ಎಮ್ಮೆತಮ್ಮನು ನಾನು ಮಂಕುತಿಮ್ಮನ ತಮ್ಮ. ವೇದಾಂತ ಸಿದ್ಧಾಂತ ತಿಳಿಯದೆನಗೆ ಭಾವದಲಿ ಬಂದಂಥ ಭಾವನೆಗಳೊರೆದಿಹೆನು ಕೇಳುವುದು ಭಾವುಕರು – ಎಮ್ಮತಮ್ಮ ||೧||
ಶಬ್ಧಾರ್ಥ
ಎಮ್ಮೆತಮ್ಮ- ಕೋಣ. ಮಂಕುತಿಮ್ಮ- ಡಿವಿಜಿ.
ವೇದಾಂತ – ವೇದದ ಅಧ್ಯಾತ್ಮ ತತ್ತ್ವ.
ಸಿದ್ಧಾಂತ – ಶಾಸ್ತ್ರಗಳ ನಿರ್ಣಯ ತತ್ತ್ವ.
ಒರೆ – ಹೇಳು. ಭಾವುಕ – ರಸಿಕ, ಸಹೃದಯ.
ತಾತ್ಪರ್ಯ
ನಾನು ಅಂದರೆ ಇಲ್ಲಿ ಎನ್. ಶರಣಪ್ಪ ಮೆಟ್ರಿ .ಎಮ್ಮೆತಮ್ಮ ಎಂದರೆ ಎಮ್ಮೆಗೆ ತಮ್ಮನಾದ ಕೋಣ(ದಡ್ಡ). ಮಂಕುತಿಮ್ಮ ಎಂದರೆ ಕನ್ನಡದ ಭಗವದ್ಗೀತೆ ಕಗ್ಗ ಬರೆದಂಥ ಮಹಾಜ್ಞಾನಿ ಡಿ.ವಿ.ಜಿ.ಯವರ ತಮ್ಮನಾಗಿದ್ದೇನೆ. ಅಂದರೆ ಅವರು ಹಾಕಿಕೊಟ್ಟ ಚೌಪದಿಯಲ್ಲಿ ಮಾರ್ಗದಲ್ಲಿ ಕಗ್ಗದಮುಕ್ತಕಗಳನ್ನು ಬರೆದಿದ್ದೇನೆ. ನಾನು ಯಾವುದೆ ವೇದತತ್ತ್ವ ಮತ್ತು ನಿರ್ಣಯತತ್ತ್ವಗಳನ್ನು ಅಂದರೆ ವೇದ ಶಾಸ್ತ್ರಗಳನ್ನು ಓದಿಕೊಂಡಿಲ್ಲ ಮತ್ತು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿಲ್ಲ. ನಾನು ಮಹಾಪಂಡಿತನಲ್ಲ ಕೇವಲ ಪಾಮರನಾಗಿದ್ದೇನೆ. ವಿದ್ಯಾಮದ ನನ್ನ ತಲೆಗೇರಿಲ್ಲ. ನನ್ನ ಭಾವದಲ್ಲಿ ಆತ್ಮಚೈತನ್ಯದಿಂದ ಬಂದ ಅಂತರಂಗದ ಭಾವನೆಗಳನ್ಮುಹೇಳಿದ್ದೇನೆ. ಅವುಗಳನ್ನು ಸಹೃದಯರು ಆಲಿಸಿರಿ ಎಂಬ ವಿನೀತ ಭಾವ ಈ ಕಗ್ಗದಲ್ಲಿ ವ್ಯಕ್ತವಾಗುತ್ತದೆ. ಇದರಲ್ಲಿ ಬಸವಣ್ಣನವರ ಎನಗಿಂತ ಕಿರಿಯರಿಲ್ಲ ಎಂಬ ಕಿಂಕರತೆ ಭಾವ ತುಂಬಿತುಳುಕುತ್ತದೆ.
ರಚನೆ ಮತ್ತು ವಿವರಣೆ
ಎನ್.ಶರಣಪ್ಪ ಮೆಟ್ರಿ