ಹಾಸನದ ಭರತನಾಟ್ಯ ಕ್ಷೇತ್ರದಲ್ಲಿ ಗಮನ ಸೆಳೆಯುತ್ತಿರುವ ಉದಯೋನ್ಮುಖ ಪ್ರತಿಭೆ ಯೋಗಿತ ಪಿ.ಪಟೇಲ್.
ಮೈಸೂರಿನಲ್ಲಿ ಇತ್ತೀಚೆಗೆ ನಡೆದ ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರದರ್ಶಿತ ಎಸ್.ಎಸ್.ಪುಟ್ಟೇಗೌಡ ವಿರಚಿತ ಮಹಾತ್ಮ ಕನಕದಾಸ ನಾಟಕದ ಆಸ್ಥಾನ ದೃಶ್ಯದಲ್ಲಿ ಇವರ ನಾಟ್ಯ ಅಳವಡಿಸಲಾಗಿ ರಂಗ ತಾಲೀಮಿನಲ್ಲಿ ಈಕೆಯ ನೃತ್ಯ ಪ್ರತಿಭೆ ವೀಕ್ಷಿಸಿದೆ. ನೃತ್ಯ ಕ್ಷೇತ್ರದಲ್ಲಿ ಬೆಳೆದು ಬಂದ ಬಗೆ ಹೇಗೆ ಎಂದು ಕೇಳಿದೆ. ವಿದುಷಿ ಶ್ರೀಮತಿ ಅಂಬಳೆ ರಾಜೇಶ್ವರಿ ಮೇಡಂ ನನ್ನ ನೃತ್ಯ ಗುರುಗಳು ಎಂದರು. ಮೇಡಂ ಅವರ ಅನೇಕ ಶಿಷ್ಯೆಯರ ಪರಿಚಯ ಈಗಾಗಲೇ ನಾನು ಸಾಕಷ್ಟು ಬರೆದಿದ್ದೇನೆ. ತಂದೆ ತಾಯಿ ಪ್ರಕಾಶ್ ಪಟೇಲ್ ಕೆ.ಸಿ. ಮತ್ತು ಮಂಜುಳ ಇವರ ಪ್ರೋತ್ಸಾಹದಿಂದ ಮೂರೂವರೆ ವಯಸ್ಸಿಗೆ ಯೋಗಿತ ನೃತ್ಯಾಭ್ಯಾಸಕ್ಕೆ ಹೆಜ್ಜೆ ಹಾಕಿದಾಕೆ. ಯುಕೆಜಿಯಲ್ಲಿ ಸ್ಟಡಿ ಮಾಡುವಾಗಲೇ ಚಿಕ್ಕಮಗಳೂರಿನ ಭದ್ರಕಾಳಿ ಬನದಲ್ಲಿ ನರ್ತಿಸಿದ್ದ ಬಾಲೆ ಅಲ್ಲಿಂದ ಇಲ್ಲಿ ತನಕ ಸರಿ ಸುಮಾರು ೫೦ಕ್ಕೂ ಹೆಚ್ಚು ಕಡೆಗಳಲ್ಲಿ ನೃತ್ಯ ಸೇವೆ ನೀಡಿರುವುದಾಗಿ ಹೇಳಿದರು. ಹಾಸನದ ಚನ್ನಕೇಶವ ದೇವಸ್ಥಾನದಲ್ಲಿ ಇವರ ಮೊದಲನೆಯ ಭರತನಾಟ್ಯ ಕಾರ್ಯಕ್ರಮ ನಡೆದಿದೆ. ಕಳೆದ ೧೩ ವರ್ಷಗಳಿಂದ ಸತತವಾಗಿ ಹಾಸನದ ಗಣಪತಿ ಪೆಂಡಾಲ್‌ನಲ್ಲಿ ನೃತ್ಯ ಕಾರ್ಯಕ್ರಮ ನೀಡಿದ್ದಾರೆ.
೨೦೧೮ರಲ್ಲಿ ಶ್ರವಣಬೆಳಗೊಳ ಮಹಾಮಸ್ತಕಾಭಿಷೇಕದಲ್ಲಿ ಸಮೂಹ ನೃತ್ಯ ಪ್ರದರ್ಶನದಲ್ಲಿ ಭಾಗಿಯಾಗಿದ್ದಾರೆ. ಆಲೂರು, ಹಾಸನ, ಶ್ರವಣಬೆಳಗೊಳ, ಬೇಲೂರು, ಮೈಸೂರು, ಬೆಂಗಳೂರು, ಸಕಲೇಶಪುರ ಅರೆಹಳ್ಳಿ ಹೀಗೆ ಹಳ್ಳಿ ನಗರಗಳಲ್ಲಿ ಇವರ ಭರತನಾಟ್ಯ ಪ್ರದರ್ಶನ ನಡೆದಿದೆ.
ಎಸ್.ಬಿದರೆಯ ಲಕ್ಷ್ಮಿ ನಾರಾಯಣಸ್ವಾಮಿ ದೇವಾಲಯದಲ್ಲಿ ನಡೆದ ಗರುಡೋತ್ಸವ, ಹಾಸನ ದೇವಿಗೆರೆ ಕೊಳಲು ಗೋಪಾಲಕೃಷ್ಣ ದೇವಾಲಯದಲ್ಲಿ ನೀಡಿದ ನೃತ್ಯ ಪ್ರದರ್ಶನ ಸ್ಮರಿಸುತ್ತಾರೆ. ರಾಜ್ಯ ಸ್ಪಂದನ ಸಿರಿ ವೇದಿಕೆ, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಆಯೋಜಿಸಿದ ಗುರುಗಳು ಅಂಬಳೆ ರಾಜೇಶ್ವರಿಯವರ ಸನ್ಮಾನ ಕಾರ್ಯಕ್ರಮದಲ್ಲಿ ದೂಪಾರತಿ ನೃತ್ಯದಿಂದ ಪ್ರೇಕ್ಷಕರ ಮನ ಸೆಳೆದಿದ್ದಾರೆ. ದೂಪರಾತಿ ನೃತ್ಯವನ್ನು ಅಂಬಳೆ ರಾಜೇಶ್ವರಿ ಮೇಡಂ ತಮ್ಮ ಅಪಾರ ಶಿಷ್ಯ ಬಳಗಕ್ಕೆ ಕಲಿಸಿದ್ದಾರೆ.
ಅಂತರರಾಷ್ಟ್ರೀಯ ಕಲಾ ಮತ್ತು ಸಾಂಸ್ಕೃತಿಕ ಸಂಸ್ಥೆ ಆಯೋಜಿಸಿದ ಅಮೃತ ಕಲಾ ಮಹೋತ್ಸವ, ನವರಾತ್ರಿಯಲ್ಲಿ ಶಂಕರಮಠ, ಚಾಮುಂಡೇಶ್ವರಿ ದೇವಾಲಯ, ಕಾರ್ತಿಕ ಮಾಸದಲ್ಲಿ ರಾಘವೇಂದ್ರ ಮಠದಲ್ಲಿ, ಅಷಾಡ ಮಾಸದಲ್ಲಿ ಶಾರದ ಶಂಕರ ಪೀಠದಲ್ಲಿ ಎರಡು ತಾಸು ಸುಸ್ತಿಲ್ಲದೆ ನರ್ತಿಸಿದ್ದಾರೆ. ಆದಿಚುಂಚನಗಿರಿ ಮಠದಲ್ಲಿ ಇವರ ಭರತನಾಟ್ಯ ನಡೆದಿದೆ. ತಮ್ಮ ಶಾಲೆಯಲ್ಲಿ ಸತತ ಮೂರು ವರ್ಷ ಸೋಲೋ ನೃತ್ಯ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಗಣಪತಿ ಪೆಂಡಾಲಿನಲ್ಲಿ ಶಿಲಾಬಾಲಿಕೆಯಾಗಿ, ರಾಮನವಮಿಯಲ್ಲಿ ರಾಮನಾಗಿ ಅಭಿನಯಿಸಿದ್ದಾರೆ. ೪ನೇ ತರಗತಿ ಓದುವಾಗಲೇ ಜೂನಿಯರ್ ೯ನೇ ತರಗತಿಗೆ ಸೀನಿಯರ್ ಭರತನಾಟ್ಯ ಪರೀಕ್ಷೆ ಮುಗಿಸಿ ಈಗ ವಿದ್ವತ್ ಪೂರ್ವ ಪರೀಕ್ಷೆಗೆ ಅಭ್ಯಾಸ ಮುಂದುವರಿಸಿದ್ದಾರೆ. ಜೊತೆಗೆ ಸಂಗೀತವನ್ನು ಶ್ರೀಮತಿ ಹೇಮ ಗಣೇಶ್ ಬಳಿ ಕಲಿಯುತ್ತಿದ್ದಾರೆ. ಹಾಸನ ಪೋದಾರ್ ಇಂಟರ್ ನ್ಯಾಷನನಲ್ ಸ್ಕೂಲ್‌ನಲ್ಲಿ ಹೈಸ್ಕೂಲು ಮುಗಿಸಿ ಈಗ ಹೆಚ್.ಕೆ.ಎಸ್. ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯು ವಿಜ್ಞಾನ ಓದುತ್ತಿದ್ದಾರೆ.
–ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯.
ವಿಳಾಸ: ಹುಣಸಿನಕರೆ ಬಡಾವಣೆ, ೨೯ನೇ ವಾರ್ಡ್. ೩ನೇ ಕ್ರಾಸ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.