ಎಮ್ಮೆತಮ್ಮನ ಕಗ್ಗದ ತಾತ್ಪರ್ಯ  

Must Read

 

ಸತಿಯೆಂಬ ಸೆರೆಕುಡಿದು ಧನವೆಂಬ ಚೇಳ್ಕಡಿದು
ಹೊಲಗದ್ದೆಮನೆಯೆಂಬ ಭೂತಹಿಡಿದು
ತನುವೆಂಬ ಮರನೇರಿ ಹುಚ್ಚೆದ್ದು ಕುಣಿಯುತಿದೆ
ಮನವೆಂಬ ಮರ್ಕಟವು – ಎಮ್ಮೆತಮ್ಮ||೧೦೮||

ಶಬ್ಧಾರ್ಥ
ಭೂತ = ದೆವ್ವ. ತನು = ದೇಹ. ಮರ್ಕಟ = ಕೋತಿ,ಮಂಗ

ತಾತ್ಪರ್ಯ
ಹೆಣ್ಣು, ಹೊನ್ನು , ಮಣ್ಣು ಈ‌ ಮೂರು‌ ಮಾನವನನ್ನು ಕಾಡುವ
ಅಪಾಯಕಾರಿಗಳು. ಪತ್ನಿಯ ಮೇಲಿನ ಮೋಹವೆಂಬುದು
ಮದ್ಯವಿದ್ದಂತೆ. ಅದರ ಸೇವನೆಯಿಂದ ತಲೆಗೆ ಅಮಲೇರುತ್ತದೆ. ಅಂದರೆ ಅಜ್ಞಾನ ವಕ್ಕರಿಸುತ್ತದೆ. ಸಂಪತ್ತು ಕೂಡ ಚೇಳು ಇದ್ದ ಹಾಗೆ. ಅದನ್ನು ಮುಟ್ಟಿದರೆ ಸಾಕು ಕಚ್ಚಿ ವೇದನೆ ಕೊಡುತ್ತದೆ. ಹಣಕ್ಕಾಗಿ ಮನುಷ್ಯ ಹಗಲುರಾತ್ರಿ ಕಷ್ಟಪಟ್ಟು ದುಡಿಯುತ್ತಾನೆ.ಆರೋಗ್ಯವನ್ನು ಹಾಳುಮಾಡಿಕೊಳ್ಳುತ್ತಾನೆ. ಇನ್ನು ಆಸ್ತಿ
ಸಂಪಾದನೆ ಮಾಡಬೇಕೆಂದು ಮನದಲ್ಲಿ‌ ಬಂದರೆ‌‌ ಅದು
ದೆವ್ವದಂತೆ ಕಾಡಿಸತೊಡಗುತ್ತದೆ.ಇದರಿಂದ‌ ಮೂರ್ಛೆ
ಉಂಟಾಗುತ್ತದೆ. ಅಂದರೆ ತಾಮಸ ಗುಣ ಸೇರಿಕೊಳ್ಳುತ್ತದೆ.
ಮದ್ಯಸೇವಿಸಿ, ಚೇಳ್ಕಡಿಸಿಕೊಂಡು, ಭೂತ ಬಡಿದ ಮನವೆಂಬ ಕೋತಿ ಈ ದೇಹದ ಮರವನ್ನೇರಿ ಹುಚ್ಚುಚ್ಚಾಗಿ‌ ಜಿಗಿಯುತ್ತದೆ. ಮನಸಿನ ಬಗ್ಗೆ ಒಂದು ಸುಭಾಷಿತ ಈ ಕೆಳಗಿನಂತೆ ಹೇಳುತ್ತದೆ.
ಮರ್ಕಟಸ್ಯ ಸುರಾಪಾನಂ ಮಧ್ಯೇ ವೃಶ್ಚಿಕ ದಂಶನಮ್
ತನ್ಮಧ್ಯೇ ಭೂತಾ ಸಂಚಾರೋ ಯದ್ವಾ ತದ್ವಾ ಭವಿಷ್ಯತಿ”
ಮೊದಲೆ ಚಂಚಲಮನದ ಕೋತಿಗೆ ಸೆರೆಕುಡಿಸಿ,ಚೇಳಕಡಿಸಿ
ಮತ್ತೆ ಮೇಲೆ ದೆವ್ವ ಬಡಿದರೆ ಅದರ ಜಿಗಿದಾಟ ನಾಲ್ಕುಪಟ್ಟು
ಹೆಚ್ಚಾಗುತ್ತದೆ.ಮನವೆಂಬ ಮರ್ಕಟನು ತನುವೆಂಬ ವೃಕ್ಷವನೇರಿ ಇಂದ್ರಿಯಂಗಳೆಂಬ ಶಾಖೆಶಾಖೆಗೆ ಹಾರುತ್ತಿದೆ ಎಂಬ ಶರಣರ ವಚನವು ಇದನ್ನೆ ಹೇಳುತ್ತಿದೆ.

ರಚನೆ ಮತ್ತ ವಿವರಣೆ
ಎನ್ .ಶರಣಪ್ಪ‌ ಮೆಟ್ರಿ
ಮೊ: 9449030990

Latest News

ಕವನ : ಬೆಳಕಿನ ದೀಪಾವಳಿ

ಬೆಳಕಿನ ದೀಪಾವಳಿ ಬೆಳಕು ಸರಿದು ನೇಸರನ ಅಸ್ತದೊಡನೆ ಜಗಕೆ ಜಗಮಗಿಸುವ ದೀಪಗಳ ದರ್ಶನ ಬಾನಂಚಿನಲಿ ಶಬ್ದಗಳ ನಡುವೆ ಬೆಳಕಿನ ಚಿತ್ತಾರ ಮೂಡಿಸುವ ಹಬ್ಬ ಬೆಳಕಿನ ದೀಪಾವಳಿತಮವ ಕಳೆದು ಜ್ಯೋತಿ ಬೆಳಗುವ ನಾಡಿನಪವಿತ್ರ ಹಬ್ಬ ತಳಿರು ತೋರಣ ಕಟ್ಟಿ ಮನೆಯನು ಸಿಂಗರಿಸಿ ಹಬ್ಬದಡುಗೆಯ ಸವಿಯುಣ್ಣುವ ಮನದ ಖುಷಿಯ...

More Articles Like This

error: Content is protected !!
Join WhatsApp Group