ದಿನಾಂಕ 05.09.2025 ರಂದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕಲ್ಲಹಳ್ಳಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವಾರ್ಷಿಕ ಸಾಮಾನ್ಯ ಸಭೆ ನಡೆಯುತ್ತಿದ್ದು, ಸದರಿ ಸಭೆಯ ಮಾಹಿತಿಯನ್ನು ಸುತ್ತೋಲೆಯು ಈವರೆಗೆ ಕಸಾಪದ ಸರ್ವ ಸದಸ್ಯರಿಗೆ ಸೂಕ್ತ ರೀತಿಯಲ್ಲಿ ತಲುಪಿಸಿಲ್ಲ. ಇದು ಕಸಾಪದ ವಾರ್ಷಿಕ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದನ್ನು ತಡೆಗಟ್ಟುವ ಹುನ್ನಾರವಾಗಿದೆ ಎಂದು ನೇ ಭ ರಾಮಲಿಂಗಶೆಟ್ಟಿ ಹಾಗೂ ಡಾ. ಪದ್ಮಿನಿ ನಾಗರಾಜು ಆರೋಪಿಸಿದ್ದಾರೆ.
ಜಂಟಿ ಪ್ರಕಟಣೆ ನೀಡಿರುವ ಅವರು, ಇತ್ತೀಚೆಗೆ ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿಗಳ ಹಿನ್ನೆಲೆಯಲ್ಲಿ ಆ ಸಭೆಯಲ್ಲಿ ಸದಸ್ಯರು ಏರು ಧ್ವನಿಯಲ್ಲಿ ಮಾತನಾಡುವಂತಿಲ್ಲ, ಮೊಬೈಲ್‌ಗಳಲ್ಲಿ ಫೋಟೋ ತೆಗೆಯುವಂತಿಲ್ಲ, ವಿಡಿಯೋ ಮಾಡುವಂತಿಲ್ಲ ಎಂದು ರಾಜ್ಯಾಧ್ಯಕ್ಷರು ಫರ್ಮಾನು ಹೊರಡಿಸಿರುವುದು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ ಎಂದಿದ್ದಾರೆ.
ವರ್ಷಕ್ಕೊಮ್ಮೆ ಸಭೆ ನಡೆಯುವುದೇ ಕಸಾಪ ಸದಸ್ಯರು ಲೆಕ್ಕಪತ್ರಗಳು, ಮತ್ತು ಆಡಳಿತ ವೈಖರಿಯ ಬಗ್ಗೆ ಚರ್ಚೆಯಲ್ಲಿ ಪಾಲ್ಗೊಳ್ಳಲು. ಇದು ಸಹಕಾರಿ ಕಾಯ್ದೆ ಮತ್ತು ನಿಯಮಗಳ ಪ್ರಕಾರ ಸದಸ್ಯರಿಗೆ ಇರುವ ಪರಮೋಚ್ಚ ಹಕ್ಕು. ಹೀಗಿರುವಾಗ ತಮ್ಮ ವಿರುದ್ಧ ಮಾತನಾಡಿದವರನ್ನು ಹೊರಗೆ ದಬ್ಬುವ, ಅದೂ ಕುತ್ತಿಗೆ ಹಿಡಿದು ದಬ್ಬುವ, ಧಾರ್ಷ್ಟ್ಯವನ್ನು ಕಸಾಪ ರಾಜ್ಯಾಧ್ಯಕ್ಷರಾದ ಮಹೇಶ ಜೋಶಿಯ ಪಕ್ಕದಲ್ಲಿ ಕುಳಿತ ಬಾಗಲಕೋಟೆಯ ಕಸಾಪ ಜಿಲ್ಲಾಧ್ಯಕ್ಷರಾದ ಶಿವಾನಂದ ಶೆಲ್ಲಿಕೆರೆ ಅವರು ಸಂವಿಧಾನಬಾಹಿರವಾಗಿ, ಆಕ್ರೋಶಭರಿತರಾಗಿ ಮಾತನಾಡಿದ್ದಾರೆ. ಆದ್ದರಿಂದ ಇವರ ನಡೆಯನ್ನು ನಮ್ಮನ್ನೂ ಒಳಗೊಂಡಂತೆ ಕಸಾಪ ಸದಸ್ಯರೆಲ್ಲರೂ ಈ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಶ್ನಿಸಲೇಬೇಕು ಎಂದಿರುವ ಅವರು, ಆ ಮೂಲಕ ಕನ್ನಡ ಸಾಹಿತ್ಯ ಪರಿಷತ್ತು ಅಪ್ಪಟ ಸಾಹಿತ್ಯದ ವೇದಿಕೆಯಾಗಿ ಉಳಿಸಿಕೊಳ್ಳಬೇಕಿದೆ ಎಂದಿದ್ದಾರೆ.
ಈ ಹಿಂದೆ ನಾವಿಬ್ಬರು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾಗಿ ಇದ್ದಷ್ಟು ದಿನವೂ, ರಾಜ್ಯಾಧ್ಯಕ್ಷರು ಏಕಪಕ್ಷೀಯವಾಗಿ ತಾವೇ ಮಾತನಾಡಿ, ಕಾರ್ಯಕಾರಿ ಸಮಿತಿಯ ಚುನಾಯಿತ ಜಿಲ್ಲಾಧ್ಯಕ್ಷರಿಗೆ ಹಾಗೂ ಇತರ ಯಾರಿಗೂ ಮಾತನಾಡದಂತೆ ಕಾರ್ಯಕಾರಿ ಸಭೆ ನಡೆಸುತ್ತಿದ್ದ ಇವರ ನಡವಳಿಕೆಗೆ ನಾವು ಪ್ರತ್ಯಕ್ಷ ಸಾಕ್ಷಿಯಾಗಿ, ರಾಜೀನಾಮೆ ನೀಡಿ ಹೊರಬಂದೆವು. ಮಂಡ್ಯದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದ ನಾಡೋಜ ಗೊರುಚ ಅವರು ಒಂದು ಸಭೆಯಲ್ಲಿ ʻಸಭೆ ನಡೆಸುವುದು ಹೀಗಲ್ಲ, ರಾಜ್ಯಾಧ್ಯಕ್ಷರು ಆವೇಶಕ್ಕೆ ಒಳಗಾಗಬಾರದು ಮತ್ತು ಇತರರು ಕೂಡ ಸಹನೆಯಿಂದ ವರ್ತಿಸಬೇಕುʼ ಎಂದು ಮುಖಕ್ಕೆ ರಾಚಿದ ಹಾಗೆ ಹೇಳಿ, ಬೇಸರಗೊಂಡು ಹೊರ ಹೋಗಿದ್ದರು. ಸಭೆಗಳಲ್ಲಿ ರಾಜ್ಯಾಧ್ಯಕ್ಷರ ನಡೆಯನ್ನು ಪ್ರಶ್ನಿಸುತ್ತಿದ್ದ ಕೆಲವು ಜಿಲ್ಲಾಧ್ಯಕ್ಷರಿಗೆ ಇನ್ನಿಲ್ಲದ ಕಿರುಕುಳಗಳನ್ನು ನೀಡುತ್ತಿದ್ದಕ್ಕೆ ನಾವು ಸಾಕ್ಷಿಯಾಗಿದ್ದೆವು. ಕಾರ್ಯಕಾರಿ ಸಭೆಯಾಗಲಿ, ಪತ್ರಿಕಾಗೋಷ್ಠಿಯಾಗಲಿ ಹಾಗೂ ಕಾರ್ಯಕ್ರಮಗಳಲ್ಲಿ ಎಲ್ಲ ಕಡೆಯೂ ತಮ್ಮದೆ ಮಾತುಗಳನ್ನು ಇತರರು ಕೇಳಿಸಿಕೊಳ್ಳಬೇಕು ಮತ್ತು ತಮ್ಮ ಮಾತುಗಳೇ ದಾಖಲಾಗಬೇಕು ಎನ್ನುವ ರಾಜ್ಯಾಧ್ಯಕ್ಷರ ನಡೆಯನ್ನು ಅನೇಕ ಬಾರಿ ನಾವುಗಳು ಪ್ರಶ್ನಿಸಿ ವಿರೋಧಿಸಿದ್ದೆವು.
ಕನ್ನಡ ಸಾಹಿತ್ಯದ ಹಾಗೂ ಕನ್ನಡ ಚಳವಳಿಗಳ ಇತಿಹಾಸ ಅರಿಯದೆ, ಹೋರಾಟಗಾರರಾದ ಜಾಣಗೆರೆ ವೆಂಕಟರಾಮಯ್ಯ ಮತ್ತು ಹಿರಿಯ ಲೇಖಕಿ, ವೈದ್ಯೆಯಾದ ಡಾ.ವಸುಂಧರಾ ಭೂಪತಿಯವರಿಗೆ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಉಪಸ್ಥಿತಿಯಲ್ಲಿಯೇ ಅಸಾಂವಿಧಾನಿಕ ಮಾತುಗಳನ್ನು ಜಿಲ್ಲಾಧ್ಯಕ್ಷರ ಮೂಲಕ ಹೇಳಿಸಿರುವ ರಾಜ್ಯಾಧ್ಯಕ್ಷರ ಸರ್ವಾಧಿಕಾರಿ ನಡೆಯನ್ನು ನಾವಿಬ್ಬರು ತೀವ್ರವಾಗಿ ಖಂಡಿಸುತ್ತೇವೆ ಎಂದು ಅವರು ತಿಳಿಸಿದ್ದು ಈ ಸಭೆಯಲ್ಲಿ ಎಲ್ಲರೂ ಪಾಲ್ಗೊಳ್ಳಬೇಕೆಂದು ಕಸಾಪ ನಿಕಟಪೂರ್ವ ಗೌರವ ಕಾರ್ಯದರ್ಶಿಗಳಾದ ನೇ.ಭ.ರಾಮಲಿಂಗಶೆಟ್ಟಿ (9880623449) ಹಾಗೂ ಡಾ.ಪದ್ಮಿನಿ ನಾಗರಾಜು (9844187500) ಕರೆ ನೀಡಿದ್ದಾರೆ.