ಕಾಳಿದಾಸ ಸಂಸ್ಕೃತದ ಮಹಾಕವಿ. ಕಥೆಯನ್ನು ತಾವೆಲ್ಲ ಕೇಳಿರಬಹುದು. ಆತ ತಾನು ಕುಳಿತ ಟೊಂಗೆಯನ್ನು ಕಡಿಯುವಷ್ಟು ದಡ್ಡನಾಗಿದ್ದ. ಟೊಂಗೆ ಕಡಿದರೆ ತಾನು ಬೀಳುತ್ತೇನೆ ಎನ್ನುವದೂ ಆತನಿಗೆ ತಿಳಿಯುತ್ತಿರಲಿಲ್ಲ. ಅಂಥ ಅನಕ್ಷರಸ್ಥ, ಮಹಾಕವಿ ಆದುದು ಒಂದು ಬೆರಗಿನ ಕಥೆಯೇ ಸರಿ! ಶಾಸ್ತ್ರ ಚರ್ಚೆಯಲ್ಲಿ ತನ್ನನ್ನು ಸೋಲಿಸಿದವನನ್ನು ಮದುವೆಯಾಗುವುದಾಗಿ ಆ ರಾಜ್ಯದ ಸುಂದರ ಪ್ರತಿಭಾನ್ವಿತ ರಾಜಕುಮಾರಿ ಘೋಷಿಸಿದಳು. ಇದಷ್ಟೇ ಅಲ್ಲ ಯಾರು ವಾದದಲ್ಲಿ ಸೋಲುವರೋ ಅವರ ಮುಖಕ್ಕೆ ಕಪ್ಪು ಬಳಿದು ತಲೆಯನ್ನು ಬೋಳಿಸಿ, ಕತ್ತೆಯ ಮೇಲೆ ಕುಳ್ಳರಿಸಿ ದೇಶದಿಂದ ಹೊರ ಹಾಕಲಾಗುವುದೆಂದು ಆದೇಶಿಸಿದಳು.
ಈ ಮೊದಲು ರಾಜಕುಮಾರಿಯ ಕೈಯಲ್ಲಿ ಸೋತಂಥ ಕೆಲವು ಪಂಡಿತರು, ಮತ್ಸರದಿಂದ ಮತ್ತು ಮೋಸದಿಂದ ಅವಳನ್ನು ಕಾಳಿದಾಸನೊಂದಿಗೆ ಮದುವೆ ಮಾಡಲು ನಿಶ್ಚಯಿಸಿದರು. ಕಾಳಿದಾಸನನ್ನು ಹಗ್ಗದಿಂದ ಬಂಧಿಸಿ ನೀನು ಏನು ಮಾತನಾಡಬೇಡ. ನಿನಗೆ ಸುಂದರ ರಾಜಕುಮಾರಿಯ ಜೊತೆ ಮದುವೆ ಮಾಡುತ್ತೇವೆ ಎಂದು ಅರಮನೆಗೆ ಕರೆ ತಂದರು. ’ಈತ ದೊಡ್ಡ ಮೇಧಾವಿ. ಆದರೆ ಈಗ ಮೌನವೃತದಲ್ಲಿದ್ದಾನೆ. ಹೀಗಾಗಿ ಶಾಸ್ತ್ರ ಚರ್ಚೆಯು ಸನ್ನೆಗಳಲ್ಲಿ ನಡೆಯಲಿ.’ ಎಂದರು. ಅದಕ್ಕೊಪ್ಪಿದ ರಾಜಕುಮಾರಿ ತನ್ನ ತೋರು ಬೆರಳನ್ನು ತೋರಿದಳು. ಅದಕ್ಕೆ ಕಾಳಿದಾಸ ಎರಡು ಬೆರಳುಗಳನ್ನು ತೋರಿದನು. ಆಗ ಪಂಡಿತರು ರಾಜಕುಮಾರಿಯನ್ನು ತಮ್ಮ ಪ್ರಶ್ನೆ ಏನಾಗಿತ್ತು ಎಂದರು. ದೇವರು ಎಷ್ಟು ಆಕಾರದಲ್ಲಿದ್ದಾನೆ ಎಂಬುದು ನನ್ನ ಪ್ರಶ್ನೆಯಾಗಿತ್ತು ಎಂದಳು. ಅದಕ್ಕೆ ಪಂಡಿತರು ಹಾಗಾದರೆ ಕಾಳಿದಾಸ ಹೇಳಿದ ಉತ್ತರ ಸರಿಯಾಗಿದೆ. ಆತ ಸಾಕಾರ ಮತ್ತು ನಿರಾಕಾರ ಎಂದು ಉತ್ತರಿಸಿದ್ದಾನೆ.
ಎರಡನೇ ಪ್ರಶ್ನೆಯಾಗಿ ತನ್ನ ಐದು ಬೆರಳುಗಳನ್ನು ತೋರಿದಳು. ಅದಕ್ಕೆ ಪ್ರತ್ಯತ್ತರವಾಗಿ ಕಾಳಿದಾಸ ಮುಷ್ಟಿಯನ್ನು ತೋರಿದ. ಮತ್ತೆ ಪಂಡಿತರು ರಾಜಕುಮಾರಿಯನ್ನು ಪ್ರಶ್ನೆಯ ಕುರಿತಾಗಿ ಕೇಳಿದರು. ಐದು ಇಂದ್ರಿಯಗಳು ತೊಂದರೆ ಕೊಡುತ್ತಿವೆ ಅದಕ್ಕೇನು ಪರಿಹಾರ? ಎಂಬುದಾಗಿತ್ತು. ಕಾಳಿದಾಸನ ಪ್ರಕಾರ ಮನಸ್ಸಿನ ಸಹಾಯದಿಂದ ನಿಗ್ರಹಿಸಬಹುದು. ಇದೂ ಸರಿ ಉತ್ತರವೇ ಎಂದರು. ಹೀಗೆ ಶಾಸ್ತ್ರ ಚರ್ಚೆಯಲ್ಲಿ ರಾಜಕುಮಾರಿಯನ್ನು ಷಡ್ಯಂತ್ರದಿಂದ ಸೋಲಿಸಿ ಮೂಢನಾದ ಕಾಳಿದಾಸನನ್ನು ಮದುವೆ ಮಾಡಿದರು.
ಒಂದು ಸಂಜೆ ಅರಮನೆಯ ಹತ್ತಿರ ಒಂಟೆಯೊಂದು ಬರುವುದನ್ನು ಕಂಡು ಕಾಳಿದಾಸ ತನ್ನ ಕಗ್ಗ ಭಾಷೆಯಲ್ಲಿ ಅದನ್ನು ಸಂಬೋಧಿಸಿದ. ದಿಗ್ಭಾಂತಳಾದ ರಾಜಕುಮಾರಿ ಆತನನ್ನು ಕೆಳಕ್ಕೆ ತಳ್ಳಿದಳು. ಈ ಅವಮಾನ ಆತನ ಅಭಿಮಾನಕ್ಕೆ ಘಾಸಿಯಾಯಿತು. ತಾಯಿ ಕಾಳಿಯನ್ನು ನಮಿಸಿ, ಪಂಡಿತರ ನಗರವೆಂದೇ ಪ್ರಸಿದ್ಧವಾದ ಕಾಶಿಗೆ ಹೋದ. ಅಲ್ಲಿ ನಿನ್ನೆ ನಾಳೆಯನ್ನು ಅರಿಯದಂತೆ ಅಧ್ಯಯನದಲ್ಲಿ ಮುಳುಗಿದ. ಮಹಾಕವಿಯಾಗಿ ಮರಳಿದ. ಅಭಿಮಾನಕ್ಕೆ ಘಾಸಿಯಾದಾಗ ಆತ್ಮವಿಶ್ವಾಸ ಬೆಳಗುತ್ತದೆ. ‘ಬೀಸುವ ಪ್ರತಿಯೊಂದು ಬಿರುಗಾಳಿಯಲ್ಲೂ ಹರಿದು ಬರುವ ಕಡಲ ಅಲೆಗಳಲ್ಲಿ ದಡವನ್ನು ಮುಟ್ಟಿಸುವ ಸಾಧ್ಯತಾ ಶಕ್ತಿಯೂ ಇರುತ್ತದೆ.’ ಎಂದು ಹಿಂದಿ ಶಾಯರನೊಬ್ಬ ತನ್ನ ಶಾಯರಿಯಲ್ಲಿ ಬಹಳ ಸೊಗಸಾಗಿ ಹೇಳಿದ್ದಾನೆ. ವ್ಯಕ್ತಿಯನ್ನು ಅತ್ಯುನ್ನತಿಗೇರಿಸಲು ಬೇಕಾಗುವ ಸಶಕ್ತ ಸಾಧನವೆಂದರೆ ಆತ್ಮವಿಶ್ವಾಸ.
 ಜಯಶ್ರೀ ಜೆ.ಅಬ್ಬಿಗೇರಿ
ಜಯಶ್ರೀ ಜೆ.ಅಬ್ಬಿಗೇರಿ
ಮೋ :೯೪೪೯೨೩೪೧೪೨




Good article madam