ನಾಲ್ಕು ಗಜಲ್ ಗಳು

Must Read

ಬಾಯ್ಬಿರಿದ ಭುವಿಗೆ ಕಣ್ಣೀರು ಹನಿಸುವವರು ನಾವು

ತೇವವನು ಕರ ತಾಕಿಸುತ ಖುಷಿ ಪಡುವವರು ನಾವು

ಹಸಿರಿನ ಹಗಲು ಕನಸು ಕಂಡು ಕುಣಿಯುವವರು ನಾವು
ಬಿಸಿಲಿಗೆ ಬೆವರು ಚೆಲ್ಲಿ ಬೇಗೆಯ ತಣಿಸುವವರು ನಾವು

ಮೋಡಗಳ ಕೈಹಿಡಿದು ತಡೆಯ ಬಯಸುವವರು ನಾವು
ಬೆಳೆದ ಬೆಳೆಗೆ ಚರಗ ಚೆಲ್ಲಿ ತುತ್ತು ತಿನ್ನಿಸುವವರು ನಾವು

ಸಂತಸದ ಕಿರೀಟ ಹೊತ್ತ ಅರಸನ ಗತ್ತಿನವರು ನಾವು
ಸ್ವಾಭಿಮಾನದಿ ಸೆಟೆದು ನಿಲ್ಲುವ ಸಾಹುಕಾರರು ನಾವು

ಜಂತಿಯಲ್ಲಿದ್ದ ಬಾರ್ಕೋಲಿಗೆ ಹಂತಿಪದ ಕಲಿಸಿದವರು ನಾವು
ಮಣ್ಣಿನ ಕಂಬಳಿ ಮೇಲೆ ಮೆತ್ತಗೆ ಕುಳಿತು ತಿಂದವರು ನಾವು

ಧರೆ ಇರುವವರೆಗೆ ಜೊತೆಗಿರುವ ‘ಅಮರ’ ರೈತರು ನಾವು
ನೋವು ನುಂಗಿ ಹಸಿವು ನೀಗಿಸುವ ಅನ್ನದಾತರು ನಾವು

ಅಮರೇಶ ಎಂಕೆ


ನೀನೆ ಒಂದು ಹಾಡಾಗಿರುವಾಗ ಯಾವ ಹಾಡು ಹೇಳಲಿ ಗೆಳತಿ
ಸಪ್ತ ವರ್ಣಗಳೂ ನಿನ್ನಲ್ಲಿರುವಾಗ ಯಾವ ಬಣ್ಣ ಕೊಡಲಿ ಗೆಳತಿ

ನಯನಗಳು ಹರಿಣಿಯ ಹಾಗೆ ಉತ್ಸಾಹದ
ಜಿಗಿತ ಸೆಳೆತವಾಗದಿರುವುದೆ
ದೃಷ್ಟಿಸಿದಷ್ಟೂ ನೀನೆ ಬೇರೆಯ ನೋಟ ಹೇಗೆ ನೋಡಲಿ ಗೆಳತಿ

ಮೊದಲ ಬಾರಿ ಭೇಟಿಯಾದಾಗಲೇ ಹೃದಯ ಕೊಟ್ಟಾಯಿತು
ಮರಳಿ ಪಡೆವುದಕೆ ಅಲೆಯುತಿರುವೆ ಹೇಗೆ ಕೇಳಲಿ ಗೆಳತಿ

ನಿನಿಲ್ಲದ ಸಮಯ ಸುದೀರ್ಘ ಮಾತಾಡುತ್ತೇನೆ ನಿನ್ನೊಂದಿಗೆ
ನೀನು ಇದಿರಾದ ಹೊತ್ತು ಮಾತು ಬರದು ಮೌನವಿರದು ಹೇಗೆ ಇರಲಿ ಗೆಳತಿ

ಪದಕೆ ಪದ ಬೆಸೆದು ದನಿ ಹೊಸೆದು ಗಜಲೊಂದು ಹೊರಹೊಮ್ಮಲಿ ಅನು
ಗಂಟಲೊಣಗಿ ಉಸಿರು ನಿಲ್ಲುವ ಮುನ್ನ ಈ ಆಸೆ ಈಡೇರಲಿ ಗೆಳತಿ


ಇಂದಿನ ರಾತ್ರಿ ಇರಲಿ ಹೂವುಗಳ ಮಾತು
ಒಂದೆರಡಲ್ಲ ಕುಸುಮ ರಾಶಿಗಳ ಮಾತು

ದಂಡೆ ಹಾರ ತುರಾಯಿ ಗುಲದಸ್ತಾ ಅರಳಿವೆ
ಸಂಜೆಗೆ ಘಮಿಪ ಹೂ ಮುತ್ತುಗಳ ಮಾತು

ಪುಷ್ಪಗಳು ಚರ್ಚೆಗಿವೆ ಪ್ರತಿ ಬೈಗೂ ಬೆಳಗೂ
ಜಗದ ತುಂಬೆಲ್ಲ ಬಿರಿದ ಮೊಗ್ಗುಗಳ ಮಾತು

ಮೊಗ ಸುಮದಿ ನಯನ ಸಾವಿರ ಕಥೆ ಹೇಳಿದೆ
ಸೆಳೆದೆಳೆವ ಇಂದ್ರಚಾಪದ ವರ್ಣಗಳ ಮಾತು

ಅರಳಿ ಕಂಪು ಹರಡಿ ಬಾಡುವ ಸಾರ್ಥಕ್ಯವಿದು ಸಾಕಿ
ಲೋಕರೀತಿಯಿದು ಮರಳಿ ಗಂಧಿಸಿದ ದಿನಗಳ ಮಾತು

ಅದೆಷ್ಟೋ ಬಿಕರಿಯಾದವು ಹೂಗಳು ಎಷ್ಟೋ ಕೈಗಳಿಗೆ
ಇರುವಲ್ಲಿಯೇ ತನ್ನತನದಿ ಹೊಳೆವ ಚುಕ್ಕೆಗಳ ಮಾತು

ಜೊತೆ ಸ್ನೇಹ ಹಿತ ಪ್ರೀತಿ ಮಧುರ ಗಮನವಿದು ಸಾಕಿ
ಪ್ರಣಯ ಮಕರಂದ ಲೇಪಿತ ಹೂವ ಶರಗಳ ಮಾತು

ಸೌರಭದಿ ಗಝಲಿಂದು ಸಂಪನ್ನವಾಯಿತು ಅನು
ಮಧುಬಂಧದಿ ಬೆಸೆದ ಸುಮದಕ್ಕರ ಪದಗಳ ಮಾತು


ಪ್ರತಿ ತಪ್ಪಿಗೂ ದೇವ ಕ್ಷಮಿಸದಿದ್ದರೆ ಏನಾಗುತ್ತಿತ್ತು
ಎಡೆಬಿಡದೆ ತನು ಮನಕೆ ಗಾಯವಾಗಿದ್ದರೆ ಏನಾಗುತ್ತಿತ್ತು

ನೀರಿಲ್ಲದಿದ್ದರೆ ನಾರುವ ದೇಹಕೆಷ್ಟು ಸೌಂದರ್ಯ ಮನ್ನಣೆಯಿದೆ
ಹನಿ ನೀರು ಸಿಗದೆ ಜಲ ಬತ್ತಿದ್ದರೆ ಏನಾಗುತ್ತಿತ್ತು

ಬೆಳಕಿನಲಿ ಜಗವ ಕಂಡೆವೆಂದು ಬೀಗುವ ಬಹು ದೃಷ್ಟಿಗಳು ನಾವು
ಬೆಂಗದಿರ ತಂಗದಿರ ಬೆಳಗದಿದ್ದರೆ ಏನಾಗುತ್ತಿತ್ತು

ಉಸಿರಿದೆಯೆಂದು ದೇಹಕೆ ಚೈತನ್ಯ ಅಹಂಕಾರ ಹೊತ್ತು ತಿರುಗುತಿದೆ
ಜೀವಗಾಳಿ ಬೀಸದೆ ನಿಲ್ಲಿಸಿದ್ದರೆ ಏನಾಗುತ್ತಿತ್ತು

ಆಹಾರ ಸರಪಳಿಯದೋ ಹಸಿರು ಪೈರಿನ ಬೆಳೆ ಸಮೃದ್ಧವದು
ನಿಸ್ವಾರ್ಥ ಮರಗಿಡ ಸರಿಗಟ್ಟಿದ್ದರೆ ಏನಾಗುತ್ತಿತ್ತು

ಅವರವರ ಕರ್ತವ್ಯವದು ಭೇದವೆಣಿಸದೆಲೆ ನಡೆದಿಹದು *ಅನು*
ಪ್ರಕೃತಿ ಮುನಿಸಿ ವಿಕೃತಗೊಂಡಿದ್ದರೆ ಏನಾಗುತ್ತಿತ್ತು

ಅನಸೂಯ ಜಹಗೀರದಾರ

1 COMMENT

Comments are closed.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group