(ಈ ಅನುಭವ ನಿಮ್ಮದೂ ಆಗಿರಬಹುದು)
‘ಸಾಯಿ ರಾಂ….ಅನಾಥ ಮಕ್ಕಳಿಗೆ ದಾನ ಮಾಡಿ ಸಾಯಿರಾಂ’ ಹಾಡು ಗಾಳಿಯಲ್ಲಿ ತೇಲಿ ಬಂತು. ಅನಾಥಾಶ್ರಮದ ಆಟೋನೋ, ವ್ಯಾನೋ ಇನ್ನೇನು ನಮ್ಮ ರಸ್ತೆಗೆ ಬಂದೇ ಬಿಡುತ್ತೆ. ಮಗನಿಗೆ ಕೂಗಿ ಹೇಳಿದೆ.
‘ಬೇಗ ಬೇಗ ವಾರ್ಡ್ರೋಬಲ್ಲಿ ಕೆಳಗಡೆ ಇಟ್ಟಿರೋ ಅಪ್ಪನ ಬಟ್ಟೆಗಳು, ನಿನ್ನ ಶಾರ್ಟ್ ಪ್ಯಾಂಟ್ ಟಿ- ಶರ್ಟುಗಳು, ಶೀತಲ್ ದು ಫ್ರಾಕ್, ಲಂಗ ಆಚೆ ಪೋರ್ಟಿಕೋದಲ್ಲಿ ಇಟ್ಟಿರೊ ಬಾಕ್ಸ್ ಗೆ ತುಂಬು. ನನ್ನ ಸೀರೆ, ಚೂಡಿದಾರಗಳು ತಂದುಬಿಡ್ತೀನಿ. ಪಾಪ ಅನಾಥ ಕುರುಡು ಮಕ್ಳಂತೆ, ನಮ್ಮಂಥವರೇ ಸಹಾಯ ಮಾಡಬೇಕಲ್ವ’ ಅಂದೆ.
‘ಅಮ್ಮಾ, ನೀನು ತೆಗೆದಿಟ್ಟಿರೋ ಟಿ-ಶರ್ಟ್ ಗಳೆಲ್ಲಾ ನಂಗೆ ತುಂಬಾ ಇಷ್ಟವಾಗಿರೋದು. ಅದು ಕೊಡಬೇಡ, ನಂಗೇ ಬೇಕು, ಹಾಗೆ ನೈಕಿ ಶೂಸ್ ಕೂಡ..’ ದುಃಖ ಒತ್ತರಿಸಿ ಬಂದಿತ್ತು ರಜತಂಗೆ.
‘ಅಯ್ಯೋ ಕೊಟ್ಬಿಡೋ ಪುಟ್ಟ, ನೀನೀಗ ಹೈಸ್ಕೂಲ್ ಗೆ ಬಂದಿದ್ಯಾ ಪಾದ ದೊಡ್ಡದಾಗಿದೆ, ನಿಂಗೆ ಹಿಡಿಸಲ್ಲ. ಬಟ್ಟೆಗಳೂ ಆಗಲ್ಲ ಕಣೋ.. ಸ್ಕೂಲು ಶುರು ಆಗಲಿ, ಹೊಸದು ತೊಗೊಳ್ಳುವಿಯಂತೆ..’
‘ಅಮ್ಮಾ…. !’ ಬಿರುಗಾಳಿಯಂತೆ ಬಂದಳು ಒಂಭತ್ತನೇ ಕ್ಲಾಸಿನಲ್ಲಿ ಓದ್ತಿರೋ ಮಗಳು ಶೀತಲ್. ‘ನನ್ ಬರ್ತ್ಡೇ ಡ್ರೆಸ್ ಹಳೆಯದಾಗಿದೆ, ಲಾಸ್ಟ್ ಇಯರ್ದು. ಅನಾಥಾಶ್ರಮದವರಿಗೆ ಕೊಟ್ಟುಬಿಡು, ಹಾಗೇ ಬುಕ್ಸ್, ಓಲ್ಡ್ ಜ್ಯುವೆಲರಿ ಕೂಡಾ.. ಸೋ ದಟ್, ಐ ಕೆನ್ ಬೈ ನ್ಯೂ ಸ್ಟಫ್…’ ಮೂತಿ ಸೊಟ್ಟ ಮಾಡಿದ್ಲು.
‘ಹೊಸದಾಗಿದ್ರೆ ಕೊಡೋದು ಬೇಡ, ಇನ್ನು ಸ್ವಲ್ಪ ದಿನ ಹಾಕ್ಕೋಳೆ…’
‘ಅವನಿಗೆ ಮಾತ್ರ ಕೊಡು ಅಂತೀಯ, ನಂದು ಇಟ್ಕೋ ಅಂತೀಯ…ಹೋಗಮ್ಮ, ನಿಂದು ಯಾವಾಗಲೂ ಪಾರ್ಶಿಯಾಲ್ಟಿನೇ..!’
ರೇಗಿತು, ಜಗ್ಳ ಆಡೋ ಹೊತ್ತಲ್ಲ ಎನಿಸಿ ಅನಾಥಾಶ್ರಮಕ್ಕೆ ಎಂದು ತೆಗೆದಿಟ್ಟ ಎಲ್ಲರ ಬಟ್ಟೆಗಳು, ಶೂಸುಗಳು, ಪುಸ್ತಕಗಳು, ಆಟದ ಸಾಮಾನುಗಳನ್ನು ದೊಡ್ಡ ಕಾರ್ಡ್ ಬೋರ್ಡ್ ಬಾಕ್ಸಿಗೆ ತುಂಬಿ ಪ್ಯಾಕ್ ಮಾಡಿದೆ. ಅನಾಥರು ಅದರಲ್ಲೂ ಕುರುಡು ಮಕ್ಕಳು.. ಪಾಪ, ಅವರ ಜೀವನ ಹೇಗೋ ಏನೋ.. ಐದು ನಿಮಿಷ ಕಣ್ಣು ಮುಚ್ಚಿಕೊಂಡರೆ ಯಾವ ಕೆಲಸವೂ ಮಾಡಲು ನಮಗೆ ಸಾಧ್ಯವಾಗುವುದಿಲ್ಲ, ಅಂತಹದ್ದರಲ್ಲಿ ಜೀವನವಿಡೀ ಏನೂ ಕಾಣಿಸದ ಅವರ ಬದುಕು ಹೇಗಿರಬಹುದು ಎಂದೆಣಿಸಿಯೇ ಮನಸ್ಸಿಗೆ ಸಂಕಟವಾಯಿತು. ಹದಿನೈದಿಪ್ಪತ್ತು ನಿಮಿಷಗಳ ಬಳಿಕ ವ್ಯಾನ್ ಬಂದಾಗ ಬಾಕ್ಸ್ ಜೊತೆಗೆ ಪ್ರತಿವರ್ಷ ಮಂತ್ರಾಲಯಕ್ಕೆ ಹೋಗಲು ಇಟ್ಟಿದ್ದ ಹುಂಡಿ ಒಡೆದು ಸಿಕ್ಕ ಸಾವಿರ ರೂಪಾಯಿ ಕೂಡಾ ಆತನಿಗೆ ಕೊಟ್ಟು ಕೈಮುಗಿದೆ. ರಜತನ ಮ್ಲಾನಗೊಂಡ ಮುಖ ಕಣ್ಮುಂದೆ ಬಂದರೂ ಕುರುಡು ಮಕ್ಕಳಿಗೆ ಕೈಲಾದ ಸಹಾಯ ಮಾಡಿದ ತೃಪ್ತಿ ನಂದಾಗಿತ್ತು.
ಬೆಳಿಗ್ಗೆ ಎಂದಿನಂತೆ ವಾಕಿಂಗ್ 3 ರೌಂಡ್ ಮುಗಿಸಿ ನಾಲ್ಕನೇ ರೌಂಡ್ ಬರುವಾಗ ‘ಅಮ್ಮ ನೋಡಿಲ್ಲಿ!!!!’ ಜೋರಾಗಿ ಕಿರುಚಿದ ರಜತ್.
ಏನಾಯಿತೋ ಎಂದು ಗಾಬರಿಯಿಂದ ಓಡಿದರೆ ಕಂಡದ್ದು
ಅವನ ಪ್ಯಾಂಟು ಟೀಶರ್ಟುಗಳು, ಶೀತಲ್ ಡ್ರೆಸ್, ವರ್ಷಗಳಿಂದ ಜತನವಾಗಿರಿಸಿದ ಮಕ್ಳ ಬೊಂಬೆಗಳು ಪಕ್ಕದ ಮೋರಿಯಲ್ಲಿ… ಪಾಪಿಗಳು, ಕುರುಡು ಮಕ್ಕಳಿಗೆ ಸಹಾಯ ಮಾಡಿ ಅಂತ ಹೇಳಿ ದುಡ್ಡು ಮಾತ್ರ ತೆಗೆದುಕೊಂಡು ಮಿಕ್ಕಿದ್ದು ಬಿಸಾಡಿ ನಮ್ಮನ್ನು ಏಮಾರಿಸಿದ್ದರು..
*ಜಲಜಾ ರಾವ್*