ಶಿವಮೊಗ್ಗ ಜಿಲ್ಲೆಯ ಬಳ್ಳಿಗಾವೆಯಲ್ಲಿ ಹುಟ್ಟಿದ ಅಲ್ಲಮಪ್ರಭುಗಳು , ಬನವಾಸಿಯ ಮಧುಕೇಶ್ವರ ದೇವಾಲಯದಲ್ಲಿ ಮದ್ದಳೆ ಬಾರಿಸುವ ಕಾಯಕ ಮಾಡುತ್ತಿದ್ದರು .
ಅನುಭವ ಮಂಟಪ ಅಧ್ಯಕ್ಷರಾಗಿ, ಬಸವಣ್ಣ, ಅಕ್ಕಮಹಾದೇವಿ, ಚೆನ್ನಬಸವಣ್ಣ, ಸಕಲೇಶಮಾದರಸ ಮುಂತಾದ ಶರಣರಿಗೆ ಮಾರ್ಗದರ್ಶಕರಾಗಿದ್ದವರು .
ಆಸೆಯೆಂಬ ಕೂಸನೆತ್ತಲು ರೋಷವೆಂಬ ತಾಯಿ
ಮುಂದೆ ಬಂದಿಪ್ಪಳು ನೋಡಾ
ಇಂತೆರಡಿಲ್ಲದ ಕೂಸನೆತ್ತಬಲ್ಲಡೆ
ಆತನೆ ಲಿಂಗೈಕ್ಯನು ಗುಹೇಶ್ವರಾ
ಅಲ್ಲಮಪ್ರಭುಗಳ ಆಳವಾದ ಚಿಂತನದ ವಚನಗಳು ಪ್ರತಿಭಟನಾತ್ಮಕ ಹಾಗೂ ವಿಮರ್ಶಾತ್ಮಕ ಅಂಶವನ್ನು ಒಳಗೊಂಡ ಅಲ್ಲಮನ ವಚನಗಳು, ಸತ್ಯಾನ್ವೇಷಣೆಯ ದಿಕ್ಕಿನತ್ತ ನಮ್ಮನ್ನು ಕರೆದೊಯ್ಯುತ್ತವೆ .
ನೇರ ಹಾಗೂ ದಿಟ್ಟವಾಗಿ ಹೇಳುವ ವೀರ ಗಣಾಚಾರಿ ಅಲ್ಲಮರ ಈ ಒಂದು ವಚನದ ಅರ್ಥ ನನ್ನ ಬುದ್ಧಿಗೆ ನಿಲುಕಿದ್ದು ನಿಮ್ಮ ಮುಂದೆ ತೆರೆದು ಇಡುತ್ತಿರುವೆ.
ಆಸೆಯೆಂಬ ಕೂಸು ರೋಷವೆಂಬ ತಾಯಿ ಮುಂದೆ ಬಂದಿಪ್ಪಳು ನೋಡಾ
ಇಲ್ಲಿ ಆಸೆಯೆಂಬ ಕೂಸನ್ನು ಹಡೆದ ತಾಯಿ ರೋಷ.
ರೋಷದ ತಾಯಿಯು ಆಸೆಯ ಕೂಸನ್ನು ಬೆಳೆಸುತ್ತ ಬೆಳೆಸುತ್ತ ಹೋದಂತೆ ಅದರ ರೋಷವೆಂಬ ತಾಯಿ ಅದನ್ನು ತಡೆದು ಹಾಕಲು ತುಂಬಾ ಕಷ್ಟವನ್ನು ಅನುಭವಿಸಬೇಕಾಗುತ್ತದೆ.
ಕೂಸು ಇದ್ದಾಗಲೇ ಆಸೆಯ ಕೂಸನ್ನು ತಾಯಿಯಾದವಳು ಪಳಗಿಸಿ,ಅದನ್ನು ತನ್ನ ಅಧೀನದಲ್ಲಿ ಇಟ್ಟುಕೊಂಡು ನಡೆಸಬೇಕಾಗುತ್ತದೆ. ಮುಂದೆ ದೊಡ್ಡದಾಗಿ ಬೆಳೆದ ಆಸೆಯ ಕೂಸು ತನ್ನ ಮನಸ್ಸಿಚ್ಚೆಯಂತೆ ಹೋಗುವುದನ್ನು ತಡೆಯಲು ರೋಷದಿಂದ ತಾಯಿ ಹೆಣಗುವಂತಾಗುತ್ತದೆ. ಕೂಸು ಇದ್ದಾಗಲೇ ಅದಕ್ಕೆ ಸುಂದರ, ಸುಸಂಸ್ಕೃತ ಪರಿಸರದ ಒಲವಿನಿಂದ ಅಪ್ಪಿ ಮುದ್ದಿಸುವ ತಾಯಿ ಮುಂದಿನ ತನ್ನ ಕೂಸಿನ ಆಸೆಯನ್ನು ತೀರಿಸಲು ಒದ್ದಾಡುವ ಪರಿಸ್ಥಿತಿಯು ಬಂದು ಬಿಡುತ್ತದೆ .
ಆಸೆಗೂ, ರೋಷಕ್ಕೂ ಅನ್ಯೋನ್ಯ ಸಂಬಂಧ ಮಗು ಹಾಗೂ ತಾಯಿಯಷ್ಟು ಆಸೆಗೆ ಏನಾದರೂ ತೊಂದರೆ, ಬಾಧೆ ಬಂದರೆ ರೋಷ ಅದನ್ನು ರಕ್ಷಿಸಲು ಧಾವಿಸುತ್ತದೆ .
ಆಸೆಗೆ ರೋಷದ ಅವಲಂಬನ ರೋಷಕ್ಕೆ ಆಸೆಯ ಮೇಲೆ ತುಂಬಾ ಅನುರಾಗ ಭಾಂಧವ್ಯ .
ಈ ಲೌಕಿಕ ಆಸೆ ರೋಷಗಳ ಆಮಿಷಕೆ ಬಲಿಯಾಗದೇ ಇರುವ ಮಧುರ ಬಾಂಧವ್ಯದ ಮಿಲನವೇ ಭಕ್ತಿ.
ಇಂಥ ಶರಣರ ಭಕ್ತಿಯು ಪರಮಾತ್ಮ ಸ್ವರೂಪರಿಗೆ ಸಲ್ಲಿಸುವ ನಿಷ್ಕಲ್ಮಷ ಹೃದಯಕ್ಕೆ ಸಲ್ಲಿಸುವ ಭಕ್ತಿಯೆಂದು ನಾನಿಲ್ಲಿ ತಿಳಿದುಕೊಂಡಿರುವೆ
ಇಂತೆರಡಿಲ್ಲದ ಕೂಸನೆತ್ತಬಲ್ಲಡೆ ಆತನೆ ಲಿಂಗೈಕ್ಯನು
ಆಸೆಯಿಲ್ಲದ, ರೋಷವಿಲ್ಲದ ಕೂಸನ್ನು ಪರಮಾತ್ಮ ಎತ್ತಿ ಮುದ್ದಿಸುವ ನಿರ್ಮಲ ಭಕ್ತಿ .ಅದು ಸರ್ವಪ್ರಿಯ. ದೇವರಿಗೂ ಕೂಡ .ಇಂತಹ ಭಕ್ತಿಯನ್ನು ಎತ್ತಿ ತನ್ನ ಹೃದಯ ಕಮಲದಲ್ಲಿರಿಸಿ ಓಲೈಸುವ ಭಕ್ತ. ಅವನಿಗೆ ಲಿಂಗ ಸಮರಸತೆ ಸಹಜ ಲಭ್ಯ. ಲಿಂಗಸಮ ರಸವನನುಭವಿಸುವ ಲಿಂಗೈಕ್ಯನೆನಿಸುವ
ಲಿಂಗಾಂಗ ಸಾಮರಸ್ಯದ ಮಹಾ ಬೆಳಗಿನಲ್ಲಿ ಆಶೆಯಾಮಿಷಗಳು ಹೇಳ ಹೆಸರಿಲ್ಲದ ಬೆಳಕನ್ನು ಕಂಡ ಕತ್ತಲೆಯಂತೆ ನೋಡು ನೋಡುವಷ್ಟರಲ್ಲಿಯೇ ತಂತಾನೆ ದೂರಾಗುತ್ತವೆ. ಶರಣರ ಧರ್ಮದ ಪ್ರಭಾವವಿದು. ಅವರು ಉಂಡು ಉಪವಾಸಿಗಳು ಬಳಸಿ ಬ್ರಹ್ಮಚಾರಿಗಳು. ಅವರಿಗೆ ಸೂತಕಗಳಿಲ್ಲ .ಅವರು ನಿರಹಂಕಾರಿಗಳು .ಪ್ರಾಣದಲ್ಲಿ ನಿರ್ಭಯರು ,ಚಿತ್ತದಲ್ಲಿ ನಿರಪೇಕ್ಷೆಯುಳ್ಳವರು .ಅಂತೆಯೇ ಅವರು ಅಜಾತ ಶತ್ರುಗಳು ವಿಷಯದಲ್ಲಿ ಉದಾಸೀನರು ಭಾವದಲ್ಲಿ ದಿಗಂಬರರು .ಜ್ಞಾನದಲ್ಲಿ ಪರಮಾನಂದ ಭರಿತರು ಸದ್ಗುಣ ಪರಿಪೂರ್ಣರು .
ಅರಗಿನ ಪುತ್ಥಳಿಯನುರಿಕೊಂಡಡೆ
ಉದಕ ಬಾಯಾರಿ ಬಳಲುತ್ತಿದೆ
ಅಗೆಯಿಂಭೋ ಭಾವಿನಗೆಯಿಂಭೋ ಬಾವಿಯನಗೆದಾತ ಸತ್ತ, ಭಾವಿ ಬತ್ತಿತ್ತು- ಇದು ಕಾರಣ ಮೂರು ಲೋಕವು ಬರುಸೂರೆವೋಯಿತ್ತು – ಗುಹೇಶ್ವರಾ
➖➖➖➖➖➖➖➖➖
ಅರಗಿನ ಪುತ್ಥಳಿಯನುರಿಕೊಂಡಡೆ
ಮನುಷ್ಯನ ಆಶೆಗೆ ಮಿತಿಯೇ ಇಲ್ಲ.ದೊರೆತದ್ದು ಪಡೆದ ಮೇಲೆ ಮತ್ತಷ್ಟು ಇನ್ನಷ್ಟು ಪಡೆಯಬೇಕೆಂಬ ಆಶೆ ಹುಟ್ಟಿಕೊಳ್ಳುತ್ತದೆ . ಭಿಕ್ಷುಕನಿಗೂ ರಾಜನಾಗುವ ಆಶೆ ರಾಜನಿಗೆ ಮಹಾರಾಜನಾಗುವ ಆಶೆ .ಅಲ್ಲಮಪ್ರಭು ಗಳು ತಮ್ಮ ಒಂದು ವಚನದಲ್ಲಿ ಹೀಗೆ ಹೇಳಿದ್ದಾರೆ .
ಮಾನವ ಆಶಾವಾದಿ ಒಂದರ ಹಿಂದೆ ಒಂದು ಆಸೆಯೆಂಬ ಬಿಸುಲುಗುದುರೆಯನ್ನು ಬೆನ್ನಿಗೆ ಕಟ್ಟಿಕೊಂಡು ಓಡುವ ಮನುಷ್ಯನ ಆಸೆಗೆ ಮಿತಿಯೇ ಇಲ್ಲ .
ಅದು ವಿದ್ಯೆ ಆಗಿರಬಹುದು, ಆಸ್ತಿ ಆಗಿರಬಹುದು , ಅಂತಸ್ತು , ಅಧಿಕಾರ, ಸೌಂದರ್ಯ ಯಾವುದೇ ಆಗಿರಬಹುದು, ಅದು ಅರಗಿನ ಪುತ್ಥಳಿಯಂತೆ ಕರಗಿ ಹೋಗುತ್ತದೆ ಎನ್ನುವ ಅರಿವು ನಮಗೆಲ್ಲರಿಗೂ ಆದಾಗಲೇ ಮನುಷ್ಯ ಮನುಷ್ಯರ ಮಧ್ಯೆ ಈ ದ್ವೇಷ ,ತಾತ್ಸಾರ ಭಾವನೆ ಯಾವುದೂ ನಮ್ಮ ಗಮನಕ್ಕೆ ಬಾರದಿರುವಾಗ ಎಲ್ಲರನ್ನೂ ಅಪ್ಪಿಕೊಂಡು ಮುಂದೆ ಸಾಗುವ ಬದುಕಿನ ಮಾರ್ಗಕ್ಕೆ ಒಂದು ತಳಪಾಯ ಹಾಕಿ ನಡೆದವರೇ ನಮ್ಮ 12 ನೇ ಶತಮಾನದ ಶರಣರು .
ಬದುಕಿನ ಕಾಮನೆಗಳನ್ನೆಲ್ಲ ದೂರೀಕರಿಸಿ ,ನಿತ್ಯ ಕಾಯಕ ಜೀವಿಗಳಾಗಿ ,ಚೊಕ್ಕ ದಾಸೋಹದ ಅರಿವನ್ನು ತಿಳಿಸಿ ಹೋದವರು ನಮ್ಮ ಶರಣರು .
ಶ್ರೇಷ್ಠ ಜ್ಞಾನಿ ಅಲ್ಲಮಪ್ರಭುಗಳು
ಮನುಷ್ಯನದೇಹವು ಒಂದು ಅರಗಿನ ಪುತ್ಥಳಿ ಅಥವಾ ಗೊಂಬೆ ಇದ್ದಂತೆ ಎಂದು ಹೇಳಿದ್ದಾರೆ .ಅರಗಿನ ಗುಣ ಬೆಂಕಿಯ ಸಮೀಪಕ್ಕೆ ಹೋದರೆ ಕರಗುವುದು.
ಇದಕ್ಕೆ ಕಾಲನ ಎಂಬ ಉರಿ ತಾಗಿದರೆ ಮನುಷ್ಯ ನಲ್ಲಿರುವ
ರೂಪು- ಯೌವನ, ವಿದ್ಯೆ ಬುದ್ಧಿ, ಶಕ್ತಿ-ಸಾಮರ್ಥ್ಯ ಎಲ್ಲವೂ ಕರಗಿ ಹೋಗುತ್ತದೆ .ಎನ್ನುವ ತಿಳುವಳಿಕೆಯನ್ನು ಮೂಡಿಸಿ ಹೋದ ಮಹಾನ್ ಜ್ಞಾನಿಗಳು ಅಲ್ಲಮಪ್ರಭುಗಳು ಆಗಿದ್ದಾರೆ .
ಉದಕ ಬಾಯಾರಿ ಬಳಲುತ್ತಿದೆ
ಬದುಕು ಸಾಗಿಸಬೇಕಾದರೆ ಗಾಳಿ ಬೆಳಕು ಮತ್ತು ನೀರು ಯಾವುದೇ ಪ್ರಾಣಿ ,ಪಕ್ಷಿ ,ಮಾನವರಿಗೇ ಇರಲಿ
ಅವಶ್ಯವಾಗಿ ಬೇಕೇ ಬೇಕು. ಈ ನೀರು ಸಿಗದಿದ್ದರೆ ಬದುಕಿನ ಪಥದ ದಾರಿಯೇ ಕಾಣದು .
ಇಲ್ಲಿ ಉದಕ ಎಂದರೆ ಸಾಮಾನ್ಯವಾಗಿ ನೀರು ಎಂದರ್ಥ.
ಅಲ್ಲಮಪ್ರಭುವಿನ ಪ್ರಕಾರ ಮನಸ್ಸು .
ರೂಪ ,ಯವ್ವನ ,ವಿದ್ಯೆ ಮತ್ತು ಬುದ್ಧಿ ಯ ದಾಹದಿಂದ ಓಡಿ ಓಡಿ ಬಳಲುವ ಮಾನವನ ದಾಹ ಎಂದೂ ತೀರದು .
ಅದನ್ನು ಪಡೆಯಲು ತುಂಬಾ ಕಷ್ಟ ಪಡುವನು.
ಈ ಎಲ್ಲ ತಾಪತ್ರಯದಿಂದ ಇಲ್ಲಿ
‘(ಉದಕ’ ಎಂದರೆ) ಮನಸ್ಸು ಬಾಯಾರಿ ಬಳಲುತ್ತದೆ ಎನ್ನುವ ಅರ್ಥವನ್ನು ಅಲ್ಲಮಪ್ರಭುಗಳು ಅತ್ಯಂತ ಸೊಗಸಾಗಿ ಈ ಒಂದು ವಚನದಲ್ಲಿ ಹೇಳಿದ್ದಾರೆ .
ಪ್ಲೋಟೋ ಶ್ರೇಷ್ಠ ತತ್ತ್ವಜ್ಞಾನಿ ತನ್ನ ಆದರ್ಶ ರಾಜ್ಯದ ಪರಿಕಲ್ಪನೆಯಲ್ಲಿ ಈ ಅಂಶಗಳನ್ನು ತಿಳಿದುಕೊಂಡೇ ಒಂದು ಸುಂದರ ಸಮಾಜದ ಪರಿಕಲ್ಪನೆಯನ್ನು ಮೂಡಿಸಿರಬಹುದು. ಎನ್ನುವುದು ನನ್ನ ಅಭಿಪ್ರಾಯ.
ಅಗೆಯಿಂಭೋ ಭಾವಿನಗೆಯಿಂಭೋ ಬಾವಿಯನಗೆದಾತ ಸತ್ತ,
ಬಾವಿ ಬತ್ತಿತ್ತು
ಈ ಬಾಯಾರಿಕೆ ಯ ದಾಹ ಕಳೆಯಲೆಂದು ರೂಪ, ರಸ, ಗಂಧಾದಿ ವಿಷಯದ ಭಾವಿ ತೋಡುತ್ತಾನೆ.
ತೋಡಿದ ಬಾವಿಯಲ್ಲಿ ಶಾಂತಿ- ಸಮಾಧಾನದ ನೀರು ದೊರೆಯದೆ ಗೋಳಿಡುತ್ತಾನೆ ದುಃಖ ಪಡುತ್ತಾನೆ ಎಂದರ್ಥ.ಆಸೆಯೇ ದುಃಖಕ್ಕೆ ಕಾರಣ ಎಂದು ಹೇಳಿ ಅರಮನೆಯನ್ನು ತ್ಯಜಿಸಿದ ಬುದ್ಧನ ಪರಿಕಲ್ಪನೆಗೂ ನಮ್ಮ ಶರಣರಿಗೂ ಒಂದು ವ್ಯತ್ಯಾಸವೆಂದರೆ .ನಮ್ಮ ಶರಣರು ಆಸೆ ಆಮಿಷವನ್ನು ಬಿಟ್ಟು, ಸಂಸಾರದಲ್ಲಿಯೇ ಇದ್ದು ಕೊಂಡು, ಬದುಕಿನ ಮಾರ್ಗವನ್ನು ಕಂಡುಕೊಂಡ ಬುದ್ಧ ಜೀವಿಗಳು ನಮ್ಮ ಶರಣರು ,ಅವರಿಗೆ ಯಾವ ದಾಹವು ಇರಲಿಲ್ಲ. ಅವರು ತ್ಯಾಗ ಜೀವಿಗಳು ಮತ್ತು ಶ್ರಮಜೀವಿಗಳಾಗಿ ದೇಹವನ್ನು ನಿರ್ಮಲ ಮನದಿಂದ ಸವೆಸಿ ಹೋಗಿ ಶರಣರಾದರು .ಪರಮಾತ್ಮ ರಾದರು.
ಮೂರು ಲೋಕವು ಬರುಸೂರೆವೋಯಿತ್ತು ಗುಹೇಶ್ವರಾ
ಇದು ಬರೀ ಮಾನವರಿಗೆ ಅಷ್ಟೇ ಅಲ್ಲ ನಮ್ಮನ್ನು ಕಾಯುವ ಕರುಣಿಸುವ ದೇವಾನುದೇವತೆಗಳಿಗೂ ಕೂಡಾ ಅಂದರೆ, ಮೂರು ಲೋಕಕ್ಕೂ ಈ ದಾಹ ಬಿಟ್ಟಿಲ್ಲ. ಧನ ಕನಕಾದಿಗಳು ನನಗೆ, ಬೇಕು ತನಗೆ ಬೇಕು ಎಂದು ಕಿತ್ತಾಡುವಾಗ, ಇಂಥ ಕಿತ್ತಾಡುವ ದೇವರನ್ನು ಪೂಜಿಸುವರ ಗತಿ ಏನು ? ಎಂಬುವುದನ್ನು ಅಲ್ಲಮಪ್ರಭುಗಳು ಅತ್ಯಂತ ಸ್ವಾರಸ್ಯವಾಗಿ ವಿವರಿಸಿದ್ದಾರೆ .
ಅಂದರೆ ಈ ಪ್ರಪಂಚದಲ್ಲಿ ವಿಷಯದ ಬಾವಿ ತೆಗೆದ ನಮಗೆ ಶಾಂತಿಯ ಜಲ ದೊರೆತಿಲ್ಲ ಎನ್ನುವ ಕಠೋರ ಸತ್ಯವನ್ನು ನಾವೆಲ್ಲರೂ ಅರಿಯಬೇಕಾಗಿದೆ.
ಒಟ್ಟಿನಲ್ಲಿ ಅರ್ಥ ಇಷ್ಟೇ ಯಾವ ಮನುಷ್ಯರೂ ಪರಿಪೂರ್ಣ ಶಾಂತಿ ಮನಸ್ಸನ್ನು ಹೊಂದಿಲ್ಲ .ದೇವರೂ ಕೂಡಾ ಪರಿಪೂರ್ಣವಾಗಿ ಶಾಂತಿಯ ಮನಸ್ಸನ್ನು ತಾಳಲಾರರು.ಒಂದು ಆಸೆ ನೆರವೇರಿದ ಬಳಿಕ ಮತ್ತೊಂದು ಆಸೆಗೆ ಕೈ ಹಾಕುವ ಮತ್ತೊಂದನ್ನು ಪಡೆದುಕೊಳ್ಳುವ ಚಟಕ್ಕೆ ಮಾನವನ ಮನಸ್ಸಿಗೆ ತೃಪ್ತಿ ಹಾಗೂ ಶಾಂತಿಯೇ ಇಲ್ಲ (ಇದನ್ನು ಅಂಬಿಗರ ಚೌಡಯ್ಯನವರು ತಮ್ಮ ಒಂದು ವಚನದಲ್ಲಿ ಚಿಂತೆಯ ಬಗ್ಗೆ ಹೇಳಿರುವುದು ನಮಗೆಲ್ಲ ಗೊತ್ತೇ ಇದೆ.) ಎನ್ನುವ ಅರ್ಥವನ್ನು ಅಲ್ಲಮಪ್ರಭುಗಳು ಅತ್ಯಂತ ಸ್ವಾರಸ್ಯವಾಗಿ ಈ ವಚನದಲ್ಲಿ ತಿಳಿಯಪಡಿಸಿದ್ದಾರೆ
———
ಡಾ ಸಾವಿತ್ರಿ ಕಮಲಾಪೂರ
ಸಾಹಿತಿ ಚಿಂತಕಿ ಅಧ್ಯಾಪಕಿ ಅನುಭಾವಿ ಶರಣೆ