ಅವರಿವರ ಸಿರಿಕಂಡು ಹೊಟ್ಟೆಕಿಚ್ಚೇತಕ್ಕೆ ?
ಕಡುಬಡವ ನಾನೆಂದು ದುಃಖವೇಕೆ ?
ನಿನ್ನೊಳಗೆ ತುಂಬಿಹುದು ಸವೆಯದಿಹ ಸಂಪತ್ತು
ಪಡೆದುಕೋ ಪರಮಾರ್ಥ – ಎಮ್ಮೆತಮ್ಮ
ಶಬ್ಥಾರ್ಥ
ಪರಮಾರ್ಥ = ಶ್ರೇಷ್ಠವಾದ ಸತ್ಯ, ಮೋಕ್ಷ
ತಾತ್ಪರ್ಯ
ಶ್ರೀಮಂತರನ್ನು ಕಂಡು ಅಸೂಯೆಪಡಬಾರದು. ಅವರನ್ನು
ದೂಷಿಸುವುದರಿಂದ ನೀನು ಬಡವನಾಗುತ್ತೀಯ. ನಿನ್ನಲ್ಲಿ
ಕೊರತೆಯಿದೆಯೆಂದು ಭಾವಿಸುತ್ತೀಯ. ನಿನ್ನ ಭಾವನೆ
ಹೇಗಿದೆಯೊ ಹಾಗೆ ನೀನಾಗುತ್ತಿ. ನಾನು ಶ್ರೀಮಂತನಿದ್ದೇನೆ
ಎಂದು ಭಾವಿಸುತ್ತಿದ್ದರೆ ನಿನ್ನೆಡೆಗೆ ಧನ ಹರಿದುಬಂದು ನೀನು
ಶ್ರೀಮಂತನಾಗುತ್ತಿ. ನಾನು ಬಡವನೆಂದು ಭಾವಿಸಿದರೆ
ಬಡವನಾಗುತ್ತಿ. ಸದಾ ಸಕಾರಾತ್ಮಕವಾಗಿ ಚಿಂತಿಸಬೇಕೆ
ಹೊರತು ನಕಾರಾತ್ಮಕವಾಗಿ ಚಿಂತಿಸಕೂಡದು. ಏಕೆಂದರೆ
ನೀನು ಏನು ಚಿಂತಿಸುತ್ತಿಯಾ ಅದು ಸಾಕಾರವಾಗುತ್ತದೆ.
ಯದ್ಭಾವಂ ಸದ್ಭವತಿ ಎಂಬ ಮಾತಿದೆ. ಭಾವ ಶುದ್ಧವಾಗಿದ್ದರೆ
ಭಾಗ್ಯಕ್ಕೆ ಕಮ್ಮಿಯಿಲ್ಲ. ಆದಕಾರಣ ಶ್ರೀಮಂತರನ್ನು ಕಂಡು
ಅವರನ್ನು ಪ್ರಶಂಸೆ ಮಾಡುತ್ತ ಸಂತೋಷಪಡಬೇಕು. ಆಗ
ನಿನ್ನೆಡೆಗೆ ಸಂಪತ್ತು ಹರಿದುಬರುತ್ತದೆ. ನಿನ್ನ ಆತ್ಮವು
ಚಿಂತಾಮಣಿಯಿದ್ದ ಹಾಗೆ. ನೀನು ಬಯಸಿದ್ದನ್ನೆಲ್ಲ ನೀಡುತ್ತದೆ.
ಪ್ರಪಂಚದಲ್ಲಿಎಲ್ಲರಿಗೆ ಸಾಕಾಗಿ ಮಿಗುವಷ್ಟು ಸಂಪತ್ತಿದೆ. ಮತ್ತು ನಿನ್ನೊಳಗೆ ಕೂಡ ಸವೆಯಲಾರದಷ್ಟು ಸಂಪತ್ತಿದೆ. ಆ ಆತ್ಮ ಸಂಪತ್ತನ್ನು ಪಡೆದುಕೊಂಡರೆ ನೀನು ಬಯಸಿದ್ದೆಲ್ಲ
ಸಾಕಾರವಾಗಿ ಬಿಡುತ್ತದೆ. ಅಂಥ ಪರಮಾರ್ಥವನ್ನು ಪಡೆಯಲು ಭಾವ ಶುದ್ಧದಿಂದ ಮತ್ತು ಶ್ರದ್ಧೆಯಿಂದ ಸಾಧಿಸು.
ಆ ಪರಮಾರ್ಥ ದೊರಕಿದರೆ ಎಲ್ಲವೂ ದೊರಕಿದಂತೆ.
ರಚನೆ ಮತ್ತ ವಿವರಣೆ
ಎನ್ .ಶರಣಪ್ಪ ಮೆಟ್ರಿ
ಮೊ: 9449030990