HomeUncategorizedಲೇಖನ ; ಅಗಲಿದ ಗುರುಗಳಿಗೆ ಅಕ್ಷರ ನಮನ

ಲೇಖನ ; ಅಗಲಿದ ಗುರುಗಳಿಗೆ ಅಕ್ಷರ ನಮನ

80ರ ದಶಕದ ಉತ್ತರಾರ್ಧದಲ್ಲಿ ಪ್ರಾಥಮಿಕ ಶಾಲೆಯ ಮೆಟ್ಟಿಲೇರಿದವರು ನಾವು. ಅಜಾನುಬಾಹು ದೇಹದ, ಘನ ಗಂಭೀರ ವ್ಯಕ್ತಿತ್ವದ ಎಸ್ ಎಸ್ ನರೇಗಲ್ ಎಂಬುವರು ನಮ್ಮ ಕನ್ನಡ ಗಂಡು ಮಕ್ಕಳ ಮಾದರಿಯ ಪ್ರಾಥಮಿಕ ಶಾಲೆ ಸೂಳೇಬಾವಿಯ ಮುಖ್ಯಗುರುಗಳು. ಒಂದನೇ ತರಗತಿಗೆ ಬಿಜ್ಜಳ ಗುರುಗಳು, ಎರಡನೇ ತರಗತಿಗೆ ಎಸ್‌. ವಿ. ಲೆಂಕ್ಯಪ್ಪನವರ ಗುರುಗಳು, ಮೂರನೇ ತರಗತಿಗೆ ಎನ್‌. ಜಿ. ಪಾಟೀಲ ಗುರುಗಳು, ನಾಲ್ಕಕ್ಕೆ ಜನಿವಾರದ ಗುರುಗಳು ಐದನೇ ತರಗತಿಯಿಂದ ವಿಷಯ ಶಿಕ್ಷಕರುಗಳಾಗಿ ಕನ್ನಡಕ್ಕೆ ಎಸ್ ಎಸ್ ಸಾರಂಗಮಠ, ಇಂಗ್ಲೀಷ್ ಬೋಧನೆಗೆ ಮಕಾನದಾರ ಗುರುಗಳು, ವಿಜ್ಞಾನಕ್ಕೆ ವಿ.ಎ. ಗುರುಶಾಂತನವರ, ಗಣಿತ ಹೇಳಿಕೊಡಲು ಪಿ ಎನ್ ಹಿರೇ ನಿಂಗಪ್ಪನವರ ಗುರುಗಳಿದ್ದರು.

ಇವರಲ್ಲದೇ ಒಂದರಿಂದ ಏಳನೇ ತರಗತಿ ಮುಗಿಯುವಷ್ಟರಲ್ಲಿ ಅಗಸರ ಗುರುಗಳು,ಜಿ.ವಿ. ವಜ್ರಮಟ್ಟಿ ಗುರುಗಳು, ಸಿ.ಪಿ. ಕುರಿ ಗುರುಗಳು, ಪಟ್ಟಣಶೆಟ್ಟಿ ಗುರುಗಳು, ಪಲ್ಲೇದ ಗುರುಗಳು, ಅಶೋಕ ರಾಜಾಪೂರ ಹಾಗೂ ರಾಜಾಪುರ ಗುರುಮಾತೆಯರು, ಗೌರವ ಶಿಕ್ಷಕರಾಗಿ ತಾತ್ಕಾಲಿಕವಾಗಿ ಸೇವೆ ಸಲ್ಲಿಸಿದ ವೆಂಕಣ್ಣ ವಜ್ರಮಟ್ಟಿ ಗುರುಗಳು, ಕರಡಿ ಗುರುಗಳು, ಅಂಗಡಿ ಗುರುಗಳು, ಪರಾಳದ ಗುರುಗಳು, ಪತ್ರಿ ಗುರುಗಳು ಹೀಗೆ ಅಪಾರ ಗುರು ಬಳಗವನ್ನು ಹೊಂದಿದ ನಮ್ಮೂರಿನ ಅನೇಕ ಜನ ಶಿಷ್ಯರಲ್ಲಿ ನಾನು ಕೂಡ ಒಬ್ಬ.

ಕಳೆದ ತಿಂಗಳಷ್ಟೇ ಸೇವೆಯಿಂದ ನಿವೃತ್ತರಾದ ಪಿ.ಎನ್. ಹಿರೇ ನಿಂಗಪ್ಪನವರ ಗುರುಗಳಿಗೆ ವಿಶ್ರಾಂತ ಜೀವನಕ್ಕೆ ಶುಭ ಕೋರಿದ ನಾವೆಲ್ಲ, ಈಗ ನಾಲ್ಕೈದು ದಿನಗಳ ಅಂತರದಲ್ಲಿ ಪೂಜ್ಯ ಗುರುಗಳೀರ್ವರ ಅಗಲಿಕೆಯ ನೋವಿನಲ್ಲಿ ಮುಳುಗುತ್ತಿರುವುದು ವಿಷಾದನೀಯ ಸಂಗತಿ.

ಹೌದು, ಹಿರಿಯ ಜೀವಿಗಳಾದ ಜೀವಿ ವಜ್ರಮಟ್ಟಿ ಗುರುಗಳು ಮೊನ್ನೆ ಅಷ್ಟೇ ನಮ್ಮನ್ನಗಲಿದ ನೋವಿನಿಂದ ಹೊರಬರುವಷ್ಟರಲ್ಲಿ ಇಂದು ಮಕಾನದಾರ ಗುರುಗಳು ಪೈಗಂಬರವಾಸಿಗಳಾದರೆಂಬ ಸುದ್ದಿ ಗಾಯಗೊಂಡ ಹೃದಯಗಳಿಗೆ ಇನ್ನಷ್ಟು ನೋವು ನೀಡಿದಂತಾಗಿದೆ.

ಐದನೇ ತರಗತಿಯಿಂದ ಇಂಗ್ಲಿಷ್ ನ ದರ್ಶನವಾಗುತ್ತಿದ್ದ ಆ ದಿನಗಳಲ್ಲಿ ಮೊದಲ ವರ್ಷವಿಡೀ ಎಬಿಸಿಡಿಯಲ್ಲಿಯೇ ಕಳೆದು ಹೋಗುತ್ತಿತ್ತು. ಆರನೇ ತರಗತಿಗೆ ಬರುತ್ತಿದ್ದಂತೆ, ಎಕ್ಸರ್ಸೈಜ್ ನಂಬರ್ ವನ್, ಎಕ್ಸರ್ಸೈಜ್ ನಂಬರ್ ಟು ಎಂಬ ಹೆಡ್ಡಿಂಗ್ ಗಳ ಸಂಖ್ಯೆ ಶೈಕ್ಷಣಿಕ ವರ್ಷ ಮುಗಿಯುವಷ್ಟರಲ್ಲಿ 300ರ ಗಡಿ ದಾಟುವಂತೆ ಬೋಧನೆಗೆ ಇಳಿದು ಇಂಗ್ಲೀಷ್ ಬೋಧಿಸಿದವರು ಇಂದು ನಮ್ಮನ್ನಗಲಿರುವ ಶ್ರೀ ಮಕಾನದಾರ ಗುರುಗಳು.

4×6 ಅಡಿ ಸೈಜಿನ ಕಪ್ಪು ಹಲಗೆಯ ತುಂಬಾ ಇಂಗ್ಲೀಷ್ ಅಕ್ಷರಗಳ ಪದ ಸಮೂಹ ಬೋರ್ಡಿನ ನಾಲ್ಕೂ ಮೂಲೆಯನ್ನು ಮುಟ್ಟಿರುತ್ತಿದ್ದವು. ನಮಗೆ ಓದಲು ಬರುತ್ತಿತ್ತೋ ಇಲ್ಲವೋ! ಒಟ್ಟಿನಲ್ಲಿ ಅವುಗಳನ್ನು ಬರೆದುಕೊಳ್ಳುವುದೇ ಅಂದಿನ ನಮ್ಮ ಇಂಗ್ಲಿಷ್ ಕಲಿಕೆ ಎಂದರೆ ಅಚ್ಚರಿಯಾಗುತ್ತದೆ. ಇಂತಹ ವಾಕ್ಯ ಸಮೂಹವನ್ನು ನಿತ್ಯವೂ ಬರೆದೂ ಬರೆದು ಸುಂದರ ಕೈಬರಹವನ್ನು ರೂಢಿಸಿಕೊಂಡವರು ನಮ್ಮ ನಡುವಿದ್ದಾರೆ.

ಮಕಾನದಾರ ಗುರುಗಳ ಇನ್ನೊಂದು ವಿಶೇಷವೆಂದರೆ, ಪ್ರತಿ ಶನಿವಾರದ ಎಂ.ಡಿ. (ಮಾರ್ನಿಂಗ್ ಡ್ರಿಲ್). ಅವರು ಸೀಟೀ ಊದಿ ಬಾಯೇ ಮುಡೇಗಾ ಬಾಯೇ ಮೂಡ್ ಎನ್ನುತ್ತಿದ್ದಂತೆ ನಾವೆಲ್ಲ ಏಕ್ ದೋ ತೀನ್ ಏಕ್ ಎಂದು ಈ ಕಡೆಯಿಂದ ಆ ಕಡೆ ಆ ಕಡೆಯಿಂದ ಈ ಕಡೆ ತಿರುಗಿ ನಿಂತು ನಡೆಸಿದ ಕವಾಯತ್ತು ಎಂದೂ ಮರೆಯದ ನಮ್ಮ ಬಾಲ್ಯದ ಸ್ಮರಣೀಯ ಕ್ಷಣಗಳಲ್ಲೊಂದು.

ಸಪ್ಟಂಬರ್ 5 ಶಿಕ್ಷಕರ ದಿನಾಚರಣೆ. ಆ ವರ್ಷ ನಾವು ಆರನೇ ತರಗತಿಯಲ್ಲಿದ್ದೆವು ಅನಿಸುತ್ತೆ. ನಮ್ಮ ಕ್ಲಾಸಿನ ಗೆಳೆಯರೆಲ್ಲ ಸೇರಿ ಹತ್ತು, ಹದಿನೈದು ಪೈಸೆಗಳನ್ನು ಸೇರಿಸಿ ನಮ್ಮ ತರಗತಿ ಶಿಕ್ಷಕರಿಗೆ ಏನನ್ನಾದರೂ ಗಿಫ್ಟ್ ನೀಡೋಣ ಎಂದು ತೀರ್ಮಾನಿಸಿ ಒಂದಷ್ಟು ವಸ್ತುಗಳನ್ನು ಕೊಂಡು ತಂದಿದ್ದೆವು. ಅವು ಏನೇನು ಎಂದು ಸ್ಪಷ್ಟವಾಗಿ ನೆನಪಿಲ್ಲದಿದ್ದರೂ ಮಕಾನದಾರ ಗುರುಗಳಿಗೆ ತಂದುಕೊಟ್ಟ ಚಾರ್ಮಿನಾರ್ ಸಿಗರೇಟು ಪಕ್ಕ ನೆನಪಿದೆ. ಕಾರಣವಿಷ್ಟೇ, ನಮಗೆಲ್ಲಾ ಗುರುಗಳಿಗೆ ಕಾಣಿಕೆ ನೀಡಬೇಕು ಎನ್ನುವುದಷ್ಟೇ ಗೊತ್ತಿತ್ತು; ಆದರೆ ಏನನ್ನು ನೀಡಬೇಕು ಎಂಬುದು ತಿಳಿದಿರಲಿಲ್ಲ. ತಿಳಿಯದೆಯೇ ಅವರಿಗೆ ನಾವು ತಂದುಕೊಟ್ಟ ಆ ಸಿಗರೇಟ್ ಅನ್ನು ಗುರುಗಳು ತಿರಸ್ಕರಿಸಿ ನಮಗೆ ಬುದ್ಧಿವಾದ ಹೇಳಿದರು. ಇಂಥವನ್ನೆಲ್ಲ ಗುರುಗಳಿಗೆ ಕಾಣಿಕೆ ನೀಡಬಾರದು. ಬದಲಾಗಿ ಪೆನ್ನುಗಳನ್ನು ನೀಡಿ ಎಂದು ತಿಳಿಸಿದರು. ಆ ಕ್ಷಣ ಅವರಲ್ಲಿ ಏನೋ ಒಂದು ಬದಲಾವಣೆಯನ್ನು ನಾವು ಗಮನಿಸಿದೆವು. ಮಕ್ಕಳೆದುರು ಗುರುಗಳಾದವರು ತಮ್ಮ ಒಂದಷ್ಟು ಅಭ್ಯಾಸಗಳನ್ನು ನಿಯಂತ್ರಿಸಿಕೊಳ್ಳಬೇಕೆಂದು ತಮಗೆ ತಾವೇ ಹೇಳಿಕೊಂಡಂತಿತ್ತು ಅಂದಿನ ಅವರ ಮುಖಭಾವ. ಅವತ್ತಿನಿಂದ ಮಕ್ಕಳೆದುರು ಅವರು ಸಿಗರೇಟು ಉರಿಸಿದ್ದನ್ನು ನಾನು ಕಂಡಿದ್ದು ವಿರಳ.

ಸದಾ ಜೇಬಿನಲ್ಲಿ ರವರವ ಪೇಪ್ಪರಮಡ್ಡಿ ಇಟ್ಟುಕೊಂಡು ನಮ್ಮ ಗಲ್ಲವನ್ನು ಗಿಲ್ಲಿ ಆ ಪೇಪ್ಪರಮಡ್ಡಿ ತಿನ್ನಿಸುತ್ತಿದ್ದ ಸಿ.ಪಿ. ಕುರಿ ಗುರುಗಳು, ಎಂದೂ ಮರೆತೂ ಮಕ್ಕಳ ಮೇಲೆ ಕೈ ಮಾಡಿರದ ಜಿ.ವಿ. ವಜ್ರಮಟ್ಟಿ ಗುರುಗಳು, ಕನ್ನಡ ವ್ಯಾಕರಣವನ್ನು ಅಚ್ಚುಕಟ್ಟಾಗಿ ಹೇಳಿಕೊಡುವುದರೊಂದಿಗೆ ತಬಲಾ ವಾದಕರೂ ಆಗಿದ್ದ ಎಸ್ ಎಸ್ ಸಾರಂಗಮಠ ಗುರುಗಳು, ನಮ್ಮೂರಿನ ಹವ್ಯಾಸಿ ರಂಗಭೂಮಿ ಹಾಸ್ಯ ಕಲಾವಿದರು, ಮುತ್ತುಗಳನ್ನು ಪೋಣಿಸಿದಂತೆ ಅಕ್ಷರಗಳನ್ನು ಬರೆಯುತ್ತಿದ್ದ ಮತ್ತು ಅದೇ ಕಾರಣಕ್ಕೋ ಏನೋ ಶಾಲೆಯ ಎಲ್ಲಾ ದಾಖಲೆಗಳನ್ನು ಬರೆಯುವುದರಲ್ಲೇ ಹೆಚ್ಚು ಸಮಯ ಕಳೆದ ಜನಿವಾರದ ಗುರುಗಳು, ಬಿಳಿ ಬಣ್ಣದ ನೆಹರೂ ಶರ್ಟ್, ಧೋತ್ರ, ತಲೆ ಮೇಲೊಂದು ಬಿಳಿ ಗಾಂಧೀ ಟೋಪಿ ಧರಿಸಿ ರಘುಪತಿ ರಾಘವ ರಾಜಾರಾಮ್ ಹಾಡು ಹಾಡಿಸುತ್ತಿದ್ದ ಗಾಂಧಿವಾದಿ ಎನ್ ಜಿ ಪಾಟೀಲ ಗುರುಗಳು, ಚಿತ್ರನಟರಾದ ಡಾ. ರಾಜಕುಮಾರ್, ರಾಜೇಶರನ್ನು ಹೋಲುತ್ತಿದ್ದ ಸ್ಪುರದ್ರೂಪಿ ಅರ್ಜುನ್ ರಾಜಾಪೂರ ಗುರುಗಳು, ರೂಲ್ ಬಡಿಗೆಯ ಒಂದು ತುದಿಗೆ ಬಟ್ಟೆಯನ್ನು ದಾರದಿಂದ ಕಟ್ಟಿ, ಟು ಇನ್ ಒನ್ ಸಾಧನದಂತೆ ಬಳಸುತ್ತಿದ್ದ ಹೆಡ್ ಮಾಸ್ಟರ್ ಎಸ್ ಎಸ್ ನರೇಗಲ್ ಗುರುಗಳು ಇಂದು ನಮ್ಮೊಂದಿಗಿಲ್ಲ. ಆದರೆ ಅವರೊಂದಿಗಿನ ಒಡನಾಟದ ಅಸಂಖ್ಯಾತ ನೆನಪುಗಳ ಬುತ್ತಿ ನಮ್ಮೊಂದಿಗಿದೆ.

ಹೀಗೆ ಶಿಷ್ಯಂದಿರ ಬದುಕಿನಲ್ಲಿ ಹಲವಾರು ನೆನಪುಗಳನ್ನು ಉಳಿಸಿ, ಅವರ ಬದುಕನ್ನು ಸನ್ಮಾರ್ಗದಲ್ಲಿ ಕೊಂಡೊಯ್ದು, ಶಿಷ್ಯಂದಿರ ಸಾಧನೆಯ ಕಂಡು ಒಳಗೊಳಗೆ ಹೆಮ್ಮೆಪಟ್ಟುಕೊಂಡ ನಮ್ಮ ಪ್ರಾಥಮಿಕ ಶಾಲಾ ಗುರುಗಳ ಪರಂಪರೆ ದೊಡ್ಡದು. ಅವರ ಹಾರೈಕೆ, ಬೋಧನೆ, ಪ್ರೇರಣೆಯ ಫಲವಾಗಿ ಇಂದು ಸೂಳೇಬಾವಿಯ ಪ್ರತಿ ಓಣಿಗೆ ಒಬ್ಬಿಬ್ಬರು ಸರಕಾರಿ ನೌಕರರಿದ್ದೇವೆ. ಅದರಲ್ಲೂ ವಿಶೇಷವಾಗಿ ಪ್ರಾಥಮಿಕ ಶಾಲಾ ಶಿಕ್ಷಕರಿದ್ದೇವೆ. ಗುರುಗಳೇ, ಈಗಿನಂತೆ ನೀವು ಮಾಹಿತಿಯ ಮಹಾ ಪ್ರವಾಹವನ್ನಾಗಲಿ, ಹೆಣಭಾರದ ಪುಸ್ತಕಗಳ ಗಂಟನ್ನಾಗಲಿ ನಮ್ಮ ಬೆನ್ನಿಗೆ ಕಟ್ಟದೆ, ಸಾಮಾಜಿಕ ಮೌಲ್ಯಗಳನ್ನು, ಸೌಹಾರ್ದ ಬದುಕಿನ ಬೀಜಗಳನ್ನು, ಆದರ್ಶ ಸಮಾಜದ ಕನಸುಗಳನ್ನು ನಮ್ಮೆದೆಯೊಳಗೆ ಬಿತ್ತಿದ್ದೀರಿ. ಆ ಮೌಲ್ಯಗಳನ್ನು ಉಳಿಸಿ ಬೆಳೆಸುವ ಕೈಂಕರ್ಯದಲ್ಲಿ ನಾವು ಅಕ್ಷರಶಃ ಪ್ರಾಮಾಣಿಕವಾಗಿ ಮುಂದುವರೆದಿದ್ದೇವೆ. ನಮ್ಮ ಬದುಕಿನುದ್ದಕ್ಕೂ ತಮ್ಮ ನೆನಪುಗಳನ್ನು ಹೃನ್ಮನದಲ್ಲಿ ತುಂಬಿಕೊಂಡಿರುತ್ತೇವೆ. ಗುರುಗಳಿರ್ವರ ಅಗಲಿಕೆಯ ಈ ಸಂದರ್ಭದಲ್ಲಿ ಈಗಾಗಲೇ ಅಗಲಿ ಹೋದ ಹಲವಾರು ಗುರುಗಳ ಆತ್ಮಕ್ಕೆ ಚಿರಶಾಂತಿ ಕೋರುತ್ತಾ ಈ ನನ್ನ ಅಕ್ಷರ ನಮನಗಳನ್ನು ಅವರ ಪಾದಕ್ಕೆ ಸಮರ್ಪಿಸುತ್ತಿದ್ದೇನೆ.

ಅಶೋಕ ವಿ ಬಳ್ಳಾ ಸೂಳೇಬಾವಿ.

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group