spot_img
spot_img

Bhimappa Gadad: ಆಚಾರ ಹೇಳುತ್ತ ಬದನೆಕಾಯಿ ತಿನ್ನುವ ಭೀಮಪ್ಪ ಗಡಾದ

Must Read

- Advertisement -

ಮೂಡಲಗಿ: ಬದನೆಕಾಯಿ ತಿನ್ನಬೇಡಿ ಎಂದು ತುಂಬಿದ ಸಭೆಯಲ್ಲಿ ಆಚಾರ ಹೇಳಿ ಮನೆಗೆ ಬಂದು ಹೆಂಡತಿ ಕೈಯಿಂದ ಬದನೆಕಾಯಿ ಪಲ್ಯ ಮಾಡಿಸಿಕೊಂಡು ಗಡದ್ದಾಗಿ ಹೊಡೆದ ಆಚಾರ್ಯರ ಕತೆಯಂತಾಗಿದೆ ಈ ಭಾಗದ ಸೋ ಕಾಲ್ಡ್ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಅವರ ಕತೆ!

ಇವರು ಮಾತೆತ್ತಿದರೆ ಸಾಕು ತಾನು ಭ್ರಷ್ಟಾಚಾರ ವಿರೋಧಿ ಹೋರಾಟಗಾರ, ಪ್ರಾಮಾಣಿಕತೆಯ ಇನ್ನೊಂದು ತುಂಡು ತಾನೇ ಎಂದು ಹೇಳಿಕೊಳ್ಳುತ್ತಾರೆ. ಭ್ರಷ್ಟ ಅಧಿಕಾರಿಗಳಿಗೆ ತಾನು ಸಿಂಹಸ್ವಪ್ನ ಎನ್ನುತ್ತಾರೆ ಆದರೆ ಇವರು ಈ ವರೆಗೆ ಯಾವುದೇ ಅಧಿಕಾರಿಯ ಭ್ರಷ್ಟಾಚಾರದ ಪ್ರಕರಣವನ್ನು ಬಯಲಿಗೆಳೆದಿರುವ ಸುದ್ದಿ ಇಲ್ಲವೇ ಇಲ್ಲವೆನ್ನುವಷ್ಟು ವಿರಳವಾಗಿವೆ ! ಭ್ರಷ್ಟಾಚಾರ ಮಾತ್ರ ಸರ್ಕಾರಿ ಕಚೇರಿಗಳಲ್ಲಿ ನಿರಂತರವಾಗಿ ನಡೆಯುತ್ತಲೇ ಇರುತ್ತದೆ ! ಅದು ಹೋಗಲಿ, ಗಡಾದ ಅವರು ಬೇರೆಯವರ ಭ್ರಷ್ಟಾಚಾರವನ್ನು ಬಯಲಿಗೆ ಎಳೆಯುವುದಾಗಿ ಬೊಬ್ಬಿರಿಯುತ್ತ ತಾವೇ ಸ್ವತಃ ಫೀಲ್ಡಿಗೆ ಇಳಿದು ಬಿಟ್ಟಿದ್ದು ಗ್ರಾಮೀಣಾಭಿವೃದ್ಧಿ ಸಂಸ್ಥೆಯೊಂದರಲ್ಲಿ ತಮ್ಮ ಪತ್ನಿಯನ್ನು ಸದಸ್ಯೆಯನ್ನಾಗಿಸಿ, ತಮ್ಮ ಚೇಲಾನೊಬ್ಬನನ್ನು ಅಧ್ಯಕ್ಷನನ್ನಾಗಿಸಿ ಅವರ ಮೂಲಕ ಸಾರ್ವಜನಿಕರ ಹಣವನ್ನು ವಿವಿಧ ಕಾರ್ಯಕ್ರಮಗಳನ್ನು ಮಾಡಿದ್ದಾಗಿ ಲೆಕ್ಕ ತೋರಿಸಿ ಗ್ರಾಮೀಣಾಭಿವೃದ್ಧಿ ಇಲಾಖೆ, ಸಹಕಾರ ಇಲಾಖೆ ಅಲ್ಲದೆ ಸಮಾಜ ಕಲ್ಯಾಣ ಇಲಾಖೆಗೂ …ಹೀಗೆ ಸಂಬಂಧ ಪಟ್ಟ ಇಲಾಖೆಗಳಿಗೆ ಮಂಕುಬೂದಿ ಎರಚಿರುವುದು ದಾಖಲೆಗಳಿಂದ ಬಹಿರಂಗವಾಗಿದೆ.

- Advertisement -

ಮೂಡಲಗಿ ತಾಲೂಕಿನ ನಾಗನೂರ ಗ್ರಾಮದಲ್ಲಿ ಅನಿತಾ ಗ್ರಾಮೀಣಾಭಿವೃದ್ಧಿ ಸಂಸ್ಥೆ ಎಂಬ ಸಂಸ್ಥೆಯಲ್ಲಿ ಗಡಾದ ಅವರ ಪತ್ನಿ ಸದಸ್ಯೆಯಾಗಿದ್ದು ತಮ್ಮ ‘ಖಾಸಾ’ ಚೇಲಾನೊಬ್ಬನನ್ನು ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿ ನಖಶಿಖಾಂತ ಭ್ರಷ್ಟನಾಗಿರುವ ಆತನ ಮೂಲಕ ಲಕ್ಷಾಂತರ ರೂ.ಗಳನ್ನು ಸಂಸದರ ನಿಧಿಯಿಂದ, ವಿಧಾನ ಪರಿಷತ್ ಸದಸ್ಯರಿಂದ ಹಾಗೂ ಸಾರ್ವಜನಿಕರಿಂದ ದೇಣಿಗೆಯ ರೂಪದಲ್ಲಿ ಸಂಗ್ರಹಿಸಿ ಅನೇಕ ಕಾರ್ಯಕ್ರಮಗಳಿಗೆ ಖರ್ಚು ಮಾಡಿದ್ದಾಗಿ ತೋರಿಸಿ ಗುಳುಂ ಮಾಡಿದ್ದಾರೆ. ಈ ಕಾರ್ಯಕ್ರಮಗಳು ನಡೆದೇ ಇಲ್ಲ ! 

ಗ್ರಾಮೀಣ ಅಭಿವೃದ್ಧಿ ಯ ಹೆಸರಿನಲ್ಲಿ ಇವರು ಮಾಡಿರುವ ಕಾರ್ಯಕ್ರಮಗಳ ಹೆಸರುಗಳ ಲಿಸ್ಟ್ ನೋಡಿ…. ಅಗರ ಬತ್ತಿ ಟ್ರೇನಿಂಗ್ !, ನಾಗನೂರ ಭಾಗದಲ್ಲಿ ಅರಣ್ಯ ಅಭಿವೃದ್ಧಿ ಕಾರ್ಯಕ್ರಮ !!, ಝರಿ ಎಂಬ್ರಾಯ್ಡರಿ ಟ್ರೇನಿಂಗ್, ಹೊಲಿಗೆ ತರಬೇತಿ ಕಾರ್ಯಕ್ರಮ ( ಒಂದೇ ಒಂದು ಹೊಲಿಗೆ ಯಂತ್ರ ತಂದಿದ್ದು ಕಂಡಿಲ್ಲ ), ರೈತರ ಕಲ್ಯಾಣ ಕಾರ್ಯಕ್ರಮವಂತೆ ( ಈ ಭಾಗದ ಯಾವ ರೈತ ಉದ್ಧಾರವಾದನೋ ದೇವರಿಗೂ ಗೊತ್ತಿಲ್ಲ !), ಮಹಿಳಾ ಕಲ್ಯಾಣ (?) ಕಾರ್ಯಕ್ರಮ, HIV ತಿಳಿವಳಿಕೆ ಕಾರ್ಯಕ್ರಮ, ಪಲ್ಸ್ ಪೋಲಿಯೋ ಕಾರ್ಯಕ್ರಮ…..ಹೀಗೆ  ಅಂತೆ ! ಕಂತೆ!

- Advertisement -

ಹೀಗೆ ಅನೇಕ ಚಿತ್ರ ವಿಚಿತ್ರ ಕಾರ್ಯಕ್ರಮಗಳ ಹೆಸರಿನಲ್ಲಿ ದುಡ್ಡು ಖರ್ಚಾಗಿದ್ದು ಈವರೆಗೂ ಯಾವುದೇ ಕಾರ್ಯಕ್ರಮ ನಡೆದ ಉದಾಹರಣೆಯೇ ಇಲ್ಲ! ಯಾಕೆಂದರೆ, ಈ ಸಂಸ್ಥೆಯ ಕಚೇರಿ ಇರುವುದು ಸಮರ್ಥ ಎಂಬ ಶಾಲೆಯಲ್ಲಿ, ಶಾಲೆ ಇರುವುದು ತೋಟದಲ್ಲಿ, ಅದರ ಪಕ್ಕದಲ್ಲಿಯೇ ನಾವೂ ಇರುವುದು ! ಯಾವ ಮಾಯದಲ್ಲಿ ಕಳೆದ ಎಂಟು ವರ್ಷಗಳಿಂದ ಈ ಎಲ್ಲ ಕಾರ್ಯಕ್ರಮಗಳು ನಡೆದವೋ ಶಿವನೇ ಬಲ್ಲ! 

ಗಡಾದ ಅವರು ಒಬ್ಬ ಮಾಹಿತಿ ಹಕ್ಕು ಕಾರ್ಯಕರ್ತ. ಸರ್ಕಾರಿ ಅಧಿಕಾರಿಗಳ ಭ್ರಷ್ಟಾಚಾರದ ಬಗ್ಗೆ ಪ್ರಶ್ನೆ ಮಾಡುತ್ತಾರೆ, ಸುವರ್ಣ ಸೌಧಕ್ಕೆ ಅಷ್ಟು ಖರ್ಚಾಯಿತು, ಅಧಿವೇಶನದಲ್ಲಿ ಪೊಲೀಸರ ಊಟಕ್ಕೆ ಇಷ್ಟು ಹಣ ಖರ್ಚು ಮಾಡಲಾಗಿದೆ, ಸರ್ಕಾರಿ ದುಡ್ಡು ಪೋಲಾಗುತ್ತಿದೆ ಎಂದೆಲ್ಲ ಬೊಬ್ಬೆ ಹಾಕುತ್ತಾರೆ ಆದರೆ ಗ್ರಾಮೀಣಾಭಿವೃದ್ಧಿ ಯ ಹೆಸರಿನಲ್ಲಿ ಸಾರ್ವಜನಿಕರ ದೇಣಿಗೆ ಹಣವನ್ನು ತಮ್ಮ ಜೇಬಿಗೆ ಹಾಕಿಕೊಂಡಿದ್ದನ್ನು ಯಾರಿಗೆ ಹೇಳುತ್ತಾರೆ ? ಆ ದುಡ್ಡಿಗೇನು ಅವ್ವ ಅಪ್ಪ ಇರೋದೇ ಇಲ್ಲವಾ ?

ಇತ್ತೀಚೆಗೆ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಈ ಸೋ ಕಾಲ್ಡ್ ಸಾಮಾಜಿಕ ಕಾರ್ಯಕರ್ತ ಹೊಸ ಸೋಗು ಹಾಕಿದ್ದರು. (ಹಾಗೆ ನೋಡಿದರೆ ಇವರ ಈ ನಾಟಕ ಹೊಸದೇನಲ್ಲ) ಅದೇನೆಂದರೆ, ತಾನು ಬಡವನಾಗಿದ್ದು, ರಾಜಕೀಯದ ಹಿನ್ನೆಲೆ ಹೊಂದಿಲ್ಲ ಆದ್ದರಿಂದ ಚುನಾವಣೆಗೆ ಸ್ಪರ್ಧಿಸಲು ಸಾರ್ವಜನಿಕರು ಹಣ ನೀಡಬೇಕೆಂದು ಅಕ್ಷರಶಃ ಭಿಕ್ಷಾ ಪಾತ್ರೆ ಹಿಡಿದವರಂತೆ ವಿಡಿಯೋದಲ್ಲಿ ಗೋ ಮುಖದ ಪೋಜು ನೀಡಿದ್ದರು!    

ಅಲ್ರೀ, ೧೮ ಲಕ್ಷದ ಕಾರಿನಲ್ಲಿ ಒಬ್ಬ ಚೇಲಾನನ್ನೂ, ಒಬ್ಬ ಸೆಕ್ಯುರಿಟಿಯನ್ನೂ ಸ್ನೇಹಿತರನ್ನೂ ಕರೆದುಕೊಂಡು ರಾಜ್ಯದ ಎಲ್ಲಾ ಕಡೆಗೆ ಪ್ರತಿದಿನವೂ ಸಿಕ್ಕಾಪಟ್ಟೆ ಖರ್ಚು ಮಾಡಿಕೊಂಡು ತಿರುಗುವ ಈ ಕಾರ್ಯಕರ್ತ ಯಾವ ಆ್ಯಂಗಲ್ ನಲ್ಲಿ ಬಡವನಂತೆ ಕಾಣಿಸುತ್ತಾನೆ ಎಂಬುದೇ ಕೋಟಿ ರೂಪಾಯಿಯ ಪ್ರಶ್ನೆಯಾಗಿದೆ ! ಯಾಕೆಂದರೆ, ಮೂಡಲಗಿ ಅಲ್ಲದೆ ಬೇರೆ ಬೇರೆ ಕಡೆಯೂ ಗಡಾದ ಅವರ ಹೆಸರಿನಲ್ಲಿ ಅಲ್ಲದೆ ಇವರ ಚೇಲಾನ ಹೆಸರಿನಲ್ಲಿಯೂ ಅಪಾರ ಪ್ರಮಾಣದ ಆಸ್ತಿ ಇರುವುದಾಗಿ ಜನತೆ ಮಾತನಾಡುತ್ತಿದ್ದು ಈ ಬಗ್ಗೆ ತನಿಖೆಯಾಗಬೇಕಾಗಿದೆ. ಯಾಕೆಂದರೆ, ಇವರ ಚೇಲಾ ನಡೆಸುತ್ತಿರುವ ಶಾಲೆಯನ್ನು ಕೂಡ ಗಡಾದ ಅವರ ಶಾಲೆಯೇ ಎಂದು ಜನ ತಿಳಿದುಕೊಂಡಿದ್ದಾರೆ.

ಗಡಾದ ಅವರು ತಮ ‘ಜನತಾ ಉದ್ಧಾರ’ ಸಭೆಗಳನ್ನು ಇದೇ ಶಾಲೆಯಲ್ಲಿ ಹಮ್ಮಿಕೊಳ್ಳುತ್ತಾರೆ ! ಅದರ ಕಟ್ಟಡ ನಿಂತಿರುವುದೇ ಭ್ರಷ್ಟಾಚಾರದ ಅಡಿಪಾಯದ ಮೇಲೆ. ಎಂಟು ವರ್ಷಗಳ ಈ ಶಾಲೆ ಇನ್ನೂ ಕೆಲವು ನಿಯಮಗಳನ್ನು ಪಾಲನೆ ಮಾಡದೇ ನಡೆದಿದೆಯೆಂದರೆ ಶಿಕ್ಷಣ ಇಲಾಖೆಯ ಜೊತೆ ಇವರದು ಎಂಥ ಅನೈತಿಕ ಸಂಬಂಧ ಇರಬೇಕು ? ವಿಚಾರ ಮಾಡಬೇಕಾದ ವಿಷಯವಲ್ಲವೆ ? ಯಾಕೆಂದರೆ ಒಂದೇ ನಿಯಮ ಪಾಲನೆಯಾಗದೇ ಇದ್ದರೆ ಶಾಲೆಯ ಆರಂಭಕ್ಕೆ ತೊಡಕು ಹಾಕುವ ಶೈಕ್ಷಣಿಕ ಅಧಿಕಾರಿಗಳು ಈ ಶಾಲೆಯನ್ನು ಎಂಟು ವರ್ಷಗಳಿಂದ ಎತ್ತಿ ಹಿಡಿದಿದ್ದಾರೆ ಎಂದರೆ ಇವರಿಗೆ ‘ಭ್ರಷ್ಟಾಚಾರ ವಿರೋಧಿ ಹೋರಾಟಗಾರ’ ನ ಭಯ ಇದೆಯಾ ? ಶಿಕ್ಷಣ ಅಧಿಕಾರಿಗಳು ಉತ್ತರಿಸಬೇಕು.

ಜಾರಕಿಹೊಳಿಯವರು ಜೈಲಿಗೆ ಹೋಗುವುದು ಯಾವಾಗ?

ಭೂತದ ಬಾಯಲ್ಲಿ ಭಗವದ್ಗೀತೆ ಎಂಬಂತೆ ಚುನಾವಣೆಯಲ್ಲಿ ಗಡಾದ ಅವರು ಭಾಷಣ ಮಾಡುವಾಗ ತಮ್ಮನ್ನು ಆರಿಸಿ ತಂದರೆ    ಜಾರಕಿಹೊಳಿ ಸಹೋದರರನ್ನು ಜೈಲಿಗೆ ಕಳುಹಿಸುವುದಾಗಿ ಗುಡುಗಿದ್ದರು! (ಅದೇನು ಬೆಕ್ಕಿನ ಮರಿ ಅಂತ ತಿಳಕೊಂಡಾನೇನ! ಅಂತ ಜಾರಕಿಹೊಳಿ ಅಭಿಮಾನಿಗಳು ಮಾತನಾಡಿಕೊಂಡರು) ಆದರೆ ಸ್ವತಃ ಭ್ರಷ್ಟಾಚಾರ ಮಾಡುವ ವ್ಯಕ್ತಿಗೆ ಬೇರೆಯವರ ಬಗ್ಗೆ ಮಾತನಾಡುವ ಯಾವ ನೈತಿಕ ಹಕ್ಕಿದೆ ? ಇವರ ಯೋಗ್ಯತೆ ತಿಳಿದುಕೊಂಡ ಮತದಾರರು ಚುನಾವಣೆಯಲ್ಲಿ ಬಿಸಾಡಿ ಒಗೆದರು. ಅಷ್ಟಕ್ಕೂ ಜಾರಕಿಹೊಳಿಯವರನ್ನು ಜೈಲಿಗೆ ಕಳುಹಿಸಲು ಇವರಿಗೆ ಶಾಸಕ ಸ್ಥಾನ ಏಕೆ ಬೇಕು ? ಹೈಕೋರ್ಟ್ ಇದೆ, ಸುಪ್ರೀಂ ಕೋರ್ಟ್ ಇದೆ  ಅಲ್ಲಿಗೆ ಮನವಿ ಕೊಟ್ಟರಾಯಿತು. ವಿಚಾರಣೆ ನಡೆಯುತ್ತದೆ ಆದರೆ ಜಾಣ ಭೀಮಪ್ಪ ಗಡಾದ ಅಲ್ಲಿಗೆಲ್ಲ ಹೋಗುವುದಿಲ್ಲ ಅವರ ಗರ್ಜನೆ ಕೇವಲ ಜನರ ಚಪ್ಪಾಳೆ ಗಿಟ್ಟಿಸಲು ಅಷ್ಟೇ ಎಂಬುದು ಜನರಿಗೆ ತಿಳಿದೇ ಇವರನ್ನು ಗೋತಾ ಹಾಕಿದರು! ಆದರೆ ಇವರ ಹಗರಣ ಬಯಲಿಗೆಳೆಯುವವರು ಯಾರು ? 

ಗಡಾದ ಅವರ ಇನ್ನೊಂದು ವಿಚಿತ್ರವೆಂದರೆ, ಇವರು ಯಾವುದೇ ಹಗರಣ ಅಥವಾ ಭ್ರಷ್ಟಾಚಾರದ ಬಗ್ಗೆ ಗುಡುಗಿದರೂ ಮುಂದೆ ಅದರ ಬಗ್ಗೆ ಮೌನ ತಾಳುತ್ತಾರೆ. ಸಮಾಜ ಸುಧಾರಕನ ವೇಷದಲ್ಲಿ ಪ್ರತಿದಿನ ಮನೆಯಿಂದ ಹೊರಬೀಳುವ ಇವರ ಟೋಳಿ ಭ್ರಷ್ಟ ಅಧಿಕಾರಿಗಳ ಬೇಟೆಗೆ ಇಳಿಯುತ್ತದೆ. ಗಡಾದ ಅವರು ಸಂವಿಧಾನವನ್ನೇ ಬಗಲಲ್ಲಿ ಇಟ್ಟುಕೊಂಡಿದ್ದಾರಂತೆ! (ಹಾಗಂತ ಇವರ ಚೇಲಾ ಭೋಂಗು ಬಿಟ್ಟು ಡೀಲಿಗೆ ಇಳಿಯುತ್ತಾನೆ. ಇದೇ ರೀತಿ ನನಗೂ ಮದ್ದು ಇಡಲು ಬಂದ ಆದರೆ ಆಟ ನಡೆಯಲಿಲ್ಲ) ಅಧಿಕಾರಿಗಳ ಎದುರು ಯಾವುದೋ ಸೆಕ್ಷನ್ ಉದುರಿಸಿ ಬಿಡುತ್ತಾರೆ. ಅಧಿಕಾರಿ ಬಗ್ಗಿದರೆ ಮುಗಿಯಿತು ಬಗ್ಗದಿದ್ದರೆ ಒಂದು ಪತ್ರಿಕಾಗೋಷ್ಠಿ ಕರೆದು ಎಲ್ಲವನ್ನೂ ಬಹಿರಂಗಗೊಳಿಸುವುದಾಗಿ ಬೆದರಿಕೆ ಹಾಕುವುದು. ಆಮೇಲೆ ಏನಾಗುತ್ತೋ ಗೊತ್ತಿಲ್ಲ ಗಡಾದ ಅವರೂ ಮೌನ ಗೌರಿಯಾಗುತ್ತಾರೆ ! ಇತ್ತ ಸಮರ್ಥ ಶಾಲೆಗೆ ಎಂಟು ವರ್ಷಗಳ ನಂತರ ಬೇಲಿಯೋ, ಸಿಸಿ ಕ್ಯಾಮರಾಗಳೋ ಬಂದು ಬಿಡುತ್ತವೆ ! ( ಶಾಲೆ ಆರಂಭದಿಂದಲೂ ಪಾಲನೆಯಾಗದ ನಿಯಮಗಳು ಈಗ ಒಂದೊಂದಾಗಿ ಪಾಲನೆಯಾಗುತ್ತಿವೆ ಎಂದರೆ ನಮ್ಮ ವಲಯದ ಬಿಇಓ, ಜಿಲ್ಲೆಯ ಡಿಡಿಪಿಐ ಯಾವ ರೀತಿ ಇವರಿಗೆ ಸಹಕರಿಸಿರಬಹುದು ಎಂಬ ಬಗ್ಗೆ ಮುಂದಿನ ದಿನಗಳಲ್ಲಿ ಬರೆಯಲಾಗುವುದು. ಬರೆಯ ಹೊರಟರೆ ಗಡಾದರ ಈ ಶಾಲೆ ಹಾಗೂ ಮೂಡಲಗಿ ಶೈಕ್ಷಣಿಕ ವಲಯದ ಬಗ್ಗೆ ಕರ್ಮಕಾಂಡವೇ ಬಿಚ್ಚಿಕೊಳ್ಳುತ್ತದೆ)

ಸಮಾಜದ ನಕಲಿ ಸುಧಾರಕ ಭೀಮಪ್ಪ ಗಡಾದ ಅವರ ಬಗ್ಗೆ ಇನ್ನೂ ಅನೇಕ ‘ದಂತಕತೆ’ ಗಳು ನಮ್ಮ ಭಾಗದಲ್ಲಿ ಅಷ್ಟೇ ಅಲ್ಲದೆ ಕರ್ನಾಟಕದಾದ್ಯಂತ ಹರಿದಾಡುತ್ತಿವೆ ಅವುಗಳನ್ನು ಮುಂಬರುವ ದಿನಗಳಲ್ಲಿ ಧಾರಾವಾಹಿಯ ರೂಪದಲ್ಲಿ ತೆರೆದಿಡಲಾಗುತ್ತದೆ. ನಮ್ಮ ವೀಕ್ಷಕರು ನೋಡಿ ಧನ್ಯರಾದರೆ ಸಾಕು. ಮೂಡಲಗಿಯ ಸುಪುತ್ರನ ಕಂಡು ಶ್ರೀ ಶಿವಬೋಧರಂಗನೂ ಕೂಡ ಹರಹರ ಮಹಾದೇವ ಅನ್ನಬಹುದು ! ನಿರೀಕ್ಷಿಸಿ…..


ಉಮೇಶ ಬೆಳಕೂಡ, ಮೂಡಲಗಿ

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ರೇವಣಸಿದ್ದಯ್ಯನವರ ಪುಣ್ಯಸ್ತ್ರೀ ರೇಕಮ್ಮ ಹನ್ನೆರಡನೇ ಶತಮಾನ ಎಂಬುದು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವ ಬಹುಮುಖ್ಯ ಕಾಲಘಟ್ಟ. ಶರಣರು ರಚಿಸಿದ ವಚನಗಳನ್ನು ಕನ್ನಡ ಸಾಹಿತ್ಯದ ಉಪನಿಷತ್ತುಗಳು ಎಂದು...
- Advertisement -

More Articles Like This

- Advertisement -
close
error: Content is protected !!
Join WhatsApp Group