ಕರ್ನಾಟಕ ಪೌರ ರಕ್ಷಣಾ ದಳ,ವಿಭಾಗ 33 ರವರು ಶಿಕ್ಷಕರ ದಿನಾಚರಣೆಯ ಅಂಗವಾಗಿ ಇದೆ ಸೆ. 1,ಭಾನುವಾರ ಬೆಳಿಗ್ಗೆ 10.30 ಕ್ಕೆ ಬೆಂಗಳೂರಿನ ವಿಶ್ವೇಶ್ವಪುರ ವಾಣಿವಿಲಾಸ ರಸ್ತೆಯ ವಾಸವಿ ವಿದ್ಯಾನಿಕೇತನ ಪ್ರೌಢಶಾಲೆಯಲ್ಲಿ ಗುರುವಂದನಾ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.
ಮುಗ್ಧ ಮನದಲ್ಲಿ ಅಕ್ಷರವನ್ನು ಬಿತ್ತಿ,ಮಕ್ಕಳ ಭವಿಷ್ಯಕ್ಕೆ ಬೆಳಕನ್ನು ಚೆಲ್ಲಿ,ಸುಂದರ ನಾಡನ್ನು ಕಟ್ಟುವ ಮಹಾಶಿಲ್ಪಿಗಳು ಅಧ್ಯಾಪಕರು. ನಾಡಕಟ್ಟುವ ಮಹತ್ ಕಾರ್ಯದಲ್ಲಿ ತೊಡಗಿರುವ ಮತ್ತು ಸೇವೆ ಸಲ್ಲಿಸಿರುವ ಶಿಕ್ಷಕರನ್ನು ಗೌರವಿಸುವುದು ಸಮಾಜದ ಜವಾಬ್ದಾರಿ. ಈ ಹಿನ್ನೆಲೆಯಲ್ಲಿ ಕರ್ನಾಟಕ ಪೌರ ರಕ್ಷಣಾ ದಳ ವಿಭಾಗ 33 ಬಸವನಗುಡಿ ರವರು ನಿಸ್ವಾರ್ಥ ಸೇವೆ ಸಲ್ಲಿಸಿರುವ ಶಿಕ್ಷಕರನ್ನು ಗುರುತಿಸಿ ಅವರಿಗೆ ಗುರುವಂದನೆ -ಗೌರವ ಸಮರ್ಪಣೆಯನ್ನು ಹಮ್ಮಿಕೊಂಡಿರುತ್ತಾರೆ.
ಪ್ರಸಕ್ತ ಸಾಲಿನ ಈ ಕಾರ್ಯಕ್ರಮದಲ್ಲಿ ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರೊ.ಕೆ ವಿ ರಾಮರಾವ್ ಒಳಗೊಂಡಂತೆ ಅನೇಕ ಪ್ರೌಢಶಾಲಾ ಶಿಕ್ಷಕರಿಗೆ ಗೌರವಿಸಲಿದ್ದಾರೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾರತೀಯ ವಿಜ್ಞಾನ ಸಂಸ್ಥೆಯ ಏರೋಸ್ಪೇಸ್ ಇಂಜಿನಿಯರಿಂಗ್ ವಿಭಾಗದ ಮುಖ್ಯ ಸಂಶೋಧನಾ ವಿಜ್ಞಾನಿ ಡಾ. ಎಸ್ ಎನ್ ಓಂಕಾರ್ ಮತ್ತು ಡಿಸಿಜಿ ಹೋಂ ಗಾರ್ಡ್ಸ್ ಮತ್ತು ಕೆ ಸಿ ಡಿ ಹಕ್ಕೈ ಅಕ್ಷಯ್ ಮಚ್ಚೀಂದ್ರ ಐ ಪಿ ಎಸ್ ಆಗಮಿಸಲಿದ್ದಾರೆ.
ಕೆ ಸಿ ಡಿ ಎಚ್ ಕ್ಯೂ ಆಫೀಸರ್ ಕಮಾಂಡಿಂಗ್ ನಾಗೇಂದ್ರ ಬಾಬು ಎನ್ ಪಿ ಮತ್ತು ವಿಭಾಗ 33ರ ವಿಭಾಗೀಯ ವಾರ್ಡನ್ ಗುರುದತ್ ಬಿ ಎಸ್ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರೊ ಕೆ ವಿ ರಾಮರಾವ್ ಕಿರುಪರಿಚಯ:
ಶ್ರೀಯುತರು ಮೂಲತಃ ಬೆಂಗಳೂರು ಸಮೀಪದ ಕಾಕೋಳಿನವರು. ಪ್ರೌಢಶಾಲಾ ಮತ್ತು ಕಾಲೇಜು ಶಿಕ್ಷಣವನ್ನು ಬೆಂಗಳೂರಿನಲ್ಲಿ ಪೂರೈಸಿ, ತಿರುಪತಿಯ ಎಸ್‌ವಿ ವಿಶ್ವವಿದ್ಯಾಲಯದಿಂದ ವಾಣಿಜ್ಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಮೈಸೂರಿನ ಕರಾಮುವಿಯಿಂದ ಎಂ ಬಿ ಎ (ಫೈನಾನ್ಸ್ ) ಎಂಬಿಎ (ಮಾರ್ಕೆಟಿಂಗ್)ಗಳಿಸಿರುತ್ತಾರೆ.
ಆಚಾರ್ಯ ಪಾಠಶಾಲೆಯ ಕಾಲೇಜಿನಲ್ಲಿ ವೃತ್ತಿಯನ್ನು ಆರಂಭಿಸಿ ನಂತರ ಜಯನಗರ ನಾಲ್ಕನೇ ಬ್ಲಾಕ್ ನ ಪ್ರತಿಷ್ಠಿತ ವಿಜಯ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ಅಧ್ಯಾಪಕರಾಗಿ 28 ವರ್ಷ ಕಾಲ ಸೇವೆ ಸಲ್ಲಿಸಿರುತ್ತಾರೆ.
ಲೆಕ್ಕಶಾಸ್ತ್ರ ಮತ್ತು ವ್ಯವಹಾರ ಅಧ್ಯಯನ ವಿಷಯದಲ್ಲಿ ಪದವಿ ಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆಯ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ, ರಾಷ್ಟ್ರಪ್ರಶಸ್ತಿ ವಿಜೇತ ಸೇವಾ ಸಂಸ್ಥೆ ಉದಯ ಭಾನು ಕಲಾಸಂಘ ಕೊಡಮಾಡುವ ‘ಉದಯಭಾನು ವಿದ್ಯಾರತ್ನ’ ಪ್ರಶಸ್ತಿಗೆ ಭಾಜನರಾಗಿ, ವಾಣಿಜ್ಯ ಮತ್ತು ನಿವರ್ಹಣೆ ಶಿಕ್ಷಣ ದಲ್ಲಿ 34 ವರ್ಷಗಳ ಶೈಕ್ಷಣಿಕ ಅನುಭವದಲ್ಲಿ ಸುಮಾರು 30,000 ವಿದ್ಯಾರ್ಥಿಗಳಿಗೆ ಭೋದನೆ ಮಾಡಿರುವ ಹೆಗ್ಗಳಿಕೆ ಶ್ರೀಯುತರದು.
ಮತ್ತೊಂದು ವೈಶಿಷ್ಟ್ಯವೆಂದರೆ ಇವರ ಬೋಧನೆಯಿಂದ ಪ್ರೇರೇಪಿತರಾಗಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪ್ರಸ್ತುತ ನೊಬೆಲ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ನ ಅಕಾಡೆಮಿಕ್ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಾ, ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಮ್ಯಾನೇಜ್ಮೆಂಟ್ ವಿಚಾರದಲ್ಲಿ ಪ್ರೌಢ ಪ್ರಬಂಧ ರಚನೆಯಲ್ಲಿ ತೊಡಗಿ ಸದ್ಯದಲ್ಲೇ ಡಾಕ್ಟರೇಟ್ ಪದವಿಯನ್ನು ಪಡೆಯಲಿದ್ದಾರೆ.
ಸೇವಾ ಮನೋಭಾವನೆ ಬೋಧನಾ ಕೌಶಲದಿಂದ ಶಿಕ್ಷಕರ ಸಮೂಹಕ್ಕೆ ಮಾದರಿಯಾಗಿ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಮೇಷ್ಟ್ರು ಆರ್ ಆರ್ ಸರ್ ರವರಿಗೆ ಹೃತ್ಪೂರ್ವಕ ಅಭಿನಂದನೆಗಳು.