ಹಸಿರಿಲ್ಲದ, ಹೂವಿಲ್ಲದ, ಹಣ್ಣಿಲ್ಲದ ಗಿಡ ಹಕ್ಕಿಗಳನ್ನು ತನ್ನತ್ತ ಆಕರ್ಷಿಸಲಾರದು. ಸೌಂದರ್ಯವಿದ್ದು ನಯ ವಿನಯದಂಥ ಸದ್ಗುಣಗಳಿಲ್ಲದ ಮನುಷ್ಯರು ಇತರರನ್ನು ಗೆಳೆಯರನ್ನಾಗಿಸಿಕೊಳ್ಳುವುದು ಕಷ್ಟ. ಅಂಥವರು ತಮ್ಮ ಹೆಗಲಿನ ಮೇಲೆ ತಾವೇ ನೋವುಗಳನ್ನು ಹೊತ್ತು ತಿರುಗಿದರೂ ಯಾರೂ ಕೇಳುವುದಿಲ್ಲ. ಕೇಳಿದರೂ ಹೆಗಲು ಕೊಡಲು ಹಿಂದೆ ಮುಂದೆ ನೋಡುವವರೇ ಎಲ್ಲ. ಗೆಳೆತನವೆಂದರೆ ಹೇಳಿದ್ದಕ್ಕೆ ತಲೆ ಅಲ್ಲಾಡಿಸುತ್ತ ಜೊತೆ ಇರುವುದಲ್ಲ. ಸಮಯ ಸಾಧಕರಾಗಿ ಲಾಭಕ್ಕಾಗಿ ಹಿಂಬಾಲಿಸುವುದಲ್ಲ. ಸ್ನೇಹಿತನ ಬಲ, ಬಲಹೀನತೆಗಳನ್ನು ನೇರಾ ನೇರವಾಗಿ ಮುಖದ ಮುಂದೆ ತಿಳಿಹೇಳಿ ಆತನ ಏಳ್ಗೆಗೆ ಕೈ ಜೋಡಿಸುವುದು. ಏರಿಳಿತಗಳಲ್ಲಿ ಹೆಜ್ಜೆಯಲ್ಲಿ ಹೆಜ್ಜೆ ಹಾಕುವುದು. ಕಷ್ಟದ ಕುಲುಮೆಯಲ್ಲಿ ನೊಂದು ಬೇಯುತ್ತಿರುವಾಗ, ತಲೆ ಮುಳುಗುತ್ತಿರುವಾಗ, ಏಕಾಂಗಿಯಾಗಿ ಎಲ್ಲರಿಂದಲೂ ದೂರ ಎಸೆಯಲ್ಪಟ್ಟಾಗ ಆಪ್ತವಾಗಿ ತಬ್ಬಿಕೊಂಡು ನಿನ್ನೊಂದಿಗೆ ಸದಾ ನಾನಿರುವೆ ಹೆದರದಿರು ಎಂದು ಧೈರ್ಯ ತುಂಬುವ ಕೆಲಸ ಗೆಳೆಯನದು.
ಹಣವಿಲ್ಲದಾಗ ಗುಣವುಳ್ಳ ಗೆಳೆಯನನ್ನು ಕಸದ ಬುಟ್ಟಿಗೆ ಎಸೆಯುತ್ತೇವೆ. ನೂರಾರು ಜನರೊಂದಿಗೆ ಸ್ನೇಹವನ್ನು ಮಾಡುವುದು ದೊಡ್ಡದಲ್ಲ. ಅದನ್ನು ನಿಭಾಯಿಸುವುದು ಮುಖ್ಯ. ಪ್ರತಿಷ್ಠೆಗೆ ಮರುಳಾಗಿ ದುರ್ಗುಣಿಗಳ ಸಂಗ ಮಾಡಿದರೆ ಅಪಾಯ ತಪ್ಪಿದ್ದಲ್ಲ. ‘ಒಳ್ಳೆಯವರ ಗೆಳೆತನ ಕಲ್ಲು ಸಕ್ಕರೆ ಹಂಗ.’ ಗುಣ ನೋಡಿ ಗೆಳೆತನ ಮಾಡು.’ ಇವು ಹಿರಿಯರ ಅನುಭವದ ಮುಡಿಮುತ್ತುಗಳು. ಇತ್ತೀಚೆಗೆ ನಿಜ ಗೆಳೆತನ ಮಾಯವಾಗುತ್ತಿದೆ. ಫೇಸನ್ನೇ ನೋಡಿರದ ಫೇಸ್ ಬುಕ್ ಗೆಳೆಯರು ಸಾವಿರಾರು ಸಂಖ್ಯೆಯಲ್ಲಿ ಇದ್ದಾರೆ ಎನ್ನುವುದನ್ನು ಸುಲಭಕ್ಕೆ ಅರಗಿಸಿಕೊಳ್ಳಲು ಸಾಧ್ಯವಿಲ್ಲ. ಆದರೂ ಅದೇ ವಾಸ್ತವ.
ಗೆಳೆತನದ ಹೆಸರಲ್ಲಿ ಗಂಡು ಹೆಣ್ಣು ಒಂದಕ್ಕೊಂದು ಬೆನ್ನುಡುಬ್ಬ ಅಂಟಿಸಿಕೊಂಡು ಕೈಗೆ ಕೈ ಬೆಸೆದುಕೊಂಡು, ಹೂ ಬನಗಳಲ್ಲಿ ಕಿಲ ಕಿಲ ನಗುವುದು ಸ್ನೇಹದ ಮುಖಕ್ಕೆ ಮಸಿ ಬಳಿದಂತೆಯೇ ಸರಿ. ‘ಉತ್ತಮರ ಗೆಳೆತನ ಪುತ್ಥಳಿ ಬಂಗಾರ. ಹೀನರ ಗೆಳೆತನ ಮಾಡಿದರ ಹಿತ್ತಾಳೆಗಿಂತ ಬಲುಹೀನ.’ ಎಂಬ ಗರತಿ ಪದ ವೈಜ್ಞಾನಿಕವಾಗಿ ಬದಲಾದ ಕಾಲಮಾನದಲ್ಲಿ ಎಚ್ಚರಿಕೆಯ ಗಂಟೆಯಾಗಿದೆ. ತಪ್ಪು ಅಭಿಪ್ರಾಯಗಳು ಆದಾಗ ದೃಢವಾದ ದನಿಯಲ್ಲಿ ಉದ್ವೇಗದಿಂದ ಖಂಡಿಸಕೂಡದು. ವಿದಾಯದ ಗೆರೆಗೆ ಸ್ವಾಗತಿಸಕೂಡದು. ನಸು ನಗುತ್ತ ಆಪ್ತ ಸ್ವರದಲ್ಲಿ ಬಗೆಹರಿಸಿಕೊಳ್ಳಬೇಕು.
ಜೀವಕೆ ಜೀವ ನೀಡುವ ಜೀವದ ಗೆಳೆಯರಿಗೆ ಒತ್ತಡದ ಕೆಟ್ಟ ಗಳಿಗೆಯಲಿ ಮುಖ ತಿರುವಿ ನಡೆಯುವುದು ಉಚಿತವಲ್ಲ. ಜೀವನದ ಹಾದಿ ಉದ್ದಕ್ಕೂ ಸವಿ ನೆನಪನು ಹರವಿಕೊಳ್ಳುವಂಥ, ಮರಳು ಭೂಮಿಯಲ್ಲೂ ಹೂಬನ ಅರಳಿಸುವಂಥ ಸ್ನೇಹ ಸಂಪತ್ತನ್ನು ಬಾಡಲು ಬಿಡದಿರೋಣ.
ಜಯಶ್ರೀ ಜೆ.ಅಬ್ಬಿಗೇರಿ, ಬೆಳಗಾವಿ
೯೪೪೯೨೩೪೧೪೨


ಲೇಖನ ಚೆನ್ನಾಗಿದೆ ಮೇಡಂ.