ನಂಬಿಕೆ
‘ನಂಬಿ ಕೆಟ್ಟವರಿಲ್ಲವೋ ರಂಗಯ್ಯನ’ದಾಸವಾಣಿಯಂತೆ
ನಂಬಿಕೆ ಬಲು ನಾಜೂಕಾಗಿದೆ ನಾಶವಾಗದಿರಲಿ
ನಂಬಿಕೆ ನಂಬುವಂತಿರಲಿ ನಾಟುವಂತಿರಲಿ
ನಂಬಿದವರು ನೂರುಕಾಲ ನೆಲೆಗೊಳ್ಳುವಂತಿರಲಿ
ನಂಬಿಕೆ ನಡೆ-ನುಡಿಯಿಂದ ಕೂಡಿರಲಿ
ನಂಬಿಕೆ ನಯ-ವಿನಯದಿಂದ ಕೂಡಿರಲಿ
ನಂಬಿಕೆ ನಂಬಿಕೆದ್ರೋಹವಾಗದಿರಲಿ
ನಂಬಿಕೆ ನಾರದಂತಿರಲಿ
ನಂಬಿಕೆ ನೀರುಪಾಲಾಗದೆ
ಆಗಸದ ನಕ್ಷತ್ರದಂತಿರಲಿ
ನಂಬಿಕೆ ನನಗಾಗಿ ಅಲ್ಲ,ನಮ್ಮವರಿಗಾಗಿರಲಿ
ನಂಬಿಕೆ ಜಿಪುಣನಾಗದೆ ಜೇನುಗೂಡಿನಂತಿರಲಿ
ನಂಬಿಕೆ ನಗ-ನಾಣ್ಯದಿಂದ ಬರುವಂತದಲ್ಲ
ನಂಬಿಕೆಯ ನಟ್ಟು ಹರಿಯದಂತಿರಲಿ
ನಂಬಿಕೆಯೇ ಸುಖಜೀವನದ ಸೂತ್ರವಾಗಿಹುದು
ನಂಬಿಕೆಯ ಕಂಬಗಳು ಅಲುಗಾಡದಿರಲಿ
ನಂಬಿಕೆಯಲಿ ನಾನು ಎಂಬುದು ನಶ್ವರವಾಗಿ
ನಂಬಿಕೆ ಸದಾ ನಂದಾದೀಪವಾಗಿರಲಿ
🖋ಬಿ ಡಿ ರಾಜಗೋಳಿ
ಚಿಕ್ಕೋಡಿ
—————————————————————–
*ಕೊರೋನಾ ಪಾಠ*
(ಹವ್ಯಕ ಭಾಷೆಯ ಪದ್ಯ)
ಮನೆಯ ಒಳವೆ ಕೂಪ ಪಾಠ
ಕೊರೊನ ಕಲಿಶಿತೂ//
ಹೆರಂಗೆ ಹೋಗಿ ತಿರುಗುವೋರ
ಆಶೆ ನಿಂದತೂ//
ಕೊರೋನ ಬಂದ ಕಾರಣ
ಇಪ್ಪದ್ರಲ್ಲೆ ಜೀವನ//
ತೃಪ್ತಿಲೀ ಕಳಿವದೂ.. ಆರೋಗ್ಯವ ಕಾಂಬದೂ//ಮನೆಯ//
ಪ್ರಕೃತಿ ಇಲ್ಲಿ ನವಗೆ ದೊಡ್ಡ ಆಸರೆ
ಹಾಂಗಾಗಿ ನಾವು ಇದರ ಕೈಸೆರೆ//
ಪ್ರಕೃತಿಗೆಂದು ನಾವು ಬಾಗಿ ಇರೆಕ್ಕಡಾ
ಇದರ ಎದುರು ನಮ್ಮ ಸಾಮರ್ಥ್ಯ ನಿಲ್ಲಡಾ//ಮನೆಯ//
ದೇವರಿಲ್ಲಿ ಕೊಟ್ಟದರ ನೋಡ್ತಿಲೇ
ಇಪ್ಪದ್ರಲ್ಲೆ ತೃಪ್ತಿ ಎಂದೂ ಬತ್ತಿಲ್ಲೆ//
ಬೇರೆಯೋರ ನಾವು ಇಲ್ಲಿ ನೋಡ್ತಡಾ
ನೋಡಿ ಹಾಂಗೆ ಆಯ್ಕು ಹೇಳಿ ಹೇಳ್ತಡಾ//
*ಶಾಂತಾ ಕುಂಟಿನಿ ಶಕುಂತಲಾ*
——————————————————
‘ಟಂಕ’ ಸಾಲೆಯರು !
ಲೇಖಕಿಯರ
ಸಂಘದಲ್ಲಿಂದು ಟಂಕಿನದು ಸದ್ದೆ ಸದ್ದು….!!
ಅಂಕಿ ಸಂಖ್ಯೆಯ ಲೆಕ್ಕದಲಿ ಕಾಲಿಟ್ಟಳು
ಹೂಸ ಕಾವ್ಯಕನ್ನಿಕೆ ….!
ಜಾಪಾನೊ,ಜರ್ಮನ್ನೊ,ಪರ್ಷಿಯನ್ನೊ.
ಅರ್ಥಯಿಸಿಬಿಟ್ಟರು ಕನ್ನಡಕೆ…!
ಟೋಂಕ ಕಟ್ಟಿದರು
ಟಂಕ ಸಿದ್ದಿಸಿಕೊಳ್ಳಲು
ತಮ್ಮ ಪದ ಪ್ರಯೋಗ ಶಾಲೆಯಲಿ..!!.
ಒಂದೊಂದು ಹದಬೆರೆತ
ಪದಪಾಕ ಸವಿಯಲು
ಸಿಹಿಯೋ ಸಿಹಿ…!!
ಟಂಕಿಸಿಯೆ ಬಿಟ್ಟರು ಟಂಕ
ತುಂಬಿ ತುಳುಕುತಿವೆ ನೋಡು ಗುಂಪಿನಲ್ಲಿ..!! ಟಂಕ ಟಂಕ….!!
ಹೆಮ್ಮೆಯಿಂದ ಹೇಳುವೆವು ನಾವು
ನಮ್ಮ ಸಖಿಯರೆಲ್ಲಾ… ಟಂಕ… *ಸಾಲಿ* ಯರೆಂದು…!!
✒️ಡಾ. ನಿರ್ಮಲಾ ಬಟ್ಟಲ