ಕವನ : ಕೊರಡು ಕೊನರಲು

0
149

ಕೊರಡು ಕೊನರಲು

ನೀನೊಲಿದಾಗಲೇ ನಾ ಬೀಜ ಮೊಳೆತು ನವಿರಾಗಿ ಚಿಗುರಿದ್ದು ಹಚ್ಚ ಹಸಿರಿನ ವೈಶಾಲ್ಯತೆಯಲಿ
ಬೆಳೆದು ಮರವಾಗಿ ನೆರಳು
ಹೂ ಹಣ್ಣು ಕಾಯಿ ನೀಡಿದ್ದು//

ನೀನೊಲಿದಾಗಲೇ ನಾ ಸಸಿ
ಬಲಿತು ಹೆಮ್ಮರವಾಗಿದ್ದು
ಅಂಗಳದ ತುಂಬೆಲ್ಲಾ ಟೊಂಗೆ
ಪಂಗ ಪಂಗಳವಾಗಿ ಹರಡಿ
ಬಿಸಿಲ ಝಳಕೆ ತಂಪಾಗಿದ್ದು//

ನಿನ್ನೊಲುಮೆಯ ಮರೆತ
ಧೂರ್ತ ಹುಲು ಮಾನವನೀಗ
ನನ್ನಿರವ ಬುಡ ಕಡಿದಾಗ ನಾ
ಬರೀ ಒಣಗಿದ ಕೊರಡಾಗಲು
ಮಾಡುವದು ಇನ್ನೇನು?//

ಸುತ್ತ ಚೆಲ್ಲಿದ ಹಸಿ ಮಣ್ಣಿನ
ಪಸೆಯ ಹೀರುತ ಬದುಕಲು
ಬೇರುಗಳ ಹರಡಿ ಗುಪ್ತ ಜಲದ ಸೆಲೆಯ ಹುಡುಕುತಲಿ ಮತ್ತೆ ಮೋಡ ಮಳೆಗಾಗಿ ಕಾದಿರುವೆ//

ಕೊನರಲೇಬೇಕು ಕೊರಡು
ಬದುಕುವದು ಸುಲಭವಲ್ಲ  ಕೊನೆಯಾಸೆ ಈ ಬಡ ಜೀವಕೆ
ತಿಳಿದವರು ನಾಲ್ಕು ಹನಿ
ಕಣ್ಣೀರಾದರೂ ಸುರಿವರಲ್ಲ//

ಶ್ರೀಮತಿ ಶಾರದಾ ವೀರಣ್ಣ ಬೆಟಗೇರಿ. ಗಂಗಾವತಿ.