spot_img
spot_img

ಹೊಸಪುಸ್ತಕ ಓದು: ಸಂಶೋಧಕರಿಗೊಂದು ಅಮೂಲ್ಯ ಆಕರ ಗ್ರಂಥ

Must Read

- Advertisement -

ಸಂಶೋಧಕರಿಗೊಂದು ಅಮೂಲ್ಯ ಆಕರ ಗ್ರಂಥ

  • ಪುಸ್ತಕದ ಹೆಸರು : ಪ್ರಸಾದ ವರ್ಗೀಕೃತ ಲೇಖನ ಸೂಚಿ
  • ಸಂಪಾದಕರು : ಡಾ. ಎಸ್. ಆರ್. ಗುಂಜಾಳ
  • ಪ್ರಕಾಶಕರು : ಜಗದ್ಗುರು ಶ್ರೀ ಶಿವರಾತ್ರೀಶ್ವರ ಗ್ರಂಥಮಾಲೆ, ಮೈಸೂರು, ೨೦೨೩
  • ಪುಟ : ೨೭೮ ಬೆಲೆ : ರೂ. ೨೦೦

ಡಾ. ಎಸ್. ಆರ್. ಗುಂಜಾಳ ಅವರು ಸಂಪಾದಿಸಿದ ‘ಪ್ರಸಾದ ವರ್ಗೀಕೃತ ಪರಿಷ್ಕೃತ ಲೇಖನ ಸೂಚಿ’ ಕೃತಿ ಸಂಶೋಧಕರಿಗೊಂದು ಅಮೂಲ್ಯ ಆಕರ ಗ್ರಂಥವಾಗಿದೆ. ಮೈಸೂರಿನ ಸುತ್ತೂರು ಶ್ರೀ ಜಗದ್ಗುರು ವೀರಸಿಂಹಾಸನ ಮಠದ ಜೆ.ಎಸ್.ಎಸ್. ಮಹಾವಿದ್ಯಾಪೀಠದಿಂದ ೧೯೬೮ರಿಂದ ಪ್ರಕಟವಾಗುತ್ತಿರುವ ಪ್ರಸಾದ ಪತ್ರಿಕೆಯಲ್ಲಿ ಪ್ರಕಟವಾದ ಲೇಖನಗಳ ಸೂಚಿ ಇದು. 

 ಡಾ. ಎಸ್. ಆರ್. ಗುಂಜಾಳ ಅವರು ೧೯೯೫ರಲ್ಲಿ ನಿವೃತ್ತಿ ಜೀವನ ಕಳೆಯಲೆಂದು ಬೆಳಗಾವಿಗೆ ಬಂದರು. ಆಗ ನಾಗನೂರು ಶ್ರೀ ರುದ್ರಾಕ್ಷಿಮಠದ ಪೂಜ್ಯ ಶ್ರೀ ಡಾ. ಸಿದ್ಧರಾಮ ಸ್ವಾಮೀಜಿ (ಈಗ ಗದುಗಿನ ಜಗದ್ಗುರು ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ) ಅವರು ಡಾ. ಗುಂಜಾಳ ಗುರುಗಳನ್ನು ಶ್ರೀಮಠಕ್ಕೆ ಕರೆಯಿಸಿ, ಇಲ್ಲೊಂದು ಶರಣ ಸಾಹಿತ್ಯದ ಸಮಗ್ರ ಸಂಗ್ರಹದ ಸಂಶೋಧನ ಕೇಂದ್ರವನ್ನು ಸ್ಥಾಪಿಸಬೇಕೆಂಬ ಅಭಿಪ್ಸೆ ವ್ಯಕ್ತಪಡಿಸಿದರು. ಪೂಜ್ಯ ಜಗದ್ಗುರುಗಳ ಕ್ರಿಯಾಶಕ್ತಿ, ಡಾ. ಗುಂಜಾಳ ಗುರುಗಳ ಜ್ಞಾನಶಕ್ತಿ ಕಾರಣವಾಗಿ ೧೯೯೫ ಜೂನ ತಿಂಗಳಲ್ಲಿ ಬೆಳಗಾವಿ ಮಹಾನಗರದಲ್ಲಿ ‘ಲಿಂಗಾಯತ ಸಂಶೋಧನ ಕೇಂದ್ರ ಗ್ರಂಥಾಲಯ’ ಅಸ್ತಿತ್ವಕ್ಕೆ ಬಂದಿತು. ಈ ಕೇಂದ್ರದಲ್ಲಿ ಶರಣ ಸಾಹಿತ್ಯ ಕುರಿತಾದ ಗ್ರಂಥಗಳು ಮಾತ್ರವಲ್ಲದೆ, ಶರಣ ಸಾಹಿತ್ಯವನ್ನು ಕುರಿತು ಪ್ರಕಟವಾಗುವ ಎಲ್ಲ ಪತ್ರಿಕೆಗಳನ್ನೂ ಸಂಗ್ರಹಿಸುವ ಕಾರ್ಯ ಭರದಿಂದ ಸಾಗಿತು. ಡಾ. ಗುಂಜಾಳ ಗುರುಗಳಿಗೆ ಪುಸ್ತಕಗಳಿಗಿಂತ, ಪತ್ರಿಕೆಗಳ ಬಗ್ಗೆ ಹೆಚ್ಚು ಒಲವು ಇತ್ತು. ಪತ್ರಿಕೆಗಳಲ್ಲಿ ಸಂಶೋಧನಾತ್ಮಕ ಲೇಖನಗಳಿರುವುದರಿಂದ ಅಧ್ಯಯನಕ್ಕೆ ಹೆಚ್ಚು ಸೂಕ್ತ ಎಂಬುದು ಅವರ ಅಭಿಪ್ರಾಯ. ಈ ಒಲವು ಕಾರಣವಾಗಿ ತುಂಬ ಕಷ್ಟಪಟ್ಟು ಡಾ. ಹಳಕಟ್ಟಿಯವರ ‘ಶಿವಾನುಭವ’ ಪತ್ರಿಕೆಯ ೩೫ ವರ್ಷದ ಸಂಚಿಕೆಗಳನ್ನು ಸಂಗ್ರಹಿಸಿದರು. ಬಿ. ಶಿವಮೂರ್ತಿ ಶಾಸ್ತ್ರಿಗಳ ‘ಶರಣ ಸಾಹಿತ್ಯ’, ಶಿರಾಳಕೊಪ್ಪದ ಚೆನ್ನಮಲ್ಲಿಕಾರ್ಜುನರ ‘ಸದ್ಧರ್ಮ ದೀಪಿಕೆ’, ಶಿ. ಶಿ. ಬಸವನಾಳರ ‘ಪ್ರಬೋಧ’, ಮೈಸೂರು ಸುತ್ತೂರು ಮಠದ ‘ಪ್ರಸಾದ’, ಸಿದ್ಧಗಂಗಾಮಠದ ‘ಸಿದ್ಧಗಂಗಾ’, ಮೂರುಸಾವಿರಮಠದ ‘ಪರಂಜ್ಯೋತಿ’ ಮೊದಲಾದ ಪತ್ರಿಕೆಯ ಹಳೆಯ ಸಂಚಿಕೆಗಳನ್ನು ಸಂಗ್ರಹಿಸತೊಡಗಿದರು. ಎಲ್ಲ ಸಂಚಿಕೆಗಳು ಕೂಡಿ ಒಂದು ಸಂಪುಟವಾದರೆ, ತಕ್ಷಣ ಅವುಗಳನ್ನು ಬೈಂಡ್ ಮಾಡಿಸುತ್ತಿದ್ದರು. ಹೀಗೆ ಸಂಗ್ರಹಿಸಿದ ಶಿವಾನುಭವ ಪತ್ರಿಕೆಯ ೩೫ ವರ್ಷದ ಲೇಖನ ಸೂಚಿಯನ್ನು ಡಾ. ಗುಂಜಾಳ ಗುರುಗಳೇ ಸಿದ್ಧಪಡಿಸಿದರು. ಈ ಸೂಚಿ ಪ್ರಕಟವಾದ ಮೇಲೆ, ಹಳಕಟ್ಟಿಯವರ ಸಾಹಿತ್ಯದ ನೆಲೆ ಬೆಲೆ ಸಿದ್ಧೇಶ್ವರ ಸ್ವಾಮಿಗಳನ್ನು ಮೊದಲು ಮಾಡಿಕೊಂಡು ಎಲ್ಲರಿಗೂ ಮನದಟ್ಟಾಯಿತು. ಸಿದ್ಧೇಶ್ವರ ಶ್ರೀಗಳು ಈ ಸೂಚಿ ಗಮನಿಸಿ, ಡಾ. ಹಳಕಟ್ಟಿಯವರ ಸಮಗ್ರ ಸಾಹಿತ್ಯ ಪ್ರಕಟವಾಗಲಿ ಎಂದು ಆದೇಶ ಮಾಡಿದರು. ಡಾ. ಗುಂಜಾಳ ಅವರ ಶ್ರಮ ಸಾರ್ಥಕವಾಯಿತು. ೧೫ ಸಂಪುಟಗಳಲ್ಲಿ ಡಾ. ಹಳಕಟ್ಟಿಯವರ ಸಮಗ್ರ ಸಾಹಿತ್ಯ ಪ್ರಕಟವಾಯಿತು. ಪ್ರಾಯಶಃ ಡಾ. ಗುಂಜಾಳ ಗುರುಗಳು ಶ್ರಮವಹಿಸದಿದ್ದರೆ, ನಾಗನೂರು ಶ್ರೀಗಳು ಆಸಕ್ತಿ ತೋರಿಸದೇ ಹೋಗಿದ್ದರೆ ಡಾ. ಹಳಕಟ್ಟಿಯವರ ಸಾಹಿತ್ಯ ನಮಗಿಂದು ಪೂರ್ಣಪ್ರಮಾಣದಲ್ಲಿ ಸಿಗುತ್ತಿರಲಿಲ್ಲ. ಡಾ. ಹಳಕಟ್ಟಿಯವರ ಸಾಹಿತ್ಯವನ್ನು ಪುನರುಜ್ಜೀವನಗೊಳಿಸಿದ ಶ್ರೇಯಸ್ಸು ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಹಾಗೂ ಡಾ. ಗುಂಜಾಳ ಈ ಉಭಯತರಿಗೂ ಸಲ್ಲಬೇಕು.

- Advertisement -

 ‘ಶಿವಾನುಭವ ಲೇಖನ ಸೂಚಿ’ ಸಿದ್ಧಗೊಂಡನಂತರ, ಬೆಂಗಳೂರಿನ ಒಂದು ಪತ್ರಿಕೆಯ ಸೂಚಿಯನ್ನು ಡಾ. ಗುಂಜಾಳ ಗುರುಗಳು ಸಿದ್ಧಗೊಳಿಸಿದರು. ಆದರೆ ಅದನ್ನು ಪ್ರಕಟಿಸುವ ಪರಿಜ್ಞಾನ ಆ ಪತ್ರಿಕೆಯ ಪ್ರಕಾಶಕರಿಗೆ ಇಲ್ಲದ ಕಾರಣ, ಅದು ಪ್ರಕಟವಾಗಲಿಲ್ಲ. ನಂತರ ಗುರುಗಳು ಕೈಗೆತ್ತಿಕೊಂಡಿದ್ದೆ, ಪ್ರಸಾದ ಪತ್ರಿಕೆಯ ಸೂಚಿಕಾರ್ಯವನ್ನು. ಸುತ್ತೂರು ಜಗದ್ಗುರು ಶ್ರೀ ಡಾ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರು ೧೯೬೮ರಲ್ಲಿ  ಪ್ರಸಾದ ಪತ್ರಿಕೆಯನ್ನು ಪ್ರಾರಂಭ ಮಾಡಿದರು. ಆ ವರ್ಷ ಬಸವಣ್ಣನವರ ಅಷ್ಟಶತಮಾನೋತ್ಸವ ಸಮಾರಂಭವೂ ಇಡೀ ನಾಡಿನಾದ್ಯಂತ ಜರುಗಿತು. ಅಂದಿನಿಂದ ೨೦೨೨ರವರೆಗೆ ನಿರಂತರವಾಗಿ ಪ್ರಸಾದ ಪತ್ರಿಕೆ ದ್ವೆöÊಮಾಸಿಕವಾಗಿ ಪ್ರಕಟವಾಗುತ್ತ ಬಂದಿದೆ. (ಇತ್ತೀಚೆಗೆ ಅದು ಮಾಸಿಕವಾಗಿ ಪ್ರಕಟವಾಗುತ್ತಿದೆ) ಒಟ್ಟು ೫೪ ವರ್ಷಗಳ ಅವಧಿಯಲ್ಲಿ ೨೦೮೮ ಸಂಶೋಧನಾತ್ಮಕ ಲೇಖನಗಳನ್ನು ಈ ಪತ್ರಿಕೆ ಪ್ರಕಟ ಮಾಡಿದೆ. ಇದೊಂದು ಪ್ರತ್ಯೇಕ ಪಿಎಚ್.ಡಿ. ಅಧ್ಯಯನದ ವಿಷಯವೇ ಆಗುತ್ತದೆ. ಈ ಎಲ್ಲ ಲೇಖನಗಳನ್ನು ಡಾ. ಗುಂಜಾಳ ಅವರು ಶರಣ ಸಾಹಿತ್ಯಕ್ಕೆ ಅನುಗುಣವಾಗಿ ಹೊಸದೊಂದು ವರ್ಗೀಕರಣ ಪದ್ಧತಿಯನ್ನು ರಚನೆ ಮಾಡಿರುವುದು ಶರಣ ಸಾಹಿತ್ಯಾಭ್ಯಾಸಿಗಳು ಸಂತಸ ಪಡುವ ಸಂಗತಿಯಾಗಿದೆ. ಈ ವರ್ಗೀಕರಣದನ್ವಯ ಲೇಖನಗಳನ್ನು ಆಯಾ ವಿಷಯಕ್ಕೆ ಅನುಗುಣವಾಗಿ ಜೋಡಿಸಲಾಗಿದೆ. ಹೀಗಾಗಿ ಯಾವುದೇ ಒಂದು ವಿಷಯವನ್ನು ಕುರಿತು ತಕ್ಷಣ ಯಾವ ಲೇಖನ ಪ್ರಕಟವಾಗಿದೆ ಎಂಬುದನ್ನು ಸಂಶೋಧಕರು ನೋಡಬಹುದು. ಅಷ್ಟೊಂದು ವೈಜ್ಞಾನಿಕ ತಳಹದಿಯ ಮೇಲೆ ಈ ಸೂಚಿಯನ್ನು ಸಿದ್ಧಗೊಳಿಸಿದ್ದಾರೆ. ಪ್ರಾಯಶಃ ಎಸ್. ಎಸ್. ಎಲ್.ಸಿ. ಕಲಿತ ವಿದ್ಯಾರ್ಥಿಗೂ ಅರ್ಥವಾಗುವ ಸರಳ ದಶಾಂಶ ವರ್ಗೀಕರಣವನ್ನು ಡಾ. ಗುಂಜಾಳ ಗುರುಗಳು ಕೊಟ್ಟಿರುವುದು ಅತ್ಯಂತ ಔಚಿತ್ಯಪೂರ್ಣವಾಗಿದೆ. 

 ಶಾಸನ, ಕವಿಚರಿತೆ, ತತ್ವಜ್ಞಾನ, ಧರ್ಮ, ಗುರು, ಲಿಂಗ, ಜಂಗಮ, ಷಟ್‌ಸ್ಥಲ, ಪಂಚಾಚಾರ, ಶಿವಯೋಗ-ಅನುಭಾವ, ಮಠಗಳು, ಧರ್ಮ ಸಂಸ್ಕಾರಗಳು, ಕಾಯಕ, ದಾಸೋಹ, ಸಮಾಜಸೇವೆ, ಭಾಷಾಶಾಸ್ತç, ವಚನ ಸಾಹಿತ್ಯ, ಸಂಸ್ಕೃತ ಸಾಹಿತ್ಯ, ಶೂನ್ಯಸಂಪಾದನೆ, ಪುರಾಣ, ಚಂಪೂ, ರಗಳೆ, ತ್ರಿಪದಿ, ಅಷ್ಟಕ ಮೊದಲಾದ ಕಾವ್ಯ ಪ್ರಕಾರಗಳು, ಅನುಭಾವಿ ಕವಿಗಳು, ಜೀವನ ಚರಿತ್ರೆ, ಬಸವಣ್ಣ, ಪ್ರಭುದೇವ, ಅಕ್ಕಮಹಾದೇವಿ, ಸಿದ್ಧರಾಮ, ತೋಂಟದ ಸಿದ್ಧಲಿಂಗ ಶಿವಯೋಗಿ, ಶರಣರ ಚರಿತ್ರೆಗಳು, ಶರಣೆಯರ ಚರಿತ್ರೆಗಳು, ಅರಸು ಮನೆತನಗಳು, ಮೈಸೂರು ಅರಸು ಮನೆತನ, ಕೆಳದಿ ಅರಸು ಮನೆತನ ಹೀಗೆ ಅನೇಕ ವಿಷಯಗಳಿಗೆ ಸಂಬಂಧಿಸಿದ ಮೌಲಿಕ ಲೇಖನಗಳು ಪ್ರಸಾದ ಪತ್ರಿಕೆಯಲ್ಲಿ ಪ್ರಕಟವಾಗಿವೆ.

ಇವುಗಳನ್ನು ಆಧರಿಸಿ ಒಂದು ಸಾಂಸ್ಕೃತಿಕ ಅಧ್ಯಯನವನ್ನೇ ಮಾಡಬಹುದಾಗಿದೆ.

- Advertisement -

 ಸೂಚಿಯಲ್ಲಿ ಮೊದಲಿಗೆ ಲೇಖಕರ ಹೆಸರು, ಅದರ ಕೆಳಗೆ ಲೇಖನದ ಹೆಸರು, ಸಂಪುಟ, ಸಂಚಿಕೆ, ಪುಟ, ಪ್ರಕಟವಾದ ತಿಂಗಳು ಮತ್ತು ವರ್ಷ. ಇಷ್ಟು ವಿವರಗಳಿವೆ. ಕೊನೆಯಲ್ಲಿ ಲೇಖಕರ ಅಕಾರಾದಿ ಪಟ್ಟಿಯಿದೆ. ಅದರಿಂದ ಯಾವ ಲೇಖಕ ಎಷ್ಟು ಲೇಖನಗಳನ್ನು ಬರೆದಿದ್ದಾನೆ ಎಂಬುದನ್ನು ತಕ್ಷಣ ನೋಡಬಹುದು. ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮಿಗಳು, ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು, ಸಿಪಿಕೆ, ಗಂಗಾಧರನ್ ಎಚ್. ಮಲೆಯೂರು ಗುರುಸ್ವಾಮಿ, ಎಸ್. ಆರ್. ಗುಂಜಾಳ, ತಿಪ್ಪೇಸ್ವಾಮಿ, ಎಚ್. ವಿ. ನಾಗರಾಜರಾವ್, ವಿ. ಜಿ. ಪೂಜಾರ, ಮಹಾದೇವಮೂರ್ತಿ ಡಿ. ಎಂ. ವಿಜಯಕುಮಾರ ಮಹಾನುಭಾವಿಗಳು, ಎಸ್. ಶಿವಣ್ಣ, ಎಫ್.ಟಿ.ಹಳ್ಳಿಕೇರಿ ಇವರು ಅತಿ ಹೆಚ್ಚು ಲೇಖನಗಳನ್ನು ಬರೆದವರು. ಒಂದೊಂದೆ ಲೇಖನಗಳನ್ನು ಬರೆದವರು ಇದ್ದಂತೆ, ಐದರಿಂದ ಇಪ್ಪತ್ತರವರೆಗೆ ಲೇಖನಗಳನ್ನು ಬರೆದವರೂ ಇದ್ದಾರೆ. ಈ ಐವತ್ತು ವರ್ಷಗಳ ಸುದೀರ್ಘ ಕಾಲಘಟ್ಟದಲ್ಲಿ ಪ್ರಕಟವಾದ ಲೇಖನಗಳಿರುವುದರಿಂದ, ಆಯಾ ಕಾಲಮಾನದ ವಸ್ತುಸ್ಥಿತಿಯನ್ನು ಈ ಲೇಖನಗಳು ನಮಗೆ ತಿಳಿಸುತ್ತವೆ.

 ಶ್ರದ್ಧೆ, ಪರಿಶ್ರಮ, ಗ್ರಂಥಾಲಯ ಶಾಸ್ತ್ರದ ನವೀನ ಶಾಸ್ತ್ರೀಯ ದೃಷ್ಟಿಯ ಪರಿಪಾಕ ಕಾರಣವಾಗಿ ಈ ಸೂಚಿ ಅತ್ಯಂತ ವೈಜ್ಞಾನಿಕವಾಗಿ ರಚನೆಗೊಂಡಿದೆ. ಈ ಬಗೆಯ ಗ್ರಂಥಗಳ ಅಪೂರ್ವತೆ, ಮಹತ್ವ ಇದು ಸಾಮಾನ್ಯವಾಗಿ ಅನೇಕರಿಗೆ ತಿಳಿಯಲಾಗದು. ಒಂದು ವಿಷಯವನ್ನು ಕುರಿತು ಆಮೂಲಾಗ್ರವಾಗಿ ವ್ಯಾಸಂಗ ಮಾಡಬೇಕೆಂದಾಗ ಅದಕ್ಕೆ ಬೇಕಾಗುವ ಲೇಖನಗಳು ಎಷ್ಟಿವೆ? ಲೇಖನಗಳು ಎಲ್ಲಿ ಸಿಕ್ಕಬಹುದು? ಇತ್ಯಾದಿ ಮಾತುಗಳೊಡನೆ ಸಂಶೋಧನಾ ವಿಷಯದ ಮಾಹಿತಿಯನ್ನು ಒಳಗೊಳ್ಳುವ ‘ಪ್ರಸಾದ ಲೇಖನ ಸೂಚಿ’ಯಂತಹ ಅಭ್ಯಾಸ ಮಾರ್ಗದರ್ಶಿಕೆಗಳ ಹಿರಿಮೆಯನ್ನು ಎಷ್ಟೆಂದು ಹೇಳಬೇಕು? ಕರ್ನಾಟಕ ಸಂಸ್ಕೃತಿಯ ವ್ಯಾಸಂಗಿಗಳಿಗೂ, ಶರಣ ಸಾಹಿತ್ಯದ ಶ್ರದ್ಧಾವಂತರು, ಅಭ್ಯಾಸಿಗಳು ಆದವರಿಗೂ  ಈ ಗ್ರಂಥವು ಒಂದು ಕೈಗನ್ನಡಿಯಾಗುವುದೆಂಬಲ್ಲಿ ಸಂದೇಹವಿಲ್ಲ. 

 ಸುತ್ತೂರು ಜಗದ್ಗುರು ಮಹಾಸನ್ನಿಧಿಯವರು – “ಡಾ. ಎಸ್. ಆರ್. ಗುಂಜಾಳರವರು ಗ್ರಂಥಾಲಯ ಕ್ಷೇತ್ರದಲ್ಲಿ ತಲಸ್ಪರ್ಶಿ ಅಧ್ಯಯನ ಮಾಡಿದ ವಿದ್ವಾಂಸರಲ್ಲೊಬ್ಬರಾಗಿದ್ದಾರೆ. ಈ ಲೇಖನ ಸೂಚಿಯ ವರ್ಗೀಕರಣದ ಕೆಲಸವನ್ನು ಅವರು ಅತ್ಯಂತ ಸಮರ್ಥವಾಗಿ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಇಂತಹ ಅಗಾಧವಾದ ಮತ್ತು ಶ್ರಮಸಾಧ್ಯವಾದ ಕೆಲಸವನ್ನು ಅವರು ತುಂಬು ಪ್ರೀತಿ, ವಿಶ್ವಾಸಗಳಿಂದ ಮತ್ತು ವಿದ್ವತ್ಕಾರ್ಯವೆಂಬ ಆಸಕ್ತಿಯಿಂದ ಮಾಡಿಕೊಟ್ಟಿದ್ದಾರೆ.” ಎಂದು ಶುಭ ಹಾರೈಸಿದ್ದಾರೆ.

 ಡಾ. ಗುಂಜಾಳ ಗುರುಗಳು ಸೂಚಿಶಿಲ್ಪವನ್ನು ಕುರಿತು ವಿಸ್ತಾರವಾಗಿ ನಿರೂಪಿಸಿ, ಸೂಚಿಯನ್ನು ರಚನೆ ಮಾಡಿದ ರೀತಿ, ಅದನ್ನು ಉಪಯೋಗಿಸುವ ರೀತಿ ಕುರಿತು ವಿವರಿಸಿದ್ದಾರೆ. ಕನ್ನಡದಲ್ಲಿ ಅತಿ ಹೆಚ್ಚು ಸೂಚಿಗಳನ್ನು ಸಿದ್ಧಗೊಳಿಸಿದ ಕೀರ್ತಿ ಡಾ. ಗುಂಜಾಳ ಗುರುಗಳವರದು.  ಗ್ರಂಥ ಸೂಚಿ, ಲೇಖನ ಸೂಚಿಗಳ ನಿರ್ಮಾಣದಲ್ಲಿ ಅವರದು ಪಳಗಿದ ಪರಿಣತ ಕೈ. ಇಂತಹ ಹಿರಿಯ ವಿದ್ವಾಂಸರ ಗರಡಿಯಲ್ಲಿ ನಾನು ಕೆಲವು ವರ್ಷ ಸೂಚಿ ಕಾರ್ಯದಲ್ಲಿ ಸಹಾಯ ಮಾಡಿದ್ದೆ ಎಂಬುದೇ ನನ್ನ ಪರಮ ಸೌಭಾಗ್ಯವೆನಿಸಿದೆ. 

 ಇಂತಹ ಸೂಚಿಗಳ ಮಹತ್ವ ಸಾಮಾನ್ಯರಿಗೆ ಅರ್ಥವಾಗುವುದಿಲ್ಲ. ಸಂಶೋಧನೆಯಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಂಡವರಿಗೆ ಇದರ ಮಹತ್ವ ತಿಳಿದಿರುತ್ತದೆ. ಡಾ. ಚಿದಾನಂದಮೂರ್ತಿ, ಡಾ. ಹಿರೇಮಲ್ಲೂರ ಈಶ್ವರನ್, ಡಾ. ಶಂಬಾ ಜೋಶಿ, ಡಾ. ಪಿ. ಬಿ. ದೇಸಾಯಿ ಮೊದಲಾದ ವಿದ್ವಾಂಸರು ಡಾ. ಗುಂಜಾಳ ಅವರು ಸಿದ್ಧಪಡಿಸಿದ ಸೂಚಿಗಳ ಆಧಾರದ ಮೇಲೆ ತಮ್ಮ ಸಂಶೋಧನೆಗೆ ಬಹಳಷ್ಟು ಉಪಕಾರವಾಯಿತೆಂದು ಅತ್ಯಂತ ಕೃತಜ್ಞತಾಭಾವದಿಂದ ಸ್ಮರಿಸಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಸುತ್ತೂರು ಜಗದ್ಗುರು ಮಹಾಸನ್ನಿಧಿಯವರು ಈ ಸೂಚಿಯ ಮಹತ್ವವನ್ನು ಬಲ್ಲವರಾದ ಕಾರಣ, ಇದನ್ನು ೨೦೦೯ರಲ್ಲಿಯೇ ಮೊದಲ ಮುದ್ರಣವಾಗಿ ಪ್ರಕಟಿಸಿದ್ದರು. ಪರಿಷ್ಕೃತ ಆವೃತ್ತಿಯಾಗಿ ಈಗ ಮತ್ತೆ ಪ್ರಕಟಿಸಿರುವುದು ಅವರ ವಿದ್ವತ್‌ಪ್ರೀತಿ, ಸಾಹಿತ್ಯ ಕಾಳಜಿಗೆ ಪರಮ ನಿದರ್ಶನವೆನಿಸಿದೆ. ಉಳಿದ ಮಠಾಧೀಶರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರೆ, ಶರಣ ಸಾಹಿತ್ಯ ವಾಗ್ದೇವಿಯ ಭಂಡಾರವೇ ಲೋಕದೆದುರು ಒಡೆದು ತೋರಬಹುದು. 

 ಡಾ. ಗುಂಜಾಳ ಗುರುಗಳಿಗೆ ಈಗ ೯೨ ವರ್ಷ. ಈ ಇಳಿವಯಸ್ಸಿನಲ್ಲಿಯೂ ಅವರು ತುಂಬ ಉತ್ಸಾಹ ಲವಲವಿಕೆಯಿಂದ ಶರಣ ಸಾಹಿತ್ಯ ಚಿಂತನೆಯಲ್ಲಿಯೇ ಕಾಲ ಕಳೆಯುತ್ತಾರೆ. (ರವಿವಾರ ೧೭-೩-೨೦೨೪ರಂದು ನಿನ್ನೆ) ಪುಸ್ತಕಗಳು ಅವರ ಕೈ ಸೇರಿದವು. ತಕ್ಷಣ ನನ್ನನ್ನು ಕರೆಯಿಸಿ, ಈ ಸೂಚಿಯನ್ನು ನನ್ನ ಕೈಗಿತ್ತರು. ಅವರಿಗಿರುವ ಅಪರಿಮಿತ ಹುಮ್ಮಸ್ಸು ನನ್ನಲ್ಲಿ ಸೋಜಿಗವನ್ನುಂಟು ಮಾಡಿದೆ. ಈಗಲೂ ಅವರು ‘ಲಿಂಗಾಯತ ವಿಶ್ವಕೋಶ’ದ ಒಂದು ಸಂಪುಟವನ್ನಾದರೂ ಪ್ರಕಟಿಸಬೇಕೆಂಬ ಹಂಬಲದಲ್ಲಿ ಇದ್ದಾರೆ. ೫೦೦ ಪುಟಗಳ ೧೦ ಸಂಪುಟಗಳಲ್ಲಿ ಅಂತಹ ಯೋಜನೆಯೊಂದನ್ನು ರೂಪಿಸಿದ್ದಾರೆ. ಈಗಾಗಲೇ ಒಂದು ಸಂಪುಟವನ್ನು ಭಾಗಶಃ ಸಿದ್ದಗೊಳಿಸಿದ್ದಾರೆ. ಇಂತಹ ವಿದ್ವಜ್ಜನರಿಂದಲೇ ಶರಣ ಸಾಹಿತ್ಯಕ್ಕೆ ಒಂದು ಘನತೆ-ಗೌರವ ಪ್ರಾಪ್ತವಾಗಿದೆ ಎಂದು ಹೇಳಿದರೆ ಅತ್ಯುಕ್ತಿಯಾಗಲಾರದು. 

ಪ್ರಸಾದ ಪತ್ರಿಕೆಯನ್ನು ಪ್ರಕಟಿಸುತ್ತಿರುವ ಸುತ್ತೂರು ಜಗದ್ಗುರು ಮಹಾಸನ್ನಿಧಿಯವರಿಗೂ, ಪ್ರಸಾದ ಸಂಪಾದಕ ಮಂಡಳಿಗೂ, ಈ ಸೂಚಿ ಸಿದ್ಧಗೊಳಿಸಿದ ಡಾ. ಗುಂಜಾಳ ಗುರುಗಳಿಗೂ ಅನಂತ ಶರಣುಗಳು.


 ಪ್ರಕಾಶ ಗಿರಿಮಲ್ಲನವರ

ಬೆಳಗಾವಿ

ಮೊ: ೯೯೦೨೧೩೦೦೪೧

- Advertisement -
- Advertisement -

Latest News

ಭತ್ತದ ನಾಡು ಕೆ.ಆರ್.ನಗರ ಕಾವೇರಿ ತೀರದ ಅರ್ಕೇಶ್ವರ

ನಾವು ಕಪ್ಪಡಿ ದರ್ಶನ ಮಾಡಿಕೊಂಡು ಕೆ.ಆರ್.ನಗರದ ಅರ್ಕೇಶ್ವರ ದೇವಸ್ಥಾನ ನೋಡಲು ಪ್ರಯಾಣ ಮುಂದುವರೆಸಿದೆವು. ಕೆ.ಆರ್.ನಗರದಿಂದ ಹಾಸನ ರಸ್ತೆಯಲ್ಲಿ ಮೂರ್ನಾಲ್ಕು ಕಿ.ಮೀ. ದೂರದಲ್ಲಿ ಕಾವೇರಿ ನದಿಯ ದಂಡೆಯಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group