ಹುನಗುಂದ: ವಿವಿಧ ಆಯಾಮಗಳಲ್ಲಿ ಬೆಳೆದು ಬಂದ ಕನ್ನಡ ಸಾಹಿತ್ಯ ನಮ್ಮ ಹೆಮ್ಮೆ. ಅದು ನಮ್ಮ ಅಸ್ಮಿತೆಯೂ ಕೂಡ. ಅದರಲ್ಲೂ ಹಳಗನ್ನಡ ಸಾಹಿತ್ಯ ಪರಂಪರೆಯ ಕಿರೀಟ. ಇಂದು ಅದರ ಓದು ಮತ್ತು ಒಲವು ಅಗತ್ಯವಿದೆ ಎಂದು ವಿಮರ್ಶಕ ಡಾ.ಮೈನುದ್ದೀನ ರೇವಡಿಗಾರ ಹೇಳಿದರು.
ಅವರು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಂಗಮ ಪ್ರತಿಷ್ಠಾನ, ಸಾಹಿತ್ಯ ಸಮಾವೇಶ, ಕನ್ನಡ ಲೇಖಕರ ಪರಿಷತ್, ಸಾರಂಗಮಠ ಸಾಹಿತ್ಯ ಪ್ರತಿಷ್ಠಾನ ಮತ್ತು ಎಸ್.ಆರ್.ಕೆ.ಸ್ಮಾರಕ ಪ್ರತಿಷ್ಠಾನ ಇಳಕಲ್ಲ ಸಹಯೋಗದಲ್ಲಿ ಶನಿವಾರ ನಡೆದ ಸಂಗಮ ಸಾಹಿತ್ಯ ಸಂಭ್ರಮ ೨೦೨೪ ಮತ್ತು ವಾರ್ಷಿಕ ಸಂಗಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘ಹಳಗನ್ನಡ ಓದು – ಒಲವು’ ವಿಷಯ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.
ಸಂಗಮ ಪ್ರಶಸ್ತಿ ಎಂ.ಆರ್.ಇದ್ದಲಗಿ ಮತ್ತು ಯುವ ಲೇಖಕ ಪ್ರಶಸ್ತಿ ಪಡೆದ ಶಿವರುದ್ರಪ್ಪ ಮೆಣಸಿನಕಾಯಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಹಿರಿಯ ವಕೀಲ ಕೆ.ಎಂ. ಸಾರಂಗಮಠ ಅಧ್ಯಕ್ಷತೆ ವಹಿಸಿದ್ದರು. ಗ್ರೇಡ್ ೨ ತಹಶೀಲ್ದಾರ್ ಮಹೇಶ ಸಂದಿಗವಾಡ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಮಹಾದೇವ ಬಸರಕೋಡ, ಕಸಾಪ ತಾಲೂಕ ಅಧ್ಯಕ್ಷ ಮಲ್ಲಿಕಾರ್ಜುನ ಸಜ್ಜನ ಮುಖ್ಯ ಅತಿಥಿಗಳಾಗಿದ್ದರು. ಪಿಯು ಕಾಲೇಜು ಪ್ರಭಾರ ಪ್ರಾಚಾರ್ಯ ಶರಣಪ್ಪ ಹೂಲಗೇರಿ ಮತ್ತು ಲೇಖಕರ ಪರಿಷತ್ ಅಧ್ಯಕ್ಷ ಡಾ.ಮುರ್ತುಜಾ ಒಂಟಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಭಾಷಣ ಸ್ಪರ್ಧೆಯಲ್ಲಿ ಬಹುಮಾನ ಪಡೆದ ನೇತ್ರಾ ಬರಗುಂಡಿಗೆ ಬಹುಮಾನ ವಿತರಿಸಲಾಯಿತು.
ಸಿದ್ದಲಿಂಗಪ್ಪ ಬೀಳಗಿ ಸ್ವಾಗತಿಸಿದರು. ವೀರಭದ್ರಯ್ಯ ಶಶಿಮಠ ವಂದಿಸಿದರು. ಆಯ್.ಎಚ್.ನಾಯಿಕ ಮತ್ತು ಎಸ್ಕೆ ಕೊನೆಸಾಗರ ನಿರೂಪಿಸಿದರು.