spot_img
spot_img

ಮಹಿಳೆ, ಪುರುಷರಿಬ್ಬರೂ ಹೊಂದಾಣಿಕೆಯಿಂದ ಮುನ್ನಡೆದಾಗ ಸಾಧನೆ ಸಾಧ್ಯ – ನ್ಯಾ. ಜ್ಯೋತಿ ಪಾಟೀಲ

Must Read

ಮೂಡಲಗಿ: ಮಹಿಳೆ ಮತ್ತು ಪುರುಷ ಪರಸ್ಪರ ಹೊಂದಾಣಿಕೆ ಹಾಗೂ ಜವಾಬ್ದಾರಿಯೊಂದಿಗೆ ಮುನ್ನಡೆದಾಗ ಮಾತ್ರ ಯಾವುದೇ ಕ್ಷೇತ್ರದಲ್ಲಾದರೂ ಸಾಧನೆ ಮಾಡಬಹುದು. ಪುರಾತನ ಕಾಲದಿಂದಲೂ ಮಹಿಳೆ ಪ್ರತಿಯೊಂದು ಕ್ಷೇತ್ರದಲ್ಲಿ ತನ್ನ ಛಾಪು ಮೂಡಿಸುವ ಒಂದು ಶಕ್ತಿಯಾಗಿದ್ದಾರೆ ಎಂದು ದಿವಾಣಿ ಹಾಗೂ ಜೆ.ಎಂ.ಎಫ್.ಸಿ. ನ್ಯಾಯಲಯದ ನ್ಯಾಯಾಧೀಶೆ ಜ್ಯೋತಿ ಪಾಟೀಲ ಹೇಳಿದರು.

ಸೋಮವಾರದಂದು ಪಟ್ಟಣದ ತಹಶೀಲ್ದಾರ ಕಚೇರಿಯ ಸಭಾಂಗಣದಲ್ಲಿ ಬೆಳಗಾವಿಯ ತುಳಸಿ ಅಭಿವೃದ್ಧಿ ಸಂಸ್ಥೆ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಜರುಗಿದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಸಾಧಕಿಯರಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ತ್ರೀ ಎಂಬುದು ಒಂದು ಶಕ್ತಿಯಾಗಿದ್ದು, ಈ ಶಕ್ತಿ ಇಲ್ಲದಿದ್ದರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಆದರೆ ಪ್ರಸ್ತುತ ಸಂದರ್ಭದಲ್ಲಿ ಮಹಿಳೆ ಯಾವುದೇ ಸಾಧನೆ ಮಾಡಿದ್ದರೂ ಅದರಲ್ಲಿ ಪುರುಷನ ಪ್ರೋತ್ಸಾಹ ಅಗತ್ಯ. ಹೀಗಾಗಿ ಪ್ರತಿ ಪುರುಷ ಹಾಗೂ ಮಹಿಳೆಯರು ತಮ್ಮ ಜವಾಬ್ದಾರಿಯನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಬೇಕಿದ್ದು, ಇದರಿಂದ ಸಮಾಜದ ಬೆಳವಣಿಗೆ ಸಾಧ್ಯ ಎಂದರು.

ಅಂಗನವಾಡಿ ಮೇಲ್ವಿಚಾರಕಿಯರು ಹಾಗೂ ಅಂಗನವಾಡಿ ಆಶಾ ಕಾರ್ಯಕರ್ತೆಯರು ತಾಲೂಕಿನಲ್ಲಿ ಬಾಲ್ಯವಿವಾಹ ನಡೆಯುತ್ತಿರುವ ಪ್ರಕರಣ ಕಂಡುಬಂದಲ್ಲಿ ಅಧಿಕಾರಿಗಳಿಗೆ ತಿಳಿಸಿ ಕೂಡಲೇ ಅಧಿಕಾರಿಗಳು ಅವರ ವಿರುದ್ದ ಕ್ರಮಕೈಗೊಳ್ಳುತ್ತಾರೆ ಎಂದರು.

ಖನಗಾಂವದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯೆ ಡಾ. ಸಾವಿತ್ರಿ ಕಮಲಾಪೂರ ಮಾತನಾಡಿ, ಮಹಿಳೆ ಯಾವುದೇ ಕೆಲಸವನ್ನು ಅತ್ಯಂತ ಜವಾಬ್ದಾರಿಯುತವಾಗಿ ಹಾಗೂ ಸಮರ್ಪಣಾ ಮನೋಭಾವದೊಂದಿಗೆ ನಿಭಾಯಿಸುತ್ತಾಳೆ. ಹೀಗಾಗಿಯೇ ಅನಾದಿ ಕಾಲದಿಂದಲೂ ಮಹಿಳೆ ಸಾಧಕಿಯಾಗಿ ಮಾತ್ರವಲ್ಲದೆ ಅನೇಕ ಹೋರಾಟಗಳಲ್ಲೂ ತೊಡಗಿಸಿಕೊಂಡಿದ್ದಾಳೆ. ಆದರೆ ಮಹಿಳೆಯಲ್ಲಿರುವ ಪ್ರತಿಭೆಯನ್ನು ಹೊರಹಾಕಲು ಅವಕಾಶ ಕಲ್ಪಿಸಿ, ಧೈರ್ಯದಿಂದ ಮುನ್ನಡೆಯುವಂತೆ ಮಾಡಲು ಪ್ರೋತ್ಸಾಹ ಅಗತ್ಯವಾಗಿದೆ ಎಂದರು.

ತಹಶೀಲ್ದಾರ ಪ್ರಶಾಂತ ಚನ್ನಗೊಂಡ ಮಾತನಾಡಿ, ಪ್ರತಿ ಪುರುಷನ ಸಾಧನೆಯ ಹಿಂದೆ ಮಹಿಳೆ ಇರುತ್ತಾಳೋ ಅದೇ ರೀತಿ ಮಹಿಳೆಯ ಸಾಧನೆ ಹಿಂದೆ ಪುರುಷನ ಬೆಂಬಲ ಇರುತ್ತದೆ. ಸಮಾಜದಲ್ಲಿ ಪುರುಷರು ಮತ್ತು ಮಹಿಳೆಯರು ಸಮಾನವಾಗಿ ಹೆಜ್ಜೆ ಹಾಕಬೇಕು.

ಪುರುಷ ಮತ್ತು ಮಹಿಳೆ ನಡುವೆ ಸ್ಪರ್ಧೆ ಇರಬಾರದು ಸಹಕಾರ ಇರಬೇಕು. ಹೀಗಾಗಿದ್ದಲ್ಲಿ ಉತ್ತಮ ಮತ್ತು ಮೌಲ್ಯಯುತ ಸಮಾಜ ನಿರ್ಮಾಣವಾಗಲು ಸಾಧ್ಯವಾಗಿದೆ. ಮಹಿಳಾ ಸಾಧಕಿಯರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುತ್ತಿರುವ ಸಂಸ್ಥೆ ಹಾಗೂ ಒಕ್ಕೂಟದ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರಾದ ಡಾ. ಸಾವಿತ್ರಿ ಕಮಲಾಪೂರ(ಸಾಹಿತ್ಯ), ಪ್ರೇಮಾ ಗಾಣಿಗೇರ(ಕೃಷಿ), ಶೈಲಾ ಹೂಗಾರ(ಶಿಕ್ಷಣ), ಲಕ್ಷ್ಮೀ ಜೋಕಾನಟ್ಟಿ(ಜನಪದ), ದೀಪಶ್ರೀ ದೇಸೂರಕರ(ಮಾದರಿ ಅಂಗನವಾಡಿ ಕೇಂದ್ರ), ಮಾಲತಿ ಸಪ್ತಸಾಗರ(ಮಾದರಿ ಅಂಗನವಾಡಿ ಕೇಂದ್ರ), ಕಸ್ತೂರಿ ಹೆಗ್ಗಾಣಿ(ಸಮಾಜಿಕ), ರತ್ನಾ ಹಳ್ಳಿ(ಆರೋಗ್ಯ), ಇಂದ್ರವ್ವ ಬಂಡ್ರೋಳ್ಳಿ(ಪೊಲೀಸ್) ಇವರುಗಳಿಗೆ ನ್ಯಾಯಾಧೀಶೆ ಜ್ಯೋತಿ ಪಾಟೀಲ ಅವರು ವೀರ ರಾಣಿ ಕಿತ್ತೂರು ಚನ್ನಮ್ಮ ಪ್ರಶಸ್ತಿ ನೀಡಿ ಗೌರವಿಸಿದರು.

ಬಾಲ್ಯವಿವಾಹ ತಡೆಗಟ್ಟುವುದಕ್ಕೆ ಸತತ ಪ್ರಯತ್ನ ಮಾಡುತ್ತಿರುವ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯೋಜನೆಗಳನ್ನು ಸಮರ್ಪಕವಾಗಿ ಜನರಿಗೆ ತಲುಪಿಸಲು ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಮೇಲ್ವಿಚಾರಕಿಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಫ್ ಜಿ ಚಿನ್ನನವರ, ಬಿಇಒ ಅಜೀತ ಮನ್ನಿಕೇರಿ, ಸಿಡಿಪಿಒ ಯಲ್ಲಪ್ಪ ಗದಾಡಿ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಭಾರತಿ ಕೋಣಿ, ತುಳಸಿ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷೆ ಲಕ್ಷ್ಮಿ ಗೋಟೂರ, ರಾಜ್ಯ ಯುವ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಸಿದ್ದಣ್ಣ ದುರದುಂಡಿ ಹಾಗೂ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮತ್ತು ತುಳಸಿ ಅಭಿವೃದ್ಧಿ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸುಣಧೋಳಿ ಮಹಿಳಾ ಕ್ರೆಡಿಟ್ ಸೌಹಾರ್ದಗೆ ೭೬.೦೭ ಲಕ್ಷ ರೂ ಲಾಭ

ಮೂಡಲಗಿ: ಸುಣಧೋಳಿ ಮಹಿಳಾ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ೨೦೨೩ರ ಮಾರ್ಚ ಅಂತ್ಯಕ್ಕೆ ರೂ.೭೬.೦೭ ಲಕ್ಷ ಲಾಭವನ್ನು ಗಳಿಸಿ ಪ್ರಗತಿಯಲ್ಲಿ  ಸಾಗುತ್ತಿದೆ ಎಂದು ಸಹಕಾರಿಯ ಅಧ್ಯಕ್ಷೆ...
- Advertisement -

More Articles Like This

- Advertisement -
close
error: Content is protected !!