spot_img
spot_img

ಕರುನಾಡಿನ ಸಾಧಕರು ಮಿರ್ಜಾ ಇಸ್ಮಾಯಿಲ್

Must Read

- Advertisement -

ಮೈಸೂರು ರಾಜ್ಯದ ಪ್ರಸಿದ್ಧ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಅವರ ಜನುಮ ದಿನ.

ಹಲವು ವರ್ಷಗಳ ಹಿಂದೆ ಡಾ. ಎಸ್. ಎಲ್. ಭೈರಪ್ಪನವರ ಆತ್ಮಚರಿತ್ರೆ ‘ಭಿತ್ತಿ’ ಓದಿದಾಗ ಅದರಲ್ಲಿ ಓದಿದ ಒಂದು ವಿಷಯ ಮನಸ್ಸಿನಲ್ಲಿ ಅಚ್ಚಳಿಯದೆ ಕುಳಿತು ಬಿಟ್ಟಿತು.  ಭೈರಪ್ಪ ಹೇಳುತ್ತಾರೆ, “ಅಂದಿನ ದಿನದಲ್ಲಿ ಮೈಸೂರು ಅತ್ಯಂತ ಸುಂದರ, ಸ್ವಚ್ಚ ಊರಾಗಿತ್ತು.  ಒಮ್ಮೆ ಬೆಳಗಿನ ಜಾವದಲ್ಲಿ  ಒಬ್ಬರು ಅಧಿಕಾರಿಗಳು ಕುದುರೆಯ ಮೇಲೆ ಕುಳಿತು ರಸ್ತೆಯಲ್ಲಿ  ಕಸವೇನೂ ಇಲ್ಲವಷ್ಟೇ ಎಂದು ಸೂಕ್ಷ್ಮವಾಗಿ ಪರಿಶೀಲಿಸುತ್ತಾ ಹೋಗುತ್ತಿದ್ದರು.

ನಂತರದಲ್ಲಿ ತಿಳಿಯಿತು ಅವರು ಮೈಸೂರು ರಾಜ್ಯದ ದಿವಾನರಾದ ಸರ್ ಮಿರ್ಜಾ ಇಸ್ಮಾಯಿಲ್” ಎಂದು.  ಅಂತಹ ಹಿರಿಯ ಅಧಿಕಾರಿ ಅಷ್ಟೊಂದು ಸೂಕ್ಷ್ಮವಾಗಿ ಪ್ರತಿಯೊಂದನ್ನೂ ಗಮನಿಸುತ್ತಿದ್ದರೆಂಬುದೇ ರೋಮಾಂಚನ ಹುಟ್ಟಿಸಿತು.  ಇಂದೂ ಮೈಸೂರು ಮತ್ತು ಹಳೆಯ ಬೆಂಗಳೂರಿನ ಸೊಬಗಿನ ತಾಣಗಳನ್ನು ನೆನೆಯುವಾಗ ಸರ್ ಎಂ. ವಿಶ್ವೇಶ್ವರಯ್ಯ, ಸರ್ ಮಿರ್ಜಾ ಇಸ್ಮಾಯಿಲ್ ಅಂತಹವರು ಮಾಡಿದ ಕೆಲಸ ನೆನೆದು ಹೃದಯ ತುಂಬಿ ಬರುತ್ತದೆ.  ನೋವೂ ಆಗುತ್ತದೆ,  “ಅಂತಹವರು ಇಂದಿಲ್ಲವಲ್ಲ, ಅಂತಹ ಯೋಗ್ಯರು ನಾವೂ ಆಗಲಿಲ್ಲವಲ್ಲ….” ಎಂದು.

- Advertisement -

ಮಿರ್ಜಾ ಇಸ್ಮಾಯಿಲ್ ಕುರಿತು ತಿರುವಾಂಕೂರು ಸಂಸ್ಥಾನದ ಪೆರಿಯಾರ್ ರಾಮಸ್ವಾಮಿ ಹೇಳುತ್ತಿದ್ದರು “ ಆತ ಭಾರತದ ಅತ್ಯಂತ ಚತುರ ವ್ಯಕ್ತಿಗಳಲ್ಲೊಬ್ಬರು”. ಸರ್ ಸಿ. ವಿ. ರಾಮನ್ ಹೇಳುತ್ತಿದ್ದರು “ಮಿರ್ಜಾ ಇಸ್ಮಾಯಿಲ್ ಅವರ ವೈಯಕ್ತಿಕ ಸೊಬಗು ಇದಕ್ಕೆ ತಿಲಕವಿಟ್ಟ ಹಾಗೆ ಆಳವಾದ ಜ್ಞಾನ, ತಿಳಿವಳಿಕೆ, ಹಾಸ್ಯಪ್ರಜ್ಞೆ, ಸಾಂಸ್ಕೃತಿಕ ಪ್ರಜ್ಞೆಗಳು ಅವರನ್ನು ಅತ್ಯಂತ ಶ್ರೇಷ್ಠ ಹಾಗೂ ಯಶಸ್ವೀ ಆಡಳಿತಗಾರನನ್ನಾಗಿ ರೂಪಿಸಿದ್ದವು” ಎಂದು.

ಸರ್ ಮಿರ್ಜಾ ಇಸ್ಮಾಯಿಲ್ ಅವರು ಆರ್. ಕೆ. ನಾರಾಯಣ್ ಅವರಿಗೂ ತುಂಬಾ ಇಷ್ಟದ ವ್ಯಕ್ತಿ.  “ಅವರಂಥವರು ತುಂಬಾ ಅಪರೂಪ.  ಕಟ್ಟಡ ನಿರ್ಮಿಸುವ ಒಳ್ಳೆಯ ಇಂಜಿನಿಯರುಗಳನ್ನು ಕರೆತಂದಿದ್ದರು.  ಅವರಿಗೆ ಬೇರೆ ಎಷ್ಟೋ ಕೆಲಸ ಮಾಡುವ ಆಸಕ್ತಿ ಇದ್ದರೂ, ಅವರು ಅವಿರತವಾಗಿ ಗಿಡಗಳನ್ನು ನೆಟ್ಟರು.  ಕೆಲವು ಗಿಡಗಳು ಸರಿಯಾಗಿ ಬೆಳೆಯದಿದ್ದರೆ ಅವುಗಳನ್ನು ಕಿತ್ತು ಬೇರೆ ಗಿಡಗಳನ್ನು ನೆಡುತ್ತಿದ್ದರು.  ಪ್ರತಿದಿನ ಅವರು ಮತ್ತು ಕೃಷ್ಣರಾಜ ಒಡೆಯರ್ ಕಾರಿನಲ್ಲಿ ಮೆಲ್ಲನೆ ನಗರವನ್ನು ಸುತ್ತಿ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕೋ ಅದರಂತೆ ಮುನ್ಸಿಪಲ್ ಅಧ್ಯಕ್ಷರಿಗೆ ಅಥವಾ ಡಿ. ಸಿ. ಗೆ ಕರೆಮಾಡಿ ಸಂಬಂಧ ಪಟ್ಟ ಕ್ರಮಗಳನ್ನು ಕೈಗೊಳ್ಳಲು ಹೇಳುತ್ತಿದ್ದರು.  ಅದರ ನಂತರ ತಾನು ಹೇಳಿದ ಕೆಲಸ ಆಗಿದೆಯೋ ಇಲ್ಲವೋ ಎಂದು ಖಾತ್ರಿಯಾಗಲು ಮತ್ತೊಮ್ಮೆ ನಗರ ಸುತ್ತಿ ಪರಿಶೀಲಿಸುತ್ತಿದ್ದರು.  ಅಂದಿನ ಕಾಲದಲ್ಲಿ ಅವರು ತಮ್ಮ ಕೆಲಸದಲ್ಲಿ ಅಷ್ಟು ಭಾಗಿಯಾಗುತ್ತಿದ್ದರು.”  

ಡಿ.ವಿ.ಜಿ ಅವರ ಬರಹಗಳಲ್ಲಿ ಮಿರ್ಜಾ ಅವರ ಮಾನವೀಯ ಸ್ನೇಹ ಗುಣಗಳ ಕುರಿತಾಗಿ ವಿಸ್ತ್ರತ ಅಂತಃಕರಣ ಪೂರಿತ ಪುಟಗಳು ತುಂಬಿ ತುಳುಕಿವೆ. 

- Advertisement -

ಸರ್ ಮಿರ್ಜಾ ಇಸ್ಮಾಯಿಲ್ ಅವರು ಹುಟ್ಟಿದ್ದು ಅಕ್ಟೋಬರ್ 24, 1883 ಬೆಂಗಳೂರಿನಲ್ಲಿ.  ಅವರು ಪರ್ಷಿಯಾದಿಂದ ಮೈಸೂರು ರಾಜ್ಯಕ್ಕೆ ವಲಸೆ ಬಂದ ವರ್ತಕ ಹಾಗೂ ರಾಜ ಮನೆತನಕ್ಕೆ ನಿಷ್ಠರಾಗಿ ಧರ್ಮಾತ್ಮರಾಗಿ ಬಾಳಿದ ಅಲಿ ಆಸ್ಕರ್ ಅವರ ಮೊಮ್ಮಗ.  ಬೆಂಗಳೂರಿನ ರಾಜಭವನದ ಎಡಕ್ಕೆ ಕನ್ನಿಂಗ್ ಹ್ಯಾಮ್ ರಸ್ತೆ ತಲುಪುವ ರಸ್ತೆಗೆ ಅಲಿ ಆಸ್ಕರ್ ಅವರ ಹೆಸರಿದೆ.  ಸರ್ ಮಿರ್ಜಾ ಇಸ್ಮಾಯಿಲ್ಲರ ತಂದೆ ಚಾಮರಾಜ ಒಡೆಯರ್ ಅವರ ಆಪ್ತರಕ್ಷಕ ಪಡೆಯ ಅಧಿಕಾರಿಯಾಗಿದ್ದರು.

ಮಿರ್ಜಾ ಇಸ್ಮಾಯಿಲ್ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜೊತೆಯಲ್ಲಿ  ಓದಿದವರು.  ಮುಂದೆ ಪದವಿ ಪಡೆದ ನಂತರದಲ್ಲಿ ಪೊಲೀಸ್ ಇಲಾಖೆಯ ಸಹಾಯಕ ಅಧಿಕಾರಿಗಳಾಗಿ ಸೇವೆಗೆ ತೊಡಗಿದರು.  ಮುಂದೆ ಮಿರ್ಜಾ ಇಸ್ಮಾಯಿಲ್ ಮಹಾರಾಜರ ಆಪ್ತ ಕಾರ್ಯದರ್ಶಿಗಳಾಗಿ ನೇಮಿಸಲ್ಪಟ್ಟರು.  ಮಹಾರಾಜರಿಗೆ ಆಡಳಿತದಲ್ಲಿ ಅತ್ಯಂತ ಕುಶಲತೆ, ಶ್ರದ್ಧೆ ಮತ್ತು ಸಾಮರ್ಥ್ಯದಿಂದ ಕಾರ್ಯ ನಿರ್ವಹಿಸುತ್ತಿದ್ದ ಮಿರ್ಜಾ ಇಸ್ಮಾಯಿಲ್ ಅವರನ್ನು ಕಂಡರೆ ಅಪಾರ ಅಭಿಮಾನ.  ಹೀಗಿರುವಾಗ ಆಗಿನ ದಿವಾನರಾದ ವಿಶ್ವೇಶ್ವರಯ್ಯನವರನ್ನು ಮಿರ್ಜಾ ಇಸ್ಮಾಯಿಲ್ ಅವರಿಗೆ ಹೆಚ್ಚಿನ ರೀತಿಯಲ್ಲಿ ಮಾರ್ಗದರ್ಶನ ಮಾಡಬೇಕೆಂದು ನಿರ್ದೇಶಿಸಿದರು.  ಹೀಗೆ ಮಿರ್ಜಾ ಇಸ್ಮಾಯಿಲ್ ಅವರಿಗೆ ಸರ್ ಎಂ ವಿಶ್ವೇಶ್ವರಯ್ಯನವರು ಮಾರ್ಗದರ್ಶಕರಾದರು.  ಮುಂದೆ ಗುರುವಿಗೆ ತಕ್ಕ ಶಿಷ್ಯರೂ ಆದರು.  

1926ರಲ್ಲಿ ಸರ್ ಎಂ. ವಿಶ್ವೇಶ್ವರಯ್ಯನವರ ಸಲಹೆಯ ಮೇರೆಗೆ ಮಿರ್ಜಾ ಇಸ್ಮಾಯಿಲ್ ಅವರನ್ನೇ ಮಹಾರಾಜರು ಮೈಸೂರಿನ ದಿವಾನರನ್ನಾಗಿ ನೇಮಿಸಿದರು.

ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್ ಮಿರ್ಜಾ ಇಸ್ಮಾಯಿಲ್ ಅವರ ಜೊತೆಗಾರಿಕೆಯ ಅವಧಿ “ಮೈಸೂರು ಸಂಸ್ಥಾನದ ಸ್ವರ್ಣಕಾಲ” ಎಂದು ಬಣ್ಣಿತವಾಗಿದೆ.  ವಿಭಿನ್ನ ಧರ್ಮಗಳ ನೆಲೆಯಿಂದ ಬಂದು ಸೋದರರಂತೆ ಒಂದುಗೂಡಿ ಕೆಲಸ ಮಾಡಿದ ಈ ಈರ್ವರ ಜೊತೆಗಾರಿಕೆಯನ್ನು ಮೆಚ್ಚಿ ಇದೋ ಇಲ್ಲಿದೆ ‘ರಾಮರಾಜ್ಯ’ ಎಂದು ಮಹಾತ್ಮ ಗಾಂಧೀಜಿ ಕೈತೋರಿದರು.  

ದುಂಡುಮೇಜಿನ ಪರಿಷತ್ತೆಂದು ಕರೆಯಲಾಗುತ್ತಿದ್ದ  ಅಂದಿನ ದಿನಗಳ ಸಭೆಯೊಂದರಲ್ಲಿ  ಲಾರ್ಡ್ ಸ್ಯಾಂಕಿ ಅವರು ಮೈಸೂರನ್ನು “ವಿಶ್ವದಲ್ಲೇ ಅತ್ಯಂತ ಶ್ರೇಷ್ಟ ಆಡಳಿತಾತ್ಮಕ ನಗರ” ಎಂದು ಬಣ್ಣಿಸಿದರು.  ಇದರಿಂದಾಗಿ  ಭಾರತದ ವಿವಿಧ ಸಂಸ್ಥಾನಗಳಲ್ಲಿದ್ದ ರಾಜಕುವರರಿಗೆ ಮೈಸೂರಿನಲ್ಲಿ ಆಡಳಿತಾತ್ಮಕ ತರಬೇತಿ ವ್ಯವಸ್ಥೆ  ಏರ್ಪಾಡು ಮಾಡಲಾಯಿತು.

ತಮ್ಮ ಹೃದಾಯಾಂತರಾಳದಲ್ಲಿ ತಮ್ಮ ಮೈಸೂರು ರಾಜ್ಯದ ಬಗ್ಗೆ ಅಪಾರ ಪ್ರೇಮ ತುಂಬಿಕೊಂಡಿದ್ದ ಮಿರ್ಜಾ ಇಸ್ಮಾಯಿಲ್ಲರು ರಾಜ್ಯದೆಲ್ಲೆಡೆ ಸಂಸ್ಕೃತ ಮತ್ತು ಕನ್ನಡವನ್ನು  ಕಡ್ಡಾಯವಾಗಿ ಕಲಿಸುವುದನ್ನು ಪ್ರೋತ್ಸಾಹಿಸಿದರು.  “ಭಾರತೀಯ ಮೂಲ ಸಂಸ್ಕೃತಿಗೆ ವಿಶ್ವದೆಲ್ಲೆಡೆ ಬೆಳಕನ್ನು ಚೆಲ್ಲಿರುವ ಸಂಸ್ಕೃತವನ್ನು ಇಲ್ಲಿನ ದೈನಂದಿನ ಬದುಕಿನಿಂದ ಬೇರ್ಪಡಿಸಿದ್ದೇ ಆದಲ್ಲಿ, ಅದು ನಮ್ಮ ಜನರ ಬದುಕಿನಲ್ಲಿರುವ ಅತ್ಯಮೂಲ್ಯ ಬೆಳಕನ್ನು ಕಿತ್ತೊಗೆದಂತೆ. ಅದು ಕೇವಲ ಭಾರತಕ್ಕಷ್ಟೇ ಅಲ್ಲದೆ ಇಡೀ ವಿಶ್ವಕ್ಕೇ ಗಂಭೀರ ಸ್ವರೂಪದ ನಷ್ಟವಾಗುತ್ತದೆ” ಎಂದು ಪ್ರತಿಪಾದಿಸಿದ್ದರು.

ಸರ್ ಮಿರ್ಜಾ ಇಸ್ಮಾಯಿಲ್ ಅವರ ಆಡಳಿತಾವಧಿಯಲ್ಲಿ ಧಾರ್ಮಿಕ ತಳಹದಿಯ ಯಾವುದೇ ಅಸಹನಾತ್ಮಕ ಭಾವಗಳೂ ಇಲ್ಲದೆ ಸರ್ವರಿಗೂ ಸಮಾನತೆಯ ನಿಷ್ಪಕ್ಷಪಾತವಾದ ಆಡಳಿತವನ್ನು ರೂಢಿಯಲ್ಲಿರಿಸಿದ್ದರು.  “ಶಾಂತಿ, ಪ್ರಗತಿ, ಆರ್ಥಿಕ ಉನ್ನತಿ ಮತ್ತು ಪ್ರಜೆಗಳ ಸುಕ್ಷೇಮಗಳು ಮಾತ್ರವೇ ಅವರ ಆಡಳಿತದ ಪ್ರಧಾನ ಕಾಳಜಿಗಳಾಗಿದ್ದವು”   

ಬೆಂಗಳೂರು ನಗರಕ್ಕೆ ಆಧುನೀಕರಣದ ಸಕಲ ಸೌಭಾಗ್ಯಗಳನ್ನು ಮೂಡಿಸುವುದರಲ್ಲಿ ಸರ್ ಮಿರ್ಜಾ ಇಸ್ಮಾಯಿಲ್ಲರ ಶ್ರಮ ಪ್ರಮುಖ ಪಾತ್ರ ನಿರ್ವಹಿಸಿತು.  ಸರ್ ಮಿರ್ಜಾ ಇಸ್ಮಾಯಿಲ್ಲರು ಮೈಸೂರು ಸಂಸ್ಥಾನವನ್ನು ಸುಂದರವಾಗಿಸಲು ಕೈಗೊಂಡ ಅಸಂಖ್ಯಾತ ಕಾರ್ಯಗಳಲ್ಲಿ ಎದ್ದು ಕಾಣುವಂತದ್ದು ‘ಕೃಷ್ಣರಾಜ ಸಾಗರದ ಬೃಂದಾವನ’.  ಇಲ್ಲಿನ ಉದ್ಯಾನವನ, ವೈವಿಧ್ಯದ ನೀರಿನ ಕಾರಂಜಿಗಳು, ವಿದ್ಯುದ್ಧೀಕರಣಗಳ ಸೊಬಗು  ವಿಶ್ವದೆಲ್ಲೆಡೆ ಮೈಸೂರಿನ ಕೀರ್ತಿಯನ್ನು ಬೆಳಗಿಸಲು ಮತ್ತಷ್ಟು ಪ್ರೇರಕವಾಯಿತು.

ಮಿರ್ಜಾ ಇಸ್ಮಾಯಿಲ್ಲರ ಅಧಿಕಾರಾವಧಿಯಲ್ಲಿ ಮೈಸೂರಿನಲ್ಲೂ ಮೆಡಿಕಲ್ ಕಾಲೇಜು ಮೂಡಿ ಬಂತು.  ಬೆಂಗಳೂರಿನಲ್ಲಿ ಟೌನ್ ಹಾಲ್ ಮೂಡಿಬಂತು.  ಭಾರತದಲ್ಲಿ ಪ್ರಥಮವಾಗಿ  ಗ್ರಾಮಗಳಿಗೆ ವಿದ್ಯುತ್ ಸೌಲಭ್ಯಗಳನ್ನು ಒದಗಿಸುವ ಕಾರ್ಯಕ್ರಮ ಕಾರ್ಯಗತವಾಯಿತು.  ತಮ್ಮ ಹಿರಿಯರಾದ ಸರ್ ಎಂ.ವಿ ಅವರಂತೆ ಕೈಗಾರಿಕೆಗಳ ಬಗ್ಗೆ ಒಲವುಳ್ಳ ಮಿರ್ಜಾ ಇಸ್ಮಾಯಿಲ್ಲರ ಪ್ರೇರಣೆಯಿಂದ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ ಸಂಸ್ಥೆ ತಲೆ ಎತ್ತಿತು.

ಇಂದು ಭಾರತೀಯ ವಿಜ್ಞಾನದಲ್ಲಿ ಪ್ರಮುಖ ಹೆಸರಾದ ರಾಮನ್ ಇನ್ಸ್ಟಿಟ್ಯೂಟ್ ನಿರ್ಮಾಣಕ್ಕಾಗಿ  ಭಾರತೀಯ ವಿಜ್ಞಾನ ಅಕಾಡೆಮಿಗೆ ಹನ್ನೆರಡು ಎಕರೆಗಳ ಭೂಮಿಯನ್ನು ಮಹಾರಾಜರಿಂದ ಒದಗುವಂತೆ ಮಾಡಿದ್ದು ಸರ್ ಮಿರ್ಜಾ ಇಸ್ಮಾಯಿಲ್ಲರು ಮಾಡಿದ ಮತ್ತೊಂದು ಶ್ರೇಷ್ಠ ಕೆಲಸ.  ಮಿರ್ಜಾ ಇಸ್ಮಾಯಿಲ್ಲರ ಬಗ್ಗೆ  ಮುಕ್ತಕಂಠದ ಪ್ರಶಂಸೆ ಮಾಡುತ್ತಿದ್ದ ಸರ್ ಸಿ ವಿ ರಾಮನ್  “ಸುದೀರ್ಘ ಅವಧಿಯವರೆಗೆ ಮಿರ್ಜಾ ಇಸ್ಮಾಯಿಲ್ ನನ್ನ ಅತ್ಯಂತ ಆತ್ಮೀಯ ಗೆಳೆಯರಲ್ಲೊಬ್ಬರಾಗಿದ್ದು, ಅವರ ಗೆಳೆತನವನ್ನು ಸವಿದ ನನ್ನಂತ ಬಹಳಷ್ಟು ಮಂದಿಗೆ ಅದು ಅಮೂಲ್ಯವಾಗಿದೆ.  ಯಾವುದೇ ಗಳಿಗೆಯಲ್ಲಾಗಲಿ ಸಹಾಯ, ಸಲಹೆಗಳನ್ನು  ನೀಡಲು ಸದಾಸಿದ್ಧನಾದ ಆಪ್ತಮಿತ್ರನಾತ” ಎಂದು ಸರ್ ಮಿರ್ಜಾ ಇಸ್ಮಾಯಿಲ್ಲರಿಗೆ ತುಂಬು ಹೃದಯದ ಗೌರವ ಅರ್ಪಿಸಿದ್ದಾರೆ.

ಸರ್ ಮಿರ್ಜಾ ಇಸ್ಮಾಯಿಲ್ಲರು ತಮ್ಮ ಅಧಿಕಾರಾವಧಿಯಲ್ಲಿ ತಮ್ಮ ಪ್ರವಾಸಗಳ ಮೂಲಕ ವಿವಿಧ ಇಲಾಖೆಗಳ ಸಿಬ್ಬಂದಿಯನ್ನು ಕಾರ್ಯದಕ್ಷತೆಯೆಡೆಗೆ ಪ್ರೇರೇಪಿಸುತ್ತ, ಸಾರ್ವಜನಿಕರ ಕುಂದುಕೊರತೆಗಳನ್ನು ವೈಯಕ್ತಿಕವಾಗಿ ಗಮನಿಸುತ್ತಾ ಅತ್ಯಂತ ದಕ್ಷರೆನಿಸಿದ್ದರು.  ಅವರ ಹದಿನಾಲ್ಕು ವರ್ಷಗಳ ಅಧಿಕಾರವಧಿಯಲ್ಲಿ ಸರ್ಕಾರೀ ವಲಯ ಮತ್ತು ಖಾಸಗಿ ವಲಯಗಳೆರಡರಲ್ಲೂ ಮೈಸೂರು ಸಂಸ್ಥಾನ ಅದ್ಭುತ  ಕೈಗಾರಿಕಾ ಪ್ರಗತಿ ಸಾಧಿಸಿತು.  ಸರ್ ಎಂ ವಿ ಅವರು ಸಕ್ಕರೆ ಕಾರ್ಖಾನೆಗಳ ಪ್ರಾರಂಭಕ್ಕೆ ಭಾಷ್ಯ ಬರೆದಿದ್ದರೆ, ಸರ್ ಮಿರ್ಜಾ ಇಸ್ಮಾಯಿಲ್ಲರು ಅದನ್ನು ಸಮರ್ಥ ರೀತಿಯಲ್ಲಿ ಕಾರ್ಯರೂಪಕ್ಕೆ ತಂದರು.

ನಗರಗಳಲ್ಲಿ ಸುಂದರ ಉದ್ಯಾನವನಗಳು, ರಸ್ತೆಗಳು ಸೇರುವೆಡೆಗಳಲ್ಲಿ ಸುಂದರ ವೃತ್ತಗಳು ಸರ್ ಮಿರ್ಜಾ ಇಸ್ಮಾಯಿಲ್ಲರ ಆತ್ಮೀಯ ಸಂಗತಿಗಳಾಗಿದ್ದವು.  ಸ್ವಯಂ ತೋಟಗಾರಿಕಾ ಪ್ರವೀಣರಾಗಿದ್ದ ಮಿರ್ಜಾ ಇಸ್ಮಾಯಿಲ್ಲರು, ಬೆಂಗಳೂರು ನಗರದಲ್ಲಿ ಉತ್ಕೃಷ್ಟ ರೀತಿಯ ಉದ್ಯಾನವನಗಳು ಮತ್ತು ಸಸ್ಯರಾಶಿಯನ್ನು ನಿರ್ಮಿಸಲು ವಿಶ್ವದೆಲ್ಲೆಡೆಯಿಂದ ಉತ್ಕೃಷ್ಟ ಚಿಂತಕರನ್ನು ಒಂದುಗೂಡಿಸಿ ಇಲ್ಲಿನ ಮರಗಳು ವರ್ಷವಿಡೀ ಹಸುರಾಗಿರುವಂತೆಯೂ, ವಿವಿಧ ರೀತಿಯಲ್ಲಿ ಎಲ್ಲ ಕಾಲದಲ್ಲೂ ವರ್ಣಾಲಂಕಾರದ ಪುಷ್ಪಗಳಿಂದ ಕಂಗೊಳಿಸುವಂತೆಯೂ ಕ್ರಮ ಕೈಗೊಂಡರು.  ಸಾರ್ವಜನಿಕ ಆಸ್ಪತ್ರೆಗಳ ಆವರಣದಲ್ಲೂ ಇಂತಹ ಉದ್ಯಾನದ ವಾತಾವರಣವನ್ನು ಸೃಷ್ಟಿಸುವಲ್ಲಿ ವಿಶೇಷ ಕಾಳಜಿ ವಹಿಸಿದ್ದರು.   ಬೆಂಗಳೂರು, ಮೈಸೂರುಗಳಿಗೆ “ಉದ್ಯಾನವನಗಳ ನಗರ” ಎಂದು ಹೆಸರು ಬರಲು ಈ ಮಹನೀಯರು ಮಾಡಿರುವ ಇಂತಹ ಶ್ರೇಷ್ಠ ಕಾರ್ಯಗಳು ಅನೇಕ.  

ಕಾವೇರಿಯ ಮೇಲು ಹಂತದ ಕಾಲುವೆ ನಿರ್ಮಾಣದ ಮೂಲಕ ಮಂಡ್ಯ ಜಿಲ್ಲೆಯ  ಸಹಸ್ರಾರು ಎಕರೆ ಪ್ರದೇಶ ಫಲವತ್ತಾದ ವ್ಯವಸಾಯ ಭೂಮಿಯಾಯಿತು.  ಅವರ ಕಾಲದಲ್ಲಿ ನಿರ್ಮಾಣಗೊಂಡ ಇತರ ಕೈಗಾರಿಕಗಳೆಂದರೆ ಬೆಂಗಳೂರಿನ ಪೋರ್ಸೆಲಿನ್ ಮತ್ತು ಗಾಜಿನ ಕಾರ್ಖಾನೆ, ಕಾಗದ, ಸಿಮೆಂಟು, ಉಕ್ಕು, ಗೊಬ್ಬರ, ಸಕ್ಕರೆ, ವಿದ್ಯುತ್ ಬಲ್ಬುಗಳು ಮುಂತಾದವು.  ವೈಶ್ಯ ಬ್ಯಾಂಕ್, ಶಿವಮೊಗ್ಗದಲ್ಲಿ ಸಕ್ಕರೆ ಕಾರ್ಖಾನೆ,  ಮೈಸೂರು ರಾಜ್ಯದಲ್ಲಿ ಖಾದಿ ಕಾರ್ಖಾನೆಗಳು  ಇವೆಲ್ಲ ಸರ್ ಮಿರ್ಜಾ ಇಸ್ಮಾಯಿಲ್ಲರ ಅವಧಿಯಲ್ಲಿ ಮೂಡಿದಂತಹವು.  ಕನ್ನಡ ಸಾಹಿತ್ಯ ಪರಿಷತ್ತಿನ  ಕಟ್ಟಡ  ನಿರ್ಮಾಣ ಕಾರ್ಯದಲ್ಲೂ  ವಿಶೇಷ  ಆಸಕ್ತಿ ತಳೆದು ಆಗ್ಗಿಂದಾಗ್ಗೆ  ಕಾರ್ಯಪ್ರಗತಿ  ಸಮೀಕ್ಷಿಸಿ  ಉಪಯುಕ್ತ  ಸಲಹೆ  ನೀಡುತ್ತಿದ್ದರು.

ಸರ್ ಮಿರ್ಜಾ ಇಸ್ಮಾಯಿಲ್ಲರು ಮಹಾರಾಜರ ಆಸ್ತಿಗಳನ್ನು ದಕ್ಷವಾಗಿ ನಿರ್ವಹಿಸಿ ಅವುಗಳನ್ನು ಲಾಭದಾಯಕವಾಗಿ ತೊಡಗಿಸಿದ್ಧರ ಪರಿಣಾಮವಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ಜೀವಿತಾವಧಿಯ ಕಡೆಯವರೆಗೆ ಭಾರತದ ಅತ್ಯಂತ ಶ್ರೀಮಂತ ರಾಜರಾಗಿದ್ದರು.   

ಸರ್ ಮಿರ್ಜಾ ಇಸ್ಮಾಯಿಲ್ ಅವರು ತಮ್ಮ ಅಧಿಕಾರಾವಧಿಯ ಪ್ರಮುಖ ಸಮಯವನ್ನು ಯಾವುದೇ ಗಲಭೆಗಳಿಗೆ ಅವಕಾಶವಿಲ್ಲದಂತೆ ನೋಡಿಕೊಳ್ಳಲು ವಿನಿಯೋಗಿಸುತ್ತಿದ್ದರು.  ಸ್ವಾತಂತ್ರ್ಯದ ಹೋರಾಟದ ಅವಧಿಯ ಆ ಸಮಯದಲ್ಲಿ ಕಾಂಗ್ರೆಸ್ಸು ಪದೇ ಪದೇ ಚಳವಳಿಗಳನ್ನು ಹೂಡುತ್ತಿತ್ತು. ಇಂತಹ ಸಂದರ್ಭದಲ್ಲಿ ರಾಷ್ಟ್ರೀಯ ನಾಯಕರಾದ  ಗಾಂಧಿ, ನೆಹರು ಅಂತಹ ಮಹನೀಯರೊಡನೆ ಮಹಾರಾಜರ ಸಂಪರ್ಕವನ್ನು ಮಿರ್ಜಾ ಇಸ್ಮಾಯಿಲ್ಲರು ಆತ್ಮೀಯವಾಗಿರಿಸಿದ್ದರು.   ಈ ಚಳವಳಿಗಳ ಸಮಯದಲ್ಲಿ  ಯಾವುದೇ ಗಲಭೆಗಳು ಉಂಟಾಗದಂತೆ ಪರಿಸ್ಥಿತಿ ನಿಭಾಯಿಸುವುದು ಮಿರ್ಜಾ ಇಸ್ಮಾಯಿಲ್ಲರ ದಕ್ಷತೆಯನ್ನು ಅವಲಂಬಿಸಿತ್ತು.

1940ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನಿಧನರಾದ ಸ್ವಲ್ಪ ಸಮಯದಲ್ಲೇ  ಸರ್ ಮಿರ್ಜಾ ಇಸ್ಮಾಯಿಲ್ಲರು ಬದಲಾದ ಪರಿಸ್ಥಿತಿಯನ್ನು ಇಷ್ಟಪಡಲಾರದೆ ಹೊರಬಂದರು. ಹೀಗೆ ಒಂದು ರಾಮರಾಜ್ಯದ ಅಸ್ಥಿತ್ವ 1941 ರಲ್ಲಿ ಕೊನೆಗೊಂಡಿತು.

1941ರಲ್ಲಿ  ಜೈಪುರ ಸಂಸ್ಥಾನದಲ್ಲಿ ಅಧಿಕಾರ ವಹಿಸಿಕೊಂಡ ಸರ್ ಮಿರ್ಜಾ ಇಸ್ಮಾಯಿಲ್ ಅವರು, ಅಲ್ಲಿಯೂ ತಮ್ಮ ದಕ್ಷತೆಯ ಪ್ರಭಾವ ಬೀರಿದರು.  ಇದರಿಂದಾಗಿ ಜಯಪುರ ನಗರ ಕೈಗಾರಿಕೋದ್ಯಮದ ಹೊಸ ಶಖೆಯನ್ನು ಕಂಡಿತು.  ಭಾರತದ ಪ್ರಪ್ರಥಮ ವ್ಯವಸ್ಥಿತ ನಗರವೆಂದು ಜೈಪುರ ಪರಿಗಣಿತವಾಯಿತು.  ಇಂತಹ ಸೊಗಸನ್ನು ನಿರ್ಮಿಸಿದ ಸರ್ ಮಿರ್ಜಾ ಇಸ್ಮಾಯಿಲ್ ಅವರನ್ನು ಬ್ರಿಟಿಷ್ ಸರ್ಕಾರ ಮತ್ತು ಭಾರತೀಯರೆಲ್ಲರೂ ಒಕ್ಕೊರಲಿನಿಂದ ಕೊಂಡಾಡಿದರು.  ಹೀಗೆ ನವ ಜಯಪುರದ ರೂವಾರಿ ಎನಿಸಿರುವ ಸರ್ ಮಿರ್ಜಾ ಇಸ್ಮಾಯಿಲ್ ಅವರ ಗೌರವಾರ್ಥ ಅಲ್ಲಿನ ಒಂದು ಪ್ರಮುಖ ರಸ್ತೆಗೆ ಅವರ  ಹೆಸರಿದೆ.  ಸರ್ ಮಿರ್ಜಾ ಇಸ್ಮಾಯಿಲ್ಲರ ಸ್ನೇಹಿತರಾದ ಘನಶ್ಯಾಮ್ ದಾಸ ಬಿರ್ಲಾ ಅವರು ಜಯಪುರದ ಪ್ರಮುಖ ಯೋಜನೆಗಳಿಗೆ ಹಣ ತೊಡಗಿಸಿದರು.  1945ರಲ್ಲಿ ಬಿರ್ಲಾ ಅವರ ನೇತ್ರತ್ವದಲ್ಲಿ ಯುನೈಟೆಡ್ ಕಮರ್ಶಿಯಲ್ ಬ್ಯಾಂಕ್ ತಲೆ ಎತ್ತಿತು.  ಪಿಲಾನಿಯಲ್ಲಿರುವ ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕೂಡ ಮಿರ್ಜಾ ಇಸ್ಮಾಯಿಲ್ಲರ ಸಲಹೆಯ ಮೇರೆಗೆ ನಿರ್ಮಿತಗೊಂಡಿದೆ.  ಮಿರ್ಜಾ ಇಸ್ಮಾಯಿಲ್ ಅವರು ವಿದ್ಯಾಭ್ಯಾಸಕ್ಕೆ ಕೊಡುತ್ತಿದ್ದ ಮಹತ್ವದಿಂದ ಮಹಾರಾಣಿ ಗಾಯತ್ರಿ ದೇವಿ ಶಾಲೆ ತಲೆ ಎತ್ತಿತು.  1945ರಲ್ಲಿ ಜಯಪುರದಲ್ಲಿ ನಡೆದ ಅಂತರರಾಷ್ಟ್ರೀಯ ಬರಹಗಾರರ ಸಮ್ಮೇಳನಕ್ಕೆ ಸರ್ ಮಿರ್ಜಾ ಇಸ್ಮಾಯಿಲ್ಲರು ಅಧ್ಯಕ್ಷತೆ ವಹಿಸಿದ್ದರು.  ಆ ಕಾರ್ಯಕ್ರಮದಲ್ಲಿ ಸರೋಜಿನಿ ಮಹಿಷಿ, ಇ. ಎಂ. ಫಾರ್ಸ್ಟರ್  ಮುಂತಾದ ಪ್ರಮುಖ ಗಣ್ಯರು ಭಾಗಿಯಾಗಿದ್ದರು.  

ಪಾಕಿಸ್ಥಾನವನ್ನು ಆಧುನಿಕವಾಗಿ ನಿರ್ಮಿಸಬೇಕೆಂಬ ಬಯಕೆಯಿಂದ ಅಲ್ಲಿನ ಪ್ರಜೆಯಾಗಬೇಕೆಂದು ಆಹ್ವಾನಿಸಿದ  ಮುಹಮ್ಮದ್ ಆಲಿ ಜಿನ್ನಾ ಅವರ ಕೋರಿಕೆಯನ್ನು ಸಾರಾಸಗಟಾಗಿ ತಳ್ಳಿಹಾಕಿದ ಸರ್ ಮಿರ್ಜಾ ಇಸ್ಮಾಯಿಲ್ ಅವರು, ನನಗೆ ಭಾರತದ ವಿಭಜನೆ ಆಗುವುದಕ್ಕೆ ಸ್ಪಷ್ಟ ವಿರೋಧವಿದೆ ಎಂದು ನೇರವಾಗಿ ತಿಳಿಸಿ ಜಿನ್ನಾ ಅವರಿಗೆ ನಿಷ್ಠುರರಾದರು.  

1946ರಲ್ಲಿ ಹೈದರಾಬಾದಿನ ದಿವಾನರಾದ ಸರ್ ಮಿರ್ಜಾ ಇಸ್ಮಾಯಿಲ್ಲರು ಹೈದರಾಬಾದ್ ನಿಜಾಮನಿಗೆ ಯಾವುದೇ ತಕರಾರಿಲ್ಲದೆ ಭಾರತದ ಭಾಗವಾಗಲು ಮನವೊಲಿಸಲು ಪ್ರಯತ್ನಿಸಿದರು.  ಆತ ಮಾತು ಕೇಳದೆ ಹೋದಾಗ ಕೆಲವು ತಿಂಗಳುಗಳಲ್ಲೇ ಕೆಲಸ ಬಿಟ್ಟು ಈಚೆ ಬಂದರು.  ನಂತರದಲ್ಲಿ ಬಲಪ್ರಯೋಗಕ್ಕೆ ಒಳಗಾಗಿ ಹೈದರಾಬಾದಿನ ನಿಜಾಮ ಭಾರತದ ಸರ್ಕಾರಕ್ಕೆ ಶರಣಾಗಬೇಕಾಯಿತು.  

ಮುಂದೆ ಸರ್ ಮಿರ್ಜಾ ಇಸ್ಮಾಯಿಲ್ಲರು ತಮ್ಮ ಹುಟ್ಟಿದ ಊರಾದ  ಬೆಂಗಳೂರಿಗೆ ಬಂದು ನೆಲೆಸಿದರು. ಕಾಶ್ಮೀರದ ಮುಖ್ಯಮಂತ್ರಿಯಾಗಲು ಅವರನ್ನು ಕೇಳಲಾಗಿತ್ತು.  ಅದನ್ನು ಒಪ್ಪದ ಅವರು, ವಿಶ್ವಸಂಸ್ಥೆಗೆ ದುಡಿದರು. ಇಂಡೋನೇಷಿಯದ ತಾಂತ್ರಿಕ ನೆರವಿಗೆ ಹೋದರು. 1952ರಲ್ಲಿ  ಇರಾನ್, ಇರಾಕ್ ದೇಶಗಳನ್ನು ಭೇಟಿಮಾಡಿದರು. 1954ರಲ್ಲಿ ತಮ್ಮ ಆತ್ಮಕಥೆಯನ್ನು ರಚಿಸಿದರು.

ಮಿರ್ಜಾ ಇಸ್ಮಾಯಿಲ್ ಅವರು ಜನವರಿ 8, 1959ರಂದು  ನಿಧನರಾದರು. ಹೀಗೆ ಸಮರ್ಥ ವ್ಯಕ್ತಿಯೊಬ್ಬರ ನಿಧನದಿಂದ ಲೋಕ ಬಡವಾಯಿತು. 

ನಿನ್ನ ಜನ ನಗುತಿರಲು,

ನೀನಳುತ ಬಂದೆ.

ನಿನ್ನ ಜನ ಅಳುತಿರಲು,

ನೀಂ ನಗುತ ಪೋಗು.

-ಪಾರ್ಸಿ ಕವಿಯೊಬ್ಬನ ಈ ಪಂಕ್ತಿಗಳು ಮಿರ್ಜಾರವರಿಗೆ ಪ್ರಿಯವಾದ ಸಾಲುಗಳಾಗಿದ್ದವು.

ನಮ್ಮ ನಾಡಿನ ಈ ಶ್ರೇಷ್ಠ ಕುವರನಿಗೆ ಅವರಿಲ್ಲವಾದ ಅವರ  ಈ ಜನ್ಮದಿನದಂದು  ಶ್ರದ್ಧಾಪೂರ್ಣ ಗೌರವಗಳು.


ಎಮ್ ವೈ ಮೆಣಸಿನಕಾಯಿ, ಬೆಳಗಾವಿ

- Advertisement -
- Advertisement -

Latest News

ವಿದ್ಯಾರ್ಜನೆ ಯಾತಕ್ಕಾಗಿ?

ತಾವು ಕಲಿತು ಆರoಕಿ ಸಂಬಳ ಗಿಟ್ಟಿಸುವ ಕೆಲಸಕ್ಕೆ ಅರ್ಹತೆ ಪಡೆದಿಲ್ಲ. ತನ್ನ ಮಕ್ಕಳು ಪ್ರಾರಂಭದಲ್ಲಿಯೇ ಆರoಕೆ ಸಂಬಳ ಗಿಟ್ಟಿಸುವಾಗ ಯಾವ ಹೆತ್ತವರು ಬೀಗುವುದಿಲ್ಲ ಹೇಳಿ...ಈಗಿನ ದಿನಗಳಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group