spot_img
spot_img

ಮಾರುತಿ…. ಸೇವಕನಾ ಮಾಡೋ ನಿನ್ನಂತೆ ನನ್ನ….

Must Read

- Advertisement -

ಪ್ರತಿ ಊರಾಗೂ ಊರ ಹೊರಗ ಹಣಮಪ್ಪನ ಗುಡಿ ಇರತಾವ ಎಂದು ನಾನು ಸಣ್ಣವಳಿದ್ದಾಗ ನನ್ನಜ್ಜ ಹೇಳಿದ ಮಾತು ನನಗಿನ್ನೂ ನೆನಪಿದೆ. ನನ್ನಜ್ಜ ಹನಮಪ್ಪಗ ವಾರ ಶನಿವಾರ ವಾನರ ಸೈನ್ಯದಂತಿದ್ದ ನಮ್ಮನ್ನ ಕರೆದುಕೊಂಡು ಹೋಗುತ್ತಿದ್ದ ರೀತಿ ಇಂದಿಗೂ ಮನದಲ್ಲಿ ಹಸಿರಾಗಿದೆ.

ಈಗ ಊರುಗಳು ಎಕ್ಷಟೆನ್ಷನ್ ಹೆಸರಿನೊಳಗೆ ಆ ಕಡೆ ಈ ಕಡೆ ಬೆಳೆದು ಊರ ಹೊರಗಿನ ಹನುಮಪ್ಪ ಊರ ನಡುವೆ ಬಂದು ನಮ್ಮೆಲ್ಲರ ನಡುವೆ ನಿಂತಿದ್ದಾನೆ. ನಮಗೆಲ್ಲ ಹನುಮಪ್ಪನ ಮುಖ ಕಂಡು ವಿಚಿತ್ರ ಅನಿಸೋದು ನೋಡೋಕೆ ಬಲವಂತನಂತೆ ವಿಶೇಷ ಶಕ್ತಿಯುಳ್ಳವನಂತೆ ಕಂಡರೂ ಅದೇಕೆ ಹನುಮಂತನ ದವಡೆಗಳು ಉಬ್ಬಿವೆ ? ಕೈಯ್ಯಲ್ಲಿ ಗುಡ್ಡ ಹಿಡಿದು ಏಕೆ ನಿಂತಿದ್ದಾನೆ? ಹಾರುವ ಪೋಸ್‍ನಲ್ಲೇ ಏಕೆ ಇರ್ತಾನೆ? ಉಳಿದ ದೇವರುಗಳಂತೆ ಕುಳಿತ ಭಂಗಿಯಲ್ಲಿ ಕಾಣ ಸಿಗುವುದು ತುಂಬಾ ಕಡಿಮೆ.

ಎಂಬ ಹಲವಾರು ಪ್ರಶ್ನೆಗಳು ತಲೆತುಂಬ ಗಿರಗಿಟ್ಲೆ ಆಡುವಾಗ ಅವುಗಳನ್ನು ಅಜ್ಜನ ಮುಂದಿಡುತ್ತಿದ್ದೆವು. ಪ್ರಶ್ನೆಗಳಿಗೆಲ್ಲ ಉತ್ತರ ನೀಡಲು ನಮ್ಮಜ್ಜ ತನಗೆ ಗೊತ್ತಿರುವ ಪುರಾಣದ ಮತ್ತು ರಾಮಾಯಣದ ಕಥೆಗಳನ್ನು ಕಣ್ಮುಂದೆ ಕಟ್ಟುವಂತೆ ಹೇಳುವ ರೀತಿ ನಮಗೆಲ್ಲ ಹನುಮಪ್ಪನ ಬಗ್ಗೆ ವಿಶೇಷ ಭಕ್ತಿ ಹುಟ್ಟುವ ಹಾಗೆ ಮಾಡುತ್ತಿದ್ದವು. ಅವನ ಲೀಲೆಗಳ ರಹಸ್ಯವನ್ನು ಇನ್ನಷ್ಟು ಮತ್ತಷ್ಟು ತಿಳಿದುಕೊಳ್ಳಲು ಪ್ರೇರೇಪಿಸುತ್ತಿದ್ದವು.

- Advertisement -

ಈ ಕುತೂಹಲ ನಮಗಷ್ಟೇ ಅಲ್ಲ ಸಾಮಾನ್ಯವಾಗಿ ಎಲ್ಲ ಮಕ್ಕಳಿಗೂ ಹನುಮಪ್ಪನ ಕುರಿತು ಕೌತುಕದ ಪ್ರಶ್ನೆಗಳು ಮೂಡುತ್ತವೆ.ಅವರು ಉತ್ತರಕ್ಕಾಗಿ ಹಿರಿಯರ ಮುಖ ನೋಡುತ್ತಾರೆ. ಹೀಗೆ ಮಕ್ಕಳಿಂದ ಹಿಡಿದು ಹಿರಿಯರ ಮನದಲ್ಲಿ ಛಾಪೊತ್ತಲು ಕಾರಣ ಆತನಲ್ಲಿರುವ ವಿಶೇಷ ಗುಣಗಳು. ಉತ್ಕøಷ್ಟ ಗುಣಗಳು ಯಾವಾಗಲೂ ಪೂಜ್ಯನೀಯವಾಗಿರುತ್ತವೆ. ಹೀಗಾಗಿ ಹನುಮಂತ ಈ ಕಲಿಯುಗದಲ್ಲೂ ನಮ್ಮೆಲ್ಲರ ಮನೆ ಮನೆಗಳಲ್ಲಿ ಮನೆ ಮಾಡಿದ್ದಾನೆ ಆರಾಧನೆಗೆ ಅರ್ಹನಾಗಿದ್ದಾನೆ.

ಹನುಮನ ಹಿನ್ನೆಲೆ

ಹಿಂದೂ ಧರ್ಮ ಗ್ರಂಥಗಳಲ್ಲಿ ಪೂಜಿಸುವ ದೈವ ಹನುಮಂತ .ವೈದಿಕ ಸಾಹಿತ್ಯದಲ್ಲೂ ಹನುಮನ ಬಗೆಗೆ ಉಲ್ಲೇಖವಿದೆ. ರಾಮಾಯಣದಲ್ಲಂತೂ ವಾಯುಪುತ್ರನ ಪಾತ್ರ ಹಿರಿದಾದುದು ಚಿರಸ್ಮರಣೀಯವಾದುದು. ಈತನನ್ನು ಆಂಜನೇಯ ಅಂಜನಾತನಯ ಕೇಸರಿ ನಂದನ ವಾನರ ಶ್ರೇಷ್ಠ ಹನುಮಾನ ಮಾರುತಿ ಎಂಬ ವಿವಿಧ ಹೆಸರುಗಳಲ್ಲಿ ಕರೆಯುತ್ತ ನೆನೆಯುತ್ತಾರೆ. ಪುರಾಣಗಳಲ್ಲಿ ಉಲ್ಲೇಖವಾದಂತೆ ಹನುಮ ಕೇಸರಿಯೆಂಬ ವಾನರ ರಾಜನ ಮಡದಿ ಅಂಜನಾ ದೇವಿಯೆಂಬ ಅಪ್ಸರೆಯಲ್ಲಿ ವಾಯುವಿನ ಅಂಶದಿಂದ ಜನ್ಮ ತಾಳಿದನೆಂದು ಹೇಳಲಾಗಿದೆ.

ಹನುಮ ಎಂಬ ಹೆಸರು ಹೇಗೆ ಬಂತು?

ಹನುಮನ ಕಲ್ಪನೆಗಳಲ್ಲಿ ಹಾಸು ಹೊಕ್ಕಾಗಿರುವ ಕತೆಗಳು ವೇದ ವಾಂಙÐಯದಲ್ಲಿ ಹಲವಾರು ಸಿಗುತ್ತವೆ. ಅವುಗಳನ್ನೆಲ್ಲ ಕೇಳಿದಾಗ ಹನುಮನ ಬಗೆಗಿನ ಕೌತುಕತೆ ನೂರ್ಮಡಿಸುತ್ತದೆ.

- Advertisement -

ಪುಟ್ಟ ಬಾಲಕನಾಗಿದ್ದಾಗ ಹನುಮ ಒಮ್ಮೆ ಸೂರ್ಯನನ್ನು ಹಿಡಿದು ಬಾಯಲ್ಲಿ ಅಡಗಿಸಿಕೊಂಡನಂತೆ ಇದರಿಂದ ಕತ್ತಲೆ ಉಂಟಾಯಿತು. ಕೋಪಗೊಂಡ ಇಂದ್ರ ತನ್ನ ವಜ್ರಾಯುಧದ ಪ್ರಹಾರದಿಂದ ಬಾಲಕ ಅಂಜನಾ ತನಯನ ಹನು (ದವಡೆ) ದೊಡ್ಡದಾಯಿತು ಹೀಗಾಗಿ ಹನುಮ ಎಂಬ ಹೆಸರು ಬಂತು. ಎನ್ನುವದೊಂದು ಸ್ವಾರಸ್ಯಕರ ಕತೆ. ಹನುಮ ಎಂದರೆ ಜ್ಞಾನ ಬುದ್ಧಿವಂತಾಂ ವರಿಷ್ಟ ಪೂರ್ಣ ಪ್ರಜ್ಞ ಎಂಬುದು ಆಚಾರ್ಯ ಮಧ್ವರ ಒಕ್ಕಣಿಕೆ.

ವಿವಿಧೆಡೆ ಆಚರಣೆ

ಏಕ ಪತ್ನಿ ವೃತಸ್ಥ ಶ್ರೀರಾಮನ ಪರಮ ಭಕ್ತನೆಂದೇ ಖ್ಯಾತಿಯನ್ನು ಸಂಪಾದಿಸಿದ ಹನುಮ ಅವತರಿಸಿದ ದಿನವನ್ನು ಹನುಮ ಜಯಂತಿ ಎಂದು ಆಚರಿಸಲಾಗುತ್ತದೆ. ಚೈತ್ರ ಮಾಸದಲ್ಲಿ ಶುಕ್ಲ ಪಕ್ಷದ ಹದಿನೈದನೆಯ ದಿನ ಅಂದರೆ ಚೈತ್ರ ಪೂರ್ಣಿಮೆಯೆಂದು ಹನುಮ ಜಯಂತಿಯನ್ನು ಭಾರತದಲ್ಲಿ ವಿಶಿಷ್ಟ ಶ್ರದ್ಧಾ ಭಕ್ತಿಯೊಂದಿಗೆ ಆಚರಿಸುತ್ತಾರೆ. ಆ ದಿನ ಭಕ್ತಾದಿಗಳೆಲ್ಲ ಚುಮು ಚುಮು ಬೆಳಗು ಹರಿಯುವ ಮುನ್ನವೇ ಹನುಮಂತನ ಗುಡಿಯೊಳಗೆ ಭಕ್ತಿಭಾವದ ಪರಾಕಾಷ್ಟೆಯಿಂದ ಹೂ ಹಣ್ಣು ಕಾಯಿ ಎಣ್ಣೆ ಬತ್ತಿ ಹಿಡಿದು ನಿಂತಿರುತ್ತಾರೆ.

ದುಷ್ಟ ಶಕ್ತಿಯನ್ನು ಸಂಹರಿಸುವ ರೂಪದಲ್ಲಿರುವ ಹನುಮನ ಮೂರ್ತಿಯಿಂದ ತಿಲಕವನ್ನು ತಮಗೂ ಆ ಧೀರತನ ದಿಟ್ಟತನ ಬರಲಿ ಎಂದು ಕೇಳುತ್ತ ತಮ್ಮ ಹಣೆಗೆ ಹಚ್ಚಿಕೊಳ್ಳುತ್ತಾರೆ. ಬುತ್ತಿ ಪೂಜೆ ಬೆಣ್ಣೆ ಪೂಜೆ ಎಲೆ ಪೂಜೆ ಚಂದಿರ ಪೂಜೆ ಹೀಗೆ ವಿವಿಧ ಹೆರಿನಲ್ಲಿ ನಡೆವ ಪೂಜೆಯಲ್ಲಿ ಭಜನೆಯಲ್ಲಿ ಭಾಗಿಯಾಗುತ್ತಾರೆ. ಭಜನೆಗಳಲ್ಲಂತೂ ಭಕ್ಗ ಗಣದ ಭಕ್ತಿ ಹೃನ್ಮನವನ್ನು ಧನ್ಯವಾಗಿಸುವ ರೀತಿಯಲ್ಲಿರುತ್ತದೆ.

ಅನ್ನ ದಾಸೋಹದಲ್ಲಿ ಬಡವ ಬಲ್ಲಿದನೆಂಬ ಭಾವ ತೊರೆದು ಪ್ರಸಾದ ಸ್ವೀಕರಿಸಿ ಪುನೀತ ಭಾವ ಹೊಂದುತ್ತಾರೆ. ತಮಿಳು ನಾಡಿನಲ್ಲಿ ಮಾರ್ಗಶಿರ ಮಾಸದ ಮೂಲಾ ನಕ್ಷತ್ರದಲ್ಲಿ ಆಚರಿಸಿದರೆ ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಚೈತ್ರ ಪೂರ್ಣಿಮೆಯಂದು ಪ್ರಾರಂಭವಾಗಿ ಕೃಷ್ಣ ಪಕ್ಷದ 10ನೇ ದಿನ ವೈಶಾಖ ಮಾಸದಲ್ಲಿ ಮುಗಿಯುತ್ತದೆ. ಒಟ್ಟು 41 ದಿನಗಳವರೆಗೆ ಆಚರಿಸುವರು.

ಮಹಾರಾಷ್ಟ್ರದಲ್ಲಿ ಹಿಂದೂ ಚಾಂದ್ರಮಾನದ 14 ನೇ ದಿನ ಅಶ್ವಿನಿ ಮಾಸದಲ್ಲಿ ಚರ್ತುದಶಿ ದಿನದಂದು ಆಚರಿಸಲಾಗುವುದು. ಹೀಗೆ ಮೂರು ಲೋಕದಲ್ಲೂ (ಸ್ವರ್ಗ ನರಕ ಭೂಲೋಕ ) ಶಕ್ತಿವಂತನಾದ ಕೇವಲ ಒಂದೂವರೆ ವರ್ಷದವನಿದ್ದಾಗ ಮುಕ್ಕೋಟಿ ದೇವರಿಂದ ಆಶೀರ್ವಾದ ಪಡೆದ ವಾನರ ದೇವನಾದ ಹನುಮನ ಜಯಂತಿಯನ್ನು ಭಾರತದಾದ್ಯಂತ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ.

ನಿನ್ನಂತೆ ನಾನಾಗಲಾರೆ ಏನು ಮಾಡಲಿ ಹನುಮ

ತ್ರೇತಾಯುಗದಲ್ಲಿ ರಾಮ ಭಕ್ತನಾಗಿ ಅವತರಿಸಿದ ಹನುಮ ದ್ವಾಪಾರಯುಗದಲ್ಲೂ ಕಾಣ ಸಿಗುತ್ತಾನೆ ಕಲಿಯುಗದಲ್ಲೂ ನಮ್ಮ ನಡುವೆ ಪೂಜಿತನಾಗಿದ್ದಾನೆ. ಆತನ ದಿವ್ಯ ದರುಶನಕೆ ನಾವೆಲ್ಲ ಕಾಯುವುದು ಮನದಲ್ಲಿ ಸ್ಥಿರವಾಗಿ ನೆನೆಯುವುದು ಜನ್ಮ ಸಾರ್ಥಕ ಮಾಡು ಎಂದು ಬೇಡಿಕೊಳ್ಳುವುದು ಆ ಮಾರುತಿ ಒಲಿದರೆ ಫಲಿಸದ ಕೆಲಸವು ಯಾವುದು? ರಾಮನ ದುಃಖವನ್ನೇ ದೂರ ಮಾಡಿದ ಆತನಿಗೆ ನಮ್ಮ ದುಃಖಗಳು ಯಾವ ಲೆಕ್ಕ ನಮ್ಮ ಕಷ್ಟಗಳನು ಕ್ಷಣಾರ್ಧದಲ್ಲಿ ಮೋಡದಂತೆ ಕರಗಿಸುವ ಶಕ್ತಿ ಅವನಿಗಿದೆ ಎಂಬ ನಂಬಿಕೆ ಭಕ್ತಾದಿಗಳಿಗೆ.

ಸಾಗರವನ್ನು ದಾಟಿದವನು ನಮ್ಮ ಸಂಸಾರ ಸಾಗರವನ್ನು ಸಸಾರವಾಗಿ ದಾಟಿಸಲು ನೆರವಾಗುವನು. ಭಕ್ತರು ಕರೆದಲ್ಲಿಗೆ ನೆರಳಿನಂತೆ ಹಿಂಬಾಲಿಸುವನು ಕರುಣಾ ಕಂಗಳಿಂದ ನಮಗೆ ಶಾಂತಿ ನೀಡುವನು. ಹೊಗಳಿಕೆ ಬಯಸದೇ ಬರೀ ಸೇವೆ ಮಾಡುವ ರಾಮ ಧೂತನಿಗೆ ಅನೇಕ ವಿಧವಾದ ಶಕ್ತಿ ಇರುವುದನ್ನು ರಾಮಾಯಣದಲ್ಲಿ ತಿಳಿದುಕೊಳ್ಳುತ್ತೇವೆ.

ಪುರಾಣ ಶಾಸ್ತ್ರಗಳಲ್ಲಿ ಪುಣ್ಯ ಕಥಾನಕಗಳಲ್ಲೂ ಹನುಮನ ಸ್ಮರಣೆಯಿಂದಾಗುವ ಲಾಭಗಳ ಬಗೆಗೆ ಉಲ್ಲೇಖ ದೊರಕುವವು. ಕಾಮ ಕ್ರೋಧಗಳನ್ನು ದಹಿಸುವ ಶಕ್ತಿಯೂ ಆಕಾಶ ಭೂಮಿಗಳನು ಒಂದು ಮಾಡಿ ನಿಲ್ಲುವ ಶಕ್ತಿ ನಿನ್ನಲ್ಲಿದೆ (ಹನುಮನಲ್ಲಿದೆ)ನಿನ್ನಂತೆ ನಾನಾಗಲಾರೆ ಏನು ಮಾಡಲಿ ಹನುಮ ಎಂದು ಭಕ್ತರೆಲ್ಲ ಪರಿ ಪರಿಯಾಗಿ ಪರವಶರಾಗಿ ಆ ಭವ್ಯ ರೂಪದಲ್ಲಿ ಬೇಡಿಕೊಳ್ಳುವರು.

ಸೇವಕನಾ ಮಾಡೋ ನಿನ್ನಂತೆ ನನ್ನ

ಇಷ್ಟೆಲ್ಲಾ ಶಕ್ತಿ ಸಾಹಸವುಳ್ಳ ಹನುಮನಿಗೆ ನಾನು ನನ್ನದು ಎಂಬ ಅಹಂಕಾರ ಇರಲೇ ಇಲ್ಲ. ನೀನೇ ಎನ್ನುತ ರಾಮಚಂದ್ನ ಸೇವೆಗೆ ಸದಾ ಸಿದ್ಧನಾಗಿದ್ದ ಕಂಕಣ ಬದ್ಧನಾಗಿದ್ದ ರಾಮನಿಗಾಗಿ ಕಡಲು ಹಾರಿದ ಸೀತೆಗಾಗಿ ಸೇತುವೆ ಕಟ್ಟಿದ ಲಕ್ಷ್ಮಣನಿಗಾಗಿ ಬೆಟ್ಟ ಹತ್ತಿದ ಹೀಗೆ ಸೇವೆಯು ನೀಡುವ ಮಹzನಂದವನು ಜಗಕೆ ಸಾರಿದ. ಸೇವೆಯು ಕೊಡುವ ಫಲದ ಕಲ್ಪನೆಯನು ಜಗಕೆಲ್ಲ ತೋರಿದ ಸೇವೆಯ ಬಲದಿಂದ ಕಿಂಕರನಾದವನು ದೇವರಾಗಲು ಸಾಧ್ಯ ಎಂಬ ದಿವ್ಯ ಸಂದೇಶ ನೀಡಿದವನು.

ವಿನಯವಂತಿಕೆ ಮರೆತು ಸೇವೆಯ ಮಹತ್ವವನು ಮರೆತು ಅಜ್ಞಾನದಲ್ಲಿ ದೂರ್ತತನದಲ್ಲಿ ಮೆರೆಯುತ್ತಿರುವ ಈ ಕಾಲ ಘಟ್ಟದಲ್ಲಿ ಹನುಮ ತುಂಬಾ ಪ್ರಸ್ತುತನಾಗುತ್ತಾನೆ. ‘ ಮಾರುತಿ…. ಸೇವಕನಾ ಮಾಡೋ ನಿನ್ನಂತೆ ನನ್ನ…. ‘ ಎಂದು ಬೇಡಿಕೊಂಡು ಸೇವೆಯನ್ನು ಉಸಿರಾಗಿಸಿಕೊಂಡು ಸೇವೆಯಲ್ಲಿ ತೊಡಗಿದರೆ ಈ ಹನುಮ ಜಯಂತಿಗೆ ನಿಜವಾದ ಅರ್ಥ ದಕ್ಕುವುದಲ್ಲದೇ ನಮ್ಮ ಜನ್ಮವೂ ಪಾವನವಾಗುವುದು ಖಚಿತ.


ಜಯಶ್ರೀ.ಜೆ.ಅಬ್ಬಿಗೇರಿ
ಉಪನ್ಯಾಸಕರು ಬೆಳಗಾವಿ
9449234142

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ರೇವಣಸಿದ್ದಯ್ಯನವರ ಪುಣ್ಯಸ್ತ್ರೀ ರೇಕಮ್ಮ ಹನ್ನೆರಡನೇ ಶತಮಾನ ಎಂಬುದು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವ ಬಹುಮುಖ್ಯ ಕಾಲಘಟ್ಟ. ಶರಣರು ರಚಿಸಿದ ವಚನಗಳನ್ನು ಕನ್ನಡ ಸಾಹಿತ್ಯದ ಉಪನಿಷತ್ತುಗಳು ಎಂದು...
- Advertisement -

More Articles Like This

- Advertisement -
close
error: Content is protected !!
Join WhatsApp Group