ಮೂಡಲಗಿ:-ರಕ್ತದಾನ ಮಾಡುವುದರಿಂದ ಮನಸ್ಸಿಗೆ ತೃಪ್ತಿ ಸಿಗುವುದು. ಮತ್ತೊಬ್ಬರ ಜೀವ ಉಳಿಸಲು ಸಹಾಯವಾಗುತ್ತದೆ. ಯುವಜನತೆಯಲ್ಲಿ ರಕ್ತದಾನದ ಮಹತ್ವವನ್ನು ತಿಳಿಸಿ ಅವರಲ್ಲಿ ರಕ್ತದಾನದ ಪ್ರಜ್ಞೆಯನ್ನು ಬೆಳೆಸಬೇಕು.ರಕ್ತದಾನದಿಂದ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಗಳು ಇವೆ ಎಂದು ಗೋಕಾಕ ರೋಟರಿ, ರಕ್ತ ಭಂಡಾರ ಕಾರ್ಯದರ್ಶಿ ಸೋಮಶೇಖರ ಮಗದುಮ ಹೇಳಿದರು.
ತಾಲೂಕಿನ ಕಲ್ಲೋಳಿ ಪಟ್ಟಣದ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ, ರೆಡ್ ರಿಬ್ಬನ್ ಕ್ಲಬ್, ಯುಥ್ ರೆಡ್ ಕ್ರಾಸ್, ಭಾರತ ಸ್ಕೌಟ್ಸ್, ಗೈಡ್ಸ್ ಘಟಕಗಳು, ಗೋಕಾಕ ರೋಟರಿ ರಕ್ತ ಭಂಡಾರ ಹಾಗೂ ನ್ಯಾಶನಲ್ ಇಂಟಿಗ್ರೇಟೆಡ್ ಪೋರಂ ಆಫ್ ಆರ್ಟಿಸ್ಟ್ ಆಂಡ್ಯ ಆಕ್ಟಿವಿಟೀಸ್ ಆಶ್ರಯದಲ್ಲಿ “ರಕ್ತದಾನ” ಕಾರ್ಯಕ್ರಮ ನಡೆಯಿತು.
ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಕ್ರಾಂತಿಕಾರಿ ಭಗತಸಿಂಗ್, ರಾಜಗುರು, ಸುಖದೇವ ಅವರ ಸ್ಮರಣಾರ್ಥವಾಗಿ ಹಮ್ಮಿಕೊಂಡಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗೋಕಾಕ ನಿವೃತ್ತ ಪ್ರಾಧ್ಯಾಪಕ ಎಮ್.ಬಿ.ತುಪ್ಪದ ಮಾತನಾಡಿ, ಎಲ್ಲ ದಾನಗಳಲ್ಲಿ ರಕ್ತದಾನ ಶ್ರೇಷ್ಠ. ರಕ್ತವನ್ನು ಕೃತಕವಾಗಿ ತಯಾರಿಸಲು ಬರುವುದಿಲ್ಲ.ಹೀಗಾಗಿ ರಕ್ತದಾನದ ಮೂಲಕವೇ ಸಂಗ್ರಹಿಸುವುದು ಅನಿವಾರ್ಯವಾಗಿದೆ ಅಂತ ಹೇಳಿದರು.
ಕಲ್ಲೋಳಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಚಿದಾನಂದ ಮುಗಳಖೋಡ ಮಾತನಾಡಿ, ಈ ಮುಂಚೆ ಅಪಘಾತ ಶಸ್ತ್ರಚಿಕಿತ್ಸೆ ಹೆರಿಗೆ ಇನ್ನಿತರ ಅನೇಕ ತುರ್ತು ಸಂದರ್ಭಗಳಲ್ಲಿ ರಕ್ತದ ಕೊರತೆಯಿಂದಾಗಿ ಸಾಕಷ್ಟು ಜನರು ಸಾವಿಗಿಡಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ರಕ್ತ ಸಂಗ್ರಹ ಬ್ಯಾಂಕ್ ಗಳು ಹೆಚ್ಚಾಗಿ ಇರುವುದರಿಂದ ಸಾಯುವವರ ಸಂಖ್ಯೆ ಕಡಿಮೆ ಆಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಬಸಗೌಡ ಪಾಟೀಲ ಹಾಗೂ ಪ್ರಾಚಾರ್ಯ ಡಾ.ಸುರೇಶ ಹನಗಂಡಿ ಇವರು ಸಹ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ರಕ್ತದಾನದ ಮಹತ್ವ ತಿಳಿಸಿದರು.
ಡಾ.ಭೀಮಪ್ಪ ಲಿಂಬೋಜಿ ವೈದ್ಯಾಧಿಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಲ್ಲೋಳಿ, ಶಿವಬೋಧ ಯರಗಟ್ಟಿ ಸಮುದಾಯ ಆರೋಗ್ಯ ಅಧಿಕಾರಿ, ಡಾ.ಎಮ್.ಬಿ.ಕುಮೂರ ಯುತ್ ರೆಡ್ ಕ್ರಾಸ್ ಕ್ರಾರ್ಯಕ್ರಮ ಅಧಿಕಾರಿ, ಬಿ.ಕೆ.ಸೊಂಟನವರ ರೋವರ್ ಲೀಡರ್, ಡಾ.ರಾಜಶ್ರೀ ತೋಟಗಿ ರೇಂಜರ್ ಲೀಡರ್, ಬಿ.ಬಿ.ವಾಲಿ ಗ್ರಂಥಪಾಲಕರು, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಭಾಗಿಯಾಗಿದ್ದರು.
ಕು.ಸುಜಾತ ಕಾಂಬಳೆ ಪ್ರಾರ್ಥಿಸಿದರು, ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಶಂಕರ ನಿಂಗನೂರ ನಿರೂಪಿಸಿದರು ಮತ್ತು ಡಿ.ಎಸ್.ಹುಗ್ಗಿ ವಂದಿಸಿದರು.