ವಚನ ಪಿತಾಮಹ
===============
ಹರಕು ಬಟ್ಟೆ ಮುರುಕು ಮನೆ
ನಿರಾಭಾರಿ ಫಕೀರನು
ಹಿಡಿದ ಹಟ ಬಿಡದೆ ಸಾಧಿಪ
ಛಲದಂಕ ಮಲ್ಲನು
ಊರು ಕೇರಿ ಸುತ್ತಿ ಸುತ್ತಿ
ಮಠ ಮಂದಿರ ಶೋಧಿಸಿ
ಶರಣ ವಚನ ಕಟ್ಟುಗಳಿಗೆ
ಮರುಹುಟ್ಟು ನೀಡಿದವನು
ಚಂದನ ಕಡಿದು ಕೊರೆದರೂ
ಕಂಪು ಬಿಡದ ಪರಿಯಲಿ
ಬೆಟ್ಟದಷ್ಟು ಕಷ್ಟಪಟ್ಟು
ನಾಡ ಸೇವೆ ಮಾಡಿದವನು
ಕಾಯಕಯೋಗಿ ಜ್ಞಾನಸಿರಿ
ಶಿಕ್ಷಣತಜ್ನ ಸ್ಥಿತಪ್ರಜ್ನನು
ಕನ್ನಡ ನಾಡಿನ ಚರಿತೆಯಲಿ
ನಿತ್ಯ ಶೋಭಿತ ಸೂರ್ಯನು
ವಚನಗಳ ಹಾಸಿಕೊಂಡು
ವಚನಗಳ ಹೊದ್ದುಕೊಂಡು
ವಚನ ಯೋಗ ನಿದ್ರೆ ಮಾಡಿ
ವಚನ ಪಿತಾಮಹನಾಗಿಹನು
ನಿನ್ನ ಹಾಡಿ ಹೊಗಳಲೆಮಗೆ
ಶಬ್ದಗಳೇ ಸಾಲದಿಹವು
ನಿನ್ನ ನಡೆ ನುಡಿಗಳೆಮಗೆ
ದಾರಿ ದೀಪ ವಾಗಿಹವು.
… ಆರ್. ಎಸ್. ಚಾಪಗಾವಿ