ಯಾರಿಗೆ ತಮ್ಮ ಜ್ಞಾನದ ಬಗ್ಗೆ ಗರ್ವವಿದೆಯೋ ಅವರ ಅಂತ್ಯ ಗರ್ವದಿಂದಲೇ !
ಒಮ್ಮೆ ಶಂಕರಾಚಾರ್ಯರು ಅವರ ಶಿಷ್ಯರ ಜೊತೆಗೆ ಹಿಮಾಲಯದತ್ತ ಯಾತ್ರೆ ಮಾಡುತ್ತಿದ್ದರು. ನಡೆಯುತ್ತ ಅಲಕನಂದಾ ನದಿಯ ತೀರಕ್ಕೆ ಅವರೆಲ್ಲರೂ ಬಂದು ಸೇರಿದರು. ಆಗ ಒಬ್ಬ ಶಿಷ್ಯನು ಅವರ ಸ್ತುತಿ ಮಾಡುತ್ತ, ‘ಆಚಾರ್ಯರೆ, ನಿಮ್ಮ ಜ್ಞಾನ ಎಷ್ಟು ಅಗಾಧವಾಗಿದೆ! ನಮ್ಮ ಮುಂದೆ ಪವಿತ್ರ ಅಲಕಾನಂದ ನದಿಯು ಹರಿಯುತ್ತಿದೆ. ನಿಮ್ಮ ಜ್ಞಾನವು ಈ ಅಲಕಾನಂದ ಪ್ರವಾಹಕ್ಕಿಂತಲೂ ಎಷ್ಟೋ ಪಟ್ಟು ದೊಡ್ಡದಾಗಿರುವ ಈ ಮಹಾಸಾಗರದಂತೆ ಭಾಸವಾಗುತ್ತದೆ’ ಎಂದನು.
ಆಗ ಶಂಕರಾಚಾರ್ಯರು ಕೈಯಲ್ಲಿರುವ ದಂಡವನ್ನು ನೀರಿನಲ್ಲಿ ಮುಳುಗಿಸಿ ಹೊರತೆಗೆದು, ಶಿಷ್ಯರಿಗೆ ತೋರಿಸುತ್ತ ಹೇಳಿದರು, ‘ನೋಡು, ಈ ದಂಡವನ್ನು ಆ ಪವಿತ್ರ ನದಿಯಲ್ಲಿ ಅದ್ದಿ ತೆಗೆದಿದ್ದೇನೆ ಆದರೆ ಇದಕ್ಕೆ ಒಂದೇ ಒಂದು ಹನಿ ನೀರು ಮಾತ್ರ ಅಂಟಿಕೊಂಡಿದೆ ಅಲ್ಲವೆ! ನಗುತ್ತಲೇ ಶಂಕರಾಚಾರ್ಯರು ಮುಂದುವರೆಸಿದರು. ‘ಅರೆ ಹುಚ್ಚ ನನ್ನ ಜ್ಞಾನದ ಪರಿಮಿತಿ ಏನು ಗೊತ್ತೆ? ಅಲಕನಂದಾದಲ್ಲಿ ಎಷ್ಟೊಂದು ನೀರಿದೆ. ಆದರೆ ಅದಷ್ಟೋ ನೀರಿನಲ್ಲಿ ಈ ದಂಡವನ್ನು ಅಂಟಿಕೊಂಡಿದ್ದು ಕೇವಲ ಒಂದು ಬಿಂದು! ಅಂತೆಯೇ ಸಮಸ್ತ ಬ್ರಹ್ಮಾಂಡದಲ್ಲಿರುವ ಜ್ಞಾನಸಾಗರದಲ್ಲಿ ನನ್ನಲ್ಲಿರುವ ಕೇವಲ ಒಂದು ಬಿಂದು ಜ್ಞಾನವಷ್ಟೆ
ಆದಿ ಶಂಕರಾಚಾರ್ಯರೇ ತಮ್ಮಲ್ಲಿರುವ ಅಗಾಧ ಜ್ಞಾನದ ಬಗ್ಗೆ ಹೀಗೆ ಹೇಳಿರಬೇಕಾದರೆ, ನಾವು ಏನು ಹೇಳುವುದು?
ಸ್ವಗತ
ನನ್ನ ಜ್ಞಾನ ಅಪಾರ ಬೇರೆಯವರು ನನ್ನ ಮಾತು ಕೇಳಬೇಕು ಅಂತ ನಾವು ಬಯಸುವುದು ಒಂದು ಅದ್ಭುತ ವಿಚಾರದಂತೆ ಗಮನ ಸೆಳೆಯುತ್ತದೆ. ಏಕೆಂದರೆ ಎಷ್ಟೋ ಸಲ ನಾನು ಆಡಿದ ಮಾತನ್ನು ನಾನೇ ಕೇಳುವುದಿಲ್ಲ. ಹೀಗಿರುವಾಗ ಬೇರೆಯವರಿಂದ ನಿರೀಕ್ಷಿಸುವುದು ಎಷ್ಟು ಸರಿ ಅಲ್ಲವೇ? ಹಾಗೆ ನೋಡಿದರೆ ನನ್ನ ಮನಸ್ಸು ಒಳಗಿನಿಂದ ಮೇಲಿಂದ ಮೇಲೆ ಕೂಗಿ ಹೇಳುತ್ತಿರುವ ಮಾತುಗಳನ್ನು ಕೇಳಿಸಿಕೊಂಡೂ ನಿರ್ಲಕ್ಷಿಸುತ್ತೇನೆ. ಕಿವುಡನಂತೆ ವರ್ತಿಸುತ್ತೇನೆ. ಮನಸ್ಸು ಹೇಳಿ ಹೇಳಿ ಬೇಸತ್ತು ಹೋಗಿದೆ. ಅದರ ದನಿಯೂ ಸತ್ತು ಹೋಗಿದೆಯೇನೋ ಎನ್ನುವಷ್ಟು ಕ್ಷೀಣವಾಗಿದೆ. ಒಮ್ಮೊಮ್ಮೆ ಮನಸ್ಸಿಗೆ ಸಮಾಧಾನ ಹೇಳುತ್ತೇನೆ. ‘ನೀ ಹೇಳುವ ಮಾತು ಕೇಳಬಾರದು ಅಂತೇನಿಲ್ಲ ಆದರೆ ನನಗೆ ಸಮಯವಿಲ್ಲವೆಂದು’. ನಿಜ ಹೇಳಬೇಕೆಂದರೆ ನನ್ನೊಂದಿಗೆ ನಾನು ಮಾತನಾಡಲು ಸಮಯದ ಅಭಾವ ಕಾಡುತ್ತಿದೆ. ಮನಸ್ಸಿನ ಜೊತೆ ಮುಖಾಮುಖಿಯಾದರೆ ಅದರ ಕಥೆಯೇ ಬೇರೆ ಇರುತ್ತದೆ.
ಈ ಮೇಲಿನದೆಲ್ಲ ನಮ್ಮಲ್ಲಿ ಬಹಳಷ್ಟು ಜನರ ಸ್ವಗತ.
ತಂತ್ರ-ಪ್ರತಿತಂತ್ರ
ನಾಲ್ಕಾರು ಪುಸ್ತಕ ಓದಿದ, ಹತ್ತಾರು ವರ್ಷ ಶಾಲೆ ಕಾಲೇಜು ಶಿಕ್ಷಣ ಮುಗಿಸಿದ ನಾವೇ ದೊಡ್ಡ ಜ್ಞಾನಿಗಳೆಂದು ಮೆರೆಯಲು ಇಚ್ಛಿಸುತ್ತೇವೆ. ಯಾವುದೇ ಬೆಲೆ ತೆತ್ತಾದರೂ ಸರಿಯೇ ಕೆಟ್ಟ ಹಟ ತೊಟ್ಟು ಬೇರೆಯವರು ನನ್ನ ಮಾತನ್ನು ಕೇಳಲೇಬೇಕೆಂದು ರಂಪ ಮಾಡುತ್ತೇವೆ. ಇತರರು ತನ್ನ ಮಾತಿಗೆ ಸಮ್ಮತಿ ಸೂಚಿಸದಿದ್ದರೆ ತನ್ನನ್ನು ಸೋಲಿಸಲು ಹೂಡಿರುವ ಸಂಚಿನಂತೆ ಭಾವಿಸುತ್ತೇವೆ. ಹೀಗೆ ನಾವೇ ಹೆಣೆದ ಬಲೆಯಲ್ಲಿ ಬಿದ್ದು ವಿಲ ವಿಲ ಒದ್ದಾಡುತ್ತೇವೆ. ಏನೇ ಹೇಳಿದರೂ ಮುಂದಿನವರು ಬೆಂಬಲ ನೀಡಬೇಕು. ಪೂರ್ವಕ್ಕೆ ಪಶ್ಚಿಮ ಎಂದರೂ ಹೌದೆಂದು ತಲೆಯಾಡಿಸಬೇಕು. ಇಲ್ಲದಿದ್ದರೆ ಅವಮಾನದಿಂದ ರೊಚ್ಚಿಗೇಳುತ್ತದೆ ಮುದ್ದು ಮಾಡಿ ಬೆಳೆಸಿದ ಮನಸ್ಸು. ಅದು ತಿರಸ್ಕಾರವನ್ನು ಸೂಕ್ಷ್ಮವಾಗಿ ಅರಿತುಕೊಳ್ಳುತ್ತದೆ. ತಲೆಯಲ್ಲಿ ಇಲ್ಲದ ವಿಚಾರ ತುಂಬುತ್ತದೆ. ಎದುರಿಗಿನವರನ್ನು ಒಪ್ಪಿಸಿಯೇ ತೀರಬೇಕೆಂದು ಸವಾಲು ಸ್ವೀಕರಿಸುತ್ತದೆ. ಅವರ ಮೇಲೆ ಗೆಲುವು ಸಾಧಿಸಲು ಸಿಕ್ಕ ಸುವರ್ಣ ಅವಕಾಶ!. ತಂತ್ರ-ಪ್ರತಿತಂತ್ರ ಕುತಂತ್ರ ದೈನಂದಿನ ಜೀವನದಲ್ಲಿ ಇನ್ನಷ್ಟು ಹತ್ತಿರವಾಗುತ್ತವೆ. ಎಂದೂ ಮರೆಯಲಾರದ ಪೆಟ್ಟು ಕೊಡಬೇಕೆಂದು ಕುತಂತ್ರ ಮಾಡತೊಡುಗುತ್ತದೆ.
ಸಂಕುಚಿತ
ನಾನು, ನನ್ನದು, ನನ್ನ ಮಾತು, ಎನ್ನುವ ಪದಗಳು ಅಹಂಕಾರ ಸೂಚಕಗಳಾಗಿವೆ. ಇವುಗಳ ಹಿಂದೆ ಬೆನ್ನು ಹತ್ತಿರುವುದು ವರ್ತಮಾನ ಬದುಕಿನ ದುರಂತ. ಪ್ರಸಕ್ತ ವಿದ್ಯಮಾನಗಳಿಂದ ಜರ್ಜರಿತ ಮನಸ್ಸು ವಿಷಾದದ ಅಲೆಯಲ್ಲಿ ತೇಲುತ್ತಿದೆ. ಸಮಾಜದ ಅಂತಃಕರಣ ಸತ್ವಗಳನ್ನು ಮರೆಯುತ್ತಿದೆ. ದುರಭಿಮಾನ ಮೆರೆಯುತ್ತಿದೆ. ಇತರರ ಭಾವನೆಗಳ ಕಲುಷಿತಗೊಳಿಸಿ ಮಾನಸಿಕ ಆರೋಗ್ಯವನ್ನೇ ಹಾಳು ಮಾಡುತ್ತಿದೆ. ಆಧುನಿಕತೆಯ ಬದುಕು ಬಾಳುತ್ತಿದ್ದರೂ ಆಧುನಿಕತೆಯ ಭ್ರಮೆಯಲ್ಲಿ ಅಂಧರಾಗುತ್ತಿದ್ದೇವೆ ಎಂದರೆ ತಪ್ಪೇನಿಲ್ಲ. ಮುಂದುವರೆಯುತ್ತಿರುವ ದೇಶದ ಪ್ರಜೆಗಳಾಗಿ ವಿಶಾಲಹೃದಯಿಗಳು ಆಗುವುದನ್ನು ಬಿಟ್ಟು, ಅಹಂಕಾರದ ಉನ್ಮಾದದಲ್ಲಿ ಸಂಕುಚಿತರಾಗುತ್ತಿದ್ದೇವೆ. ಹುಚ್ಚು ಆಸೆಯ ಸುತ್ತ ಹತ್ತು ಹಲವಾರು ರೀತಿಯ ಭಾವನೆಗಳನ್ನು ಹೆಣೆದುಕೊಂಡು ಬಿಡುತ್ತೇವೆ. ಬೇರೆಯವರು ಬಿಡದ ಕರ್ಮವೆಂದು ಮಾತು ಕೇಳಿದಾಗ ಏನನ್ನೋ ಸಾಧಿಸಿದ ಹುಚ್ಚು ಭ್ರಮೆಯಿಂದ ನಗುತ್ತೇವೆ. ಅಹಂನಿಂದ ಬೀಗುತ್ತೇವೆ. ಅಸಾಮಾನ್ಯರನ್ನು ಹೊರತು ಪಡಿಸಿ ಸರ್ವೇ ಸಾಮಾನ್ಯ ಎಲ್ಲರ ಬದುಕೂ ಹೀಗೆ ಗಿರಕಿ ಹೊಡೆಯುತ್ತಿರುತ್ತದೆ.
ನಾನೇ ಎಲ್ಲ
ದಯೆ,,ಪ್ರೀತಿ, ಕರುಣೆ, ಅನುಕಂಪದಂತಹ ಅದೃಶ್ಯ ಅವ್ಯಕ್ತ ಭಾವಗಳ ಅನಾವರಣವಾಗುತ್ತಿಲ್ಲ. ಅಗೋಚರ ಭಾವಗಳ ಅನಂತ ರಿಂಗಣದ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಹೀಗೇಕೆ ಹಟಕ್ಕೆ ಬಿದ್ದಿದ್ದೇವೆ ಎಂಬುದು ವಿಸ್ಮಯದಂತೆ ಕಾಣಿಸುತ್ತದೆ. ಈ ಹಾದಿಯಲ್ಲಿ ಬೆಸುಗೆಗೆಗಳ ಸೊಬಗು ಸುಮಧುರ ಸಂಬಂಧಗಳ ಸೊಗಸು ಕರಗುತ್ತಿದೆ. ಹೃದಯ ತಂತಿಯನ್ನು ಮೀಟುವ ಮಾತುಗಳನ್ನು ಹಾಡು ಹಗಲೇ ಕಂದಿಲು ಹಿಡಿದು ಹುಡುಕಬೇಕಿದೆ. ನಿತ್ಯ ನವೀನ ನಾದ ಹೊಸೆಯುವ ಜೀವನದಲ್ಲಿ ಇದೇಕೆ ಹೀಗೆ ನಾನೇ ಎಲ್ಲ ಎಂಬ ನಾದ ಹಿಡಿದು ಹೊರಟಿದ್ದೇವೆ? ಪ್ರಗತಿಯ ಹಣತೆಗೆ ಎಣ್ಣೆ ಹಾಕದೇ ಹಿತಚಿಂತಕರೆಂದು ಅರಿಯದೇ ನಿರ್ದಾಕ್ಷಿಣ್ಯವಾಗಿ ನನ್ನದೇ ಮಾತು ನಡೆಯಬೇಕೆಂದು ಮುಂದಿನವರ ಮನಸ್ಸನ್ನು ಘಾಸಿಗೊಳಿಸಲು ಹಿಂದೆ ಮುಂದೆ ನೋಡುತ್ತಿಲ್ಲ. ಎಷ್ಟೋ ಸಲ ಸೋತರೂ ಛಲ ಬಿಡದೇ ಮತ್ತೆ ಮತ್ತೆ ಹೋರಾಡುವ ಬಂಡುಕೋರ ಮನೋಭಾವವನ್ನು ಪ್ರದರ್ಶಿಸುತ್ತಿದ್ದೇವೆ. ಹುರುಪಿನಿಂದ ಸೋಲಿಸಲು ಸನ್ನದ್ಧರಾಗುತ್ತಿದ್ದೇವೆ. ನಮಗಿಂತ ಬಲಹೀನರಿದ್ದರೆ ಪುಕ್ಕಲನಿದ್ದರೆ ಮುಗಿಯಿತು ನಾನು ಹೇಳಿದ್ದೇ ನಡೆಯುವಂತೆ ದುಂಬಾಲು ಬೀಳುತ್ತದೆ ಮನಸ್ಸು. ನಮಗಿಂತ ಬಲಿಷ್ಠನಿದ್ದರೆ ಸ್ನೇಹಕ್ಕೆ ಎಳ್ಳು ನೀರು ಬಿಡುತ್ತೇವೆ.
ಬಲವಂತನಿಂದ ಸತತ ಸೋಲು ಮತ್ತು ನಿರಾಸೆಯಿಂದ ಕಂಗೆಟ್ಟರೂ ಬುದ್ಧಿ ಕಲಿಯುವುದಿಲ್ಲ. ನನಗೆ ಸೋಲು ಎಂದೂ ಸಹ್ಯವಲ್ಲವೆಂದು ಅವರ ಹಿಂದೆ ಮತ್ತೆ ಬೀಳುತ್ತೇವೆ. ಹೀಗೆ ಮನಸ್ಸಿಗೆ ಮದವೇರಿದಾಗ ಸ್ಮಶಾನದಲ್ಲಿ ತಿರುಗಾಡಿ ಬರಬೇಕಂತೆ, ಏಕೆಂದರೆ ಅಲ್ಲಿ ನಾನು, ನನ್ನಿಂದಲೇ ಎಂದು ಹೇಳಿದ ಎಷ್ಟು ಜನ ಮಣ್ಣಾಗಿರುವವರು ಕಾಣಸಿಗುತ್ತಾರೆ.
ಕೊನೆಗೊಂದು ದಿನ
ನಾನು ಪರಮ ಜ್ಞಾನಿ. ಯಾವಾಗಲೂ ನಾನು ಆಡಿದ ಮಾತೇ ನಡೆಯಬೇಕು, ಎಲ್ಲವೂ ನನ್ನ ಮೂಗಿನ ನೇರಕ್ಕೆ ನಡೆಯಬೇಕು. ಬೇರೆಯವರು ನನ್ನ ಮಾತು ಕೇಳಬೇಕೆಂಬ ಧೋರಣೆ ಹೀಗೆ ಮುಂದುವರೆದರೆ, ನಾವೇ ಹೆಣೆದ ಬಲೆಯಲ್ಲಿ ವಿಲ ವಿಲ ಒದ್ದಾಡುವ ಪರಿಸ್ಥಿತಿ ಬರುತ್ತದೆ. ಕೊನೆಗೊಂದು ದಿನ ಅಕ್ಷರಶಃ ಜೀವಚ್ಛವವಾಗುತ್ತೇವೆ! ನನ್ನನ್ನು ನಾನು ನಿಯಂತ್ರಿಸಿಕೊಳ್ಳದ ಸ್ಥಿತಿಯಲ್ಲಿ, ನನ್ನ ಮಾತು ನಾನೇ ಕೇಳದೇ ಇರುವ ಸ್ಥಿತಿಯಲ್ಲಿರುವಾಗ ನನ್ನ ಹಾದಿ ಸೋಲಿನದ್ದು ಎಂಬ ವಿಷಯ ಮನುಷ್ಯನಾದವನಿಗೆ ತಿಳಿಯುವುದಿಲ್ಲ ಏಕೆ? ಹೊಳೆಯುವುದಿಲ್ಲ ಏಕೆ? ಅದೇ ದಾರಿಯಲ್ಲಿ ಮುಂದುವರೆಯುವಂತೆ ಮನಸ್ಸಿಗೆ ದೊರೆಯುವ ಹುಚ್ಚು ಪ್ರೇರಣೆ ಎಲ್ಲಿಂದ ಬರುತ್ತದೆಂದು ಪದೇ ಪದೇ ಅಚ್ಚರಿಗೊಳಗಾಗಿದ್ದೇನೆ
ಕೊನೆ ಹನಿ
ಯಾರಿಗೆ ತಮ್ಮ ಜ್ಞಾನದ ಬಗ್ಗೆ ಗರ್ವವಿದೆಯೋ ಅವರ ಅಂತ್ಯ ಆ ಗರ್ವದಿಂದಲೇ! ನಮಗೆ ನಮಗಿರುವ ಅರಿವಿನ ಅಹಂಕಾರವಿದೆ. ಆದರೆ ನಮಗಿರುವ ಅಹಂಕಾರದ ಅರಿವಿಲ್ಲ. ನಮ್ಮ ಮಾತಿನ ರೀತಿ ನಾವು ಎಂಥವರು ಎಂದು ಹೇಳುತ್ತದೆ. ವಾದಿಸುವ ರೀತಿ ನಮ್ಮಲ್ಲಿರುವ ಜ್ಞಾನ ಹೇಳುತ್ತದೆ. ನಮ್ಮ ಉತ್ತಮ ಸಂಸ್ಕಾರವೊಂದೇ ನಮ್ಮಲ್ಲಿರುವ ಅಹಂಕಾರ ತೊಲಗಿಸಿ ನಮ್ಮನ್ನು ಉತ್ತಮ ಮಾನವರನ್ನಾಗಿ ಹೊರಹೊಮ್ಮಿಸುತ್ತದೆ. ಅಹಂ ಭಾವವನ್ನು ಬಿಟ್ಟಾಗಲೇ ಕಲಿಯಲು ಮತ್ತು ಬೆಳೆಯಲು ಸಾಧ್ಯ.
=======================================
ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ ೯೪೪೯೨೩೪೧೪೨