಧಿಸುತ್ತಾರೆ. ಬಸವಣ್ಣನವರು ಸಾಮಾಜಿಕ ಕ್ರಾಂತಿಗೆ ಒತ್ತುಕೊಟ್ಟರೆ, ಅಲ್ಲಮರು ಆಧ್ಯಾತ್ಮಿಕ ಬೆಳೆ ಬೆಳೆಯಲು ಒತ್ತುಕೊಟ್ಟರು. ಚನ್ನಬಸವಣ್ಣನವರು ಧಾರ್ಮಿಕ ಸಂಹಿತೆಯನ್ನು ಕಟ್ಟಿಕೊಟ್ಟರು. ಅಂತೆಯೆ ಅವರನ್ನು ಷಟ್ಸ್ಥಲ ಚಕ್ರವರ್ತಿ, ಅವಿರಳಜ್ಞಾನಿ ಎಂದು ಶರಣ ಸಂದೋಹ ಕರೆದಿರುವುದು ಔಚಿತ್ಯಪೂರ್ಣವಾಗಿದೆ.
ಬಸವಾದಿ ಶಿವಶರಣರು ತಮ್ಮ ವೈಯಕ್ತಿಕ ಬದುಕನ್ನು ಕುರಿತು ಎಲ್ಲಿಯೂ ಹೇಳಿಕೊಂಡವರಲ್ಲ. ಭೌತಿಕವಾದ ಈ ಕಾಯ ಎಂದಿಗಾದರೂ ಒಂದು ದಿನ ನಾಶವಾಗುವುದು. ಆದ್ದರಿಂದ ಸಾರ್ವಕಾಲಿಕವಾಗಿ ಉಳಿಯುವ ಪರಮ ಮೌಲ್ಯಗಳನ್ನು ಪ್ರತಿಪಾದಿಸುವ ವಚನಗಳ ಮೂಲಕ ಶರಣರು ಇಂದಿಗೂ ನಮ್ಮ ಕಣ್ಣ ಮುಂದೆ ಜೀವಂತವಾಗಿದ್ದಾರೆ ಎಂದರೆ ಅತಿಶಯೋಕ್ತಿಯೆನಿಸದು. ಹೀಗಾಗಿ ಶರಣರದು ಅಕಾಯ ಚರಿತ್ರೆ. ತಮ್ಮ ಕಾಯ ಚರಿತ್ರೆಯನ್ನು ಅವರು ಬರೆಯಲೂ ಇಲ್ಲ, ಬರೆಯಿಸಲೂ ಇಲ್ಲ. ಆದರೆ ಶರಣರ ಕ್ರಾಂತಿಯ ಪಥವನ್ನು ನಿತ್ಯನೂತನವಾಗಿ ನೆನಪಿಸುವ ಕಾರ್ಯ ನಡೆಯಬೇಕೆಂಬ ಬಯಕೆಯಿಂದ ಕನ್ನಡ ಕವಿಗಳು ಶರಣರ ಕವಿಗಳು ಶರಣರ ಕಾಲಾನಂತರ ಅವರನ್ನು ಕುರಿತು ಕಾವ್ಯ-ರಗಳೆ-ಪುರಾಣ ಕಾವ್ಯಗಳನ್ನು ಬರೆಯತೊಡಗಿದರು.
ಚನ್ನಬಸವಣ್ಣನವರನ್ನು ಒಳಗೊಂಡಂತೆ ೧೨ನೇ ಶತಮಾನದ ಬಹುತೇಕ ಶರಣರ ಜೀವನ ಚರಿತ್ರೆಗೆ ಸಂಬಂಧಿಸಿದ ಆಕರಗಳನ್ನು ಶೋಧಿಸಿದರೆ, ಬಹಳಷ್ಟು ದೊರೆಯುತ್ತವೆ. ಆದರೆ ದೊರೆತ ಆಕರಗಳೆಲ್ಲವೂ ಶುದ್ಧವಾದ ನೆಲೆಯಲ್ಲಿ ಇಲ್ಲ ಎನ್ನುವುದು ವಿಷಾದ ಪಡುವ ಸಂಗತಿ. ಚನ್ನಬಸವಣ್ಣನವರ ಜೀವನ ಚರಿತ್ರೆಗೆ ಸಂಬಂಧಿಸಿದ ಆಕರಗಳಂತೂ ಹೆಚ್ಚು ಹೆಚ್ಚು ಸಮಸ್ಯೆಗಳನ್ನು ಹುಟ್ಟುಹಾಕಿವೆ.
ಹರಿಹರ-ರಾಘವಾಂಕರು ಅನೇಕ ಶರಣರ ಕುರಿತು ರಗಳೆ-ಷಟ್ಪದಿ ಕಾವ್ಯಗಳನ್ನು ರಚಿಸಿದ್ದಾರೆ. ಶರಣರ ಚರಿತ್ರೆಗೆ ಸಂಬಂಧಿಸಿದಂತೆ ಮೂಲ ಆಕರಗಳನ್ನಾಗಿ ಈ ಉಭಯ ಕವಿಗಳ ಕೃತಿಗಳನ್ನು ವಿದ್ವಾಂಸರು ಹೆಚ್ಚು ಅವಲಂಬಿಸುತ್ತಾರೆ. ಆದರೆ ಆಶ್ಚರ್ಯದ ಸಂಗತಿಯೆಂದರೆ ಚನ್ನಬಸಣ್ಣನವರನ್ನು ಕುರಿತು ಹರಿಹರ-ರಾಘವಾಂಕರು ಒಂದೇ ಒಂದು ಹೆಸರನ್ನು ಪ್ರಸ್ತಾಪ ಮಾಡದಿರುವುದು ಸಖೇದಾಶ್ಚರ್ಯವನ್ನುಂಟು ಮಾಡುತ್ತದೆ. ಹರಿಹರ ಬಸವ ಕಾಲೀನ ಅನೇಕ ಶಿವಶರಣರ ರಗಳೆಗಳನ್ನು ರಚಿಸಿದ್ದಾನೆ. ಪ್ರಸಿದ್ಧ ಶರಣರಷ್ಟೇ ಅಲ್ಲದೆ, ಅಪ್ರಸಿದ್ಧ ನಿರ್ಲಕ್ಷಿತ ಶರಣರ ಕುರಿತೂ ಹರಿಹರ ರಗಳೆಗಳನ್ನು ಬರೆದಿದ್ದಾನೆ. ಬಸವ-ಅಲ್ಲಮರ ರಗಳೆಗಳನ್ನು ರಚಿಸಿದ್ದಾನೆ. ಆದರೆ ಆತನ ೧೦೮ ರಗಳೆಯಲ್ಲಿಯೂ ಅಪ್ಪಿತಪ್ಪಿಯೂ ಚನ್ನಬಸವಣ್ಣನವರ ಹೆಸರು ಬಾರದಿರುವುದು ಚರಿತ್ರೆಯ ಇತಿಹಾಸ ಈ ಮೌನಕ್ಕೆ ನಿಜವಾದ ಕಾರಣ ತಿಳಿಯುತ್ತಿಲ್ಲ. ಬಸವಣ್ಣನವರ ಚರಿತ್ರೆಯನ್ನು ಹೇಳುವ ಎಲ್ಲ ಕವಿಗಳು ಬಸವಣ್ಣನವರಿಗೆ ಅಕ್ಕನಾಗಮ್ಮ ಎಂಬ ಸಹೋದರಿ ಇದ್ದಳೆಂದು ಪ್ರಸ್ತಾಪಿಸುತ್ತಾರೆ. ಆದರೆ ಹರಿಹರ-ರಾಘವಾಂಕರು ಅಕ್ಕನಾಗಮ್ಮ ಮತ್ತು ಚನ್ನಬಸವಣ್ಣನವರ ವಿಷಯವಾಗಿ ಯಾಕೆ ಈ ದಿವ್ಯಮೌನ ತಾಳಿದ್ದಾರೆ ಎಂಬುದು ಇಂದಿಗೂ ಬಿಡಿಸಲಾರದ ಒಗಟಾಗಿದೆ.
೧೨ನೇ ಶತಮಾನದಿಂದ ೧೫ನೇ ಶತಮಾನದವರೆಗೆ ಹರಿಹರ-ರಾಘವಾಂಕ- ಪಾಲ್ಕುರಿಕೆ ಸೋಮನಾಥ, ಭೀಮಕವಿ ಮೊದಲಾದ ಕವಿಗಳು ಬಸವಾದಿ ಶರಣರ ಕುರಿತು ಕಾವ್ಯಗಳನ್ನು ರಚಿಸಿದರು. ಆದರೆ ೧೫೮೪ರವರೆಗೆ ಯಾವ ಕವಿಯೂ ಚನ್ನಬಸವಣ್ಣನವರನ್ನು ಕುರಿತು ಒಂದೇ ಒಂದು ಕಾವ್ಯ ರಚಿಸಲಿಲ್ಲ. ೧೫೮೪ರಲ್ಲಿ ವಿರೂಪಾಕ್ಷ ಪಂಡಿತನು ಮಾತ್ರ “ಧರೆಯೊಳಗೆ ಸಕಲ ಶರಣರ ಕಥೆಗಳಂ ಕವೀಶ್ವರರೊಲ್ದು ಪೇಳ್ದರೀ ಚೆನ್ನಬಸವೇಶ್ವರನ ಚರಿತೆಯನದೊರ್ವರುಂ ಪೇಳ್ದುದಿಲ್ಲ” ಎಂಬ ಪೀಠಿಕಾ ಸಂಧಿಯಲ್ಲಿ ಹೇಳಿ ಒಂದು ಬೃಹತ್ ಪುರಾಣಕಾವ್ಯವನ್ನು ರಚಿಸಿದ್ದಾನೆ. ಆದರೆ ಈ ಕೃತಿಯಲ್ಲಿ ಚನ್ನಬಸವಣ್ಣನವರ ಬದುಕಿನ ವಿಷಯಗಳಿಗಿಂತ ಶಿವನ ಪಂಚವಿಂಶತಿ ಲೀಲೆಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಟ್ಟಿರುವುದರಿಂದ ಈ ಪುರಾಣ ಕಾವ್ಯವೂ ಚನ್ನಬಸವಣ್ಣನವರ ಜೀವನ ಮತ್ತು ಸಾಧನೆಗಳಿಗೆ ಹೆಚ್ಚು ನ್ಯಾಯ ಒದಗಿಸಿಲ್ಲವೆಂದೇ ಹೇಳಬೇಕು.
ಚನ್ನಬಸವಣ್ಣನವರ ಜನನದ ಬಗ್ಗೆ ಇರುವ ಕೆಲವು ತಪ್ಪು ಕಲ್ಪನೆಗಳೇ ಕನ್ನಡದ ಬಹುತೇಕ ಕವಿಗಳನ್ನು ಈ ವಿಷಯದಲ್ಲಿ ಮೌನವಾಗಿರುವಂತೆ ಮಾಡಿರುವ ಸಾಧ್ಯತೆ ಹೆಚ್ಚಾಗಿದೆ. ಚನ್ನಬಸವಣ್ಣನವರ ಜನನದ ವಿಷಯವಾಗಿ ಕೆಲವು ಪುರಾಣಗಳು ತಪ್ಪು ಕಲ್ಪನೆಗಳನ್ನು ಬಿತ್ತಿದ ಕಾರಣವಾಗಿ, ಉಳಿದ ಕವಿಗಳು ಈ ವಿಷಯದ ಬಗ್ಗೆ ಹೆಚ್ಚು ಚರ್ಚೆ ಮಾಡದೆ, ಉಪೇಕ್ಷೆ ಮಾಡಿರುವ ಸಾಧ್ಯತೆ ಹೆಚ್ಚಾಗಿದೆ.
ಚನ್ನಬಸವಣ್ಣನವರ ಜೀವನದ ಮುಖ್ಯ ಸಂದೇಶವನ್ನು ನಾವು ಅರ್ಥ ಮಾಡಿಕೊಳ್ಳಬೇಕಾದರೆ, ೧೨ನೇ ಶತಮಾನದಲ್ಲಿ ಇದ್ದ ಧಾರ್ಮಿಕ-ಸಾಮಾಜಿಕ ಪರಿಸ್ಥಿತಿಯನ್ನು ತಿಳಿಯಬೇಕಾಗುತ್ತದೆ. ಆ ಕಾಲದ ಧಾರ್ಮಿಕ ಪರಿಸ್ಥಿತಿ ಅಯೋಮಯವಾಗಿತ್ತು. ಈ ಕುರಿತು ಚನ್ನಬಸವಣ್ಣನವರೇ ತಮ್ಮ ಒಂದು ವಚನದಲ್ಲಿ ಸ್ಪಷ್ಟವಾಗಿ ದಾಖಲಿಸುತ್ತಾರೆ.
ಶೈವ ಸೈವೆರಗಾದ, ಪಾಶುಪತಿ ಪಥವನರಿಯ
ಕಾಳಾಮುಖಿ ಕಂಗೆಟ್ಟ, ಮಹಾವ್ರತಿ ಮದವೇರಿದ
ಸನ್ಯಾಸಿ ಸಂಸಾರಿಯಾದ, [ಜೋಗಿ] ಮರುಳಾಗಿ ತಿರುಗಿದ.
ಈ ಆರು ಭಕ್ತಿಪಥಕ್ಕೆ ಸಲ್ಲವು ಕೇಳಿರಣ್ಣಾ
ಕೂಡಲ ಚೆನ್ನಸಂಗನ ಶರಣರು, ಆರ ಮೀರಿ ಬೇರೆನಿಂದನು.
೧೨ನೇ ಶತಮಾನದಲ್ಲಿ ಶೈವರು, ಪಾಶುಪತರು, ಕಾಳಾಮುಖರು, ಮಹಾವ್ರತಿಗಳು, ಸನ್ಯಾಸಿ-ಜೋಗಿಗಳು ಧಾರ್ಮಿಕ ವಲಯದಲ್ಲಿ ಒಂದು ರೀತಿಯ ಗೊಂದಲವನ್ನುಂಟು ಮಾಡಿದ್ದರು. ಇವರನ್ನು ಚನ್ನಬಸವಣ್ಣನವರು ಟೀಕಿಸುತ್ತಾರೆ. ಇವರು ಯಾರೂ ಭಕ್ತಿಪಥಕ್ಕೆ ಸಲ್ಲರು ಎನ್ನುತ್ತಾರೆ. ಶೈವಧರ್ಮವು ಅತ್ಯಂತ ಪ್ರಾಚೀನ ಧರ್ಮ. ವೈದಿಕ ಧರ್ಮಕ್ಕಿಂತ ಮೊದಲು ಹುಟ್ಟಿದ ಧರ್ಮ. ಹೀಗಿದ್ದೂ ೧೨ನೇ ಶತಮಾನದ ಹೊತ್ತಿಗೆ ಶೈವಧರ್ಮವು ತನ್ನ ಚಲನಶೀಲತೆಯನ್ನು ಕಳೆದುಕೊಂಡು ಗೊಡ್ಡು ಸಂಪ್ರದಾಯಗಳ, ಮೂಢನಂಬಿಕೆಗಳ ಆಗರವಾಗಿ ಬಿಟ್ಟಿತ್ತು. ಕಾಳಾಮುಖ ರಂತೂ ವಾಮಪಂಥಿಯ ಆಚರಣೆಗಳ ಮೂಲಕ ಜನರಲ್ಲಿ ಭಯವನ್ನುಂಟು ಮಾಡಿದ್ದರು.
ಆ ಕಾಲದ ಧಾರ್ಮಿಕ ಅಸ್ಥಿರತೆ ಕುರಿತು ಡಾ. ವೀರಣ್ಣ ರಾಜೂರ ಅವರು ತುಂಬ ವಿವರವಾಗಿ ಹೀಗೆ ದಾಖಲಿಸುತ್ತಾರೆ : “ಶೈವಧರ್ಮಕ್ಕಿಂತ ಹೆಚ್ಚಾಗಿ ವೈದಿಕ ಧರ್ಮ ಅಂದು ಜನತೆಯನ್ನು ಅಜ್ಞಾನದ ಕತ್ತಲೆಯಲ್ಲಿ ನೂಕಿತ್ತು. ಹಲವು ಹತ್ತು ಜಾತಿಗಳಲ್ಲಿ ಹರಿದು ಹಂಚಿದ್ದ ಅದು ಸ್ವಾರ್ಥ-ಮೋಸ-ವಂಚನೆಗಳ ತವರಾಗಿತ್ತು. ವೇದವನ್ನು ಓದುವ ಹಕ್ಕು ಬ್ರಾಹ್ಮಣರಿಗೆ ಮಾತ್ರ. ಶೂದ್ರರಿಗೆ ಸಾಮಾನ್ಯರಿಗೆ, ಸ್ತ್ರಿಯರಿಗೆ ಅವುಗಳನ್ನು ಕೇಳಲೂ ಸಹಿತ ಅವಕಾಶವಿರಲಿಲ್ಲ. ಉತ್ತಮರ ಸೇವೆಗೈಯುವುದು ಮಾತ್ರ ಅಂತ್ಯಜನ ಕಾರ್ಯ. ಅವರವರ ಕರ್ಮಫಲಕ್ಕೆ ತಕ್ಕಂತೆ ಆಯಾ ಜಾತಿಯಲ್ಲಿ ಜನಿಸುತ್ತಾರೆ-ಹೀಗೆ ಇಲ್ಲ ಸಲ್ಲದ ವಿಚಾರಗಳನ್ನು ಸಾಮಾನ್ಯ ಜನರ ತಲೆಯಲ್ಲಿ ತುಂಬಿ ಅಧೈರ್ಯ, ಅಂಧಶ್ರದ್ಧೆ, ಕೀಳರಿಮೆಗಳನ್ನು ಅವರಲ್ಲಿ ಬೆಳೆಸಿತು. ಯಜ್ಞಯಾಗಾದಿ ಹಿಂಸಾಮೂಲ ಕರ್ಮಗಳು ಪ್ರತಿಷ್ಠೆಯ ಸಾಧನಗಳಾದವು. ಜ್ಯೋತಿಷ್ಯ ಶಕುನ ತಿಥಿ ವಾರ ನಕ್ಷತ್ರ ಮೊದಲಾದವುಗಳಲ್ಲಿ ಸಾಮಾನ್ಯರ ಆಸಕ್ತಿ ಹೆಚ್ಚಿಸಿತು. ಒಟ್ಟಿನಲ್ಲಿ ಉಪನಿಷತ್ತು, ಭಗವದ್ಗೀತೆಗಳ ಉದಾತ್ತ ಸಂದೇಶ ಮರೆಯಾಗಿ ಧರ್ಮದ ಹೆಸರಿನಲ್ಲಿ ಏನೆಲ್ಲ ಅನಾಹುತಗಳು ನಡೆಯತೊಡಗಿದವು” (ವೀರಣ್ಣ ರಾಜೂರ : ಶರಣರ ಉದಯದ ಪೂರ್ವಕಾಲ – ವಚನ ಸಾಹಿತ್ಯ ಅಧ್ಯಯನ ಪು. ೨೫)
ಕಾಳಾಮುಖರ ಆಚರಣೆಗಳಂತೂ ಇನ್ನೂ ಘೋರವಾಗಿದ್ದವು. ಪಂಚ ‘ಮ’ಕಾರಗಳ ಅನುಷ್ಠಾನದಿಂದ ಕಾಳಾಮುಖರು ನೈತಿಕ ಬದುಕಿನಿಂದ ದೂರವಾಗಿದ್ದರು. ಮದ್ಯ, ಮಾಂಸ, ಮದಿರೆ, ಮೈಥುನ ಮೊದಲಾದ ‘ಮ’ಕಾರಗಳಿಂದ ಜನರಲ್ಲಿ ಭೀತಿಯನ್ನು ಹುಟ್ಟಿಸಿದ್ದರು. ಹೀಗಾಗಿ ಜನ ಸಾಮಾನ್ಯರು ಈ ಆಚರಣೆಗಳಿಂದ ದೂರ ಸರಿದಿದ್ದರು. ಈ ನಡುವೆ ಕ್ಷುದ್ರ ದೇವತೆಗಳ ಆಚರಣೆಯೂ ಒಂದು ಕಂಟಕವಾಗಿ ಪರಿಣಮಿಸಿತ್ತು. ಮಾರಿ-ಮಸಣೆ ಮೊದಲಾದ ಕ್ಷುದ್ರ ದೇವತೆಗಳ ಆರಾಧನೆಯಿಂದಲೂ ಮೂಢನಂಬಿಕೆ ತುಂಬಿ ತುಳುಕುತ್ತಿತ್ತು. ಕೆಳವರ್ಗದ ಸಾಮಾನ್ಯ ಜನರಲ್ಲಿ ಅಂಧಶ್ರದ್ಧೆ, ಅಜ್ಞಾನಗಳು ಮುಚ್ಚಿ ಮುಸುಕಿದ್ದವು. ಅವರು ಪೂಜಿಸುತ್ತಿದ್ದ ದೈವಗಳ ಸಂಖ್ಯೆ ಅಪಾರ. ಮೈಲಾರ, ಜೋಕುಮಾರ, ಧೂಳಿಮಾಕಾಳ, ಮಾಳಚಿ, ಎಕ್ಕನಾತಿ, ಮಾರಿ, ಮಸಣಿ, ಮಾರಯ್ಯ, ಬೀರಯ್ಯ, ಕೇಚರ, ಗಾವಿಲ, ಅಂತರ, ಬೆಂತರ, ಕಾಳಯ್ಯ, ಕೇತಯ್ಯ, ಎಲ್ಲಮ್ಮ, ಭೈರವ, ಮಿಂಡ, ಕುಕ್ಕನೂರ ಬನದಿ, ಬನಶಂಕರಿ, ಕಾಳಿ, ಚಾಮುಂಡಿ, ಗಂಗೆ, ಗೌರಿ, ಹುಲಿಗೆ ಇತ್ಯಾದಿ ಒಂದೇ ಎರಡೇ……..ನೂರಾರು ಪುರುಷ ಮತ್ತು ಸ್ತ್ರಿದೈವಗಳ ಹೆಸರುಗಳನ್ನು ಹೇಳಬಹುದು. ಮೊರಡಿಗಳಲ್ಲಿ ಊರ ದಾರಿಯಲ್ಲಿ, ಕೆರೆ ಬಾವಿ ಗಿಡ ಮರಗಳಲ್ಲಿ, ಗ್ರಾಮದ ಮಧ್ಯೆ, ಆಲದ ಮರದಲ್ಲಿ ಎಲ್ಲಿ ಬೇಕೆಂದರಲ್ಲಿ ಇವುಗಳ ವಾಸ. ಇದಲ್ಲದೆ ಇವುಗಳ ಜೊತೆಗೆ ಒಂದೊಂದು ಜಾತಿಯ ಜನರೂ ಮತ್ತೆ ತಮಗೇ ವಿಶಿಷ್ಟವಾದ ದೈವಗಳನ್ನು ಪೂಜಿಸುತ್ತಿದ್ದರು. ಮಾಲೆಗಾರರಿಗೆ ಬಾವಿಯ ಬೊಮ್ಮ, ಕಂಚುಗಾರರಿಗೆ ಕಾಳಿಕಾದೇವಿ, ಒಕ್ಕಲುಮಗನಿಗೆ ರಾಶಿಯ ಬೆನಕ ಇತ್ಯಾದಿ. ಜನ ತಮಗೆ ಕಷ್ಟಗಳು ಪ್ರಾಪ್ತವಾದಾಗ ಇವುಗಳಿಗೆ ಹತ್ತಾರು ವಿಧದ ಹರಕೆಗಳನ್ನು ಹೊರುತ್ತಿದ್ದರು. ಅವುಗಳಲ್ಲಿ ಕೆಲವು ಸೌಮ್ಯವಾದುವು. ಅಂಬಲಿ, ಮುಟ್ಟಿಗೆ (ದಿಕ್ಕುಗಳಿಗೆ ಚೆಲ್ಲುವ ಆಹಾರ), ಹುರಿಬುತ್ತಿಗಳನ್ನು (ಅಕ್ಕಿ ಹುರಿದು ಮಾಡಿದ ತಂಬಿಟ್ಟು) ಅವುಗಳಿಗೆ ಅರ್ಪಿಸುವುದು, ಹಾಲನ್ನು ಮೊಸರನ್ನು ಅವುಗಳ ಹೆಸರಲ್ಲಿ ‘ನೇಮ’ವಾಗಿ ಬಿಡುವುದು ಇತ್ಯಾದಿಗಳು. ಇನ್ನು ಕೆಲವು ವ್ರತಗಳಂತೂ ಅತಿ ಭೀಕರ. ಬಾಯಿಬೀಗ ಹಾಕಿಕೊಳ್ಳುವುದು, ಬೆಂಕಿಯ ಕೊಂಡವನ್ನು ಹಾಯುವುದು, ಸಿಡಿಯ ಹರಕೆ, ಬೇವಿನ ಉಡಿಗೆ ಉಡುವುದು, ಹೊಲದನ್ನು ತಲೆಯ ಮೇಲೆ ಹೊತ್ತು ‘ಉಧೋ’ ಎನ್ನುವುದು, ಚಾಟಿಯಿಂದ ಹೊಡೆದುಕೊಳ್ಳುವುದು ಇತ್ಯಾದಿ ಹೇಯವೂ ಅಸಹ್ಯವೂ ಆದ ಪದ್ಧತಿಗಳಿದ್ದುವು. ಬೆರಳುಗಳನ್ನು ಕತ್ತರಿಸಿ ಅರ್ಪಿಸುವುದು, ಮುಂಗುರುಳನ್ನು ಕತ್ತರಿಸಿ ದೈವಕ್ಕೆ ಏರಿಸುವುದು, ಕೈಯ ಹತ್ತು ಬೆರಳುಗಳಿಗೂ ಬತ್ತಿಯನ್ನು ಅಂಟಿಸಿ ಅವುಗಳಿಗೆ ಉರಿ ಹತ್ತಿಸಿ ಆರತಿ ಬೆಳಗುವುದು ಇತ್ಯಾದಿ ಪದ್ಧತಿಗಳೂ ಇದ್ದುವು. ಈ ದೈವಗಳಿಗೆ ಪುರುಷರಿಗಿಂತ ಸ್ತ್ರಿಯರಲ್ಲಿ ಹೆಚ್ಚು ಭಕ್ತೆಯರಿರುತ್ತಿದ್ದರು. ಒಂದು ಸಂಸಾರದ ಜನರು ಧರ್ಮದಲ್ಲಿ ಜೈನರಿರಬಹುದು. ಆದರೆ ಜೈನರ ಶಾಸನ ದೇವತೆಗೆ೯ ಕಾಣಿಯ ಬೆಲೆಯ ಹೂವನ್ನೂ ಅರ್ಪಿಸದ ಜೈನರ ಹೆಂಗಸು ಆ ಊರಿನ ಮಾಳಚಿಗೋ ಮಸಣಿಗೋ ಹಾಗದ ಬೆಲೆಯ ಹೂವನ್ನು ಅರ್ಪಿಸುತ್ತಿದ್ದಳು. ಈ ದೈವಗಳು ತಮ್ಮನ್ನು ಕಾಡಿಸುತ್ತವೆಯೆಂದೂ ಅವುಗಳ ಉಪಶಾಂತಿಯಾಗದಿದ್ದರೆ ತಮಗೆ ನಾನಾ ಬಗೆಯ ಸಾಂಸಾರಿಕ ಕ್ಲೇಶಗಳೂ ರೋಗರುಜಿನಗಳೂ ಪ್ರಾಪ್ತವಾಗುವುವೆಂದೂ ಆ ಜನರು ನಂಬಿದ್ದರು.
ಈ ದೈವಗಳ ವಿಷಯವಾಗಿ ಜನರಲ್ಲಿ ಪ್ರಚಲಿತವಾಗಿದ್ದ ಕತೆಗಳೋ ಅತಿ ವಿಚಿತ್ರ. ಮೈಲಾರ, ಜೋಕುಮಾರರನ್ನೇ ತೆಗೆದುಕೊಳ್ಳಬಹುದು. ಮೈಲಾರನು ಕಷ್ಣನ ಮಡದಿಯಾದ ಗೋಪಿಕಾಸ್ತ್ರಿಯರ ಮೈಲಿಗೆ ವಸ್ತ್ರಗಳಲ್ಲಿ ಹುಟ್ಟಿ, ಬಲಿಷ್ಠನಾಗಿ ಬೆಳೆದು ಶಿವನ ಕೊಡೆ ಹಿಡಿಯುವ ಕಾರ್ಯವನ್ನು ವಹಿಸಿ ನಿಂತನು. ಮುಂದೆ ಲೋಕದಲ್ಲಿ ಮಣಿಮಲ್ಲಾಸುರನೆಂಬ ರಾಕ್ಷಸನ ಹಾವಳಿ ಹೆಚ್ಚಾದಾಗ ಅವನನ್ನು ಕೊಲ್ಲಲು ವಿಷ್ಣು ಮುಂತಾದ ಹಿರಿಯ ದೇವತೆಗಳಿಂದಲೂ ಸಾಧ್ಯವಾಗಲಿಲ್ಲ. ಆಗ ಮೈಲಾರನು ಶಿವನ ಆಜ್ಞೆಯಂತೆ ಭೂಲೋಕಕ್ಕೆ ಬಂದು, ನಾಯಿಯ ಆಕಾರವನ್ನು ತಾಳಿ, ಮಲ್ಲಾಸುರನ ಮರಣದ ರಹಸ್ಯವನ್ನರಿತು, ಅವನ ಶಕ್ತಿಗಳನ್ನು ನಾಶಪಡಿಸಿ ಕೊನೆಗೆ ಅವನನ್ನು ಕೊಂದು ಹಾಕುತ್ತಾನೆ. ಮುಂದೆ ಅವನು ಕುರುಬರ ಕುಲದ ಮಾಳಿ ಎಂಬುವಳನ್ನು ಮದುವೆಯಾಗಿ, ಶಿವನ ಹರಕೆಯನ್ನು ಹೊತ್ತು, ಶಿವನ ಅಪ್ಪಣೆಯ ಪ್ರಕಾರ ಲೋಕದ ಜನರನ್ನು ಬಾಯಿಬೀಗ, ಬೆನ್ನ ಸಿಡಿ, ಕೊಂಡಗಳಿಂದ ನಿಯಂತ್ರಿಸುತ್ತ ಆಳುತ್ತಿದ್ದಾನೆ. ಇದು ಅವನ ವಿಷಯದಲ್ಲಿದ್ದ ಕತೆ. ಅವನ ಭಕ್ತರು ದೈವದ ಪ್ರೀತ್ಯರ್ಥವಾಗಿ ಕೊರಳಿಗೆ ಕವಡೆಗಳನ್ನು ಕಟ್ಟಿಕೊಂಡು, ಹಣೆತುಂಬ ಭಂಡಾರ ಅಥವಾ ಅರಿಸಿನವನ್ನು ಬಳಿದು, ಕಂಬಳಿಯನ್ನು ಮೈತುಂಬ ಹೊದೆದು, ಮಂಡಿಗಳನ್ನು ನೆಲಕ್ಕೆ ಊರಿ ನಾಯಿಗಳಂತೆ ಬೊಗಳುತ್ತಿದ್ದರು. ಮೈಲಾರನ ಕತೆ ಹೀಗಾದರೆ ಜೋಕುಮಾರನ ಕತೆ ಇನ್ನೂ ವಿಚಿತ್ರ. ಜೋಕನೆಂಬ ಸಪ್ತರ್ಷಿಗಳ ಸೇವಕನು ಭೂಲೋಕಕ್ಕೆ ಇಳಿದು ಬಂದು ಮಾರಿಯಲ್ಲಿ ಮೋಹಿತನಾಗಿ ಅವಳ ಸಂಗವನ್ನು ಮಡಿದಾಗ ಹುಟ್ಟಿದವನೇ ಜೋಕುಮಾರ. ಅವನು ಹುಟ್ಟುತ್ತಲೇ ತನ್ನ ತಂದೆಯನ್ನು ಹುಡುಕಿಕೊಂಡು ಹೊರಟನು. ದಾರಿಯಲ್ಲಿ ಅಗಸರ ಹುಡುಗಿಯನ್ನು ಕೆಣಕಿದಾಗ ಅಗಸರು ಕೋಪಗೊಂಡು ಅವನನ್ನು ಹೊಡೆದು ನದಿಗೆ ಎಸೆದು ಬಿಡುತ್ತಾರೆ. ಅವನು ಒಟ್ಟು ಬದುಕಿದ್ದು ಏಳು ದಿನಗಳು ಮಾತ್ರ. ಈಗಿನಂತೆಯೇ ಅಂದಿನ ದಿನಗಳಲ್ಲೂ ಜನರು ಇವನನ್ನು ನಾಯಕನನ್ನಾಗಿ ಕಲ್ಪಿಸಿ ಜಾನಪದ ಗೀತೆಗಳಲ್ಲಿ ಹಾಡಿ ಹೊಗಳುತ್ತಿದ್ದಿರಬಹುದು; ರೈತರು ಅವನ ಕೃಪೆಯಿಂದ ಲೋಕದಲ್ಲಿ ಮಳೆ, ಬೆಳೆಗಳಾಗುತ್ತವೆಯೆಂದು ನಂಬಿದ್ದಿರಬಹುದು. ಜಾನಪದ ಗೀತಗಳಲ್ಲಿ ಅವನೊಬ್ಬ ಕಾಮುಕ, ವಿಷಯಲಂಪಟ, ಧರ್ಮಾಧರ್ಮ ವಿವೇಕವಿಲ್ಲದವನು ಎಂಬಂತೆ ಚಿತ್ರಿತನಾಗಿದ್ದಾನೆ. (ಹೆಚ್ಚಿನ ವಿಷಯಗಳಿಗಾಗಿ ನೋಡಿ : ಎಂ. ಚಿದಾನಂದಮೂರ್ತಿ :ಬಸವಣ್ಣನವರು ಪು. ೧೨)
ಧಾರ್ಮಿಕವಾಗಿ ೧೨ನೇ ಶತಮಾನದ ಸ್ಥಿತಿ ಹೀಗಿದ್ದರೆ, ರಾಜಕೀಯವಾಗಿ ಇನ್ನೂ ಗಂಭೀರವಾಗಿತ್ತು. ಬಲಾಢ್ಯನಾದ ರಾಜನೊಬ್ಬ ಬಲಹೀನನಾದ ರಾಜನ ಮೇಲೆ ದಂಡೆತ್ತಿ ಹೋಗುವುದು ಸಾಮಾನ್ಯ ಸಂಗತಿಯಾಗಿತ್ತು. ಅಂತೆಯೆ ಚಾಲುಕ್ಯ ರಾಜರು ಬಲಹೀನರಾದ ಸಂಗತಿಯನ್ನು ಗಮನಿಸಿ, ಸಾಮಂತನಾಗಿದ್ದ ಬಿಜ್ಜಳ ಚಾಲುಕ್ಯರನ್ನು ಹಿಂದೆ ಸರಿಸಿ, ಚಾಲುಕ್ಯ ಸಿಂಹಾಸನವನ್ನು ಆಕ್ರಮಿಸಿಕೊಂಡ. ಹೀಗೆ ರಾಜಕೀಯ ವಿಪ್ಲವಗಳಂತೂ ಜೋರಾಗಿದ್ದವು.
ಇನ್ನು ಸಾಹಿತ್ಯಿಕ ವಿಷಯವಾಗಿ ಆಲೋಚಿಸುವುದಾದರೆ, ಕನ್ನಡ ಸಾಹಿತ್ಯವು ಜೈನ ಕವಿಗಳಿಂದ ಆರಂಭವಾಗುತ್ತದೆ. ಪಂಪ-ರನ್ನ-ಜನ್ನ-ಪೊನ್ನ-ನಾಗಚಂದ್ರ ಮೊದಲಾದ ಕವಿಗಳೆಲ್ಲರೂ ಜೈನಧರ್ಮೀಯರು. ಇವರು ಉತ್ತರ ಭಾರತದ ಕಥಾವಸ್ತುಗಳನ್ನು ತಮ್ಮ ಕಾವ್ಯಕ್ಕೆ ವಸ್ತುವನ್ನಾಗಿ ಆಯ್ಕೆ ಮಾಡಿಕೊಂಡು ಕಾವ್ಯಗಳನ್ನು ರಚಿಸಿದರು. ಇದರಿಂದ ಕನ್ನಡದ ಅಸ್ತಿತ್ವವನ್ನು ಕಾಪಾಡಿದರು; ಆದರೆ ಅಸ್ಮಿತೆಯನ್ನು ಕಳೆದರು. ಕನ್ನಡ ಭಾಷೆಯ ಬೆಳವಣಿಗೆಯಾಯಿತು. ಆದರೆ ಅಚ್ಚಗನ್ನಡದ ಬೇಸಾಯಿ ಬರಲಿಲ್ಲ ಎಂಬುದು ಗಮನಿಸಬೇಕಾದ ಅಂಶ.
ಆಗೆಲ್ಲ ಸಾಹಿತ್ಯ ನಿರ್ಮಾಣಕ್ಕೆ ರಾಜಾಶ್ರಯವೇ ಬೇಕಾಗಿತ್ತು. ಪಂಪ-ರನ್ನ ಮೊದಲಾದವರು ತಮಗೆ ಆಶ್ರಯ ನೀಡಿದ ರಾಜರನ್ನೇ ಮಹಾಭಾರತದ ಧೀಮಂತ ಪಾತ್ರಗಳಿಗೆ ಹೋಲಿಸಿ ಮಹಾಕಾವ್ಯಗಳನ್ನು ಬರೆದು, ತಮಗೆ ಆಶ್ರಯ ನೀಡಿದ ರಾಜರ ಋಣ ಸಂದಾಯ ಮಾಡಿದರು. ಸಂಸ್ಕೃತ-ಪ್ರಾಕೃತ ಭೂಯಿಷ್ಠ ಭಾಷೆಯನ್ನು ಬಳಸಿ, ರಾಜ್ಯಮಾನ್ಯ-ಪಂಡಿತಮಾನ್ಯ ಕೃತಿಗಳನ್ನೇ ರಚಿಸಿದರು. ಆದರೆ ಇವು ಜನಸಾಮಾನ್ಯರಿಗೆ ನಿಲುಕಲಾರದ ನಕ್ಷತ್ರವಾಗಿ ಪರಿಣಮಿಸಿದವು. ಸಾಹಿತ್ಯವೆನ್ನುವುದು ಜನಬದುಕಲು ಬೇಕಾದ ಮೌಲ್ಯವೆಂದು ಆ ಕವಿಗಳು ಪರಿಗಣಿಸಲೇ ಇಲ್ಲ. ತಾವು ತಮಗೆ ಆಶ್ರಯ ನೀಡಿದ ರಾಜರನ್ನು ಸ್ತುತಿಸುತ್ತ ಕಾಲ ಕಳೆದರು.
ಟಿ.ಎನ್.ಮಲ್ಲಪ್ಪನವರು ಕೂಡ ೧೨ನೇ ಶತಮಾನದ ಧಾರ್ಮಿಕ ಸ್ಥಿತಿಗತಿಗಳನ್ನು ಕುರಿತು ಹೇಳುವ ಮಾತುಗಳು ಮನನೀಯವಾಗಿವೆ : “ಕರ್ಮಕಾಂಡದಲ್ಲಿ ಬೇಸತ್ತು ಜ್ಞಾನಕಾಂಡದ ಕಡೆಗೆ ತಿರುಗಿದ ಉಪನಿಷತ್ಕಾರರ ಸಿದ್ಧಾಂತವಾಗಲಿ ತದನಂತರ ಪ್ರಚಾರಕ್ಕೆ ಬಂದ ಬೌದ್ಧರ ಶೂನ್ಯವಾದವಾಗಲಿ, ಅದನ್ನು ಹಿಮ್ಮೆಟ್ಟಿಸಿದ ಶಂಕರಾಚಾರ್ಯರ ನಿರ್ವಿಶೇಷ ಬ್ರಹ್ಮವಾದವಾಗಲಿ ಜನಸಾಮಾನ್ಯಕ್ಕೆ ಅರ್ಥವಾಗಲಿಲ್ಲ. ಭಕ್ತಿಪಂಥದ ಪಾಂಚರಾತ್ರ ಪಾಶುಪತ ಮತಗಳು ವೈದಿಕ ಮಾರ್ಗಾನುಯಾಯಿಗಳಾಗಿ ಜನಸಾಮಾನ್ಯರನ್ನು ಆಕರ್ಷಿಸಿದವು. ಪಲ್ಲವರ ಕಾಲದಿಂದ ೧೨ನೇ ಶತಮಾನದವರೆಗೂ ಪಾಶುಮತ ಕಾಳಾಮುಖ ಗುರುಗಳು ವೇದವೇದಾಂತಗಳನ್ನು ಕಲಿಸುವ ವಿದ್ಯಾಲಯಗಳ ಅಧಿಪತಿಗಳಾಗಿಯೂ ರಾಜಗುರುಗಳಾಗಿಯೂ ಪ್ರಸಿದ್ಧಿಗೆ ಬಂದರು. ಪಲ್ಲವರ ಕಾಲದಲ್ಲಿ ಅಗ್ನಿಷ್ಟೋಮ ವಾಜಪೇಯಿ ಅಶ್ವಮೇಧಾದಿ ಯಜ್ಞಯಾಗಾದಿಗಳನ್ನು ಮಾಡಿದುದು ಕಂಡು ಬಂದಿದೆ. ಬೌದ್ಧರಲ್ಲಿದ ಶಾಕ್ತ ಸಂಪ್ರದಾಯವು ಕೆಲವು ಪಾಶುಪತ ಶಾಖೆಗಳಲ್ಲಿ ಸೇರಿಕೊಂಡಿದ್ದಿತು. ವರ್ಣಾಶ್ರಮಧರ್ಮ ಪೆಇಪಾಲನೆಯೂ ರಾಜ್ಯದ ಹಿತದೃಷ್ಟಿಯಿಂದ ಯಜ್ಞಯಾಗಾದಿಗಳನ್ನು ಮಾಡುವುದೂ ರಾಜನ ಧರ್ಮವೆಂದು ಬೋಧಿಸುವ ಪುರೋಹಿತ ವರ್ಗವು ಪ್ರಬಲವಾಗುತ್ತಿತ್ತು. ಅರ್ಥವಿಲ್ಲದ ಈ ಮೂಢ ಪದ್ಧತಿಗಳನ್ನು ತಪ್ಪಿಸಿ ಸಮಾಜ ಸಂಸ್ಕರಣವನ್ನು, ಸಮಾಜ ಸುಧಾರಿಸುವ ಕಾರ್ಯವನ್ನು ಶರಣರು ಮಾಡಿದರು”.
ಇಂತಹ ಸಂಕ್ರಮಣ ಸ್ಥಿತಿಯಲ್ಲಿ ಬಸವಾದಿ ಶರಣರು ಸಾಹಿತ್ಯ ರಚನೆ ಮಾಡಬೇಕೆಂದು ಹೊರಟವರಲ್ಲ. ಆದರೆ ಅವರ ನಡೆ-ನುಡಿಗಳು ಒಂದೇ ಆಗಿದ್ದ ಕಾರಣಕ್ಕಾಗಿ ಅವರು ನುಡಿದ ನುಡಿಗಳೆಲ್ಲವೂ ಬರಹದಲ್ಲಿ ಮೂಡಿದವು. ಆ ಬರಹಗಳೇ ಮುಂದೆ ವಚನ ಸ್ವರೂಪವನ್ನು ಪಡೆದುಕೊಂಡವು. ಚನ್ನಬಸವಣ್ಣನವರು ಬಸವಣ್ಣನವರು ರೂಪಿಸಿದ ಶರಣ ಚಳುವಳಿಗೆ ಒಂದು ಧಾರ್ಮಿಕ ಚೌಕಟ್ಟನ್ನು ಒದಗಿಸಿದವರು. ಬಸವಣ್ಣನವರು ಕಟ್ಟಿದ ಅನುಭವ ಮಂಟಪದಲ್ಲಿ ನಿತ್ಯ ನಡೆಯುತ್ತಿದ್ದ ಚರ್ಚೆಗೆ ಒಂದು ಅಧ್ಯಾತ್ಮಿಕ ಆಯಾಮವನ್ನು ಒದಗಿಸಿ, ಧಾರ್ಮಿಕ ಸಂಹಿತೆಯನ್ನು ಕಟ್ಟಿಕೊಟ್ಟವರು ಚನ್ನಬಸವಣ್ಣನವರು. ಈ ಕುರಿತು ಅವರೇ ಹೇಳುವಂತೆ-
ಪಾತಾಳದ ಅಗ್ಘವಣಿಯ ನೇಣಿಲ್ಲದೆ ತೆಗೆಯಬಹುದೆ
ಸೋಪಾನದ ಬಲದಿಂದಲ್ಲದೆ?
ಶಬ್ದ ಸೋಪಾನದ ಬಲದಿಂದ ನಿಶ್ಯಬ್ದ ಸೋಪಾನವ ಕಟ್ಟಿ
ನಡೆಸಿದವರು ನಮ್ಮ ಪುರಾತನರು!
ದೇವಲೋಕಕ್ಕೆ ಬಟ್ಟೆ ಕಾಣಿರೋ!
ಮರ್ತ್ಯರ ಮನದ ಮೈಲಿಗೆಯ ಕಳೆಯಲೆಂದು
ಗೀತಮಾತೆಂಬ ಜ್ಯೋತಿಯ ಬೆಳಗಿಟ್ಟು ಹೋದರು
ಕೂಡಲ ಚನ್ನ ಸಂಗಯ್ಯಾ, ನಮ್ಮ ಶರಣರು.
‘ಮರ್ತ್ಯರ ಮನದ ಮೈಲಿಗೆ ಕಳೆಯಲೆಂದು ಗೀತಮಾತೆಂಬ ಜ್ಯೋತಿಯ ಬೆಳಗಿಟ್ಟರು. ಶಬ್ದಸೋಪಾನದಿಂದ ಬಲದಿಂದ ನಿಶಬ್ದ ಸೋಪಾನವ ಕಟ್ಟಿ ನಡೆಸಿದರು. ಅದು ದೇವಲೋಕಕ್ಕೆ ಬಟ್ಟೆಯಾಯಿತು’ ಎಂದು ಹೇಳುತ್ತಾರೆ. ಇಂತಹ ಅಪರೂಪದ ವಚನರಾಶಿಯನ್ನು ಚನ್ನಬಸವಣ್ಣನವರು ಉಳಿಸಿಕೊಟ್ಟರು. ಕಲ್ಯಾಣ ಪಟ್ಟಣದಲ್ಲಿ ಅಸಂಖ್ಯಾತ ಶರಣರು ಬರೆದ ವಚನದ ಕಟ್ಟುಗಳನ್ನು ರಕ್ಷಿಸುವಲ್ಲಿ ಚನ್ನಬಸವಣ್ಣನವರ ಪಾತ್ರ ಅತ್ಯಂತ ಹಿರಿದಾದುದು.
ಮಧ್ಯಕಾಲೀನ ವಚನ ಸಾಹಿತ್ಯ ಅಂಗಳದಲ್ಲಿ ಬಸವ-ಚನ್ನಬಸವ-ಅಲ್ಲಮರ ವಚನಗಳು ಎಲ್ಲ ವರ್ಗದ ಜನರ ಗಮನ ಸೆಳೆದಿವೆ. ಚನ್ನಬಸವಣ್ಣನವರು ಇಡೀ ಅನುಭವ ಮಂಟಪದ ಶರಣ ಸಂದೋಹದಲ್ಲಿ ಅತ್ಯಂತ ಕಿರಿಯ ವಯಸ್ಸಿನ ತರುಣ ಶರಣ. ಎಲ್ಲ ಹಿರಿಯರ ಪ್ರೀತಿಗೆ ಪಾತ್ರನಾದವನು. ಇಡೀ ಜ್ಞಾನಿ ಸಂಕುಲದಲ್ಲಿಯೇ ಆತ ಅವಿರಳಜ್ಞಾನಿಯಾದವನು. ಉಳಿದೆಲ್ಲ ಶರಣರಗಿಂತ ವಯಸ್ಸಿನಲ್ಲಿ ಅತ್ಯಂತ ಸಣ್ಣವನಾದರೂ ತತ್ವಚಿಂತನೆಯಲ್ಲಿ ಹಿರಿಯತನ ಮೆರೆದವನು.
ಚನ್ನಬಸವಣ್ಣಣವರು ಕೇವಲ ವಚನಗಳನ್ನು ಮಾತ್ರ ಬರೆದಿಲ್ಲ. ವಚನೇತರ ಸಾಹಿತ್ಯವನ್ನು ರಚಿಸಿದ್ದಾರೆ. ಅವರು ರಚಿಸಿದ ಒಂದು ಲೋಕೋತ್ತರ ಕೃತಿ ‘ಕರಣ ಹಸಿಗೆ’. ಈ ಕೃತಿ ಇಂದಿನ ವೈದ್ಯಲೋಕಕ್ಕೆ ಒಂದು ವಿಸ್ಮಯ. ಕರಣ ಹಸಿಗೆಯಲ್ಲದೆ, ಘಟಚಕ್ರ, ಸಕೀಲದ ವಚನ, ಪದಮಂತ್ರಗೋಪ್ಯ, ಹಿರಿಯ ಮಂತ್ರಗೋಪ್ಯ, ಸ್ವರವಚನ, ಮಿಶ್ರಾರ್ಪಣ ಮೊದಲಾದ ವಚನೇತರ ಕಿರುಕೃತಿಗಳನ್ನು ರಚಿಸಿದ್ದಾರೆ. ಆಧುನಿಕ ಕಾಲ ಘಟ್ಟದಲ್ಲಿಯೂ ಚನ್ನಬಸವಣ್ಣನವರ ಜೀವನ ಸಂದೇಶ ಕುರಿತು ಪ್ರಕಟವಾದ ಕೃತಿಗಳ ಸಂಖ್ಯೆ ವಿರಳವೆಂದೇ ಹೇಳಬೇಕು.
ಚನ್ನಬಸವಣ್ಣನವರ ಜೀವನದಲ್ಲಿ ಕೆಲವು ಪ್ರಮುಖವಾದ ಘಟ್ಟಗಳು ಬರುತ್ತವೆ. ಚನ್ನಬಸವಣ್ಣನವರ ಜನನದ ವಿಷಯ, ಚನ್ನಬಸವಣ್ಣನವರ ದೀಕ್ಷಾ ವಿಷಯ. ಚನ್ನಬಸವಣ್ಣನವರು ಅನುಭವ ಮಂಟಪದಲ್ಲಿ ನಿರ್ವಹಿಸಿದ ಪಾತ್ರ, ಚಿಕ್ಕದಣ್ಣಾಯಕರಾಗಿ ಮಾಡಿದ ಕೆಲಸ, ಬಸವಣ್ಣನವರು ಸ್ಥಾಪಿಸಿದ ಶೂನ್ಯಪೀಠದ ಎರಡನೆಯ ಅಧಿಪತಿಯಾಗಿ ಮಾಡಿದ ಸೇವೆ, ಅದೇ ಕಾಲಘಟ್ಟದಲ್ಲಿ ಕಲ್ಯಾಣದಲ್ಲಿ ಜರುಗಿದ ವಿಪ್ಲವ. ಶರಣರನ್ನು ಮತ್ತು ಶರಣರು ರಚಿಸಿದ ವಚನ ಕಟ್ಟುಗಳನ್ನು ಸಂರಕ್ಷಿಸುವ ಮಹಾಮಣಿಹವನ್ನು ಪೂರೈಸುವ ಮಹತ್ವದ ಜವಾಬ್ದಾರಿ ಚನ್ನಬಸವಣ್ಣನವರ ಮೇಲಿತ್ತು. ಈ ವಿಷಯಗಳ ಮೇಲೆ ಬೆಳಕು ಚೆಲ್ಲುವ ಮಹತ್ವದ ಕೃತಿಗಳು ಬಂದಿಲ್ಲವೆAದೇ ಹೇಳಬೇಕು.
ಚನ್ನಬಸವಣ್ಣನವರ ಜೀವನ ಕುರಿತು ಬರೆಯಲು ಹೊರಟವರಿಗೆ ಹೆಚ್ಚು ಕಾಡುವುದು ಅವರ ಜನನದ ವಿಷಯವೇ ಆಗಿದೆ. ಈ ಹಿಂದೆ ಡಾ. ಎಂ. ಎಂ. ಕಲಬುರ್ಗಿ ಅವರು ಚನ್ನಬಸವಣ್ಣನವರ ಜನನದ ವಿಷಯವಾಗಿ ಒಂದು ಲೇಖನ ಬರೆದರು. ಇದು ಇಡೀ ಕರ್ನಾಟಕದ ಲಿಂಗಾಯತ ಸಮುದಾಯವನ್ನು ಕೆರಳಿಸಿತು. ಡಾ. ಕಲಬುರ್ಗಿ ಅವರು ಕೊನೆಗೆ ಧಾರವಾಡ ಮುರುಘಾಮಠದಲ್ಲಿ ಕ್ಷಮೆ ಕೇಳುವ ಮೂಲಕ ಈ ಘಟನೆ ಸುಖಾಂತವಾಗಿತ್ತು. ಡಾ. ಕಲಬುರ್ಗಿ ಅವರು ತಮ್ಮ ಮುಂದಿನ ಮಾರ್ಗ ಸಂಪುಟಗಳ ಮರುಮುದ್ರಣದ ಸಂದರ್ಭದಲ್ಲಿ ಆ ಬಗೆಯ ಮೂರು ಲೇಖನಗಳನ್ನು ತೆಗೆದು ಹಾಕಿದರು.
ನಡುಗನ್ನಡ ಕಾಲದ ಕಾವ್ಯಗಳಲ್ಲಿ ಸಿಂಗಿರಾಜನ ‘ಅಮಲ ಬಸವ ಚಾರಿತ್ರ’ ಅಥವಾ ‘ಸಿಂಗಿರಾಜ ಪುರಾಣ’ ಹೊರತು ಪಡಿಸಿ, ಎಲ್ಲವೂ ಚನ್ನಬಸವಣ್ಣನವರ ಜನನದ ವಿಷಯವಾಗಿ ತಪ್ಪು ಕಲ್ಪನೆಯನ್ನೇ ಮೂಡಿಸಿವೆ. ವಿರೂಪಾಕ್ಷ ಪಂಡಿತನ ಚನ್ನಬಸವ ಪುರಾಣದಲ್ಲಿ ಚನ್ನಬಸವಣ್ಣನವರ ತಂದೆಯ ಉಲ್ಲೇಖವಿಲ್ಲ. ಆದರೆ ಸಿಂಗಿರಾಜನ ‘ಸಿಂಗಿರಾಜ ಪುರಾಣ’ದಲ್ಲಿ ಮಾತ್ರ ನಾಗಮ್ಮನ ಪತಿ, ಚನ್ನಬಸವಣ್ಣನವರ ತಂದೆ ‘ಶಿವದೇವ’ ಎಂಬ ಸಂಗತಿ ಎರಡು-ಮೂರು ಕಡೆ ಪ್ರಸ್ತಾಪವಾಗಿದೆ. ಇದೊಂದು ಸಮಾಧಾನದ ಸಂಗತಿಯೆಂದೇ ಹೇಳಬೇಕು.
ಕರವೂರ ನಿರಹಂಕಾರ-ಸುಜ್ಞಾನಿದೇವಿಯರ
ಬಸುರಲ್ಲಿ ಬಂದರೆನ್ನಬಹುದೆ ಪ್ರಭುದೇವರ?
ಮಂಡಗೆಯ ಮಾದಿರಾಜ- ಮಾದಲಾಂಬಿಕೆಯಮ್ಮನವರ
ಬಸುರಲ್ಲಿ ಬಂದರೆನ್ನಬಹುದೆ ಬಸವೇಶ್ವರನ?
ಅಕ್ಕನಾಗಲಾಂಬಿಕೆಯಮ್ಮನ ಬಸುರಲ್ಲಿ
ಬಂದರೆನ್ನಬಹುದೆ ಚೆನ್ನಬಸವೇಶ್ವರನ?
ಮೊರಡಿಯ ಮುದ್ದುಗೌಡ-ಸುಗ್ಗವ್ವೆಯ[ರ]
ಬಸುರಲ್ಲಿ ಬಂದೆರೆನ್ನಬಹುದೆ ಸಿದ್ಧರಾಮೇಶ್ವರನ?
ಇವರು ಒಬ್ಬರಿಂದಾದವರಲ್ಲ, ತಮ್ಮಿಂದ ತಾವಾದರು.
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ [ನಿಲ್ಲು] ಮಾಣು.
ಘಟ್ಟಿವಾಳಯ್ಯನಂತಹ ಶರಣ ಬರೆದ ಈ ವಚನದಲ್ಲಿ ಚನ್ನಬಸವಣ್ಣನವರ ತಂದೆಯ ಹೆಸರು ಉಲ್ಲೇಖವಾಗದ ಕಾರಣಕ್ಕಾಗಿ ಬೆಳಗಾವಿಯಲ್ಲಿ ರಂ.ಶಾ. ಲೋಕಾಪುರ ಎಂಬ ಸಂಶೋಧಕರೊಬ್ಬರಿದ್ದರು. ಅವರು ‘ಕನ್ನಡ ಸಾಹಿತ್ಯ ಮತ್ತು ಅವೈದಿಕತೆ’ ಎಂಬ ಗ್ರಂಥ ಬರೆದು, ಅದರಲ್ಲಿ ಈ ವಚನವನ್ನು ಉಲ್ಲೇಖಿಸಿ ಚನ್ನಬಸವಣ್ಣನವರ ಜನನದ ವಿಷಯವಾಗಿ ಕೆಲವು ಅಪಬದ್ಧ ಪದಗಳನ್ನು ಬರೆದಿದ್ದರು. ಇದೇ ಘಟನೆಯನ್ನೇ ಆಧರಿಸಿ ಪಿ.ವಿ.ನಾರಾಯಣ ಎಂಬ ಲೇಖಕ ‘ಧರ್ಮ ಕಾರಣ’ ಎಂಬ ಕಾದಂಬರಿಯನ್ನು ರಚಿಸಿದ. ಈ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡುವ ಸಂದರ್ಭದಲ್ಲಿ ಕರ್ನಾಟಕದ ಲಿಂಗಾಯತರು ಅದನ್ನು ವಿರೋಧಿಸಿದರು. ಆಗ ಕರ್ನಾಟಕದಲ್ಲಿ ಜೆ.ಎಚ್.ಪಟೇಲರು ಮುಖ್ಯಮಂತ್ರಿ ಆಗಿದ್ದರು. ತಕ್ಷಣ ಅವರು ಈ ಕೃತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದರು. ಈ ವಿಷಯವಾಗಿ ಕೆಲವು ತಥಾಕಥಿತ ಬುದ್ಧಿಜೀವಿಗಳು ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವೆಂದು ಸರ್ವೋಚ್ಚ ನ್ಯಾಯಾಲಯಕ್ಕೆ ಹೋದರು. ಸುದೀರ್ಘ ವಿಚಾರಣೆ ನಂತರ, ನ್ಯಾಯಾಲಯವು ‘ಧರ್ಮ ಕಾರಣ’ ಒಂದು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ಕೃತಿಯೆಂದೂ, ಅದನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದ್ದು ಸರಿಯೆಂದು ನಿರ್ಣಯ ಕೊಟ್ಟಿತು. ಇದು ಚನ್ನಬಸವಣ್ಣನವರ ವಿಷಯವಾಗಿ ನಡೆದ ಗಲಾಟೆಯ ವಿಷಯ.
ಲಿಂಗಾಯತ ಧರ್ಮದ ಕುರಿತು ಇಂದು ಹೆಚ್ಚು ಚರ್ಚೆ ನಡೆಯುತ್ತಿದೆ. ಬಸವಣ್ಣನವರ ಮತ್ತು ಅಲ್ಲಮಪ್ರಭುದೇವರ ವಚನಗಳು ಹೆಚ್ಚು ಸಂಪ್ರದಾಯವಾದಿಗಳ ಗಮನ ಸೆಳೆದಿಲ್ಲ, ಆದರೆ ಚನ್ನಬಸವಣ್ಣನವರ ವಚನಗಳು ಸಂಪ್ರದಾಯಪ್ರಿಯರಿಗೆ ಹೆಚ್ಚು ಮೆಚ್ಚುಗೆ ಆಗಿ, ಈ ವಚನಗಳಲ್ಲಿ ಕೆಲವು ಪ್ರಕ್ಷಿಪ್ತ ಅಂಶಗಳನ್ನು ಸೇರಿಸಿರಬಹುದು ಎಂಬ ಸಂದೇಹ ಕಾಡುತ್ತದೆ. ಈ ವಿಷಯವಾಗಿ ಡಾ. ಎಂ. ಎಂ. ಕಲಬುರ್ಗಿ ಅವರು ಹೇಳುವ ನುಡಿಗಳು ಮಾರ್ಮಿಕವಾಗಿವೆ : “ಇತಿಹಾಸದುದ್ದಕ್ಕೂ ಬಸವಣ್ಣ ಪ್ರಭುದೇವರ ಚಿಂತನೆಗಳು ಹಿಂದೆಬಿದ್ದು, ಅವರ ವಚನಗಳು ಧಾರ್ಮಿಕರು ಮಾಡಬಹುದಾದ ಪಾಠಾಂತರ ದಾಳಿಯಿಂದ ದೂರ ಉಳಿದಿವೆ. ಚನ್ನಬಸವಣ್ಣನವರ ಚಿಂತನೆಗಳು ಮುಂದೆ ಬಂದು, ಅವರ ವಚನಗಳಿಗೆ ಸಹಜವಾಗಿಯೇ ಎಲ್ಲ ಧಾರ್ಮಿಕ ಕೃತಿಗಳಿಗೆ ಅಂಟಬಹುದಾದ ಪಾಠಾಂತರ ದೋಷಗಳು ಕಾಲಕ್ರಮದಲ್ಲಿ ಅಂಟಿಕೊಂಡಿವೆ”(ಎಂ. ಎಂ. ಕಲಬುರ್ಗಿ : ಚನ್ನಬಸವಣ್ಣನವರ ವಚನ ಮಹಾಸಂಪುಟ ಪ್ರಸ್ತಾಪವನೆ ಪು. ೧)
ಚನ್ನಬಸವಣ್ಣನವರ ಜೀವನ ಕುರಿತು ಡಾ. ಎಚ್. ತಿಪ್ಪೇರುದ್ರ ಸ್ವಾಮಿ ಅವರು ‘ಅವಿರಳಜ್ಞಾನಿ ಚನ್ನಬಸವಣ್ಣ’ ಮತ್ತು ‘ಅಳಿವಿನಿಂದ ಉಳವಿಗೆ’ ಎಂಬ ಎರಡು ಮಹತ್ವದ ಕೃತಿಗಳನ್ನು ರಚಿಸಿದ್ದಾರೆ. ಇತ್ತೀಚೆಗೆ ನಿರುಪಾಧಿ ಸ್ವಾಮಿಗಳು ಒಂದು ಮಹಾಕಾವ್ಯವನ್ನೇ ರಚಿಸಿದ್ದಾರೆ. ಹೀಗಿದ್ದೂ ಈ ವಿಷಯವಾಗಿ ಇನ್ನಷ್ಟು ಗಂಭೀರವಾಗಿ ಅಧ್ಯಯನ ಮಾಡುವ ಮೂಲಕ, ಚನ್ನಬಸವಣ್ಣನವರ ಜೀವನ ಮತ್ತು ಸಂದೇಶಗಳನ್ನು ವಾಸ್ತವ ನೆಲೆಯಲ್ಲಿ ವಿಶ್ಲೇಷಣೆ ಮಾಡಬೇಕೆಂಬುದು ಇಲ್ಲಿಯ ಆಶಯವಾಗಿದೆ. ( ಚಿತ್ರ ಕೃಪೆ : ಅಂತರ್ಜಾಲ )
ಪ್ರಕಾಶ ಗಿರಿಮಲ್ಲನವರ
ಬೆಳಗಾವಿ
ಮೊ. 9902130041