ಅವಿಭಜಿತ ವಿಜಯಪುರ ಜಿಲ್ಲೆಯ ಶರಣರ ಸ್ಮಾರಕಗಳು
ಐತಿಹಾಸಿಕ ನಗರಿ, ವಿಶ್ವಗುರು ಬಸವಣ್ಣನವರ ಜನ್ಮಭೂಮಿ, ಭಾಸ್ಕರಾಚಾರ್ಯರು, ನಡೆದಾಡುವ ದೇವರು ಸಿದ್ದೇಶ್ವರ ಸ್ವಾಮೀಜಿಯವರ ನೆಲ ವಿಜಯಪುರ ಜಿಲ್ಲೆಗೆ ತನ್ನದೇ ಆದ ಐತಿಹ್ಯವಿದೆ. ವಿಜಯಪುರದ ಪುರಾತನ ಹೆಸರು ಬಿಜ್ಜನಹಳ್ಳಿ. ಹತ್ತು ಹನ್ನೊಂದನೆಯ ಶತಮಾನಗಳಲ್ಲಿ ಕಲ್ಯಾಣ ಚಾಲುಕ್ಯರಿಂದ ಬಿಜ್ಜನಹಳ್ಳಿ ಸ್ಥಾಪಿತವಾಯಿತು 12ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿ ಮಾಡಿದ ಮಹಾ ಮಾನವತಾವಾದಿ ವಿಶ್ವಗುರು ಬಸವಣ್ಣನವರ ಜನ್ಮಸ್ಥಳ ಇದಾಗಿದೆ, ಎಂದು ಡಾ. ಶಾರದಾಮಣಿ ಹುನಶಾಳ ಅವರು ತಮ್ಮ ಉಪನ್ಯಾಸದಲ್ಲಿ ಹೇಳಿದರು
ಅಕ್ಕನ ಅರಿವು, ಬಸವಾದಿ ಶರಣರ ಚಿಂತನಕೂಟ ಮತ್ತು ವಚನ ಅಧ್ಯಯನ ವೇದಿಕೆಯಿಂದ ನಡೆಯುತ್ತಿರುವ ಶ್ರಾವಣ ಮಾಸದಲ್ಲಿ ನಡೆಯುತ್ತಿರುವ ಶಾರದಮ್ಮ ಪಾಟೀಲ ಅವರ ವಿಶೇಷ ದತ್ತಿಉಪನ್ಯಾಸದ ಏಳನೆಯ ದಿನದ ಗೂಗಲ್ ಮೀಟ್ ನಲ್ಲಿ ಅವರು ಮಾತನಾಡಿದರು.
ತಾವು ವಿಜಯಪುರದ ಮಗಳು ಎಂದು ಅಭಿಮಾನದಿಂದ ಹೇಳುತ್ತಾ, ತಮ್ಮ ಉಪನ್ಯಾಸದೊಂದಿಗೆ ಆಯಾ ಶರಣರ ಗುಡಿ, ಸಮಾಧಿ, ಅವರ ವಚನಗಳ ಅಂಕಿತನಾಮ, ಶರಣರ ಊರು, ಸುತ್ತಮುತ್ತಲ ಪರಿಸರದ ವಿವರಣೆ, ಅವರ ಕಾಯಕದ ವಿವರಣೆ, ಹೀಗೆ ಎಲ್ಲ ಚಿತ್ರಗಳನ್ನು ಸಂದರ್ಭಕ್ಕೆ ತಕ್ಕಂತೆ ನಮ್ಮೊಂದಿಗೆ ಹಂಚಿಕೊಳ್ಳುತ್ತಾ ಹೋದರು. ಒಂದೊಳ್ಳೆಯ ಉಪನ್ಯಾಸದ ಅನುಭವ ಎಲ್ಲರಿಗೂ ಆಯಿತು ಎಂದು ಹೇಳಬಹುದು. ಶರಣರ ನಾಡಾದ ಇಡೀ ವಿಜಯಪುರ ಜಿಲ್ಲೆಯನ್ನು ಸುತ್ತಿಬಂದ ಹಾಗೆ ಆಯ್ತು. ಅಷ್ಟು ಸಂಶೋಧನಾತ್ಮಕ ಮತ್ತು ವೈಚಾರಿಕತೆಯ ಹಿನ್ನೆಲೆಯಲ್ಲಿ ಉಪನ್ಯಾಸ ಮೂಡಿ ಬಂದಿತು.
ವಿಜಯಪುರದಲ್ಲಿರುವ ಸಿದ್ಧೇಶ್ವರ ದೇವಾಲಯ, ಕಪಿಲೇಶ್ವರ ದೇವಾಲಯ, ನೀಲಕಂಠ ದೇವಾಲಯ, ಹೀಗೆ ಹಲವಾರು ದೇವಸ್ಥಾನಗಳನ್ನು ಹೆಸರಿಸುತ್ತಾ, ವಿಜಯಪುರ ದಕ್ಷಿಣ ಭಾರತದ ವಾರಣಾಸಿ ಆಗಿತ್ತು ಎನ್ನುವದನ್ನು ನೆನಪಿಸಿಕೊಂಡರು.
ನಡೆದಾಡುವ ದೇವರು, ಕಾಯಕ ಯೋಗಿಯಾದ ಸಿದ್ಧೇಶ್ವರ ಸ್ವಾಮಿಗಳ ಮಠ, ಶಿಕ್ಷಣದ ಬ್ರಹ್ಮ ಬಂಥನಾಳ ಶ್ರೀಗಳ ಮಠ, ಬಬಲೇಶ್ವರದ ಗುರುಪಾದೇಶ್ವರ ಬೃಹನ್ಮಠ, ನಲವತ್ತವಾಡ ವೀರೇಶ್ವರ ಶರಣರ ಮಠ, ಇಂಗಳೇಶ್ವರ ಮಠ, ಅಲ್ಲಿಯ ಗವಿಗಳು, ವಚನ ಶಿಲಾ ಮಂಟಪ,ಮಾದಲಾoಬಿಕೆಯ ಗುಡಿ, ಬಸವನ ಬಾಗೇವಾಡಿಯಲ್ಲಿ ಇರುವ
ಮುಖಮಂಟಪ, ನವರoಗ, ಸಂಗಮೇಶ್ವರ ದೇವಾಲಯ, ಸಿಂದಗಿ ತಾಲೂಕಿನ ಕುರುಬ ಗೊಲ್ಲಾಳೇಶ್ವರ ಗುಡಿ, ದೋಣಿ ಕೊಂಡಗುಳಿಯಲ್ಲಿರುವ ಶರಣರ ಸಮಾಧಿ, ದೇವರಹಿಪ್ಪರಗಿಯಲ್ಲಿರುವ ಮಡಿವಾಳೇಶ್ವರ ಗುಡಿ, ತಾಳಿಕೋಟೆ -ಮುದ್ದೇಬಿಹಾಳದಲ್ಲಿರುವ ಖಾಸ್ಗತೇಶ್ವರ ದೇವಾಲಯ, ಶಿವಣಗಿ ಗ್ರಾಮದಲ್ಲಿರುವ ನುಲಿಯ ಚೆಂದಯ್ಯನವರ ರಾಮಲಿಂಗೇಶ್ವರ ದೇಗುಲ, ಹಾವಿನಾಳ ಕಲ್ಲಯ್ಯನವರ ಕಲ್ಲೇಶ್ವರ ದೇವಾಲಯ, ಉಪ್ಪಲದಿನ್ನಿಯ ಮುಗ್ಧಸಂಗಯ್ಯನವರ ದೇವಾಲಯ, ನಾಗೋಡು ಗುಡ್ಡ, ಬಸವಜನ್ಮ ಸ್ಮಾರಕ, ಕೂಡಲಸಂಗಮ ಸ್ಮಾರಕ, ನವಿಲೆ ಗ್ರಾಮದ ಜಡೆಲಿಂಗೇಶ್ವರ ದೇವಾಲಯ, ನಂದವಾಡಗಿಯ ಉರಿಲಿಂಗಿಪೆದ್ದಿಯವರ ಸ್ಮಾರಕ, ಶಂಕರದಾಸಿಮಯ್ಯ ನವರ ಗುಡಿ, ಬಸವ ಅಂತಾರಾಷ್ಟ್ರೀಯ ಕೇಂದ್ರ, ಬಸವ ಧರ್ಮ ಪೀಠ, ಸಭಾ ಮಂಟಪ, ಮುಖ ಮಂಟಪ, ಬಾಹೂರ ಬ್ರಹ್ಮಯ್ಯ ಅವರ ಗರ್ಭಗುಡಿ, ಹಡಪದ ಅಪ್ಪಣ್ಣ ಮತ್ತು ಲಿಂಗಮ್ಮ ಅವರ ಗದ್ದುಗೆ, ನೀಲಾಂಬಿಕೆಯವರ ಐಕ್ಯಮಂಟಪ.. ಹೀಗೆ ಅಸಂಖ್ಯಾತ ಶರಣರ ಜೀವನವನ್ನು ನಮ್ಮ ಮುಂದೆ ಭಕ್ತಿ -ಭಾವದಿಂದ ತೆರೆದಿಟ್ಟರು.
ನಂತರ ಟಿ. ಬಿ. ಅಳ್ಳೊಳ್ಳಿಯವರು ತಮ್ಮ ಮಾರ್ಗದರ್ಶನದ ನುಡಿಗಳಲ್ಲಿ ಸ್ಮಾರಕಗಳ ಶೋಚನೀಯ ಸ್ಥಿತಿಗೆ ತಮ್ಮ ಕಳವಳ ವ್ಯಕ್ತಪಡಿಸಿದರು. ಎಲ್ಲರೂ ಸೇರಿ ಆ ನಿಟ್ಟಿನಲ್ಲಿ ಸಂಬಂಧ ಪಟ್ಟ ಅಧಿಕಾರಿಗಳನ್ನು ಸಂಪರ್ಕಿಸೋಣ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು.
ಕೊನೆಯಲ್ಲಿ ಡಾ. ಶಶಿಕಾಂತ ಪಟ್ಟಣ ಅವರು ತಮ್ಮ ಮಾತಿನಲ್ಲಿ ಬಸವಣ್ಣನವರು ಗುರುವಿಲ್ಲದ ಗುಡ್ಡ ಎನ್ನುವ ಮಾತನ್ನು ಇನ್ನೊಮ್ಮೆ ಸ್ಪಷ್ಟೀಕರಿಸಿದರು. ಸಂವಾದದಲ್ಲಿ ಪಾಲ್ಗೊಂಡ ಎಲ್ಲರ ಪ್ರಶ್ನೆಗೆ ಉತ್ತರಿಸುತ್ತಾ , ಇನ್ನೂ ಹಲವಾರು ಶರಣರ ಸ್ಮಾರಕಗಳು ವಿಜಯಪುರದಲ್ಲಿವೆ ಎನ್ನುವುದನ್ನು ನಮ್ಮೆಲ್ಲರ ಜೊತೆ ಹಂಚಿಕೊಂಡರು. ಬಸವಣ್ಣನವರ ಬಗೆಗೆ ಬರೆದ ಹಲವಾರು ಲೇಖಕರ ಪುಸ್ತಕಗಳನ್ನು ಹೆಸರಿಸಿದರು.
ಶರಣೆ ಏಂಜಲಿನಾ ಗ್ರೆಗರಿ ಅವರ ವಚನ ಪ್ರಾರ್ಥನೆ, ಶರಣೆ ಅಂಜಲಿದೇವಿ ಅವರ ಸ್ವಾಗತ -ಪ್ರಾಸ್ತಾವಿಕ-ಪರಿಚಯದ ನುಡಿಗಳು, ಶರಣೆ ಭಾಗ್ಯ ಕೋಟಿ ಅವರ ಶರಣು ಸಮರ್ಪಣೆ, ಶರಣೆ ರತ್ನಕ್ಕ ಕಾದ್ರೊಳ್ಳಿ ಅವರ ವಚನ ಮಂಗಳದೊಂದಿಗೆ ಕಾರ್ಯಕ್ರಮ ಅತ್ಯಂತ ಸಾಂಗವಾಗಿ ನೆರವೇರಿತು. ಶರಣೆ ದೀಪಾ ಜಿಗಬಡ್ಡಿ ಅವರು ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರ್ವಹಣೆ ಮಾಡಿದರು.
ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ
ಪುಣೆ