ಸತ್ಯ ಹೇಳುವವ….
———————
ಸತ್ಯ ಹೇಳುವವ ಹೆದರುವದಿಲ್ಲ .
ಹೆದರುವವ ಸತ್ಯ ಹೇಳುವದಿಲ್ಲ
ತಿವಿಯುತ್ತಾನೆ ಕುಟುಕುತ್ತಾನೆ,.
ನೋವಾಗದಿರಲು ಜರೆಯುತ್ತಾನೆ
ಜಡ ಸಮಾಜ ತಿದ್ದುತ್ತಾನೆ.
ಸ್ಪಂದಿಸದಾಗ ಮರುಗುತ್ತಾನೆ
ಟೀಕೆ ನೋವು ಅವಮಾನಕ್ಕೆ
ಜಗ್ಗುವದಿಲ್ಲ ಬಗ್ಗುವದಿಲ್ಲ
ತನ್ನ ಮನೆ ನಗೆ ಸುಖ ಬಿಟ್ಟು
ಹೊರ ಜಗಕೆ ಅಳುತ್ತಾನೆ
ಹಸಿವು ಶೋಷಣೆ ಅಸಮಾನತೆಗೆ
ನಿತ್ಯ ನಿರಂತರ ಸಂಘರ್ಷ ಸೆಣಸಾಟ
ಚಳವಳಿ ಬಂಡಾಯ ಹೋರಾಟ
ನವನಿರ್ಮಾಣ ಕ್ರಾಂತಿ ಪ್ರಗತಿ ಪಥ
ಜನರ ಭ್ರಾಂತಿ ಬೇರು ಸಡಿಲು
ಗುಂಪು ಚದುರುತ್ತದೆ.
ಮತ್ತೆ ಒಬ್ಬಂಟಿಗನ ಅಳಲು
ಸತ್ಯ ಶೂಲಕ್ಕೆರುತ್ತದೆ.
ಸತ್ಯ ಹೇಳುವವನಿಗೆ ಗುಂಡು
ರಕ್ತಸಿಕ್ತ ಕಗ್ಗೊಲೆ
ಸ೦ಪ್ರದಾಯಿಗಳ ಅಟ್ಟಹಾಸ
ಪ್ರತಿಭಟನೆ ಮುಷ್ಕರ ಕೂಗಾಟ
ಅಳುವ ಜನರ ರಂಪಾಟ
ಮೆರವಣಿಗೆ ಜಾಥಾ ನ್ಯಾಯಕ್ಕೆ
ಸುತ್ತಲೂ ಬಿದ್ದಿವೆ ಅನಾಥ ಭಿತ್ತಿ ಪತ್ರ
ಇಲ್ಲದವರಿಗೆ ಇಲ್ಲವಾಯಿತು ಮಾರ್ಗ
ಕುಹಕಿಗಳ ಒಳಗೊಳಗೆ ನಕ್ಕ ಸಂಭ್ರಮ
ಸತ್ಯ ಹೇಳುವವ ಸಾಯುತ್ತಾನೆ.
ಸತ್ಯ ಸಾಯುವದಿಲ್ಲ ಸತ್ಯ ಸಾಯುವದಿಲ್ಲ.
ಸತ್ಯ ಹೇಳುವವ ಹೆದರುವದಿಲ್ಲ
ಹೆದರುವವ ಸತ್ಯ ಹೇಳುವದಿಲ್ಲ
————————————–
ಡಾ.ಶಶಿಕಾಂತ.ಪಟ್ಟಣ –ರಾಮದುರ್ಗ