ಶರಣೆ ಶ್ರೀ ಅಕ್ಕಮಹಾದೇವಿಯವರ ಸ್ಮರಣೋತ್ಸವ.
ತಂದೆ : ನಿರ್ಮಲ ಶೆಟ್ಟಿ / ಓಂಕಾರ ಶೆಟ್ಟಿ
ತಾಯಿ : ಸುಮತಿ / ಲಿಂಗಮ್ಮ
ಪತಿ : ಕೌಶಿಕ
ಕಾಯಕ : ಧರ್ಮ ಜಿಜ್ಞಾಸು
ಸ್ಥಳ : ಉಡುತಡಿ, ಶಿಕಾರಿಪುರ ತಾ, ಶಿವಮೊಗ್ಗ.
ಜಯಂತಿ : ದವನದ ಹುಣ್ಣಿಮೆಯಂದು
ಲಭ್ಯ ವಚನಗಳ ಸಂಖ್ಯೆ : ೪೩೪
ಅಂಕಿತ : ಚೆನ್ನಮಲ್ಲಿಕಾರ್ಜುನ
ಅಕ್ಕಮಹಾದೇವಿ ಕನ್ನಡದ ಪ್ರಥಮ ಮಹಿಳಾ ಕವಯತ್ರಿಯಾಗಿದ್ದಾರೆ. ಅಕ್ಕಮಹಾದೇವಿಯವರನ್ನು ಶರಣ ಚಳವಳಿಯ ಪ್ರಮುಖರಾಗಿ, ಸ್ವಾಭಿಮಾನದ ಪ್ರತೀಕವಾಗಿ, ಸ್ತ್ರಿವಾದಿ ಚಳವಳಿಯ ನಿಜವಾದ ಪ್ರತಿಪಾದಕಿಯಾಗಿ, ಅಕ್ಕರೆಯ ಅಕ್ಕನಾಗಿ, ಹೀಗೆ ಹಲವು ರೀತಿ ಗುರುತಿಸಬಹುದಾಗಿದೆ.
ಕನ್ನಡ ಸಾಹಿತ್ಯದ ಮೊದಲ ಬಂಡಾಯ ಕವಯತ್ರಿ ಮತ್ತು ವಚನಗಾರ್ತಿ ಹಾಗೂ ಮಹಿಳೆಯರ ಪ್ರತಿನಿಧಿಯಾಗಿ ಅಭಿವ್ಯಕ್ತಿಯಲ್ಲಿ ಪುರುಷ ಸಮಾಜವನ್ನು ಪ್ರತಿಭಟಿಸಿದವರು. ಸಾಮಾಜಿಕ ಬದಲಾವಣೆಗೆ ಶ್ರಮಿಸಿದವರು. ಚಿಕ್ಕ ವಯಸ್ಸಿನಲ್ಲೆ ಸಕಲ ಸುಖವನ್ನು ತ್ಯಜಿಸಿದ ಅಕ್ಕ, ಎದುರಿಸಿದ ಪರೀಕ್ಷೆಗಳು ಬಹಳಷ್ಟು.
ಸಾಕ್ಷಾತ್ ಶಿವ (ಚೆನ್ನಮಲ್ಲಿಕಾರ್ಜುನ) ನನ್ನು ಪತಿ ಎಂದು ಸ್ವೀಕರಿಸಿ, ಲೌಕಿಕ ಜಗತ್ತನ್ನು ಧಿಕ್ಕರಿಸಿ, ಕೇಶಾಂಬರೆಯಾಗಿ ನಡೆದ ಅಕ್ಕ, ಹಲವಾರು ಭಕ್ತರಿಗೆ ಮಾದರಿಯಾಗಿದ್ದಾರೆ.
ಅಕ್ಕಮಹಾದೇವಿ ಶರಣ ಚಳುವಳಿಯಲ್ಲಿ ಎತ್ತರದ ಚೇತನವಾಗಿ ಮೂಡಿ ಬಂದ ವ್ಯಕ್ತಿತ್ವ. ಅವರ ಇಡೀ ಜೀವನ ಕಥನ, ಐತಿಹ್ಯ, ವಿಸ್ಮಯ, ಪ್ರಭಾವಗಳಿಂದ ತುಂಬಿದ್ದರೂ ಸಹ, ಅವರ ಬಗ್ಗೆ ಅವರ ಸಮಕಾಲೀನ ವಚನಕಾರರೂ, ಅಕ್ಕನ ಕಾಲಕ್ಕೆ ತುಂಬಾ ಹತ್ತಿರದವನಾದ ಹರಿಹರ ಮಹಾಕವಿಯು ರಚಿಸಿರುವ ‘ಮಹಾದೇವಿಯಕ್ಕಗಳ ರಗಳೆ’ ಮತ್ತು ಸ್ವತಃ ಅಕ್ಕಮಹಾದೇವಿ ಯವರೇ ರಚಿಸಿರುವ ವಚನಗಳು ಅವರ ವ್ಯಕ್ತಿತ್ವವನ್ನು ಕಟ್ಟಿ ಕೊಡುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ.
ಈ ಎಲ್ಲವನ್ನೂ ಗಮನಿಸಿದಾಗ ಅಕ್ಕಮಹಾದೇವಿಯವರ ಜೀವನ ಅಸಾಮಾನ್ಯವಾದ, ವೈಶಿಷ್ಟ್ಯತೆಯಿಂದ, ವೈಚಾರಿಕವಾದ, ಅನುಭಾವ ಪೂರ್ಣವಾದ, ನುಡಿ – ನಡೆಗಳೊಂದಾದ ಪರಿಯಲ್ಲಿರುವುದು ಕಂಡುಬರುತ್ತದೆ. ಅನುಭಾವಿಯೂ, ಕವಿಯೂ ಆಗಿದ್ದ ಅಕ್ಕಮಹಾದೇವಿಯವರ ವಚನಗಳು, ಕನ್ನಡ ಸಾಹಿತ್ಯದ ಮೌಲಿಕ ಬರವಣಿಗೆಗಳಾಗಿವೆ. ವಚನಕಾರರಲ್ಲಿಯೇ ಅತ್ಯಂತ ಕಿರಿಯರಾಗಿದ್ದರೂ ಸಹ, ವಿಶಿಷ್ಟ ಜೀವನಾನುಭವವನ್ನು ಹೊಂದಿದ ಕಾರಣದಿಂದ, ಅವರ ಬರಹಗಳು ಗಮನಾರ್ಹವಾಗಿವೆ.
ಶರಣ ಚಳುವಳಿಯಲ್ಲಿ ಭಾಗವಹಿಸಲು ನಿರ್ಣಯಿಸಿ, ಅನುಭವ ಮಂಟಪವನ್ನು ಪ್ರವೇಶ ಮಾಡಿದ್ದು. ಅಕ್ಕನವರ ಅನುಭವ ಮಂಟಪದ ಪ್ರವೇಶದ ಮೊದಲ ದಿನವನ್ನು ಸ್ಮರಿಸದ ಶರಣ ಸಾಹಿತ್ಯಕಾರನಿಲ್ಲ, ಎನ್ನುವಷ್ಟು ಅಪೂರ್ವ ಸ್ವಾಗತ ಅವರಿಗೆ ಶರಣರಿಂದ ದೊರಕಿತು. ಅಲ್ಲಿ ಅಲ್ಲಮಪ್ರಭು ಮತ್ತು ಅಕ್ಕನವರ ನಡುವೆ ನಡೆಯಿತೆನ್ನಲಾದ ಸಂಭಾಷಣೆ, ಅನುಭಾವದ ಉತ್ತುಂಗದ ಋಷಿವಾಣಿಯ ರೂಪದಲ್ಲಿ ವಚನಗಳಲ್ಲಿ ಸಂಗ್ರಹಿತವಾಗಿದೆ.
“ಯೋಗಾಂಗತ್ರಿವಿಧಿ” ಅಕ್ಕಮಹಾದೇವಿ ಯವರ ಪ್ರಮುಖ ಕೃತಿ. ಶ್ರೀ ಶೈಲದ ಚೆನ್ನಮಲ್ಲಿಕಾರ್ಜುನ ಪರಮ ಭಕ್ತಳಾಗಿ, ಅವನನ್ನೇ ಆರಾಧ್ಯದೈವ, ಪತಿಯನ್ನಾಗಿ ಸ್ವೀಕರಿಸಿ, ತನ್ನನ್ನು ಅವನ ಸತಿ ಎಂದು ಭಾವಿಸಿಕೊಂಡು, ಸತಿ – ಪತಿ ಭಾವದಿಂದ, ಶರಣ ಸತಿ – ಲಿಂಗ ಪತಿ ಎಂದು ‘ಚೆನ್ನಮಲ್ಲಿಕಾರ್ಜುನ’ ಎಂಬ ಅಂಕಿತದಲ್ಲಿ ರಚಿಸಿದ ವಚನಗಳು ತುಂಬಾ ಮನೋಜ್ಞವಾಗಿವೆ.
ಇವರದೊಂದು ವಚನ:
ತನು ಕರಗದವರಲ್ಲಿ ಮಜ್ಜನವನೊಲ್ಲೆಯಯ್ಯಾ ನೀನು..
ಮನ ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು..
ಹದುಳಿಗರಲ್ಲದವರಲ್ಲಿ ಗಂಧಾಕ್ಷತೆಯನೊಲ್ಲೆಯಯ್ಯಾ ನೀನು..
ಅರಿವು ಕಣ್ದೆರೆಯದವರಲ್ಲಿ ಆರತಿಯನೊಲ್ಲೆಯಯ್ಯಾ ನೀನು..
ಭಾವಶುದ್ಭವಿಲ್ಲದವರಲ್ಲಿ ಧೂಪವನೊಲ್ಲೆಯಯ್ಯಾ ನೀನು..
ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನೊಲ್ಲೆಯಯ್ಯಾ ನೀನು..
ತ್ರಿಕರಣ ಶುದ್ಧವಿಲ್ಲದವರಲ್ಲಿ
ನೀನು..
ಹೃದಯಕಮಲ ಅರಳದವರಲ್ಲಿ ಇರಲೊಲ್ಲೆಯಯ್ಯಾ ನೀನು..
ಎನ್ನಲ್ಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ ಹೇಳಾ ಚೆನ್ನಮಲ್ಲಿಕಾರ್ಜುನಯ್ಯಾ..?!?
ವಿಜಯಲಕ್ಷ್ಮಿ ಹೊಂಗಲ