ಬೆಂಗಳೂರು – ಕಾನೂನು ಎಲ್ಲರಿಗೂ ಒಂದೇ, ನ್ಯಾಯವೆನ್ನುವುದು ಕೂಡ ಎಲ್ಲರಿಗೂ ಒಂದೇ ಎಂಬುದನ್ನು ರಾಜ್ಯ ಹೈಕೋರ್ಟ್ ಇಂದು ಸಾಬೀತುಪಡಿಸಿದ್ದು ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ವಿಡಿಯೋ ಹಾಗೂ ಲೈಂಗಿಕ ಶೋಷಣೆ ಪ್ರಕರಣದಲ್ಲಿ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿದೆ.
ಐಪಿಸಿ ಸೆ. ೩೭೬(೨) ಹಾಗೂ ೩೫೪(ಎ) ಸೇರಿದಂತೆ ಅನೇಕ ಕಲಂಗಳ ಅಡಿಯಲ್ಲಿ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಅವರಿಂದ ಶೋಷಣೆಗೆ ಒಳಗಾಗಿದ್ದ ಅನೇಕ ಮಹಿಳೆಯರು ದೂರು ದಾಖಲಿಸಿದ್ದರು. ಪ್ರಜ್ವಲ್ ರೇವಣ್ಣ ಮೊಬೈಲ್ ನಲ್ಲಿ ಕೂಡ ಸುಮಾರು ೨ ಸಾವಿರದಷ್ಟು ಲೈಂಗಿಕ ವಿಡಿಯೋಗಳಿದ್ದುದನ್ನು ಪತ್ತೆ ಹಚ್ಚಿದ್ದ ಎಸ್ಐಟಿ ತಂಡವು ಎಲ್ಲ ಕೋನಗಳಿಂದ ತನಿಖೆ ಕೈಗೊಂಡು ಸಾವಿರಾರು ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದು ನಿನ್ನೆ ನಡೆದ ವಿಚಾರಣೆಯಲ್ಲಿ ಪ್ರಜ್ವಲ್ ರೇವಣ್ಣ ತಪ್ಪಿತಸ್ಥರೆಂದು ಸಾಬೀತಾಗಿತ್ತು.
ಶಿಕ್ಷೆಯ ಪ್ರಮಾಣವನ್ನು ಇಂದು ಅಂದರೆ ಶನಿವಾರ ಪ್ರಕಟಿಸುವುದಾಗಿ ಹೇಳಿದ್ದ ಕೋರ್ಟ್ ಇಂದು ಅವರಿಗೆ ಜೀವಾವಧಿ ಶಿಕ್ಷೆಯ ತೀರ್ಪು ನೀಡಿದೆ.
ಒಬ್ಬ ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಮಂತ್ರಿ ರೇವಣ್ಣ, ಸದ್ಯಕ್ಕೆ ಕೇಂದ್ರ ಮಂತ್ರಿ ಕುಮಾರಸ್ವಾಮಿ ಅಲ್ಲದೆ ಸ್ವತಃ ಸಂಸದರೇ ಆಗಿದ್ದರೂ ಕಾನೂನಿನ ಮುಂದೆ ಎಲ್ಲರೂ ಒಂದೇ ಎನ್ನುವಂತೆ ತೀರ್ಪು ಬಂದಿದ್ದು ನ್ಯಾಯಾಂಗದ ಮೇಲೆ ಜನ ಸಾಮಾನ್ಯರ ನಂಬಿಕೆ ಇಮ್ಮಡಿಯಾಗುವಂತೆ ಮಾಡಿದೆ ಎಂದರೆ ತಪ್ಪಾಗಲಾರದು