ಎಣ್ಣೆ ಸುರಿದರೆ ಮಾತ್ರ ನುಣ್ಣಗುರಿವುದು ಬೆಂಕಿ
ಸುರಿಯದಿರೆ ನಂದಿ ಹೋಗುವುದು ಬೇಗ
ಕೋಪಿಗೆದುರುತ್ತರವ ನೀಡದಿರುವುದೆ ಲೇಸು
ಸಹಿಸುವನೆ ಜಯಿಸುವನು – ಎಮ್ಮೆತಮ್ಮ
ಶಬ್ಧಾರ್ಥ
ಎದರುತ್ತರ = ಎದರಾಡು, ವಿರೋಧಿಸಿ ನುಡಿ. ಲೇಸು = ಒಳಿತು
ತಾತ್ಪರ್ಯ
ಬೆಂಕಿ ಉರಿಯಲಿಕ್ಕೆ ಯಾವುದಾದರು ಇಂಧನ ಬೇಕೇಬೇಕು.
ಇಂಧನ ಇರದಿದ್ದರೆ ಅದು ಉರಿಯುವುದಿಲ್ಲ. ದೀಪಕ್ಕೆ ಎಣ್ಣೆ ಹಾಕಿದರೆ ಮಾತ್ರ ಹತ್ತಿಕೊಂಡು ಚೆನ್ನಾಗಿ ಉರಿಯುತ್ತದೆ.
ಎಣ್ಣೆಯನ್ನು ಹಾಕುವುದು ಬಿಟ್ಟರೆ ತನ್ನಷ್ಟಕ್ಕೆ ತಾನು ಆರುತ್ತದೆ.
ಹಾಗೆ ಕೋಪದಿಂದ ಉರಿಯುವವನಿಗೆ ಎದುರು ವಾದಿಸಿದರೆ
ಅವನ ಕೋಪ ಹೆಚ್ಚಾಗುತ್ತದೆ. ಅವನ ಕೋಪದ ಮಾತಿಗೆ
ಎದುರು ಮಾತಾಡದಿದ್ದರೆ ಅವನ ಕೋಪ ತಾನಾಗಿಯೇ
ಇಳಿದು ಹೋಗುತ್ತದೆ.
ಮೌನಂ ಕಲಹಂ ನಾಸ್ತಿ ಎಂಬುದೊಂದು
ಉಕ್ತಿಯಿದೆ. ಮೌನವಾಗಿದ್ದರೆ ಜಗಳ ಉಂಟಾಗುವುದಿಲ್ಲ.
ಕೋಪ ತನ್ನ ವೈರಿ ಶಾಂತಿ ಪರರ ವೈರಿ. ಕೋಪದಿಂದ ದೇಹದಲ್ಲಿ ಉದ್ರೇಕವುಂಟಾಗಿ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಕೋಪ ಬಂದಾಗ ಬಾಯಿ ಆರುತ್ತದೆ, ಕೈಕಾಲು ನಡುಗುತ್ತವೆ ಮತ್ತು ಹೃದಯ ಜೋರಾಗಿ ಬಡಿದುಕೊಳ್ಳುತ್ತದೆ. ಆದಕಾರಣ ಶಾಂತಿಯಿಂದ ವರ್ತಿಸಿದರೆ ವೈರಿಗಳ ಕೋಪವಿಳಿಯುತ್ತದೆ ಮತ್ತು ಸಹನೆಯಿಂದ ವರ್ತಿಸಿದರೆ ಎದುರಾಳಿಯನ್ನು ಸುಲಭವಾಗಿ ಜಯಿಸಬಹುದು. ಒಂದು ಸುಭಾಷಿತ ಹೀಗೆ
ಹೇಳುತ್ತದೆ. ಶಾಂತಿ ಖಡ್ಗ ಕರೇ ಯಸ್ಯ ದುರ್ಜನಂ ಕಿಂ ಕರಿಷ್ಯತಿ
ಅತೃಣೋ ಪತತೇ ವಹ್ನಿ ಸ್ವಯಮೇವ ವಿನಶ್ಯತಿ. ಅಂದರೆ
ಹುಲ್ಲಿನ ಮೇಲೆ ಬೀಳದೆ ಬೆಂಕಿ ತಂತಾನೆ ಆರುತ್ತದೆ. ಶಾಂತಿ ಕತ್ತಿ ಹಿಡಿದವನನ್ನು ದುರ್ಜನರು ಏನು ಮಾಡಲಾರರು.
ರಚನೆ ಮತ್ತ ವಿವರಣೆ
ಎನ್.ಶರಣಪ್ಪ ಮೆಟ್ರಿ
ಮೊ: 944903099