ಮನುಜ ಮನುಜರ ನಡುವೆ ಪ್ರೀತಿ ಬೆಸೆವುದೆ ಧರ್ಮ
ದ್ವೇಷವನು ಬೆಳೆಸಿದರೆ ಧರ್ಮವಲ್ಲ
ದ್ವೇಷ ಬೆಳೆಸುವ ಧರ್ಮ ಯಾವುದಾದರು ತೊರೆದು
ವಿಶ್ವಧರ್ಮವ ಸೇರು – ಎಮ್ಮೆತಮ್ಮ
ಶಬ್ಧಾರ್ಥ
ಮನುಜ – ಮಾನವ
ತಾತ್ಪರ್ಯ
ಧರ್ಮ ಇರುವುದು ಜನರಲ್ಲಿರುವ ಅಜ್ಞಾನ ಕಳೆದು
ಸುಜ್ಞಾನ ಬೆಳೆಸಲಿಕ್ಕೆ. ಧರ್ಮವು ಸಕಲ ಜೀವಿಗಳಿಗೆ ಲೇಸು
ಬಯಸುತ್ತದೆ. ಒಬ್ಬರನ್ನೊಬ್ಬರು ಪ್ರೀತಿಪ್ರೇಮ ವಿಶ್ವಾಸದಿಂದ
ಕೂಡಿ ಜೀವಿಸಲು ಮತ್ತು ಭಾವೈಕ್ಯತೆಯ ಬೆಸೆಯಲು
ಹೇಳುತ್ತದೆ.ಆದರೆ ಮಾನವರ ಮಧ್ಯದಲ್ಲಿ ದ್ವೇಷ ಬೆಳೆಸುವ
ಧರ್ಮ ನಿಜವಾದ ಧರ್ಮವಲ್ಲ.ಅದು ಅಧರ್ಮ. ತಮ್ಮ
ಧರ್ಮವೇ ಶ್ರೇಷ್ಠವೆಂದು ಅಮಲು ತಲೆಗೇರಿಸಿಕೊಂಡು
ಇತರ ಧರ್ಮಗಳನ್ನು ಹೀಯಾಳಿಸುವುದು ಮತ್ತು ಅಪಮಾನಿಸುವುದು ಸರಿಯಲ್ಲ. ಅವರವರ ಧರ್ಮವನ್ನು
ಅವರು ಆಚರಿಸಲಿಕ್ಕೆ ಬಿಡಬೇಕು ಮತ್ತು ಅವರನ್ನು ಗೌರವಿಸಬೇಕು. ಧರ್ಮದಾಚರಣೆ ಅವರವರ ಮನೆ, ಮಠ,
ಮಂದಿರ, ಮಸೀದಿ, ಚರ್ಚುಗಳಲ್ಲಿ ಮಾಡಿಕೊಳ್ಳಲಿ.ಆದರೆ
ಅದನ್ನು ಇತರರು ಆಚರಿಸಬೇಕೆಂದು ಒತ್ತಾಯಿಸುವುದು
ಒಳ್ಳೆಯದಲ್ಲ. ಇರುವುದೊಂದೆ ಧರ್ಮ.ಅದು ಮಾನವ ಧರ್ಮ ಅಥವಾ ವಿಶ್ವಧರ್ಮ. ಮಾನವೀಯ ಮೌಲ್ಯಗಳಾದ ಪ್ರೀತಿ,ಕರುಣೆ, ಸರಳತೆ, ಸಹಾಯ, ಸಹಕಾರ, ಮುಂತಾದ ಗುಣಗಳನ್ನು ಎತ್ತಿಹಿಡಿಯುವುದು. ಭಾಷೆ, ದೇಶ, ವರ್ಗ, ವರ್ಣ, ಲಿಂಗ, ಜಾತಿ, ಮತ, ಪಂಥಗಳನ್ನು ಮೀರಿ ಎಲ್ಲರನ್ನು ಮಾನವೀಯತೆಯಿಂದ ಮತ್ತು ಸಮಾನತೆಯಿಂದ ಕಂಡು ಸೌಖ್ಯದಿಂದ ಬಾಳುವುದೆ ಪ್ರತಿಯೊಬ್ಬರ ನಿಜಧರ್ಮ. ಅಂಥ ಧರ್ಮವನ್ನೇ ನಾವು ಸೇರಬೇಕು
ರಚನೆ ಮತ್ತು ವಿವರಣೆ ಎನ್. ಶರಣಪ್ಪ ಮೆಟ್ರಿ. ೯೪೪೯೦೩೦೯೯೦