spot_img
spot_img

ಕುಬುದ್ಧಿಜೀವಿಗಳ ಕುಯುಕ್ತಿ, ಕುಟಿಲ ತಂತ್ರಗಳನ್ನು ಅನಾವರಣಗೊಳಿಸಿದ ಅಪರೂಪದ ಕೃತಿ “ಮಹಾನ್ ಇತಿಹಾಸಕಾರರು”

Must Read

- Advertisement -

ಮಹಾನ್ ಇತಿಹಾಸಕಾರರು

ಇಂಗ್ಲಿಷ್ ಮೂಲ: ಅರುಣ್ ಶೌರಿ

ಕನ್ನಡಕ್ಕೆ: ಮಂಜುನಾಥ ಅಜ್ಜಂಪುರ

ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ, ಬೆಂಗಳೂರು.

- Advertisement -

ಮಂಜುನಾಥ ಅಜ್ಜಂಪುರ ಅವರು ಕನ್ನಡಕ್ಕೆ ಅನುವಾದಿಸಿದ  ಅರುಣ್ ಶೌರಿ ಅವರ ‘ಮಹಾನ್ ಇತಿಹಾಸಕಾರರು’ ಕನ್ನಡ ಇತಿಹಾಸ, ಸಂಸ್ಕೃತಿ, ಪರಂಪರೆ, ಚರಿತ್ರೆಗಳನ್ನು ಬರೆಯುವವರಿಗೆ ಒಂದು ಪ್ರಮುಖ ಆಕರ ಗ್ರಂಥವಾಗಿದೆ. ಈವರೆಗೆ ಕನ್ನಡ ನಾಡಿನ ಇತಿಹಾಸ ಬರೆದವರೂ ತೆರೆದ ಕಣ್ಣಿನಿಂದ ‘ಮಹಾನ್ ಇತಿಹಾಸಕಾರರು’ ಕೃತಿಯನ್ನು ಅವಲೋಕಿಸಬೇಕು.

ಕನ್ನಡ ವಿಶ್ವವಿದ್ಯಾಲಯವು ಷೇಕ್ ಅಲಿ ಅವರ ಪ್ರಧಾನ ಸಂಪಾದಕತ್ವದಲ್ಲಿ ‘ಕರ್ನಾಟಕ ಚರಿತ್ರೆ’ಯ ಏಳು ಸಂಪುಟಗಳನ್ನು ಪ್ರಕಟಿಸಿದೆ. ಅದರಲ್ಲಿ ಟಿಪ್ಪು ಸುಲ್ತಾನನ ಬಗ್ಗೆಯೇ ಎರಡು ಸಂಪುಟಗಳನ್ನು ಮೀಸಲಿಟ್ಟರೆ, ನಾಲ್ಕು ನೂರು ವರ್ಷಗಳ ಕಾಲ ಆಳಿದ ಮೂಲ ದೊರೆಗಳಾದ ಮೈಸೂರು ಅರಸರ ಕುರಿತು ಕ್ವಚಿತ್ತಾಗಿ ಬರೆದಿರುವುದು ಅತ್ಯಂತ ವಿಷಾದದ ಸಂಗತಿಯಾಗಿದೆ. ಇಂತಹ ಮತೀಯ ಇತಿಹಾಸಕಾರರು ಕಾರಣವಾಗಿ, ನಮ್ಮ ನಾಡಿನ ಇತಿಹಾಸವೂ ಕಲಸುಮೇಲೋಗರವಾಗಿರುವುದು ದುರಂತದ ವಿಷಯ. 

ಸ್ವಾತಂತ್ರ್ಯಾನಂತರ ನಮ್ಮ ದೇಶದ ಆಡಳಿತವು ಕಮ್ಯುನಿಸಂ, ಮಾರ್ಕ್ಸ್ ವಾದ – ಸಮಾಜವಾದಗಳ  ಕರಿನೆರಳಿನಲ್ಲಿ ನರಳಿ ನರಳಿ ನೈಜ ಇತಿಹಾಸವೆಲ್ಲವೂ ಕಣ್ಮರೆಯಾಗುವ ಪರಿಸ್ಥಿತಿ ನಿರ್ಮಾಣವಾಯಿತು. ಐಸಿಎಚ್ಆರ್ ಸಂಸ್ಥೆಯ ಮೂಲಕ ಪ್ರಕಟವಾದ ಸಾಹಿತ್ಯವೆಲ್ಲವೂ ಇತಿಹಾಸಕ್ಕೆ ಹೇಗೆ ಅಪಚಾರವೆಸಗುವ ಕಾರ್ಯಮಾಡಿದೆ, ಎಂಬ ಸತ್ಯ ಸಂಗತಿ ತಿಳಿಯಲು ಅರುಣ ಶೌರಿ ಅವರು ಬರುವರೆಗೆ ನಾವು ಕಾಯಬೇಕಾಯಿತು.

- Advertisement -

“ಇಂಡಿಯನ್ ಎಕ್ಸ್ ಪ್ರೆಸ್” ಪತ್ರಿಕೆಯ ಸಂಪಾದಕರಾಗಿದ್ದ  ಅರುಣ್ ಶೌರಿ ಅವರು ರಾಜ್ಯಸಭಾ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದರು. ವೋಟ್ ಬ್ಯಾಂಕಿನ ಸರಕಾರಗಳು ಸೃಷ್ಟಿಸಿದ ಕೃತಕ ಇತಿಹಾಸದ ಮೇಲೆ ಬೆಳಕು ಚೆಲ್ಲಿ, ನಿಜ ಇತಿಹಾಸವನ್ನು ಜನಸಮುದಾಯಕ್ಕೆ ತಿಳಿಸುವ ಒಂದು ದೊಡ್ಡ ಪ್ರಯತ್ನವನ್ನು  ಅರುಣ್ ಶೌರಿ ಅವರು ಮಾಡಿದರು. ಸೀತಾರಾಮ ಗೋಯಲ್ ಮತ್ತು  ಅರುಣ್ ಶೌರಿ ಅವರ ಬರಹಗಳು, ಇಡೀ ಭಾರತದಲ್ಲಿ ಒಂದು ರೀತಿಯ ಅಪೂರ್ವ ಸಂಚಲನವನ್ನುಂಟುಮಾಡಿದವು. ನಾವು ಈವರೆಗೆ ಅರಿತುಕೊಂಡಿದ್ದ ಇತಿಹಾಸವೇ ಬೇರೆ, ನಿಜ-ಇತಿಹಾಸವೇ ಬೇರೆ ಎಂಬುದರ ಸ್ಪಷ್ಟವಾದ ಒಂದು ಪರಿಕಲ್ಪನೆ ಜನರಲ್ಲಿ ಮೂಡಿತು. 

ಅರುಣ್ ಶೌರಿ ಅವರು, ಅನೇಕ ವರ್ಷಗಳ ತಪಸ್ಸು ಎನ್ನುವ ರೀತಿಯಲ್ಲಿ ಬರೆದ ‘ಎಮಿನೆಂಟ್ ಹಿಸ್ಟಾರಿಯನ್ಸ್’ ಎಂಬ ಪುಸ್ತಕವು ನಿಜಕ್ಕೂ ಸಮಸ್ತ ಭಾರತೀಯರ ಕಣ್ಣು ತೆರೆಸುವ ಕೆಲಸವನ್ನು ಮಾಡಿತು. ಇಂತಹ ಅಪರೂಪದ ಕೃತಿಯನ್ನು ಮಂಜುನಾಥ ಅಜ್ಜಂಪುರ ಅವರು ತುಂಬ ಶ್ರಮ-ಶ್ರದ್ಧೆ-ತಾಳ್ಮೆಯಿಂದ ಕನ್ನಡಕ್ಕೆ ತಂದಿರುವುದು ಹೆಮ್ಮೆ ಮತ್ತು ಅಭಿಮಾನದ ಸಂಗತಿಯಾಗಿದೆ. 

ರಾಷ್ಟ್ರೋತ್ಥಾನ ಪರಿಷತ್ತಿನಿಂದ ಈ ಕೃತಿಯು ಮೊದಲು ಎರಡು ಭಾಗಗಳಲ್ಲಿ ಪ್ರಕಟವಾಗಿತ್ತು. ೨೦೧೫ರಲ್ಲಿ  ಎರಡೂ  ಸಂಪುಟಗಳನ್ನು ಕೂಡಿಸಿ ಬೃಹತ್ ವಿಸ್ತೃತ ಸಂಪುಟವನ್ನು ಪ್ರಕಟಿಸಲಾಯಿತು. ಈ ಕೃತಿ ಇಲ್ಲಿಯವರೆಗೆ ಐದು ಮುದ್ರಣಗಳನ್ನು ಕಂಡಿರುವುದು ಅದರ ಜನಪ್ರಿಯತೆಗೆ ಸಾಕ್ಷಿಯಾಗಿದೆ. 

ನಮ್ಮ ನಾಡಿನ ಬುದ್ಧಿಜೀವಿಗಳು ‘ಹಿಂದೂ’ ಎಂಬ ಪದವನ್ನು ಕೇಳಿದಾಕ್ಷಣ ಬೆಚ್ಚಿಬೀಳುತ್ತಾರೆ. ಆದರೆ ಮುಸಲ್ಮಾನ ದೊರೆಗಳು ನಮ್ಮ ಜನರ ಮೇಲೆ, ನಮ್ಮ ಪರಂಪರೆಯ ಇತಿಹಾಸ ಹೇಳುವ ದೇವಸ್ಥಾನಗಳ ಮೇಲೆ ಎಂತಹ ಘೋರವಾದ ಕ್ರೌರ್ಯವನ್ನು ಮೆರೆದಿದ್ದಾರೆ, ಎಂಬುದನ್ನು ಮರೆತುಬಿಡುತ್ತಾರೆ ಅಥವಾ ಗೊತ್ತಿದ್ದರೂ ಅದನ್ನು ತೇಲಿಸಿ ಮಾತನಾಡುತ್ತಾರೆ.

ಇಂತಹ ಬುದ್ಧಿಜೀವಿಗಳು ಹಾಗೂ ರಾಷ್ಟ್ರಮಟ್ಟದ ಕೆಲವು ಕಮ್ಯುನಿಸ್ಟ್  ಬುದ್ಧಿಜೀವಿಗಳು ಕೂಡಿ ಸರಕಾರದ ಹಣದಲ್ಲಿ, ಇತಿಹಾಸ ನಿರ್ಮಾಣ ವಿಷಯದಲ್ಲಿ ಎಂತಹ ಘನಘೋರ ದ್ರೋಹ ಮಾಡಿದ್ದಾರೆ ಎಂಬುದನ್ನು ಅರುಣ್ ಶೌರಿ ಅವರು ಇಲ್ಲಿ ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ.

ಕೃತಕ ಬುದ್ಧಿಜೀವಿಗಳ ಅಜ್ಞಾನ-ಇತಿಹಾಸವನ್ನು ತಿರುಚುವ ಅವರ ಕುದೃಷ್ಟಿ, ಕೃತಿಚೌರ್ಯದ ಮೂಲಕ ಗಳಿಸಿಕೊಂಡ ಪದವಿ ಪ್ರಶಸ್ತಿ-ಗೌರವ ಸಂಭಾವನೆಗಳ ವಿಷಯದಲ್ಲಿ ನಡೆದುಕೊಂಡ ರೀತಿಗಳನ್ನು ಓದಿದರೆ, ಇಂತಹ ಬುದ್ಧಿಗೇಡಿ ಇತಿಹಾಸಕಾರರ ಬಗ್ಗೆ ಜುಗುಪ್ಸೆ ಹುಟ್ಟುತ್ತದೆ. 

ಹೊಣೆಗೇಡಿ ಸರಕಾರ ಇಂತಹ ಬುದ್ಧಿಗೇಡಿ ಇತಿಹಾಸಕಾರರಿಗೆ ನೀಡಿದ ಮಹತ್ತ್ವ, ಕೊಡಮಾಡಿದ ಸಾರ್ವಜನಿಕ ಹಣ ನಿಜಕ್ಕೂ ವ್ಯರ್ಥ ಎಂಬುದರ ಅರಿವನ್ನು ಮೂಡಿಸಿದವರು  ಅರುಣ್ ಶೌರಿ ಅವರು. ಅಂತೆಯೇ, ಇಂತಹ ಕೃತಿಯನ್ನು ಪ್ರಜ್ಞಾವಂತ ಯುವ ಸಮೂಹ, ಕನ್ನಡ ಪ್ರಾಧ್ಯಾಪಕ ಸಮೂಹ ಅವಶ್ಯವಾಗಿ ಓದಬೇಕಾದ ಅನಿವಾರ್ಯತೆ ಇದೆ. ಇಲ್ಲಿ 

ನಾಲ್ಕು ಭಾಗಗಳಲ್ಲಿ ಒಟ್ಟು ೨೩ ಲೇಖನಗಳು ಇಲ್ಲಿವೆ. ಇತಿಹಾಸಕಾರರು ಎಂಬ ಮೊದಲನೆಯ ಭಾಗದಲ್ಲಿ ಆರು ಲೇಖನಗಳಿವೆ. ಕಮ್ಯುನಿಸ್ಟರ  ಕಾರ್ಯಪಡೆ ಎಂಬ ಎರಡನೆಯ ಭಾಗದಲ್ಲಿ ಒಟ್ಟು ಹತ್ತು ಲೇಖನಗಳಿವೆ. ಸಂದರ್ಭಗಳು ಮತ್ತು ಅವುಗಳ ಪರಿಣಾಮಗಳು ಎಂಬ ಮೂರನೆಯ ಭಾಗದಲ್ಲಿ ಐದು ಲೇಖನಗಳಿವೆ. ನವೋನ್ಮೇಷ ಎಂಬ ನಾಲ್ಕನೆಯ ಭಾಗದಲ್ಲಿ ಎರಡು ಲೇಖನಗಳಿವೆ. 

‘ವೈಚಾರಿಕತೆ’ (RATIONAL) ಎಂಬ ಪದವೊಂದು ಟೈಪಿಸ್ಟನ ಕಣ್ತಪ್ಪಿನಿಂದ ‘ರಾಷ್ಟ್ರೀಯತೆ’ (NATIONAL) ಎಂದು ಬದಲಾದ ಕಾರಣಕ್ಕೆ ವಿಚಾರವಾದಿಗಳು ಅರಚಿಕೊಂಡ ರೀತಿಯನ್ನು ಲೇಖಕರು ತುಂಬ ಅರ್ಥಪೂರ್ಣವಾಗಿ ವಿಶ್ಲೇಷಿಸಿದ್ದಾರೆ. ಕಾಂಗ್ರೆಸ್ ಸರಕಾರದಲ್ಲಾದ ಈ ಬದಲಾವಣೆಯನ್ನು ಆಗ ಗಮನಿಸದ ಈ ವಿಚಾರವಾದಿಗಳು, ಬಿಜೆಪಿ ಸರಕಾರ ಬಂದಾಕ್ಷಣ ಅದನ್ನು ವಿರೋಧಿಸಲು ಹೊರಟಿರುವ ಸಂಗತಿಗಳನ್ನು ವ್ಯಂಗ್ಯವಾಗಿ ಚರ್ಚಿಸಿದ್ದಾರೆ. 

ಸರಕಾರದ ಹಣವನ್ನು ಯಾವ ಯಾವ ಇಲಾಖೆಯಿಂದ ಹೇಗೆಲ್ಲ ಈ ಇತಿಹಾಸಕಾರರು ದುರುಪಯೋಗಪಡಿಸಿಕೊಂಡು ಸರಕಾರದ ಹಣವನ್ನು ಎಷ್ಟು ಲೂಟಿ ಹೊಡೆದಿದ್ದಾರೆ ಎಂಬುದರ ಬಗ್ಗೆ ಒಂದು ಪಟ್ಟಿಯನ್ನೇ ಅರುಣ್ ಶೌರಿ ಅವರು ನೀಡಿದ್ದಾರೆ. ‘ಗುಳುಂ ಮಾಡೋದು ಹೇಗೆ?’ ಎಂಬ ಅಧ್ಯಾಯದಲ್ಲಿ ಇದನ್ನು ವಿವರಿಸಿದ್ದಾರೆ. ಹೀಗೆ ಹಣ ಗುಳುಂ ಮಾಡಿ, ಕೃತಿ ಚೌರ್ಯ ಮಾಡಿ ಸಮಾಜದ ಮುಂದೆ ಬೆತ್ತಲೆಯಾದಾಗ ‘ಇದು ವೈಯಕ್ತಿಕ ಟೀಕೆ’ ‘ಇದು ಅನಾಗರಿಕತೆ’ ‘ಇದು ಅಲ್ಪತನ’ ಎಂದು ಬೊಗಳೆಬಿಡುವ ರೀತಿಯನ್ನೂ  ಅರುಣ್ ಶೌರಿ ವಿಡಂಬನಾತ್ಮಕವಾಗಿ ಚರ್ಚಿಸಿದ್ದಾರೆ.

‘ಬುದ್ಧಿಜೀವಿಗಳ ಹಗ್ಗ ಜಗ್ಗಾಟ’, ‘ಸ್ವ-ನಾಶಕ್ಕೊಂದು ಸ್ವ-ರಾಷ್ಟ್ರನಾಶಕ್ಕೊಂದು ಕಾರ್ಯಸೂಚಿ’ ‘ವಂಚನೆ ದ್ರೋಹಗಳ ಮತ್ತಷ್ಟು ಆಯಾಮಗಳು’ ‘ಈ ಕುತಂತ್ರಿಗಳ ಬಣ್ಣ ಬಯಲು ಮಾಡುವ ಸತ್ತ್ವಪರೀಕ್ಷೆ’  ಮೊದಲಾದ ಲೇಖನಗಳು ಸ್ಪಷ್ಟವಾದ ದಾಖಲೆಗಳನ್ನು ಮುಂದಿಟ್ಟು,  ಅವರ ಕುಟಿಲ ತಂತ್ರ, ಅವರ ಕಾರ್ಯಪಡೆ, ಅವರ ಕುಯುಕ್ತಿಗಳನ್ನೆಲ್ಲ ಬಯಲು ಮಾಡಿವೆ.

ನಮ್ಮ ನಾಡಿನ ಹಿರಿಯ ಸಾಹಿತಿ ವಿದ್ವಾಂಸರಾದ ಡಾ. ಎಸ್.ಎಲ್.ಭೈರಪ್ಪ ಅವರು ಅದ್ಭುತವಾದ ಮುನ್ನುಡಿ ಬರೆದು, ಕೃತಿಯ ಓದಿಗೆ ಅನನ್ಯವಾದ ಪ್ರವೇಶವನ್ನು ಒದಗಿಸಿಕೊಟ್ಟಿದ್ದಾರೆ. ‘ಶೌರಿ ಅವರ ಬರವಣಿಗೆ ಎಂದರೆ ಒಂದು ತಪಸ್ಸು’ ಎಂಬ ಲೇಖನವನ್ನು ಮಂಜುನಾಥ ಅಜ್ಜಂಪುರ ಅವರು ಬರೆದು, ಅರುಣ್ ಶೌರಿ ಅವರ ಜೀವನ ಸಾಧನೆಗಳನ್ನು ಸಂಕ್ಷಿಪ್ತವಾಗಿ ವಿವರಿಸಿ, ಅವರ ಬರವಣಿಗೆ ಸಾಮರ್ಥ್ಯ ಎಂತಹುದು ಎಂಬುದನ್ನು ತಿಳಿಸಿಕೊಟ್ಟಿದ್ದಾರೆ. “ಅರುಣ್ ಶೌರಿ ಅವರ ಹರಿತವಾದ ಭಾಷೆ, ವ್ಯಂಗ್ಯ, ಚಾಟಿಯೇಟಿನಂತಹ ವಾಕ್ಯಗಳು, ವಿಷಯ ಸಾಮಗ್ರಿ, ಬಿಡದೇ ಓದಿಸಿಕೊಂಡು ಹೋಗುವಂತಹ ನಿರೂಪಣೆ, ಅವರದೇ ಆದ ವಿಶಿಷ್ಟ ಶೈಲಿಯೊಂದನ್ನು ಹುಟ್ಟುಹಾಕಿದೆ. ಅವರ ಮೂಲ ಇಂಗ್ಲಿಷ್ ಕೃತಿಗಳನ್ನು ಕನ್ನಡದಲ್ಲಿ ಅನುವಾದಿಸುವುದು, ಯಾವುದೇ ಭಾಷಾಂತರಕಾರನಿಗೆ ದೊಡ್ಡ ಸವಾಲು” ಎಂಬ ಮಾತನ್ನು ಮಂಜುನಾಥ ಅಜ್ಜಂಪುರ ಅವರು ಹೇಳುವಲ್ಲಿ ಈ ಕೃತಿಯು ಕನ್ನಡಕ್ಕೆ ಬರುವಲ್ಲಿ ಎಷ್ಟೆಲ್ಲ ಶ್ರಮ-ಸಾಧ್ಯತೆಗಳು ಅಡಗಿವೆ ಎಂಬುದರ ಅರಿವು ನಮಗಾಗುತ್ತದೆ. 

ಕನ್ನಡದ ಖ್ಯಾತ ಚಿಂತಕರಾದ ಡಾ. ನವರತ್ನ ಎಸ್. ರಾಜಾರಾಮ್ ಅವರು ‘ಅವರೆಲ್ಲಾ ಗೌರವಾನ್ವಿತರೇ, ಬಿಡಿ!…’ ಎಂಬ ಉದ್ಬೋಧಕವಾದ  ಪ್ರಸ್ತಾವನೆಯನ್ನು ಬರೆದಿರುವುದು ಕೃತಿಯ ಮೌಲ್ಯದ ಗುಣವನ್ನು ಹೆಚ್ಚು ಮಾಡಿದೆ. 

ಒಟ್ಟಾರೆ ಮಂಜುನಾಥ ಅಜ್ಜಂಪುರ ಅವರು ಹೇಳುವಂತೆ ಶೌರಿ ಅವರ ಬರವಣಿಗೆ ಎಂದರೆ ಕಥೆಯಲ್ಲ, ಕವಿತೆಯಲ್ಲ, ಕಾದಂಬರಿಯೂ ಅಲ್ಲ, ಅದು ತಪಸ್ಸು, ಅದು ಸಾಧನೆ, ಅದು ಸಂದೇಶ ಎಂಬ ಮಾತು ಅಕ್ಷರಶಃ ನಿಜ. 

ಇಂತಹ ಅಪರೂಪದ ಶ್ರೇಷ್ಠ ಕೃತಿಯೊಂದನ್ನು ಕನ್ನಡ ಓದುಗ ಲೋಕಕ್ಕೆ ಕೊಡಮಾಡಿದ ಮಂಜುನಾಥ ಅಜ್ಜಂಪುರ ಅವರಿಗೆ ಸಮಸ್ತ ಕನ್ನಡಿಗರು ಋಣಿಯಾಗಿರಬೇಕು!


ಪ್ರಕಾಶ ಗಿರಿಮಲ್ಲನವರ

- Advertisement -
- Advertisement -

Latest News

ಸಿದ್ದಯ್ಯ ಪುರಾಣಿಕರ ಸಾಹಿತ್ಯ ರಾಶಿ ವಿಪುಲವಾಗಿದೆ ; ಮೃತ್ಯುಂಜಯ ಸ್ವಾಮಿಗಳು ಹಿರೇಮಠ

ಬೆಳಗಾವಿ- ಕನ್ನಡ ಸಾಹಿತ್ಯ ಪರಿಷತ್ತು ಬೆಳಗಾವಿ ಮತ್ತು ಕನ್ನಡ ಸಾಂಸ್ಕೃತಿಕ ಭವನದ ಕ್ಷೇಮಾಭಿವೃದ್ಧಿ ಸಂಘ ಬೆಳಗಾವಿ ಜಿಲ್ಲೆಯ ಶತಮಾನ ಕಂಡ ಸಾಹಿತಿಗಳ ತಿಂಗಳ ಉಪನ್ಯಾಸ ಕಾರ್ಯಕ್ರಮದಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group