spot_img
spot_img

ಭಾವಚಿತ್ರ ರಚನೆಯ ನಾಡಿನ ಹೆಸರಾಂತ ಕಲಾವಿದರು ಬಾಬುರಾವ್ ನಡೋಣಿ

Must Read

- Advertisement -

ಈ ವಿಸ್ತಾರವಾದ ಪ್ರಕೃತಿ ತುಂಬಾ ಸುಂದರಮಯ ರಮಣೀಯವಾಗಿದೆ. ನಿಸರ್ಗದಲ್ಲಿರುವ ಪ್ರತಿಯೊಂದು ವಸ್ತುವೂ ಕಲೆಯಾಗಿದೆ. ಅಸಂಖ್ಯಾತ ವರ್ಣ ಆಕಾರಗಳಿಂದ ಕೂಡಿದ ಈ ಸೃಷ್ಟಿ ಸೌಂದರ್ಯದ ಸೊಬಗನ್ನು ಆಸ್ವಾದಿಸುವ ಮನಸ್ಸು, ಆನಂದಿಸುವ ಗುಣವಿದ್ದರೆ ಎಲ್ಲವೂ ಕಲೆಯ ಆಗರ. ಜುಳು ಜುಳು ಹರಿಯುವ ನೀರಿನ ಶಬ್ಧ, ಗಾಳಿಯಿಂದ ಗಿಡ ಮರಗಳು ಅಲುಗಾಡಿದಾಗ ಸೂಸುವ ನಾದ ನಿನಾದ ಸಂಗೀತಮಯ. ಗುಡ್ಡ ಬೆಟ್ಟಗಳ ಮಧ್ಯೆ ನಿಂತು ಕೂಗಿದಾಗ ಮೂಡುವ ಸಪ್ತಸ್ವರಗಳು ಮನೋ ಉಲ್ಲಾಸಕರ. ಇವು ನಮ್ಮ ಮನಸ್ಸಿಗೆ ಮುದ ನೀಡುತ್ತವೆ. ಸಂಗೀತ ಮತ್ತು ನಿಸರ್ಗದ ಸಮ್ಮಿಲನವನ್ನು ಅನುಭವಿಸಿದಾಗ ಮೂಡುವ ಭಾವ ವರ್ಣಾನಾತೀತ ಎಂದು ಭಾವುಕಾರಾಗಿ ನುಡಿವ ನಾಡಿನ ಕಲಾ ಕ್ಷೇತ್ರದಲ್ಲಿ ಕಳೆದ 40 ವರ್ಷಗಳಿಂದ ತಮ್ಮನ್ನು ತಾವು ತೊಡಗಿಸಿಕೊಂಡು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಡಾ. ಬಾಬುರಾವ್ ನಡೋಣಿ ಬಹುಮುಖ ಪ್ರತಿಭೆಯ ಅಪರೂಪದ ಕಲಾವಿದರು.

ಚಿತ್ರಕಲೆ, ಶಿಲ್ಪಕಲೆ, ಸಾಹಿತ್ಯ, ಸಂಗೀತ, ಕ್ರೀಡೆ, ಯೋಗ, ಕೊಳಲು, ರಂಗೋಲಿ ಹೀಗೆ ಹತ್ತಾರು ಕಲೆಗಳಲ್ಲಿ ನಿತ್ಯ ನಿರತರು. ಭಾವಚಿತ್ರ ಕಲಾವಿದರೆಂದೇ  ಹೆಸರಾದವರು. ಸ್ಕೆಚ್ ಹಾಕದೇ ಕೆಲವೇ ಸಮಯದಲ್ಲಿ ಭಾವಚಿತ್ರ ಬಿಡಿಸುವ ಕೌಶಲ್ಯ ಹೊಂದಿದವರು. ಭಾರತರತ್ನ ಡಾ. ಎ.ಪಿ.ಜೆ.ಅಬ್ದುಲ್ ಕಲಾಂ, ಭಾರತರತ್ನ ಡಾ. ಸಿ.ಎನ್.ಆರ್.ರಾವ್. ಅವರ ಭಾವಚಿತ್ರಗಳನ್ನು ರಚಿಸಿ ಅವರಿಂದಲೇ ಮೆಚ್ಚುಗೆ ಪಡೆದವರು. ರಾಷ್ಟ್ರಕವಿ ಕುವೆಂಪು ಅವರ ಕಾದಂಬರಿಯಲ್ಲಿ ಬರುವ ಸನ್ನಿವೇಶಗಳಿಗೆ ಕಲಾಕೃತಿಗಳನ್ನು ರಚಿಸಿ ಜನಮೆಚ್ಚುಗೆ ಪಡೆದವರು. ಇವರ ಮತ್ತೋರ್ವ ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪರವರ ಭಾವಚಿತ್ರ ರಚನೆ ಮನ ಸೆಳೆಯುವಂಥದ್ದು.   

- Advertisement -

ನಾನು (ಗೊರೂರು ಅನಂತರಾಜು) ಈ ಭಾನುವಾರ (ತಾ.3-3-2024) ಹಾಸನದ ಮನೆ ಮನೆ ಕವಿಗೋಷ್ಠಿ ವತಿಯಿಂದ ಡಾ.ಜಿ.ಎಸ್. ಶಿವರುದ್ರಪ್ಪ ಅವರ ಸಾಹಿತ್ಯ ಅವಲೋಕನ, ಕವಿಗೋಷ್ಠಿ ಏರ್ಪಡಿಸಿದ್ದು ಬಾಬುರಾವ್ ಅವರು ಕಳಿಸಿದ ಪೊರ್ಟ್ರೈಟ್ ವರ್ಕ್ ಮೊದಲೇ ಸಿಕ್ಕಿದ್ದರೆ ವರದಿಗೆ ಬಳಸಿಕೊಳ್ಳಬಹುದಿತ್ತಲ್ಲ ಎಂದು ಪೇಚಾಡಿಕೊಂಡೆ. ಬಾಬುರಾವ್ ಅವರನ್ನು ನಾನು ಬಹಳ ದಿನಗಳಿಂದ ಬಲ್ಲೆ. ಬಹಳ ಹಿಂದೆ ರಾಯಬಾಗ್ ನ ಅವರು ಹಾಸನಕ್ಕೆ ಆಗಿಂದಾಗ್ಗೆ ಬರುತ್ತಾ, ಜಿ.ಎಸ್.ದೇಸಾಯಿ  ಆಗ ಏರ್ಪಡಿಸುತ್ತಿದ್ದ ಕಲಾ ಪ್ರದರ್ಶನ ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿ ಯಾರಾದರೂ ರೂಪದರ್ಶಿಗಳನ್ನು ಎದುರಿಗೆ ಕೂರಿಸಿಕೊಂಡು ರಚಿಸಿದ ಭಾವಚಿತ್ರವನ್ನು ಪ್ರತ್ಯಕ್ಷ ನೋಡಿದ್ದೇನೆ. ಇವರ ಮಡದಿ ಆಶಾರಾಣಿ ಮೇಡಂ ಅವರನ್ನು ಬಾಬುರಾವ್ ವರಿಸುವ ಮೊದಲು ಮೇಡಂ ಚಿತ್ರಗಾರಿಕೆ ಬಗ್ಗೆ ಬರೆದಿದ್ದೆ. ಇವರೇ ಮೊದಲಾದ ಚಿತ್ರ ಕಲಾವಿದರು, ಕಲಾ ಪ್ರದರ್ಶನಗಳ ಕುರಿತಾಗಿ ಆಗಿಂದಾಗೆ ಬರೆದ ಬರಹಗಳನ್ನು ಸೇರಿಸಿ ಪ್ರಕೃತಿ ವಿಕೃತಿ ಕಲಾಕೃತಿ, ಲೋಕ ದೃಷ್ಟಿ ಕಲಾ ಸೃಷ್ಟಿ, ಬಣ್ಣದ ಬದುಕು ಯಾಕೂಬ ಕೃತಿಗಳನ್ನು ಈವರೆಗೆ ಪ್ರಕಟಿಸಿದ್ದೇನೆ. ಲೋಕ ದೃಷ್ಟಿ.. ಕೃತಿಗೆ ನಡೋಣಿಯವರದೇ ಮುನ್ನುಡಿ. ಪೋನ್‍ಗೆ ಸಿಕ್ಕ  ಬಾಬುರಾವ್ ಅವರೊಂದಿಗೆ ಮಾತನಾಡುತ್ತಾ ತಮ್ಮ ಕಲೆಗಾರಿಕೆಯ ಹಲವು ಮಾಹಿತಿಗಳನ್ನು ಹಂಚಿಕೊಂಡರು.

ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವನ್ನು ಹಲವಾರು ಕಲಾವಿದರು ಹಲವು ಬಗೆಯಲ್ಲಿ ರೂಪಿಸಿದ್ದಾರೆ, ನಾನು ಅವರ ಭಾವಚಿತ್ರವನ್ನು ಬೆಲ್ಲದಲ್ಲಿ ರೂಪಿಸಿ ಜನಮೆಚ್ಚುಗೆ ಗಳಿಸಿದ್ದನ್ನು ಸ್ಮರಿಸಿದರು.  ಕೇರಳ ಲಲಿತ ಕಲಾ ಅಕಾಡೆಮಿ ಏರ್ಪಡಿಸಿದ್ದ ರಾಷ್ಟ್ರೀಯ ಕಲಾ ಶಿಬಿರದಲ್ಲಿ 5 ದಿನಗಳಲ್ಲಿ 50 ಭಾವಚಿತ್ರಗಳನ್ನು ರಚಿಸಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ. ಕೇವಲ ಭಾವಚಿತ್ರ ಅಷ್ಟೇ ಅಲ್ಲ ಸೃಜನಶೀಲ ಕಲಾ ರಚನೆಯಲ್ಲೂ ಸಿದ್ಧಹಸ್ತರು. ಇವರ ಕತ್ತಲೆಯಿಂದ ಬೆಳಕಿನೆಡೆಗೆ ಬುದ್ಧ ಸರಣಿಯ ಕಲಾಕೃತಿಗಳು ಸಮಾಜಕ್ಕೆ ಮಾನವೀಯ ಮೌಲ್ಯಗಳ ಸಂದೇಶ ನೀಡುತ್ತವೆ. ನಾದ ನಿನಾದ ಸರಣಿಯ ಕಲಾಕೃತಿಗಳಲ್ಲಿ ಸಂಗೀತ ಮತ್ತು ನಿಸರ್ಗದ ರಮ್ಯ ಸೊಬಗು ವರ್ಣಗಳಲ್ಲಿ ಸಂಯೋಜನೆ ಗೊಂಡಿವೆ. ಇವರು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ 94 ಶಿಬಿರಗಳಲ್ಲಿ ಭಾಗವಹಿಸಿದ ದೇಶ ಸಂಚಾರಿ. ಸದ್ಯವೇ ಸೆಂಚುರಿ ಬಾರಿಸಲ್ಲಿದ್ದಾರೆ.

- Advertisement -

ರಾಜ್ಯ ಸರ್ಕಾರದ ಪ್ರತಿಷ್ಠಿತ ಡಾ. ಅಂಬೇಡ್ಕರ್ ಪ್ರಶಸ್ತಿ, ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಗೌರವ ಪ್ರಶಸ್ತಿ, ಪುಣೆಯ ಲೋಕಮಾನ್ಯ ತಿಲಕ ರಾಷ್ಟ್ರೀಯ ಪ್ರಶಸ್ತಿ, ನಾಗಪುರದ ರಾಷ್ಟ್ರೀಯ ಪ್ರಶಸ್ತಿ ಒಳಗೊಂಡು ಸುಮಾರು 52 ಪ್ರಶಸ್ತಿಗಳ ಹಾಫ್ ಸೆಂಚುರಿ ರೀಚ್ ಆಗಿದ್ದಾರೆ. ಇವರ 25 ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನಗಳು ಬೆಂಗಳೂರು, ದೆಹಲಿ, ಕೇರಳ, ಮುಂಬೈ, ಪುಣೆ, ಗೋವಾ, ಅಂಡಮಾನ್ ನಿಕೋಬಾರ್, ಹೈದ್ರಾಬಾದ್, ಯೂರೋಪ್‍ಗಳಲ್ಲಿ ಏರ್ಪಟ್ಟಿವೆ. 40 ಸಮೂಹ ಕಲಾ ಪ್ರದರ್ಶನಗಳನ್ನು ದೇಶ ವಿದೇಶಗಳಲ್ಲಿ ಏರ್ಪಡಿಸಿ ಅಪಾರ ಮನ್ನಣೆ ಪಡೆದ ಇವರ ಕಲಾಕೃತಿಗಳು ಅನೇಕ ಕಲಾಪ್ರೇಮಿಗಳ ಗೋಡೆಗಳನ್ನು ಅಲಂಕರಿಸಿವೆ. ರಾಷ್ಟ್ರ ಹಾಗೂ ನಾಡಿನ ಕಲಾ ಕಾಲೇಜುಗಳಲ್ಲಿ ನೂರಾರು ಪ್ರಾತ್ಯಕ್ಷಿಕೆಗಳನ್ನು ನೀಡಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯ ಕುಪ್ಪಳ್ಳಿಯಲ್ಲಿ ಏರ್ಪಡಿಸಿದ್ದ ಪಠ್ಯಪುಸ್ತಕ ಕ್ರಮ ಶಿಬಿರದಲ್ಲಿ, ಅಲ್ಲಮ ಪ್ರಭು ಲಲಿತ ಕಲಾ ಮಹಾವಿದ್ಯಾಲಯ ಮೈಸೂರು, ಕಾವಾ ಹಾಗೂ ಶ್ರೀ ಕಲಾನಿಕೇತನ ಮೈಸೂರು, ಚಿತ್ರಕಲಾ ಪರಿಷತ್ ಬೆಂಗಳೂರು. ವಿಜಯ ಮಹಾಂತೇಶ ಲಲಿತ ಕಲಾ ಮಹಾವಿದ್ಯಾಲಯ ಇಲಕಲ್, ಗ್ಲೋಬಲ್ ಆರ್ಟ್ ಫೌಂಡೇಶನ್ ಹುಮ್ನಾಬಾದ್ ಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ.

ದಿನಾಂಕ 1-6-1963ರಲ್ಲಿ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಜನಿಸಿದ ಇವರು 1986ರಲ್ಲಿ ಜಿ.ಡಿ.ಫೈನ್ ಆರ್ಟ್ ಕುವೆಂಪು ಯೂನಿವರ್ಸಿಟಿ ಕಾಲೇಜ್ ಆಫ್ ಫೈನ್ ಆರ್ಟ್, ದಾವಣಗೆರೆ ಇಲ್ಲಿ ಮಾಸ್ಟರ್ ಆಫ್ ವಿಜುವಲ್ ಆರ್ಟ್ ಪದವಿಧರರು. ರಾಯಬಾಗದ ವಿವೇಕಾನಂದ ಕಾಲೇಜ್ ಆಫ್ ಫೈನ್ ಆರ್ಟ್ ಹಿರಿಯ ಉಪನ್ಯಾಸಕರು. ಲಲಿತ ಕಲಾ ಅಕಾಡೆಮಿ ಮಾಜಿ ಸದಸ್ಯರು.  ಇವರ ಕಲಾ ಪ್ರತಿಭೆ ಗುರುತಿಸಿ 2021ನೇ ಸಾಲಿನ ಚಿತ್ರ ಕಲಾಶಿಲ್ಪಿ ಡಿ.ವ್ಹಿ. ಹಾಲಭಾವಿ ಟ್ರಸ್ಟ್  ಕುಂಚ ಕಲಾಶ್ರೀ ರಾಷ್ಟ್ರೀಯ ಪ್ರಶಸ್ತಿ ನೀಡಿ  ಸನ್ಮಾನಿಸಿದೆ.

ಇವರು ಕನ್ನಡ ದೃಶ್ಯಕಲಾ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಪರಿಗಣಿಸಿ 2023-24ನೇ ಸಾಲಿನ ದೃಶ್ಯ ಬೆಳಕು ಗೌರವ ಪುರಸ್ಕಾರಕ್ಕೆ ಆಯ್ಕೆ ಮಾಡಿ ಇದೇ ಭಾನುವಾರ (ತಾ.3-3-2024) ಕಲಬುರಗಿಯ ರಂಗಾಯಣದಲ್ಲಿ ದೃಶ್ಯ ಬೆಳಕು ಸಾಂಸ್ಕೃತಿಕ ಸಂಸ್ಥೆಯ 10ನೇ ವಾರ್ಷಿಕ ಕಲಾ ಪ್ರದರ್ಶನದಲ್ಲಿ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಅಭಿನಂದನೆಗಳು ಬಾಬುರಾವ್ ಸರ್.


ಗೊರೂರು ಅನಂತರಾಜು, ಹಾಸನ. 

ಮೊ: 9449462879.

ವಿಳಾಸ: ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.

- Advertisement -
- Advertisement -

Latest News

ಸಿಂದಗಿ ಅಧ್ಯಕ್ಷರಾಗಿ ಶಾಂತವೀರ, ಉಪಾಧ್ಯಕ್ಷರಾಗಿ ರಾಜಣ್ಣಿ ಆಯ್ಕೆ

ಸಿಂದಗಿ; ಪಟ್ಟಣದ ಪುರಸಭೆಯ ಅಧ್ಯಕ್ಷ, ಉಪಾದ್ಯಕ್ಷರ ಅವಧಿ ಮುಗಿದು ಹಲವು ವರ್ಷಗಳು ಕಳೆದಿತ್ತು ಅದು ಅ. ೨೮ ರಂದು ಚುನಾವಣೆ ಪ್ರಕ್ರಿಯೆ ಪ್ರಾರಂಭಿಸಿ ಸೆ.೯ ದಿನಾಂಕ...
- Advertisement -

More Articles Like This

- Advertisement -
close
error: Content is protected !!
Join WhatsApp Group