ಹೆಣ್ಣಿನಲಿ ಹೊನ್ನಿನಲಿ ಮಣ್ಣಿನಲಿ ಮನ್ನಣೆಯೊ-
ಳರಸಿದರೆ ದೊರಕುವುದೆ ಸುಖಶಾಶ್ವತ
ನಿಧಿನಿಧಾನದ ಮೇಲೆ ಬಡವ ಕುಳಿತಂತಾಯ್ತು
ನಿನ್ನೊಳಗೆ ಹುದುಗಿಹುದು – ಎಮ್ಮೆತಮ್ಮ
ಶಬ್ಧಾರ್ಥ
ಮನ್ನಣೆ = ಗೌರವ. ಅರಸು = ಹುಡುಕು.
ನಿಧಿನಿಧಾನ = ಹುದುಗಿಸಿಟ್ಟ ದ್ರವ್ಯ
ತಾತ್ಪರ್ಯ
ಮನುಷ್ಯ ಹೆಣ್ಣು ಹೊನ್ನು ಮತ್ತು ಮಣ್ಣು ಈ ಮೂರನ್ನು
ಆಸೆಪಡುತ್ತಾನೆ. ಅದರ ಜೊತೆಗೆ ಮನ್ನಣೆ ಗೌರವ ಕೀರ್ತಿಗಾಗಿ
ಚಡಪಡಿಸುತ್ತಾನೆ. ಅವುಗಳಿಂದ ಪಡೆದ ಸುಖ ಕ್ಷಣಿಕವಾದದ್ದು. ಅದಕ್ಕಾಗಿ ಅವುಗಳನ್ನು ಮಾಯೆ ಎಂದು ಕರೆದರು. ನಿಜವಾದ ಮತ್ತು ಶಾಶ್ವತವಾದ ಸುಖ ನಮ್ಮೊಳಗಿದೆ. ಅದು ಇದ್ದರು ಅದನ್ನು ಪಡೆಯದೆ ದುಃಖಿಗಾಳಾಗಿ ಬದುಕುತ್ತೇವೆ. ಗುಪ್ತನಿಧಿಯ ಮೇಲೆ ಕುಳಿತ ಬಡವನ ಹಾಗೆ ನಾವು ಪರಮಾನಂದ ಸದಾ ಒಳಗೆ ಇದ್ದರು ಅದನ್ನು ಅರಿಯದೆ ಅಸುಖಿಗಳಾಗಿ ಕಷ್ಟಕರ ಜೀವನವನ್ನು ನಡೆಸುತ್ತಿದ್ದೇವೆ. ಆ ಬಡವ ಅಂಜನದಲ್ಲಿ ನಿಧಿ ಇರುವುದನ್ನು ನೋಡಿ ಅದನ್ನು ತೆಗೆದು ಗುಪ್ತದ್ರವ್ಯವನ್ನು ಪಡೆದುಕೊಂಡು ಧನಿಕನಾದಂತೆ ನಾವು ಒಳಗಿನ ಪರಮಾನಂದವನ್ನು ನಮ್ಮ ಜ್ಞಾನದ ಮೂರನೆಯ ಕಣ್ಣಿನ ಮುಖಾಂತರ ಪಡೆಯಬೇಕು. ಆ ಜ್ಞಾನರತ್ನ ದೊರಕಿದರೆ ನಮಗಿಂತ ಸಿರಿವಂತರಾರಿಲ್ಲ ಎಂದು ಅಲ್ಲಮಪ್ರಭುಗಳು ಹೇಳುತ್ತಾರೆ. ಭೂಮಿ ನಿನ್ನದಲ್ಲ, ಹೇಮ ನಿನ್ನದಲ್ಲ, ಕಾಮಿನಿ ನಿನ್ನವಳಲ್ಲ ಅವು ಜಗಕ್ಕಿಕ್ಕಿದ ವಿಧಿ. ನಿನ್ನ ಒಡವೆ ಎಂಬುದು ಜ್ಞಾನರತ್ನ. ಅಂತಪ್ಪ ದಿವ್ಯರತ್ನವ ಕೆಡಗುಡದೆ ಆ ರತ್ನವ ನೀನು ಅಲಂಕರಿಸಿದೆಯಾದಡೆ
ನಮ್ಮ ಗುಹೇಶ್ವರಲಿಂಗದಲ್ಲಿ ನಿನ್ನಿಂದ ಬಿಟ್ಟು ಸಿರಿವಂತರಿಲ್ಲ
ರಚನೆ ಮತ್ತ ವಿವರಣೆ
ಎನ್ .ಶರಣಪ್ಪ ಮೆಟ್ರಿ
ಮೊ: 9449030990