ಶಾಂತತೆ ಜಗದಲಿ
ಕತ್ತಲು ಓಡಿಸಿ
ತಾ ಓಡುತ ಬರುವನು.
ಬಾಲರವಿ ಪೂರ್ವದಲಿ
ಎತ್ತರೆತ್ತರದ ಬಾನಿನಲಿ.
ಬಾನಿನ ಹಣೆಗೆ ಸಿಂಧೂರದಂತೆ
ಹೊನ್ನ ಕಿರಣ ಸೂಸುತಲಿ.
ಚಿತ್ರಿಸುವನು ಆಕಾಶವನು
ಪ್ರಕಾಶಮಾನ ಬಣ್ಣಗಳಲಿ.
ಮಧುರಾಮಧುರ
ಕಲರವವು.
ರಂಗುರಂಗಿನ
ಪಕ್ಷಿಗಳ ಚಿಲಿಪಿಲಿಯಲಿ.
ಹಸಿರೆಲೆ ಮೇಲೆ ಹೊಳೆಯುವವು.
ಬೆಳಗಿನ ಇಬ್ಬನಿಗಳು
ಸಂತೋಷದಲಿ.
ಸದ್ದು ಮಾಡುತ ನಲಿವ ಎಲೆಗಳು
ತೂಗಾಡುವ ಹಣ್ಣಿನ ಜೊತೆಯಲಿ.
ಸೌಮ್ಯದಿ ನದಿಯು ಹರಿಯುವುದು.
ಕಾಡಿನ ಪಿಸುಮಾತು
ಕೇಳುತಲಿ.
ಪ್ರಸನ್ನ ಪ್ರಶಾಂತ ಪರಿಸರವು.
ನಯನವು ಪಿಳಿಪಿಳಿ
ಹಸಿರಿನ ಸಿರಿಯಲಿ.
ಮಧು ಹೀರುವ ಭೃಂಗದ ಗಾನವು.
ಮಂದಾರ ಪುಷ್ಪದ ಚೆಂದದಲಿ.
ಮೈಮನಗಳು ಪುಳಕಿತವು
ವಸುಂಧರೆ ಚೆಲುವಿನಲಿ.
ಮಣ್ಣಿನ ಕಣಕಣದ ಪರಿಮಳವು.
ಮೈ ತೀಡುವ ತಣ್ಣನೆ ಗಾಳಿಯಲಿ.
ಶಾಂತತೆ ಜಗದಲಿ ನೆಲೆಸುವುದು.
ಪ್ರಕೃತಿ ಮಾತೆಯ
ಅಪ್ಪುಗೆಯಲಿ.
ಜಯಶ್ರೀ. ಅಬ್ಬಿಗೇರಿ, ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
9449234142