ದೇವರಿಗೆ ಜಲಪತ್ರ ಫಲಪುಷ್ಪ ಪಕ್ವಾನ್ನ
ಕಾಯಿಗಳನರ್ಪಿಸಲು ಕೊಳುವನೇನು ?
ಮನಸು ಕೊಟ್ಟರೆ ಮಾತ್ರ ಕೊಂಡು ಹರಸುವನೆಮಗೆ
ಎಲ್ಲಬಿಡು ಮನಸುಕೊಡು – ಎಮ್ಮೆತಮ್ಮ
ಶಬ್ಧಾರ್ಥ
ಜಲ = ನೀರು. ಪತ್ರ = ಎಲೆ, ದಳ. ಫಲ = ಹಣ್ಣು. ಪುಷ್ಪ = ಹೂ
ಪಕ್ವಾನ್ನ = ಬೇಯಿಸಿದ ಅನ್ನ, ಭಕ್ಷ್ಯ
ತಾತ್ಪರ್ಯ
ದೇವರ ಮೂರ್ತಿಗೆ ಅಥವಾ ಲಿಂಗಕ್ಕೆ ನೀರಿನಿಂದ ಮಜ್ಜನ
ಮಾಡಿ ಅಭೀಷೇಕ ಮಾಡುವುದು , ಬಿಲ್ವ, ಬನ್ನಿ, ತುಲಸಿ,ಎಕ್ಕೆ
ದಳಗಳನ್ನು ಇಡುವುದು, ನಾನಾ ತರದ ಹೂವುಗಳನ್ನು
ಅರ್ಪಿಸುವುದು ಮತ್ತು ಹಣ್ಣಹಂಪಲ ಕಾಯಿ ಅನ್ನ ನೈವೇದ್ಯ
ಮಾಡಿದರೆ ದೇವರು ಸ್ವೀಕರಿಸುತ್ತಾನೇನು ? ಒಂದು ವೇಳೆ
ಸ್ವೀಕರಿಸಿದರೆ ನೀರು ಕೊಟ್ಟ ಕೆರೆಬಾವಿನದಿಗಳಿಗೆ ಮತ್ತು
ಹಣ್ಣು,ಪತ್ರಿ, ಅನ್ನ ಕೊಟ್ಟ ಗಿಡಮರ ಸಸ್ಯಗಳಿಗೆ ಪುಣ್ಯ
ದೊರಕುತ್ತವೆ.ಅವು ಕೊಟ್ಟು ದಾನಿಗಳಾದವು. ನೀನು ನಿನ್ನ
ಸ್ವಂತದ್ದು ದೇವರಿಗೆ ಏನು ಕೊಡುವೆ? ಅವೆಲ್ಲವನ್ನು ಕೊಟ್ಟ
ದೇವರಿಗೆ ವಾಪಾಸು ನೀನವುಗಳನ್ನು ಅರ್ಪಿಸಿದರೆ ನಿನಗೇನು ಫಲ ಸಿಗುವುದಿಲ್ಲ. ಅವುಗಳನ್ನು ಕೊಂಡ ದೇವರು ನಿನಗೆ ಯಾವ ಹರಕೆಯನ್ನು ಕೊಡುವುದಿಲ್ಲ. ನಿನ್ನದೆನ್ನುವುದು
ಏನಿದೆ? ಅದೆ ನಿನ್ನ ಮನಸ್ಸು ಮಾತ್ರ. ಆದಕಾರಣ ಈ ಪೂಜೆಪುನಸ್ಕಾರದ ಜೊತೆಗೆ ನಿನ್ನ ಮನಸು ಕೊಟ್ಟು ಏಕಾಗ್ರತೆಯಿಂದ ಧ್ಯಾನ ಮಾಡಿದರೆ ದೇವನು ಒಲಿಯುತ್ತಾನೆ.
ನಿನಗೆ ಶಾಂತಿ ನೆಮ್ಮದಿ ಸುಖಸಂಪತ್ತು ಕೊಡುತ್ತಾನೆ.
ಮನದಲ್ಲಿ ದೇವನನ್ನು ನೆನೆದರೆ ಸಾಕು ಸದಾ ಆನಂದ ದೊರಕುತ್ತದೆ. ಬಾಹ್ಯಪೂಜೆಗಿಂತ ಭಾವಪೂಜೆ ಅಥವಾ ಮಾನಸ ಪೂಜೆ ಶ್ರೇಷ್ಠವಾದದ್ದು. ದೇವನಿಗೆ ಮಾನಸಪೂಜೆ ಮಾಡಿ ಒಲಿಸು.
ರಚನೆ ಮತ್ತ ವಿವರಣೆ
ಎನ್ .ಶರಣಪ್ಪ ಮೆಟ್ರಿ
ಮೊ: 9449030990