ಸರ್ಕಾರದಿಂದ ಪುನೀತ್ ರಾಜ್‌ಕುಮಾರ್‌ಗೆ ಮತ್ತೊಂದು ಗೌರವ……..
ಅಕ್ಟೋಬರ್ 29 ರಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ನಮ್ಮ ಪ್ರೀತಿಯ ಅಪ್ಪು ನಮ್ಮನ್ನು ಅಗಲಿ ನಮ್ಮೆಲ್ಲರ ಹೃದಯದಲ್ಲಿ ಕೊನೆವರೆಗೂ ಮಾಸದ ನೋವು ಹುಟ್ಟಿದ ದಿನ. ಆದರೂ ಅವರ ನೆನಪು ಮಾತ್ರ ಕಿಂಚಿತ್ತೂ ಮಾಸಿಲ್ಲ. ಕನ್ನಡಿಗರ ಮನೆ ಮನಗಳಲ್ಲಿ ಅವರು ಚಿರಸ್ಥಾಯಿಯಾಗಿ ನೆಲೆಸಿದ್ದಾರೆ.
ವೈಯಕ್ತಿಕ ಹಾಗೂ ಸಾಮಾಜಿಕ ಕಾರ್ಯಗಳಿಂದಾಗಿ ದೇಶದೆಲ್ಲೆಡೆ ಅಪಾರ ಜನರ ಪ್ರೀತಿ ಗಳಿಸಿದ್ದ ಪುನೀತ್ ರಾಜ್ ಕುಮಾರ್ ಅವರಿಗೆ ಸರ್ಕಾರ ಹಾಗೂ ಸಂಘ ಸಂಸ್ಥೆಗಳಿಂದ ಗೌರವಗಳು ಇಂದಿಗೂ ಮುಂದುವರೆದಿವೆ. ಯುವಕರ ಪಾಲಿಗೆ ಸ್ಪೂರ್ತಿಯಾಗಿದ್ದ ದಿವಂಗತ ಪುನೀತ್ ರಾಜ್ ಕುಮಾರ್ ಅವರಿಗೆ ರಾಜ್ಯ ಸರ್ಕಾರದಿಂದ ಅತ್ಯುನ್ನತ ಗೌರವ ಸಿಕ್ಕಿದೆ.
ದೊಡ್ಮನೆ ರಾಜಕುಮಾರ ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ, ಅವರ ನೆನಪುಗಳ ಜೊತೆ ಅಭಿಮಾನಿಗಳು ಹೇಗೋ ಜೀವನ ಮಾಡ್ತಿದ್ದಾರೆ. ಅವರು ನಮ್ಮೊಡನಿಲ್ಲ ಅಂತ ಅಭಿಮಾನಿಗಳು ಅಂದುಕೊಂಡೇ ಇಲ್ಲ. ಹೀಗೆ ಪ್ರತಿ ದಿನ ಪ್ರತಿ ಕ್ಷಣ ಅಭಿಮಾನಿಗಳಿಗೆ, ಅದೆಷ್ಟೋ ಯುವಜನರಿಗೆ, ಯುವ ನಟ-ನಟಿಯರಿಗೆ ಯುವರತ್ನನೇ ಸ್ಫೂರ್ತಿಯಾಗಿದ್ದಾರೆ. ಇದೀಗ ಅವರ ಜನ್ಮದಿನವನ್ನು ‘ಸ್ಫೂರ್ತಿ ದಿನ’ ವನ್ನಾಗಿ ( Inspiration Day ) ರಾಜ್ಯ ಸರ್ಕಾರ ಆಚರಿಸುತ್ತಿದೆ.
ಸ್ಯಾಂಡಲ್‌ವುಡ್‌ನ ಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ದೈಹಿಕವಾಗಿ ನಮ್ಮನ್ನು ಅಗಲಿದ್ದಾರೆ. ಆದ್ರೆ ಕನ್ನಡಿಗರು, ಅದರಲ್ಲೂ ಅವರ ಅಭಿಮಾನಿಗಳು ಒಂದೇ ಒಂದು ಕ್ಷಣ ಅವರನ್ನು ಮರೆತಿಲ್ಲ, ಮರೆಯುವುದೂ ಇಲ್ಲ. ಕನ್ನಡಿಗರ ಎದೆಯಲ್ಲಿ ಅಪ್ಪು ಎಂದಿಗೂ ಜೀವಂತ.
ಮಾರ್ಚ್ 17, ಸ್ಫೂರ್ತಿ ದಿನ
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹುಟ್ಟಿದ್ದು ಮಾರ್ಚ್ 17, 1975. ಪ್ರತಿ ವರ್ಷ ಅಭಿಮಾನಿಗಳು ಈ ದಿನವನ್ನು ಅಪ್ಪು ಹಬ್ಬವನ್ನಾಗಿ ಆಚರಣೆ ಮಾಡುತ್ತಾರೆ. ಪುನೀತ್ ರಾಜ್‌ಕುಮಾರ್ ದೈಹಿಕವಾಗಿ ತಮ್ಮೊಡನೆ ಇರಲಿ, ಇಲ್ಲದಿರಲಿ ಅವರ ಹೆಸರಲ್ಲಿ ಅಭಿಮಾನಿಗಳು ಹುಟ್ಟುಹಬ್ಬ ಆಚರಿಸುತ್ತಾರೆ. ಇದೀಗ ಈ ದಿನವನ್ನು ಸ್ಫೂರ್ತಿ ದಿನವನ್ನಾಗಿ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಅಪ್ಪು ಜನ್ಮದಿನ, ಮಾರ್ಚ್ 17 ನ್ನು ಸ್ಫೂರ್ತಿ ದಿನವೆಂದು ಆಚರಿಸುವ ಮೂಲಕ ನಾಡಿನ ಲಕ್ಷಾಂತರ ಯುವಕರಿಗೆ ಸ್ಫೂರ್ತಿಯಾಗಲಿದೆ.
ಹಾಗೆಯೇ ಅಂತಹ ಅದ್ಭುತ, ಅಮೋಘ ವ್ಯಕ್ತಿತ್ವ ನಮ್ಮ ನಿಮ್ಮೆಲ್ಲರಿಗೂ ಸ್ಫೂರ್ತಿಯಾಗಲಿ ಎಂದು ಆಶಿಸುವ
ಹೇಮಂತ ಚಿನ್ನು
ಕರ್ನಾಟಕ ಶಿಕ್ಷಕರ ಬಳಗ