ನಾವೆಲ್ಲ ಆಗಿನ್ನೂ ಪುಟ್ಟ ಪೇಟಿಕೋಟು ಹಾಕಿಕೊಂಡು ಊರೆಲ್ಲ ಸುತ್ತುತ್ತಿದ್ದ ಸಮಯ. ಪುಟ್ಟ ಪುಟಾಣಿಗಳ ದಂಡು ತೊದಲ್ನುಡಿಗಳನ್ನಾಡುತ್ತ, ದೊಡ್ಡ ಆಲದ ಮರದ ಕೆಳಗೆ ದೊಡ್ಡವರಂತೆ ಅಡುಗೆ ಮಾಡುವ ಆಟದಲ್ಲಿ ತಲ್ಲೀನರಾಗಿರುತ್ತಿದ್ದೆವು. ಬಯಲು ಸೀಮೆ ನಮ್ಮದು ಹೀಗಾಗಿ ನೆತ್ತಿ ಸುಡುವ ಸೂರ್ಯನ ಪರಿಚಯ ಜಾಸ್ತಿ.ಮಳೆ ರಾಯನ ಆರ್ಭಟ ಕಾಣಿಸಿದರೆ ನಮಗೆಲ್ಲ ಹಬ್ಬವೋ ಹಬ್ಬ. ಆಟದಲ್ಲಿ ತಲ್ಲೀನರಾಗಿರುತ್ತಿದ್ದ ನಾವು ಪುಟ್ಟ ಪುಟ್ಟ ಕೈಗಳನ್ನು ಜೋಡಿಸಿ ಸುತ್ತುವರೆದು ಕುಣಿಯಲು ಶುರು ಮಾಡುತಿದ್ದೆವು. ಆಗ ತಾನೆ ಹನಿ ಒಡೆಯುತ್ತಿದ್ದ ಮಳೆಯನ್ನು “ಕಾರ ಮಳೆಯೆ ಕಪ್ಪತ ಮಳೆಯೇ ಸುರಿ ಮಳೆಯೇ ಸುರಿ ಮಳೆಯೇ” ಎಂದು ಹಾಡಿ ಸಂಭ್ರಮದಿಂದ ಸ್ವಾಗತಿಸುತ್ತಿದ್ದ ಪರಿ ಇಂದಿಗೂ ಮಳೆ ಕಂಡಾಗಲೊಮ್ಮೆ ತಪ್ಪದೇ ಕಣ್ಮುಂದೆ ಬಂದು ನಿಲ್ಲುವುದು.
ಮಳೆಗಾಲದಾಗ ಗೆಳತಿಯರೆಲ್ಲ ಶಾಲೆಗೆ ಹೋಗುವ ದೃಶ್ಯವಂತೂ ಕಣ್ಣಲ್ಲಿಯೇ ಕಟ್ಟಿದಂತಿದೆ.ಈಗಿನಂತೆ ಆಗ ಮಳೆಗಾಲದಲ್ಲಿ ಛತ್ರಿಗಳ ಹಾವಳಿ ಇರಲಿಲ್ಲ. ಗೋಣಿ ಚೀಲ ಗೊಬ್ಬರ ಚೀಲ, ಕರಿ ಕಂಬಳಿಗಳದ್ದೇ ಕಾರುಬಾರು ಜೋರು. ಅವುಗಳನ್ನೇ ತ್ರಿಕೋನಾಕಾರವಾಗಿ ಮಡಚಿ ತಲೆಗೆ ಹಾಕಿಕೊಂಡು ಸುರಿಯುವ ಮಳೆಯಲ್ಲಿ ನಮ್ಮ ಮನೆಗೆ ಗೆಳತಿಯರ ದಂಡೇ ಬರುತ್ತಿತ್ತು. ನಮ್ಮ ಅಜ್ಜನ ಕೊಡೆ ಕಪ್ಪು ಮುಖದ್ದಿತ್ತು. ಆಗಿನ ಕೊಡೆಗಳಿಗೆಲ್ಲ ಕಪ್ಪು ಮುಖವೇ! ಅಜ್ಜ ಅದನ್ನು ಊರುಗೋಲಾಗಿ ಬಳಸುತ್ತಿದ್ದ. ಶಾಲೆಗೆ ಹೋಗುವಾಗ ಮಾತ್ರ ತಪ್ಪದೇ ಪ್ರೀತಿಯಿಂದ ನನ್ನ ಕೈಗಿಡುತ್ತ “ಪುಟ್ಟಿ, ಮರಿಲಾರದ ಇದನ್ನ ಮರಳಿ ತುಗೊಂಡು ಬಾ. ಇದು ನನ್ನ ಜೀವದ ಕೋಲು” ಅಂತ ಹೇಳಲು ಮರೆಯುತ್ತಿರಲಿಲ್ಲ. ಗೆಳತಿಯರೆಲ್ಲ “ಎಷ್ಟ ದೊಡ್ಡದದ ಅಲ್ಲ ಅಜ್ಜನ ಕೊಡೆ” ಅಂತ ತಾವೂ ಚೀಲ ಹೊತ್ತಿದ್ದ ತಲೆಗಳನ್ನು ಕೊಡೆ ಕೆಳಗೆ ತೂರಿಸುತ್ತಿದ್ದರು.ಅಲ್ಲಲ್ಲಿ ನಿರ್ಮಾಣಗೊಂಡ ಹೊಂಡಗಳಲ್ಲಿ ಕಾಗದ ದೋಣಿ ಬಿಡುತ್ತ ಕಪ್ಪೆ ಮರಿ ಹಿಡಿಯುತ್ತ ನೀರ ಗುಳ್ಳೆಗಳನ್ನು ಎಣಿಸುತ್ತ ಶಾಲೆ ಮುಖ ನೋಡುವದರೊಳಗೆ ಅರ್ಧ ಶಾಲೆ ವೇಳೆ ಮುಗಿದಿರುತ್ತಿತ್ತು. ಗುರುಗಳು ಬೈದ ಯಾವ ಬೈಗುಳಗಳು ಮನಸ್ಸಿಗೆ ತಾಕುತ್ತಿರಲ್ಲಿಲ್ಲ. ಮಳೆಯಲ್ಲಾಡಿದ ಆಟಗಳೇ ಮನಸ್ಸಿನ ತುಂಬಾ ಆವರಿಸಿರುತ್ತಿದ್ದ ಕ್ಷಣಗಳು, ಒದ್ದೆಯಾದ ಸಮವಸ್ತ್ರದಲ್ಲಿ ಮುದ್ದೆಯಾಗಿ ಕುಳಿತು ಕೇಳಿದ ಪಾಠಗಳು ಈ ಗಳಿಗೆಯಲ್ಲೂ ಎದೆಯ ಗೂಡಿನಲ್ಲಿ ಅವಿತು ಕುಳಿತಿವೆ.
ಅದೊಂದು ದಿನ ನಾನು, ನನ್ನ ಮುದ್ದು ತಮ್ಮ ಶಂಕರ, ಮಳೆ ಹಿಡಿದಿದ್ದರಿಂದ ಮಧ್ಯಾಹ್ನದ ಶಾಲೆಗೆ ತುಸು ತಡವಾಗಿ ತೆರಳುತ್ತಿದ್ದೆವು. ಅದೇ ದಾರಿಯಲ್ಲಿ ನನ್ನ ಗೆಳತಿ ಭಾರತಿ ಅವಳ ತಮ್ಮ (ನನ್ನ ತಮ್ಮನ ಗೆಳೆಯ) ನಮ್ಮಜ್ಜನ ಕೊಡೆಯಲ್ಲಿ ಜೊತೆಗೂಡಲು ತಯಾರಾಗಿ ನಿಂತಿದ್ದರು. “ಊರ ಹೊರಗಿರುವ ನಿಮ್ಮ ಸಾಲಿ ಮುಟ್ಟುವದ್ರೊಳಗ ಸಾಲಿ ಬಿಡು ಗಂಟಿ ಹೊಡಿತದ. ತಂಪ ಗಾಳಿ ಬೀಸಾಕತ್ತದ. ಒಗ್ಗರಣಿ ಚುರುಮರಿ ಮಾಡೇನಿ ಈಗ ಮಿರ್ಚಿ ಬಜಿ ಕರೀತಿನಿ ತಿನ್ರೀ” ಎಂದರು.ಅವರ ತಾಯಿ. ಚುರುಮರಿ ಬಜಿ ಎಂಬ ಶಬ್ದ ಕೇಳಿದ ಕಿವಿಗಳು ಕಾಲುಗಳನ್ನು ಶಾಲೆಗೆ ಹೋಗದಂತೆ ತಡೆದವು. ಬಾಣಲೆಯಿಂದ ನೇರವಾಗಿ ನಮ್ಮ ತಟ್ಟೆಗಳಿಗೆ ಬಿಸಿ ಬಜಿ ಬೀಳುತ್ತಲೇ ಇದ್ದವು. ಅದರೊಂದಿಗೆ ಒಗ್ಗರಣಿ ಚುರುಮರಿಯೂ ಬೀಳುತ್ತಿತ್ತು. ಸ್ಪರ್ಧೆಗೆ ಬಿದ್ದವರಂತೆ ತಿನ್ನುತ್ತಿದ್ದಾಗ ಮಿರ್ಚಿ ಕಡಿದೆ ಬಾಯಲ್ಲಿ ಬೆಂಕಿ ಇಟ್ಟಂತಾಯ್ತು. ಹಾ ಹಾ ಅಂತ ಚೀರ ತೊಡಗಿದೆ. ಗೆಳತಿಯ ತಾಯಿ “ಮಿರ್ಚಿ ಕಡದೆನ ಬೆಲ್ಲ ತಿನ್ನ ಹಿಡಿ.” ಎಂದಾಗ ಹಾಗೂಡುತ್ತಲೇ “ಬೇಡ, ಇನ್ನೊಂದು ಮಿರ್ಚಿ ಕೊಡ್ರಿ ಎಂದೆ.” ಮನೆ ಮಂದಿಯೆಲ್ಲ ಗೊಳ್ಳೆಂದು ನಕ್ಕ ಅ ಚಿತ್ರ ನನ್ನ ಕಣ್ಣಿಂದ ಇನ್ನೂ ಹಿಂದೆ ಸರಿದಿಲ್ಲ.
ಅದೇ ದಿನ ಆಗಸದಲ್ಲಿ ಮಳೆ ಬಿಲ್ಲು ಬಿದ್ದಿತ್ತು ಅದನ್ನು ಸವಿಯೋಣವೆಂದು ಊರ ಹೊರಗಿರುವ ಹನುಮಂತನ ಗುಡಿಗೆ ಪಯಣ ಬೆಳೆಸಿದೆವು.ಸಣ್ಣಗೆ ಥೂ ಥೂ ಅಂತ ಉಗುಳುತ್ತಿದ್ದ ಮಳೆ ನೋಡ ನೋಡುತ್ತಿದ್ದಂತೆ ಪ್ರವಾಹದಂತೆ ಹರಿಯತೊಡಗಿತು. ಹನುಮಂತನಿಗೆ ಕೈ ಜೋಡಿಸಿದ್ದೆ ಮನಸ್ಸು ಮಾತ್ರ ಮಳೆಯಲ್ಲಿ ನೆನೆಯುವಂತೆ ಹಟ ಹಿಡಿದಿತ್ತು. ನನಗೂ ತಡೆಯಲಾಗಲಿಲ್ಲ. ಗೆಳತಿಯ ಕೈ ಹಿಡಿದು ಗುಡಿಯ ಅಂಗಳಕ್ಕೆ ಜಿಗಿದೆ.ತಲೆ ಮೇಲೆ ತಬಲ ಬಾರಿಸಿದಂತೆ ಬಾರಿಸಿ, ಕ್ಷಣಾರ್ಧದಲ್ಲಿ ಮುಖ ಕುತ್ತಿಗೆ ಭುಜಗಳಲ್ಲಿ ಹರಿದು ಒಳ ಹೊರಗನ್ನು ತೋಯಿಸಿತು. ತಮ್ಮಂದಿರು ಹೋ ಎಂದು ಕಿರುಚುತ್ತ ಮಳೆಗೆ ಮೈಯೊಡ್ಡಿದರು. ಮನಸಾರೆ ತೋಯಿಸಿಕೊಂಡೆವು. ಬೊಗಸೆಯಲ್ಲಿ ನೀರು ಹಿಡಿದು ಒಬ್ಬರಿಗೊಬ್ಬರು ಗೊಜ್ಜುತ್ತ ಓಡಾಡಿದೆವು. ಹರಿಯುವ ನೀರಲ್ಲಿ ಕೈ ಕೈ ಹಿಡಿದು ಕುಣಿದಾಡಿದೆವು. ಉರುಳು ಸೇವೆಯನ್ನು ಹಾಕುತ್ತ ಕೇಕೆ ಹಾಕುತ್ತಿದ್ದ ತಮ್ಮಂದಿರು ಮಳೆಯ ನೀರಿನಿಂದ ತುಂಬಿದ್ದ ಬಕೆಟ್ ನೀರನ್ನು ಎರಚಿದಾಗ ಉರುಳು ಸೇವೆ ನಿಲ್ಲಿಸಿದ್ದರು. ಅಷ್ಟರಲ್ಲೇ ಆಲಿಕಲ್ಲು ಬೀಳಲು ಶುರುವಾದವು. ಅವು ಬಿದ್ದ ಕಡೆಗೆಲ್ಲ ಓಡೋಡಿ ಹೊಗುವಾಗ ನಾವೂ ಜಾರಿ ಬಿದ್ದು ನಗುತ್ತ ಮೇಲೆದ್ದು ಆಲಿಕಲ್ಲು ಆಯ್ದುಕೊಂಡು ತಿಂದೆವು. ಗುಡುಗೊಂದು ಜೋರಾಗಿ ಗುಡುಗಿತು.ಮಿಂಚು ನಕ್ಕಿತು. ನಾವಂತೂ ಇಲ್ಲಿಯವರೆಗೆ ಮಳೆಯಲ್ಲಿ ಈ ರೀತಿ ಆಡಿರಲೇ ಇಲ್ಲ. ಮಳೆಯಾಟದಲ್ಲಿ ತೊಯ್ದು ತೊಪ್ಪೆಯಾದ ಅನುಭವ ಅದ್ಭುತವಾಗಿತ್ತು. ಅಂದು ಸುರಿದ ಮಳೆ ನಮ್ಮನ್ನು ಬಾವುಕ ಲೋಕಕ್ಕೆ ಕರೆದೊಯ್ದಿತ್ತು. ಅಂದಿನ ಆ ಮಳೆ ಹನಿಗಳು ಇಂದಿಗೂ ತನ್ನ ನೆನಪನ್ನು ಮನದಂಗಳದಲ್ಲಿ ತೊಟ್ಟಿಕ್ಕಿಸುತ್ತಿದೆ.
ಪ್ರಕೃತಿಯ ಅನೇಕ ವಿಸ್ಮಯಗಳಲ್ಲಿ ಮಳೆ ದೊಡ್ಡದು ಅನಿಸುತ್ತದೆ. ನಮ್ಮ ಬಾಳಿನ ಜೋಳಿಗೆಯಲ್ಲಿ ತನ್ನ ಮಧುರ ನೆನಪುಗಳನ್ನು ತುಂಬುತ್ತದೆ. ಮಳೆ ಒಂದು ದೃಶ್ಯ ಕಾವ್ಯ. ಇದು ಸದಾ ಮನದ ಪರದೆಯ ಮೇಲೆ ಬಿಚ್ಚಿಕೊಳ್ಳುತ್ತದೆ.ಒಮ್ಮೊಮ್ಮ ತುಂತುರು ಮತ್ತೊಮ್ಮೆ ಮುಗಿಲಿಗೆ ತೂತಾಗಿದೆಯೇನೋ ಎಂಬ ಅನುಮಾನ ಹುಟ್ಟಿಸಿ, ಭೂಮಿ ಬಾನು ಒಂದಾಗಿಸಲು ಹಟಕ್ಕೆ ಬಿದ್ದವರಂತೆ ಧೋ ಎಂದು ಕಣ್ಮುಚ್ಚಿ ಸುರಿಯುತ್ತದೆ. ಗುಡುಗು ಸಿಡಿಲು ಕೋಲ್ಮಿಂಚುಗಳ ಅಬ್ಬರದಲ್ಲಿ ಹಣಿಯುವ ಮಳೆ. ಎರಡ್ಮೂರು ದಿನಗಳವರೆಗೆ ಉರಿಯುವ ಸೂರ್ಯ ತನ್ನ ಕೆಲಸಕ್ಕೆ ರಜೆ ಹಾಕುವ ಹಾಗೆ ಮಾಡಿ ನಮ್ಮನ್ನು ಮನೆಯಲ್ಲಿ ಕೂಡಿ ಹಾಕಿ ರೇಜಿಗೆಬ್ಬಿಸುವ ಮಳೆ ಊರನ್ನು ದ್ವೀಪವಾಗಿಸುತ್ತಿತ್ತು. ಹೊರಗಿನ ಸಂಪರ್ಕವಿಲ್ಲದೇ ಹೋಗುತ್ತಿತ್ತು. ಹಳೆಯ ಮರಗಳು ದೊಪ್ಪೆಂದು ಬಿದ್ದು ವಿದ್ಯುತ್ ಇಲ್ಲದೇ ಮಿನಕ್ ಎನ್ನುತ್ತಿದ್ದ ಚಿಮಣಿ ಇಲ್ಲವೇ ಲಾಟಾನಿನ ಕೆಳಗೆ ಓದುವ ಪ್ರಸಂಗ ತರುತ್ತಿತ್ತು. ಸ್ವಲ್ಪ ಬಿಡುವು ನೀಡಿದಾಗ ಬಾನಲ್ಲಿ ರವಿ ಇಣುಕಿ ನಗುತ್ತಿದ್ದ ಭೂತಾಯಿ ಹುಲ್ಲಿನ ಎಳೆಗಳಿಂದ ನೇಯ್ದ ಹಚ್ಚ ಹಸಿರಿನ ಸೀರೆಯನ್ನುಟ್ಟು ಹಿಗ್ಗಿದ ಮೊಗ್ಗುಗಳನ್ನು ಮುಡಿಯಲ್ಲಿ ಮುಡಿದು ಕಂಗೊಳಿಸುತ್ತಿದ್ದಳು.
ಮಳೆ ಬಿಸಿಲ ಬೇಗುದಿಗೆ ಬೆಂದ ಭುವಿಯನ್ನು ಸಾವಿರಾರು ಜೀವಿಗಳ ಒಡಲಾಳವನ್ನು ತಂಪಾಗಿಸುತ್ತದೆ.. ಮಳೆ ಹೊರ ಹೊಮ್ಮಿಸುವ ಮಣ್ಣಿನ ಘಮ ಸುಂದರ ಅನುಭವವೇ ಸರಿ. ಅನ್ನದಾತ ನೆಲ ಊಳುವ, ಕಾಳು ಬಿತ್ತುವ ಸಂಭ್ರಮ ಎಲ್ಲೆಡೆ ಕಣ್ತುಂಬಿಸುತ್ತದೆ.ಕೆಲವೊಮ್ಮೆ ಕತ್ತೆ ಮದುವೆ ಮಾಡಿಸಿದರೂ ಧರೆಗಿಳಿಯದೆ ಸಹಿಸಲಾರದ ಬರದ ಬರೆಯನ್ನು ನಮ್ಮ ಕೈಗಿತ್ತು ದೀರ್ಘ ರಜೆಯ ಮೇಲೆ ತೆರಳಿ ಹಸಿವಿನಿಂದ ಬಳಲಿಸುತ್ತಾನೆ ಈ ವರುಣ.
ಮಳೆಯ ಸಂಜೆಯಲ್ಲಿ ಹಬೆಯಾಡುವ ಚಹದೊಂದಿಗೆ ಅವ್ವ ಒಲೆಯ ಕೆಂಡದಲ್ಲಿ ಸುಟ್ಟು ಕೊಟ್ಟ ಹೆಸರಿನ ಹಪ್ಪಳವನ್ನು ಕುರುಂ ಕುರುಂ ತಿನ್ನುತ್ತಿದ್ದ ಖುಷಿ ಮೊನ್ನೆ ಬಿದ್ದ ಮಳೆಗೆ ಮತ್ತಷ್ಟು ಕಾಡಿಸಿತು. ಇವೆಲ್ಲ ಬಾಲ್ಯದಲ್ಲಿ ಬಿದ್ದ ಮಳೆಯ ನೆನಪುಗಳು ಇದೀಗ ಮಳೆ ಬೀಳುವುದನ್ನು ಟಿವಿಗಳಲ್ಲಿ ನೋಡಿ ವಾಟ್ಸಪ್ ಫೇಸ್ ಬುಕ್‌ಗಳಲ್ಲಿ ಹಂಚಿಕೊಳ್ಳುವ ಕಾಲ ಕಂಡು ಇದೆಲ್ಲ ಮತ್ತೆ ನೆನಪಾಯ್ತು ತಮ್ಮೊಂದಿಗೆ ಹಂಚಿಕೊಂಡೆ.
ಜಯಶ್ರೀ.ಜೆ. ಅಬ್ಬಿಗೇರಿ
ಉಪನ್ಯಾಸಕರು
ಸ ಪ ಪೂ ಕಾಲೇಜು ಹಿರೇಬಾಗೇವಾಡಿ
ತಾ:ಜಿ: ಬೆಳಗಾವಿ
೯೪೪೯೨೩೪೧೪೨