ಅಮ್ಮ ಎಂದರೆ ಏನೋ ಹರುಷವು
ಅಮ್ಮ ಎಂದರೆ ಏನೋ ಹರುಷವು/ನಮ್ಮಾ ಪಾಲಿಗೆ ಅವಳೇ ದೈವವು
ಅಮ್ಮಾ ಎನ್ನಲೂ ಎಲ್ಲಾ ಮರೆತೆವು/ಎಂದೂ ಕಾಣದಾ ಸುಖವಾ ಕಂಡೆವು
ತಾಯಿ (Mother) ಪದವನ್ನು ಯಾವುದೇ ರೀತಿಯಲ್ಲಿ ವ್ಯಾಖ್ಯಾನಿಸಲು ಸಾಧ್ಯವಿಲ್ಲ.
ಅಮ್ಮ ಆಕೆ ಜಗದಗಲ.. ಮುಗಿಲಗಲ..
ಪುಟ್ಟ ಮಗುವೊಂದು ದೇವರಿಗೆ ಕೇಳಿತಂತೆ ಯಾಕೆ ದೇವರೆ ನೀನು ನನಗೆ ಭೂಲೋಕಕ್ಕೆ ಕಳಿಸುತಿದ್ದಯಾ. ? ಅಲ್ಲಿ ನನಗೆ ಯಾರು ನೋಡಿಕೊಳ್ಳುತ್ತಾರೆ? ಮಗು ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಲು ಆರಂಭಿಸಿತು.
ಆಗ ದೇವರು ಹೇಳಿದ “ನೋಡು ಮಗು ನಿನಗಾಗಿ ಒಂದು ಮಮತೆಯ ಮಡಿಲು ಇದೆ ಅದರಲ್ಲಿ ನಿನ್ನನ್ನು ಕಳುಹಿಸುವೆ, ಅಲ್ಲಿ ನಿನಗೆ ಏನೇ ಅಗತ್ಯವಿದ್ದರೂ ಅಮ್ಮ ಅಂತ ಕರೆದರೆ ಸಾಕು, ನಿನ್ನ ಎಲ್ಲಾ ಬೇಡಿಕೆಗಳು ಈಡೇರುತ್ತವೆ”..
ಹಾ “ಅಮ್ಮ ಅಂದರೆ ಯಾರು ದೇವಾ?”
“ಅವಳು ಒಬ್ಬ ಅದ್ಭುತ ಜೀವಿ, ಮಮತೆಯ ಸಾಗರ, ಕರುಣಾಮಯಿ, ಸೌಂದರ್ಯದ ಖನಿ,ಸಂಬಂಧಗಳನ್ನು ಬೆಸೆದು ಕುಟುಂಬ ಎಂಬ ಸುಂದರ ತೋಟವನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿರುವ ಮಾಲಕಿನ್” ..ಎಂದಾಗ ಪುಟ್ಟ ತನ್ನ ಕಲ್ಪನೆಯ ಅಮ್ಮನ ಕನಸು ಕಾಣತೊಡಗಿತು.
ಹೆಣ್ಣಿನ ಜೀವನ ಸಂಪೂರ್ಣವಾಗುವುದು ಮಗುವಿಗೆ ಜನ್ಮ ನೀಡಿ ತಾಯಿ ಆದಾಗ . ತಾಯ್ತನದ ಖುಷಿ ಅಷ್ಟಿಷ್ಟಲ್ಲ..ಮಗುವಿಗೆ ಜನ್ಮ ನೀಡಿದ ತಾಯಿ ತನ್ನೆಲ್ಲ ಆಸೆಗಳನ್ನು,ಭಾವನೆಗಳನ್ನು ಬದಿಗೊತ್ತಿ ಪುಟ್ಟ ಮಗುವಿನ ಲಾಲನೆ ಪಾಲನೆ ಮಾಡುವಳು.
ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮದಲ ಗುರು ಎಂಬಂತೆ ಹುಟ್ಟಿದಾಗಿನಿಂದ ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಡುತ್ತಾ, ಮುಂದೆ ಆ ಮಗು ತನ್ನ ಜೀವನದಲ್ಲಿ ಸದೃಢವಾಗಿ ನಿಲ್ಲುವವರೆಗೂ ತನ್ನೆಲ್ಲ ಪ್ರೀತಿ ಪ್ರೇಮ ಮಕ್ಕಳಿಗೆ ಧಾರೆ ಎರೆಯುವವಳು ಅಮ್ಮ,
ನನಗೆ ನನ್ನ ತಾಯಿಯೇ ಸರ್ವಸ್ವ. ಆದ್ದರಿಂದಲೇ ನಾನು ಈ ಸುಂದರ ಜಗತ್ತನ್ನು ನೋಡಿದೆ. ಅವರ ಪ್ರೀತಿ ಮತ್ತು ದಯೆ ನನ್ನನ್ನು ಮುಂದಕ್ಕೆ ತಳ್ಳಿತು ಮತ್ತು ನಾನು ಉತ್ತಮ ವ್ಯಕ್ತಿಯಾಗಲು ಸಹಾಯ ಮಾಡಿತು ಅಮ್ಮನ ಆಚಾರ – ವಿಚಾರ ನಡೆ – ನುಡಿ ಮಕ್ಕಳಲ್ಲಿ ಕಾಣುತ್ತೇವೆ.
ತನ್ನ ಕೊನೆಯ ಉಸಿರು ಇರುವವರೆಗೂ ನಿಮ್ಮೊಂದಿಗೆ ಇರುವ ಏಕೈಕ ವ್ಯಕ್ತಿ ತಾಯಿ. ತಾಯಂದಿರು ಮಕ್ಕಳನ್ನು ಜಗತ್ತಿಗೆ ತರುವುದು ಮಾತ್ರವಲ್ಲದೆ ಸವಾಲುಗಳ ನಡುವೆಯೂ ನಿಸ್ವಾರ್ಥ ಪ್ರೀತಿ ಮತ್ತು ಸಕಾರಾತ್ಮಕ ಮನೋಭಾವದಿಂದ ಬೆಳೆಸುತ್ತಾರೆ.
ಯುವತಿಯೊಬ್ಬಳು ಅಸಂಖ್ಯಾತ ಸ್ಪರ್ಧೆಗಳಲ್ಲಿ ಗೆದ್ದಾಗ ಅವಳಿಗೊಂದು ಪ್ರಶ್ನೆ ಕೇಳ್ತಾರೆ.
ಸ್ಪರ್ಧೆಯಲ್ಲಿ ಅವಳಿಗೆ ಕೇಳಿದ ಪ್ರಶ್ನೆ ಏನು ಗೊತ್ತೆ?
“ನಿನ್ನ ಅಪಾರ ಸೌಂದರ್ಯ ಹಾಗೂ ಬುದ್ಧಿವಂತಿಕೆಯ ಗುಟ್ಟು ಏನು?” ಅಂತ ಆಗವಳು ಮುಗುಳ್ನಗುತ್ತಾ ಕೊಟ್ಟ ಉತ್ತರ ನನ್ನ “ಅಮ್ಮ” ಅವಳು ದಿನಾಲೂ ಮನೆಯಲ್ಲಿ ನನಗೆ ಕಲಿಸಿದ ನೈತಿಕ ಮೌಲ್ಯಗಳು ಹಾಗೂ ಶಾಲಾ ಶಿಕ್ಷಣ”.. ಸಭಿಕರೆಲ್ಲ ನಿಬ್ಬೆರಗಾದರು.
ಯಾಕೆ ಗೊತ್ತಾ.? ಇಲ್ಲಿ ಯಾವುದೇ ಸೌಂದರ್ಯವರ್ಧಕ, ಬ್ಯೂಟಿ ಪಾರ್ಲರ್ ಅಥವಾ ಯಾವುದೇ ಕೋಚಿಂಗ್ ಸೆಂಟರ ಹೆಸರು ಹೇಳಬಹುದೆಂದು ಕಾಯುವ ಜನರಿಗೆ ಸಿಕ್ಕ ಉತ್ತರ ‘ಅಮ್ಮ ‘.
ತಾಯಿಯು ಜಗತ್ತಿನಲ್ಲಿ ದೇವರ ಮತ್ತೊಂದು ರೂಪ, ನಮ್ಮ ದುಃಖಗಳನ್ನು ನಿರ್ವಹಿಸುವ ಮೂಲಕ ನಮ್ಮನ್ನು ಪ್ರೀತಿಸುತ್ತಾಳೆ. ದೇವರು ಎಲ್ಲೆಡೆ ವಾಸಿಸಲು ಸಾಧ್ಯವಿಲ್ಲ, ಆದ್ದರಿಂದ ದೇವರು ತಾಯಿಯನ್ನು ಸೃಷ್ಟಿಸಿದನು, ಎಂದು ಹೇಳಲಾಗುತ್ತದೆ.
ನಾನು ಬಾಣಂತಿ ಆದಾಗ ನನ್ನ ಅಮ್ಮ ತನ್ನ ತಾಯಿ ಅಂದರೆ ನಮ್ಮ ಅಜ್ಜಿ ತೀರಿಕೊಂಡ ಸುದ್ದಿ ಕೇಳಿ ಧೈರ್ಯ ಕಳೆದುಕೊಂಡು ಅಳಲಾರಂಭಿಸಿದರು. ಅಮ್ಮನ ಸ್ಥಿತಿ ನೋಡಿ ನಾನು ಕಕ್ಕಾ ಬಿಕ್ಕಿಯಾಗಿ ಅವಳನ್ನು ನೋಡುತಿದ್ದೆ.
ತನ್ನ ದುಃಖವೆಲ್ಲ ಬಿಟ್ಟು, ನನ್ನ ಕಡೆಗೆ ಬಂದ ಅಮ್ಮ ರಾಜೇಶ್ವರಿ. “ನೀನು ಚಿಕ್ಕವಳು ನೀನೊಂದು ಮಗುವಿಗೆ ಜನ್ಮ ನೀಡಿದ್ದು ಮೊದಲು ನಿನ್ನ ಈ ದಿನದ ಆರೈಕೆ ಮಾಡುವೆ ನೀನು ದು:ಖಿಸಬೇಡ ಅಂತ ಹೇಳಿ ತನ್ನ ಕರ್ತವ್ಯ ನಿಭಾಯಿಸಿ ಅಜ್ಜಿಯ ಅಂತ್ಯ ಸಂಸ್ಕಾರಕ್ಕೆ ಹೋದದ್ಧು ನನ್ನ ಜೀವನದಲ್ಲಿ ಎಂದೂ ನಾನು ಮರೆಯುವಂತಿಲ್ಲ.
ನನ್ನ ತಂದೆ ತೀರಿಕೊಂಡಾಗ ಪ್ರೀತಿಯ ಯಜಮಾನ ಜೀವನ ಸಂಗಾತಿಯಾದ ನನ್ನ ತಂದೆ ಶ್ರಿ ಪುಟ್ಟರಾಜ ಶಂಭುಶಂಕರ ಇವರ ಸಾವು ಕೆಲವೇ ಕ್ಷಣದಲ್ಲಿ ಆಗುವ ಸೂಚನೆ ದೊರೆತಾಗ ಅಮ್ಮ ಓಡೋಡಿ ಬಂದು ಮಕ್ಕಳಿಗೆ ಧೈರ್ಯ ತುಂಬಲು ಪ್ರಾರಂಭಿಸಿದಳಂತೆ. ಆಗ ನಾವು ಪುಟ್ಟ ಮಕ್ಕಳು. ಅಪ್ಪನ ಸಾವು ಆಗಿಯೇ ಹೋಯ್ತು.
ಯಾವಾಗಲೂ ಅಪ್ಪನ ಜೊತೆ ಪ್ರೀತಿಯಿಂದ ಇದ್ದು, ಅಪ್ಪನ ಅನಾರೋಗ್ಯದ ಪರಿಸ್ಥಿತಿಯಲ್ಲಿ 32 ವರ್ಷಗಳ ಕಾಲ ಅವರನ್ನು ಮಗುವಿನಂತೆ ನೋಡಿಕೊಂಡು ಯಜಮನ ಇಲ್ಲದ ದುಃಖದ ಛಾಯೆ ಇದ್ದರೂ ಮಕ್ಕಳಿಗೆ ಸಾಂತ್ವನ ಹೇಳುತ್ತಿದ್ದಳು ನನ್ನ ತಾಯಿ, ಅಪ್ಪನಿಗೆ ಆರೋಗ್ಯದ ಸಮಸ್ಯೆ, ತುಂಬಾ ನೋವಿತ್ತು ಹೀಗಾಗಿ ಅವರ ನಿಧನವಾಯಿತು:ಮಕ್ಕಳನ್ನು ನೋಡಿ ದು:ಖಿಸಬೇಡಿ ಏನುತ್ತಲೆ ಬಿಕ್ಕಿ ಬಿಕ್ಕಿ ಅಳುತ್ತ ಎಲ್ಲ ವಿಧಾನಗಳನ್ನು ಮಾಡಿದಳು.ನಾನು ಮನೆಗೆ ಹಿರಿಯ ಮಗಳಾಗಿದ್ದರಿಂದ ನನಗಿನ್ನೂ ಆ ಸಂದರ್ಭದಲ್ಲಿ ಜರುಗಿದ ಸಂಗತಿಗಳು ಕಣ್ಮುಂದೆ ಅಚ್ಚಳಿಯದೆ ನಿಂತಿವೆ.
ದೇವರ ಇನ್ನೊಂದು ರೂಪವೆ “ಅಮ್ಮ ” ಮಕ್ಕಳಿಗೆ ಧೈರ್ಯ ಪ್ರೋತ್ಸಾಹ ಮಾರ್ಗದರ್ಶನ ಅಮ್ಮ ಮಾತ್ರಾ ಕೊಡುವಳು.
ಎಂತಹ ಬಿಡುವಿಲ್ಲದ ಒತ್ತಡದ ನಡುವೆಯೂ ತೊದಲು ನುಡಿಯಲ್ಲಿ ಮಗು ಅಮ್ಮನ ಎದುರು ಪದ್ಯ ಹೇಳುವುದು ನೃತ್ಯ ಮಾಡುವುದು, ಕಂಡು ಅಮ್ಮ ಕೂಡ ಮಗುವಿನೊಂದಿಗೆ ನಕ್ಕು ನಲಿದು ಹರ್ಷಪಟ್ಟು ಖುಷಿ ಪಡುವಳು.
ನಮ್ಮ ಅಮ್ಮ ತುಂಬ ಸುಂದರವಾಗಿದ್ದು, ಅಷ್ಟೆ ಅಲ್ಲ ಒಬ್ಬ ಆದರ್ಶ ಮಹಿಳೆಯೂ ಕೂಡ ಹೌದು. ಇಂದಿಗೂ ನನಗೆ ಒಳ್ಳೆಯ ಮಾರ್ಗದರ್ಶನ ನೀಡುವರು, ಎಂತಹ ಸಮಸ್ಯೆ ಬಂದರೂ ಎದುರಿಸುವ ಸಾಮರ್ಥ್ಯ ಅವರಿಂದ ನನಗೆ ಬಂದಿದೆ.
ಯಾವತ್ತಿಗೂ ಒಳ್ಳೆಯ ಸಲಹೆಗಳು ನೀಡುವರು ನನ್ನ ಅಮ್ಮ.
ನಿಜ ಹೇಳಬೇಕು ಅಂದರೆ ಎಲ್ಲ ಸಂಬಂಧಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುವುದು ಇನ್ನೊಬ್ಬರಿಗೆ ಗೌರವಿಸುವುದು, ಯಾರಿಗೂ ನಮಿಂದ ತೊಂದರೆ ಆಗದಂತೆ ನಿಯತ್ತಾಗಿ ಬದುಕುವುದನ್ನು ಕಲಿಸಿದ್ದು ನನ್ನ ಅಮ್ಮ.
ನಾವು ಕೂಡಾ ಇಂದು ಅಮ್ಮನ ಸ್ಥಾನದಲ್ಲಿದ್ದೇವೆ ಮಕ್ಕಳ ಸಂಪೂರ್ಣ ಜೀವನ ರೂಪಿಸುವ ಮಹತ್ತರ ಜವಾಬ್ದಾರಿ ಕೂಡ ಇರುತ್ತೆ . ಇತ್ತೀಚಿನ ದಿನಗಳಲ್ಲಿ ಅನೈತಿಕತೆ, ದುಶ್ಚಟಗಳು ಆಡಂಬರದ ಜೀವನ ಹಾಗೂ ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವ ಘಟನೆಗಳು ಸರ್ವೇಸಾಮಾನ್ಯ..ತಾಯಂದಿರು ಎಲ್ಲೋ ಎಡವುತ್ತಿದ್ದೀವಿ ಎನ್ನುವ ಪ್ರಶ್ನೆ.
ಮಕ್ಕಳ ನಡೆನುಡಿ ಕೇವಲ ತಾಯಿಗೆ ಮಾತ್ರ ಗೊತ್ತಿರುತ್ತದೆ ಇದು ನೂರಕ್ಕೆ ನೂರರಷ್ಟು ಸತ್ಯ.
ಪ್ರತಿಯೊಂದು ಮಗುವೂ ತನ್ನಯ ತಾಯಿಯನ್ನು ಪ್ರೀತಿಸುತ್ತದೆ ಆದರೆ ಜೀವನದಲ್ಲಿ ತಾಯಿ ಇಲ್ಲದವರಿಗೆ ಮಾತ್ರ ತಾಯಿಯ ನಿಜವಾದ ಮಹತ್ವ ತಿಳಿದಿದೆ.
ಎಲ್ಲ ತಾಯಂದಿರಿಗೆ ನನ್ನದೊಂದು ಮನವಿ ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯಿರಿ ಜೊತೆಗೆ ನೈತಿಕ ಮೌಲ್ಯಗಳನ್ನು ಕಲಿಸುವುದು ಕೂಡ,ಅಷ್ಟೇ ಮಹತ್ವದ ಸಂಗತಿ. ಆತ್ಮಸ್ಥೈರ್ಯ ತುಂಬುವುದು ತಾಯಂದಿರಿಂದ ಮಾತ್ರಾ ಸಾಧ್ಯ. ಇವತ್ತು ನಾವು ಸುಖಶಾಂತಿ ಸಂತೋಷದಿಂದ ಜೀವನ ಮಾಡಲು ನಮ್ಮ ಅಮ್ಮನೆ ಸ್ಪೂರ್ತಿ.
ಪ್ರತಿ ವರ್ಷ 28 ನವೆಂಬರ ಬಂತೆಂದರೆ ಸಾಕು ಮನ ಹರ್ಷದಿಂದ ನಲಿದಾಡುವುದು. ನನ್ನ ಅಮ್ಮನ ಜನುಮದಿನ ನವೆಂಬರ್ 28, ನಮಗೆ ಸಂತೋಷದ ದಿನ, ದೇವರು ನಮಗಾಗಿ ಕೊಟ್ಟ ದೊಡ್ಡ ಕೊಡುಗೆ ನನ್ನ ಅಮ್ಮ.
ಅಮ್ಮ ನಿನಗೆ ಜನುಮ ದಿನದ ಹಾರ್ದಿಕ ಶುಭಾಶಯಗಳು ನೂರಾರು ಕಾಲ ಸುಖವಾಗಿ ಬಾಳು……..
ಅಮ್ಮ ನೀನು ನಮಗಾಗಿ ಸಾವಿರ ವರುಷ ಸುಖವಾಗಿ
ಬಾಳಲೆ ಬೇಕು ಈ ಮನೆ ಬೆಳಕಾಗಿ
ನಂದಿನಿ ಸನಬಾಲ್ ಕಲಬುರಗಿ