ಮೂಡಲಗಿ: ದೇಶದ ಗ್ರಾಮೀಣ ಪ್ರದೇಶಗಳಿಗಾಗಿ ಜಲಜೀವನ ಮಿಷನ್ ಯೋಜನೆ ಜಾರಿಗೊಳಿಸಲಾಗಿದ್ದು, ಕರ್ನಾಟಕ ರಾಜ್ಯಕ್ಕೆ 2.08 ಲಕ್ಷ ಕೋಟಿ ರೂ ಅನುದಾನ ಲಭಿಸಿದೆ ಎಂದು ಕೇಂದ್ರ ಜಲಶಕ್ತಿ ರಾಜ್ಯ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ತಿಳಿಸಿದ್ದಾರೆ.
ಸಂಸತ್ತಿನ ಚಳಿಗಾಲ ಅಧಿವೇಶನದಲ್ಲಿ ಜಲಜೀವನ ಮಿಷನ್ ಯೋಜನೆಯಡಿ ಗ್ರಾಮೀಣ ಪ್ರದೇಶಗಳಿಗೆ ಸುರಕ್ಷಿತ ಮತ್ತು ಸಮರ್ಪಕ ಕುಡಿಯುವ ನೀರನ್ನು ಒದಗಿಸಲು ಸರ್ಕಾರ ತೆಗೆದುಕೊಂಡ ಕ್ರಮಗಳ ಕುರಿತು ಸಂಸದ ಈರಣ್ಣ ಕಡಾಡಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ದೇಶದಾದ್ಯಂತ 2024 ರ ವೇಳೆಗೆ ಹರ್ ಘರ್ ಜಲ್ ಮಾಡಲು ಪ್ರತಿ ಗ್ರಾಮೀಣ ಮನೆಗಳಿಗೆ ಟ್ಯಾಪ್ ವಾಟರ್ ಪೂರೈಕೆಯನ್ನು ಒದಗಿಸುವುದು. ಜಲ ಜೀವನ ಮಿಷನ್ (ಜೆಜೆಎಂ) ಯೊಜನೆಯನ್ನು ರಾಜ್ಯಗಳ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸುತ್ತಿದೆ. ಜಲ ಜೀವನ ಮಿಷನ್ (ಜೆಜೆಎಂ) ಯೊಜನೆಯ 2019-20 ಸಾಲಿನಲ್ಲಿ ಒಟ್ಟು ನಿಗದಿಪಡಿಸಿದ ರೂ. 546.06 ಕೋಟಿ ಮೊತ್ತವನ್ನು ಕರ್ನಾಟಕ ಸರ್ಕಾರ ಉಪಯೋಗಿಸಿಕೊಂಡಿದೆ. 2020-21ನೇ ಸಾಲಿನಲ್ಲಿ ರೂ 1189.40 ಕೋಟಿ, 2021-22ನೇ ಸಾಲಿನಲ್ಲಿ ರೂ 5008.80 ಕೋಟಿಗಳಷ್ಟು ರಾಜ್ಯಗಳಿಗೆ ನೀಡಿದೆ ಮತ್ತು ಇದುವರೆಗೆ ರೂ. 596.54 ಕೋಟಿಗಳಷ್ಟು ಈ ಯೋಜನೆಗೆ ಕರ್ನಾಟಕ ಸರ್ಕಾರ ಅನುದಾನವನ್ನು ಬಳಸಿಕೊಂಡಿದೆ. ಈ ಯೋಜನೆಗೆ ಜಿಲ್ಲಾವಾರು ಹಣ ಹಂಚಿಕೆ ರಾಜ್ಯ ಸರ್ಕಾರದ ಮಟ್ಟದಲ್ಲಿ ನಿರ್ಧಾರವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.