ಬದುಕು ಅದೆಷ್ಟು ಸಲ ಮಗ್ಗಲು ಬದಲಿಸಿದರೂ ಗಮನಿಸದಷ್ಟು ವ್ಯಸ್ತರಾಗಿದ್ದೇವೆ. ಸಾವಿನ ಕರೆಗಂಟೆಯ ಸದ್ದು ಬಂದಾಗ, ಎದುರುತ್ತರ ನೀಡದೇ ಎದ್ದು ಹೊರಡಲೇಬೇಕು ಅಂತ ಗೊತ್ತಿದ್ದರೂ ದೇವರಿಗೆ ಕೈ ಜೋಡಿಸಿ ತಲೆ ಬಾಗಲು ಪುರುಸೊತ್ತಿಲ್ಲ ನಮಗೆ. ಒಂದು ಕ್ಷಣ ಕುಳಿತು ಕಿಟಕಿಯಾಚೆಯ ಪೃಕೃತಿಯನ್ನು ನೋಡುತ್ತ ಹಬೆಯಾಡುವ ಬಿಸಿ ಬಿಸಿ ಕಾಫಿಯನ್ನು ಸವಿಯಲೂ ಸಮಯವಿಲ್ಲ. ಕೊನೆ ಗಳಿಗೆಯಲ್ಲಿ ಸುಂದರ ಜೀವನ ನನ್ನದಾಗಬಹುದಿತ್ತು. ಛೇ! ನನ್ನ ಬುದ್ಧಿಗೆ ಮಂಕು ಕವಿದಿತ್ತು. ಅಪ್ಪ ಅವ್ವನ ಮಾತುಗಳಲ್ಲಿ ಹುರುಳಿಲ್ಲ ಎಂಬ ಭ್ರಮೆ ನನ್ನ ಬದುಕನ್ನೇ ಭಸ್ಮಗೊಳಿಸಿತು ಎಂದು ಗೊಣುಗುತ್ತಿರುವವರನ್ನು ಕಂಡೂ ನಾವು ಬದಲಾಗುತ್ತಿಲ್ಲ. ಬದುಕು ಧಾರಾಳವಾಗಿ ನೀಡಿದ ಅಪಾರ ಅವಕಾಶಗಳನ್ನು ಹರವಿ ನೋಡಿದರೆ ಬದುಕು ಚೆಂದಗಾಣಿಸಬಹುದಿತ್ತೆಂದು ಕಣ್ಣೀರು ಕೋಡಿಯಾಗಿ ಹರಿಸಿದವರನ್ನು ಕಂಡೂ ನಾವು ಬದಲಾಗುತ್ತಿಲ್ಲ.
ಕಾಲನ ಕೈಗೆ ಸಿಕ್ಕು ನೆನಪು ಮತ್ತೆ ಮತ್ತೆ ಹಿಂದಕ್ಕೋಡುತ್ತದೆ. ಬಂಗಾರದಂಥ ಬಾಲ್ಯದ ಸವಿ ನೆನಪುಗಳ ಬುತ್ತಿಯಲ್ಲಿ ಮುಳುಗಿ ಕಣ್ಣೊರೆಸಿಕೊಳ್ಳುತ್ತೇವೆ. ಒಲೆ ಉರಿಸುತ್ತಿದ್ದ ಅವ್ವ ನಮ್ಮೆಲ್ಲ ಬಯಕೆಗಳಿಗೆ ತಲೆಯಾಡಿಸುತ್ತಿದ್ದಳು..ಹೆಗಲೇಗಿರಿದ ಜವಾಬ್ದಾರಿಗಳ ಮೂಟೆ ದೊಡ್ಡದಿದ್ದರೂ ನಮ್ಮನ್ನು ಹೆಗಲಿಗೇರಿಸಿಕೊಂಡು ನಲಿಯುತ್ತಿದ್ದ ಅಪ್ಪ. ಹೀಗೆ ಒಂದೆರಡಲ್ಲ ಸಾವಿರಾರು ನೆನಪುಗಳು ಸಾವಿನ ನಿಲ್ದಾಣದಲ್ಲಿ ಕಾದಿರುವಾಗ ಕಾಡುತ್ತವೆ. ಸರಿ ಸುಮಾರಾಗಿ ಹಿಂಸೆಯಾಗುಷ್ಟು ರುಬ್ಬುತ್ತವೆ. ಬದುಕು ಇನ್ನೂ ಜೀವಂತವಿರುವಾಗಲೇ ಸತ್ತು ಬಿಡುತ್ತೇವೆ. ಇಷ್ಟಾದರೂ ಧ್ರುವನಂತೆ ಚಿರಂಜೀವಿಯಾಗಬೇಕೆಂದು ಬಯಸುತ್ತೇವೆ.
‘ಈ ಜಗತ್ತಿನಲ್ಲಿ ಅತಿ ಅದ್ಭುತ ಸಂಗತಿ ಯಾವುದು?’ ಎಂಬ ಯಕ್ಷನ ಪ್ರಶ್ನೆಗೆ ಧರ್ಮರಾಯ ‘ಪ್ರತಿದಿನ ಅದೆಷ್ಟೋ ಜೀವಿಗಳು ಸಾಯುತ್ತಿರುವುದನ್ನು ನೋಡುತ್ತಿದ್ದರೂ ಬದುಕಿರುವ ಮಂದಿ ಶಾಶ್ವತವಾಗಿರಲು ಬಯಸುತ್ತಾರೆ.ಇದಕ್ಕಿಂತ ಇನ್ನೇನು ಅದ್ಭುತವಿದೆ? ಎಂದು ಉತ್ತರಿಸಿದನಂತೆ. ಹುಟ್ಟಿನ ಬೆನ್ನಿಗಂಟಿಕೊಂಡೇ ಸಾವೂ ಬಂದಿದೆ. ಜನುಮ ದಿನದಿಂದಲೇ ಸಾವಿನತ್ತ ಪಯಣ ಶುರುವಾಗಿದೆ. ಪ್ರತಿ ದಿನ ಸಾವಿಗೆ ಸಮೀಪಿಸುತ್ತಿದ್ದೇವೆಂಬ ಕಲ್ಪನೆಯಿಲ್ಲದೇ ಕದ್ದು ಕೀಳುವುದರಲ್ಲಿ, ಕಲ್ಲು ಹೊಡೆದು ಕೆಡುವುದರಲ್ಲಿ ನಿಷ್ಣಾತರಾಗುತ್ತಿದ್ದೇವೆ. ಮಿತಿಮೀರಿದ ಬಯಕೆಗಳ ಡೊಂಬರಾಟವೂ ನಡದೇ ಇದೆ. ಬಯಕೆಗಳ ರೋಗಕ್ಕೆ ಮದ್ದೆಂದರೆ ಇಲ್ಲಿರುವ ಯಾವುದೂ ಶಾಶ್ವತವಲ್ಲವೆಂಬ ಎಚ್ಚರ. ಅದುವೇ ಮೃತ್ಯು ಪ್ರಜ್ಞೆ.
’ಅಜರಾಮರವತ್ ಪ್ರಾಜ್ಞೋ ವಿದ್ಯಾಮರ್ಥಂಚ ಸಾಧಯೇತ್ ಗ್ರಹೀತ ಇವ ಕೇಶೇಷು ಮೃತ್ಯುನಾ ಧವರ್iಮಾಚರೇತ್
ಬುದ್ಧಿಶಾಲಿಯಾದವನು ಮುಪ್ಪೂ ಇಲ್ಲ ಮರಣವೂ ಇಲ್ಲ ಎನ್ನುವಂತೆ ವಿದ್ಯೆ ಹಾಗೂ ಧನವನ್ನು ಸಂಪಾದಿಸಬೇಕು. ಮೃತ್ಯು ಬಂದು ತನ್ನ ಜುಟ್ಟನ್ನು ಹಿಡಿದುಕೊಂಡಿರುವುದೇನೋ ಎಂಬಂತೆ ಧರ್ಮವನ್ನಾಚರಿಸಬೇಕು.ಎನ್ನುತ್ತದೆ ಈ ಸುಭಾಷಿತ.
ಮೃತ್ಯು ಪ್ರಜ್ಞೆ ಬದುಕಿನಿಂದ ವಿಮುಖವಾಗಿಸುವುದಲ್ಲ. ಬಯಕೆಗಳಿಗೆ ಕಡಿವಾಣ ಹಾಕುತ್ತದೆ. ಮೃತ್ಯುವಿನ ಸಮ್ಮುಖದಲ್ಲಿ ಬದುಕುವುದನ್ನು ಕಲಿಸುತ್ತದೆ. ಹೀಗೆ ಬದುಕಿದವರು ಬುದ್ಧ ಬಸವ ಮಹಾವೀರರು ಇನ್ನೂ ಅನೇಕರು. ಬನ್ನಿ ಇವರ ಸಾಲಿನಲ್ಲಿಯೇ ನಾವೂ ಹೆಜ್ಜೆ ಹಾಕೋಣ. ಮೃತ್ಯು ಮುಟ್ಟುವ ಮುನ್ನ ಜೀವಿಸೋಣ!
ಜಯಶ್ರೀ ಜೆ. ಅಬ್ಬಿಗೇರಿ
9449234142